ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ನಡೆಯುತ್ತಿರುವ ಪರಸ್ಪರ ವಾಗ್ದಾಳಿಗಳು ಮತ್ತು ವಿವಾದಾತ್ಮಕ ನಡವಳಿಕೆಗಳನ್ನು ಆಮ್ ಆದ್ಮಿ ಪಾರ್ಟಿ (AAP) ತೀವ್ರವಾಗಿ ಖಂಡಿಸಿದೆ. ರಾಜ್ಯದಲ್ಲಿ ಉಭಯ ಪಕ್ಷಗಳು ವೈರತ್ವ, ದ್ವೇಷ ಹಾಗೂ ಹಿಂಸಾಚಾರದ ಸಂಸ್ಕೃತಿಯನ್ನು ಉತ್ತೇಜಿಸುವ ಮೂಲಕ ‘ಚಾಕು ರಾಜಕಾರಣ’ ನಡೆಸುತ್ತಿವೆ ಎಂದು ಎಎಪಿ ಮುಖಂಡ ಚಂದ್ರಶೇಖರ್ ಸ್ಥಾವರಮಠ ಆರೋಪಿಸಿದ್ದಾರೆ.
ಇತ್ತೀಚೆಗೆ, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, “ಕಾಂಗ್ರೆಸ್ ನಾಯಕರನ್ನು ಬಿಜೆಪಿ ಕಾರ್ಯಕರ್ತರು ತುಂಡು ತುಂಡಾಗಿ ಕತ್ತರಿಸಿ, ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ’ ಎಂದು ಪ್ರಚೋದನಾಕಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಭಟನೆಯಾಗಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಚಾಕು ಮತ್ತು ಇತರೆ ಮಾರಕಾಸ್ತ್ರಗಳನ್ನು ಕೊರಿಯರ್ ಮಾಡಿದ್ದರು. ಈ ಎರಡೂ ಬೆಳವಣಿಗೆಗಳನ್ನು ಚಂದ್ರಶೇಖರ್ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಪರಸ್ಪರ ಇಂತಹ ಪ್ರಚೋದನಾಕಾರಿ ಹೇಳಿಕೆಗಳು ಮತ್ತು ಆಕ್ರೋಶದ ನಡವಳಿಕೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ರಾಜಕೀಯದಲ್ಲಿ ಏನೇ ಭಿನ್ನಾಭಿಪ್ರಾಯಗಳು ಮತ್ತು ಸೈದ್ಧಾಂತಿಕ ಭಿನ್ನತೆಗಳಿದ್ದರೂ ಅವುಗಳನ್ನು ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿ ಆರೋಗ್ಯಕರ ಚರ್ಚೆಗಳು, ಸಂವಾದಗಳು ಹಾಗೂ ಶಾಂತಿಯುತ ಪ್ರತಿಭಟನೆಗಳ ಮೂಲಕ ಪರಿಹರಿಸಿಕೊಳ್ಳಬೇಕು. ಅದನ್ನು ಬಿಟ್ಟು, ಬೆದರಿಕೆಗಳು ಮತ್ತು ಹಿಂಸಾತ್ಮಕ ನಡವಳಿಕೆಗಳನ್ನು ಅನುಸರಿಸಬಾರದು. ಬಿಜೆಪಿ ಮತ್ತು ಕಾಂಗ್ರೆಸ್‌ನ ಈ ಕೆಳಮಟ್ಟದ ವರ್ತನೆಯು ಕರ್ನಾಟಕದ ಶಾಂತಿಯುತ ಮತ್ತು ಪ್ರಬುದ್ಧ ರಾಜಕೀಯ ಸಂಸ್ಕೃತಿಗೆ ಕಪ್ಪುಚುಕ್ಕೆಯಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.
“ರಾಜ್ಯದ ಜನತೆ ಇಂತಹ ರಾಜಕೀಯ ಅರಾಜಕತೆ ಮತ್ತು ಹಿಂಸೆಯನ್ನು ಎಂದಿಗೂ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಜನರೇ ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಈ ಎರಡೂ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಪ್ರಸ್ತುತ ಕರ್ನಾಟಕಕ್ಕೆ ಹಿಂಸಾತ್ಮಕ ಮತ್ತು ದ್ವೇಷಪೂರಿತ ರಾಜಕಾರಣದ ಅಗತ್ಯವಿಲ್ಲ; ಬದಲಿಗೆ ಮೂಲಸೌಕರ್ಯಗಳ ಅಭಿವೃದ್ಧಿ, ಜನಪರ ಆಡಳಿತ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಆಡಳಿತದ ಅಗತ್ಯವಿದೆ” ಎಂದು ಚಂದ್ರಶೇಖರ್ ಸ್ಥಾವರಮಠ ಸ್ಪಷ್ಟಪಡಿಸಿದ್ದಾರೆ.




