ಜಾನಪದ ಗಾಯಕಿ ಮತ್ತು ಬಿಹಾರದ ಅಲಿನಗರ ಕ್ಷೇತ್ರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಅವರ ಕುಟುಂಬವು ಭೂಒತ್ತುವರಿ ವಿವಾದದಲ್ಲಿ ಸಿಲುಕಿಕೊಂಡಿದೆ. ದರ್ಭಂಗಾ ಜಿಲ್ಲೆಯ ತಾರ್ದಿಹ್ ಬ್ಲಾಕ್‌ನ ಪೋಖರಭಿಂದಾ ಗ್ರಾಮದಲ್ಲಿ ಶಾಸಕಿಯ ಕುಟುಂಬವು ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿ ನಿರ್ಮಿಸಿದ್ದ ಗೋಡೆ (ಕಾಂಪೌಂಡ್) ಮತ್ತು ಅಕ್ರಮ ನಿರ್ಮಾಣಗಳನ್ನು ಸ್ಥಳೀಯ ಆಡಳಿತವು ನೆಲಸಮಗೊಳಿಸಿದೆ.
ಮೈಥಿಲಿ ಠಾಕೂರ್ ಮತ್ತು ಅವರ ತಂದೆ ರಮೇಶ್ ಠಾಕೂರ್ ಅವರು ಇತ್ತೀಚೆಗೆ ಪೋಖರಭಿಂದಾ ಗ್ರಾಮದಲ್ಲಿ ಜಮೀನು ಖರೀದಿಸಿ, ಅಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಆದರೆ, ಮನೆಗೆ ಆವರಣ ಗೋಡೆ ನಿರ್ಮಿಸುವ ಭರದಲ್ಲಿ ಗ್ರಾಮಸ್ಥರು ಓಡಾಡುವ ಸರ್ಕಾರಿ ರಸ್ತೆ, ಗ್ರಾಮ ದೇವತೆಯ ಜಾಗ ಹಾಗೂ ಸ್ಥಳೀಯರ ಖಾಸಗಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಸ್ಥಳೀಯ ತಹಶೀಲ್ದಾರ್ ಕಚೇರಿ, ಮುಖ್ಯಮಂತ್ರಿಗಳ ಕಚೇರಿ ಮತ್ತು ರಾಜ್ಯ ಸರ್ಕಾರದ ‘ಸಹಯೋಗ್’ ಪೋರ್ಟಲ್‌ನಲ್ಲಿ ದೂರು ದಾಖಲಿಸಲಾಗಿತ್ತು.
ಇದನ್ನೂ ಓದಿ: ಬಿಹಾರದ ‘ರೈಸಿಂಗ್ ಸ್ಟಾರ್ʼ ಮೈಥಿಲಿ ಠಾಕೂರ್ ಯಾರು ಗೊತ್ತೇ?
ದೂರಿನ ಅನ್ವಯ, ಭೂಸುಧಾರಣಾ ಉಪ ಜಿಲ್ಲಾಧಿಕಾರಿ (ಡಿಸಿಎಲ್‌ಆರ್) ಅಜಯ್ ಕುಮಾರ್ ಮತ್ತು ತಹಶೀಲ್ದಾರ್ ಅಲೋಕ್ ಕುಮಾರ್ ನೇತೃತ್ವದ ತಂಡವು ಗ್ರಾಮಕ್ಕೆ ಭೇಟಿ ನೀಡಿ ದೂರುದಾರರು ಮತ್ತು ಸ್ಥಳೀಯರ ಸಮ್ಮುಖದಲ್ಲಿ ಭೂಮಿ ಅಳತೆ (ಸರ್ವೆ) ನಡೆಸಿತು. ಪ್ರಾಥಮಿಕ ಪರಿಶೀಲನೆಯಲ್ಲಿ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿ ಗೋಡೆ ನಿರ್ಮಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಅಧಿಕಾರಿಗಳು ತಕ್ಷಣವೇ ಆ ಅಕ್ರಮ ಗೋಡೆಯನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ರಸ್ತೆಯನ್ನು ಮುಕ್ತಗೊಳಿಸಿದ್ದಾರೆ.
“ಪ್ರಾಥಮಿಕ ಅಳತೆಯ ವೇಳೆ ಸರ್ಕಾರಿ ರಸ್ತೆಯಲ್ಲಿ ಒತ್ತುವರಿ ಕಂಡುಬಂದಿದ್ದು, ಅದನ್ನು ತಕ್ಷಣವೇ ತೆರವುಗೊಳಿಸಲಾಗಿದೆ. ಉಳಿದ ದೂರುದಾರರಿಗೆ ದಾಖಲೆಗಳೊಂದಿಗೆ ಹಾಜರಾಗಲು ಸೂಚಿಸಲಾಗಿದ್ದು, ಪರಿಶೀಲನೆಯ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಡಿಸಿಎಲ್‌ಆರ್ ಅಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಮತ್ತು ಕುಟುಂಬದ ವಿರುದ್ಧ ಕೇಳಿಬಂದಿರುವ ಭೂಕಬಳಿಕೆ ಆರೋಪಗಳನ್ನು ಶಾಸಕಿ ಮೈಥಿಲಿ ಠಾಕೂರ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ಇವೆಲ್ಲವೂ ಆಧಾರರಹಿತ ವದಂತಿಗಳು. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು (ಜನತಾ ದರ್ಬಾರ್ ನಡೆಸಲು) ಗ್ರಾಮಸ್ಥರ ಸಹಕಾರದೊಂದಿಗೆ ನಾನು ಅಲ್ಲಿ ಮನೆ ನಿರ್ಮಿಸುತ್ತಿದ್ದೇನೆ. ನಮ್ಮ ಬಳಿ ಎಲ್ಲಾ ಅಧಿಕೃತ ದಾಖಲೆಗಳಿವೆ. ಆರೋಪ ಮಾಡುವವರು ದಾಖಲೆಗಳಿದ್ದರೆ ಅಧಿಕಾರಿಗಳ ಮುಂದೆ ಹಾಜರುಪಡಿಸಲಿ,” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಂದೆಡೆ, ವಿರೋಧ ಪಕ್ಷ ಆರ್‌ಜೆಡಿ ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದೆ.



