ನ್ಯೂಯಾರ್ಕ್‌ನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಮಿಕ ವಕೀಲರಾಗಿ ಸೇವೆ ಸಲ್ಲಿಸಿ, ಇತ್ತೀಚೆಗಷ್ಟೇ ನಿವೃತ್ತಿ ಪಡೆದು ಭಾರತಕ್ಕೆ ಮರಳಿದ್ದ 62 ವರ್ಷದ ಅತುಲ್ ತಲ್ವಾರ್ ಎಂಬುವವರು ಸೈಬರ್ ವಂಚಕರ ಬಲೆಗೆ ಬಿದ್ದು ತಮ್ಮ ಜೀವಿತಾವಧಿಯ ಸಂಪಾದನೆ ಸುಮಾರು ₹4 ಕೋಟಿಯನ್ನು ಕಳೆದುಕೊಂಡಿದ್ದಾರೆ. ಸಿಬಿಐ ಮತ್ತು ಎನ್‌ಐಎ ಅಧಿಕಾರಿಗಳೆಂದು ನಟಿಸಿದ ಸೈಬರ್ ವಂಚಕರು, ಪಹಲ್ಗಾಮ್ ಭಯೋತ್ಪಾದನಾ ದಾಳಿಯೊಂದಿಗೆ ಅವರ ಹೆಸರನ್ನು ತಳಕು ಹಾಕಿ, ನಾಯ್ಡಾದಲ್ಲಿ 15 ದಿನಗಳ ಕಾಲ ಅವರನ್ನು “ಡಿಜಿಟಲ್ ಅರೆಸ್ಟ್” ಮಾಡಿ ಈ ವಂಚನೆ ಎಸಗಿದ್ದಾರೆ.
ನ್ಯೂಯಾರ್ಕ್‌ನಿಂದ ಭಾರತಕ್ಕೆ ಬಂದಿದ್ದ ಅತುಲ್ ತಲ್ವಾರ್, ನೋಯ್ಡಾದ ಸೆಕ್ಟರ್ 30ರಲ್ಲಿರುವ ತಮ್ಮ ತಾಯಿಯ ಮನೆಯ ನವೀಕರಣ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು ಮತ್ತು ನವೆಂಬರ್ 11ರಂದು ವಾಪಸ್ ಅಮೆರಿಕಕ್ಕೆ ಮರಳಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು.
ಮುಂಬೈನ ಕೊಲಾಬಾ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ವ್ಯಕ್ತಿಯೊಬ್ಬ ತಲ್ವಾರ್ ಅವರಿಗೆ ಕರೆ ಮಾಡಿದ್ದಾನೆ. ಅವರ ಆಧಾರ್ ಕಾರ್ಡ್ ಪಹಲ್ಗಾಮ್ ಉಗ್ರರ ದಾಳಿಯೊಂದಿಗೆ ಲಿಂಕ್ ಆಗಿದೆಯೆಂದು ಬೆದರಿಸಿದ್ದಾನೆ. ತಕ್ಷಣವೇ ಸೈಬರ್ ಪೊಲೀಸರೆಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿ ಕರೆಗೆ ಸೇರಿಕೊಂಡು ಅವರನ್ನು ತಕ್ಷಣವೇ ಬಂಧಿಸಬೇಕೆಂದು ಕಿರುಚಾಡಿದ್ದಾನೆ. ನಂತರ ವಾಟ್ಸಾಪ್ ಮೂಲಕ ಸಿಬಿಐನ ಸಹಾಯಕ ನಿರ್ದೇಶಕರ ಹೆಸರಿನಲ್ಲಿ ನಕಲಿ ಗೌಪ್ಯತಾ ಒಪ್ಪಂದದ ಪತ್ರವನ್ನು ಕಳುಹಿಸಲಾಗಿದೆ.
ಅಕ್ಟೋಬರ್ 17ರಿಂದ ವಾಟ್ಸಾಪ್ ವೀಡಿಯೊ ಮತ್ತು ಆಡಿಯೊ ಕರೆಗಳ ಮೂಲಕ ಅವರನ್ನು 24 ಗಂಟೆಗಳ ಕಾಲ ನಿರಂತರ ಕಣ್ಗಾವಲಿನಲ್ಲಿ ಇಡಲಾಗಿತ್ತು. ಪಹಲ್ಗಾಮ್ ದಾಳಿ ಸಂತ್ರಸ್ತರ ಫೋಟೋಗಳನ್ನು ಕಳುಹಿಸಿ, ಅವರ ಹೆಸರಿನಲ್ಲಿ ಕೆನರಾ ಬ್ಯಾಂಕ್ ಖಾತೆ ತೆರೆಯಲಾಗಿದ್ದು ಉಗ್ರರಿಗೆ ₹53 ಕೋಟಿ ವರ್ಗಾವಣೆಯಾಗಿದೆ ಹಾಗೂ ಕಮಿಷನ್ ರೂಪದಲ್ಲಿ ಅವರಿಗೆ ₹5 ಕೋಟಿ ಸಿಕ್ಕಿದೆ ಎಂದು ವಂಚಕರು ನಂಬಿಸಿದ್ದಾರೆ.
ಆರ್‌ಬಿಐ ಮೂಲಕ ಆಸ್ತಿಗಳನ್ನು ಪರಿಶೀಲಿಸಬೇಕು ಎಂದು ನಂಬಿಸಿ ವಂಚಕರು ತಲ್ವಾರ್ ಅವರಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ.
ಆಕ್ಸಿಸ್ ಬ್ಯಾಂಕ್‌ನಲ್ಲಿದ್ದ ಎರಡು ಎಫ್‌ಡಿಗಳನ್ನು ಮುರಿದು, ‘ದುರ್ಗಾ ಇಂಜಿನಿಯರಿಂಗ್ ವರ್ಕ್‌ಶಾಪ್’ ಹೆಸರಿನ ಆರ್‌ಬಿಐ ಖಾತೆಗೆ ಹಣ ವರ್ಗಾಯಿಸುವಂತೆ ಸೂಚಿಸಲಾಯಿತು.
ಅಮೆರಿಕದ ಸಿಟಿಬ್ಯಾಂಕ್‌ನಲ್ಲಿ ತಮ್ಮ ಮಗಳೊಂದಿಗೆ ಇರುವ ಜಾಯಿಂಟ್ ಖಾತೆಯನ್ನು ಬಿಟ್ಟು, ವೈಯಕ್ತಿಕ ನಿವೃತ್ತಿ ಖಾತೆಯಲ್ಲಿದ್ದ ಸುಮಾರು $380,000 ಡಾಲರ್‌ಗಳನ್ನು ನಗದು ಮಾಡಲು ತಿಳಿಸಲಾಯಿತು. ತೆರಿಗೆ ಕಡಿತದ ನಂತರ ಉಳಿದ $240,000 ಡಾಲರ್‌ಗಳನ್ನು ತಮ್ಮ ಚೆಕಿಂಗ್ ಖಾತೆಗೆ ವರ್ಗಾಯಿಸಲಾಯಿತು.
ವಂಚಕರ ಸೂಚನೆಯಂತೆ ಕಾಯಿನ್‌ಬೇಸ್ ಖಾತೆ ತೆರೆದು, $230,000 ಡಾಲರ್‌ಗಳನ್ನು ಮೊದಲು ಎಥೆರಿಯಮ್ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ವಂಚಕರ ಡಿಜಿಟಲ್ ವಾಲೆಟ್‌ಗೆ ಕಳುಹಿಸಲಾಯಿತು. Coinbase ಆ್ಯಪ್‌ನಲ್ಲಿ “ಇದು ಹಗರಣವಾಗಿರಬಹುದು” ಎಂದು ಪಾಪ್-ಅಪ್ ಎಚ್ಚರಿಕೆ ನೀಡಿದರೂ, ಈಗಾಗಲೇ ಸಿಲುಕಿಕೊಂಡಿದ್ದ ತಲ್ವಾರ್ ಹಣ ಕಳೆದುಕೊಳ್ಳುವ ಭಯದಿಂದ ವರ್ಗಾವಣೆ ಮುಂದುವರಿಸಿದರು. ಈ ಹಂತದಲ್ಲಿ ಅವರು 7-8 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ನವೆಂಬರ್ 4ರಂದು ತಮ್ಮ ಸ್ನೇಹಿತರ ತಾಯಿಯ ಮರಣದ ಹಿನ್ನೆಲೆಯಲ್ಲಿ ಗುರುಗ್ರಾಮಕ್ಕೆ ಹೋಗಬೇಕೆಂದು ತಲ್ವಾರ್ ಕೇಳಿಕೊಂಡರು. ನವೆಂಬರ್ 7ರಂದು ಹೋಗಲು ವಂಚಕರು ಒಪ್ಪಿಗೆ ನೀಡಿದ್ದರು. ಆದರೆ ನವೆಂಬರ್ 6ರ ರಾತ್ರಿ ಕಾಲ್ ಕಟ್ ಆಯಿತು. ತಲ್ವಾರ್ ಎಷ್ಟು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದಿದ್ದಾಗ ಅನುಮಾನಗೊಂಡು ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ನೋಯ್ಡಾ ಸೈಬರ್ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತಲ್ವಾರ್ ವರ್ಗಾಯಿಸಿದ್ದ ಹಣದಲ್ಲಿ ಮ್ಯೂಲ್ ಖಾತೆಯೊಂದರಿಂದ ₹4 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಆದರೆ ಎಥೆರಿಯಮ್‌ಗೆ ಪರಿವರ್ತಿಸಿರುವುದರಿಂದ ಉಳಿದ ಹಣವನ್ನು ಮರಳಿ ಪಡೆಯುವುದು ಅತ್ಯಂತ ಕಷ್ಟಕರ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ನಿವೃತ್ತಿಯ ನಂತರವೂ ಮತ್ತೊಮ್ಮೆ ಕೆಲಸಕ್ಕೆ ತೆರಳುವ ಪರಿಸ್ಥಿತಿ ಬಂದೊದಗಿದೆ ಎಂದು ಅತುಲ್ ತಲ್ವಾರ್ ಬೇಸರ ವ್ಯಕ್ತಪಡಿಸಿದ್ದಾರೆ.



