ಫ್ರಾನ್ಸ್ನ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ ಮತ್ತು ನಿರ್ಣಾಯಕ ಅಧ್ಯಕ್ಷೀಯ ಚುನಾವಣೆಗೆ ದೇಶ ಸಜ್ಜಾಗುತ್ತಿದೆ. ದೇಶದ ಪ್ರಭಾವಿ ಎಡಪಂಥೀಯ ನಾಯಕ ಜೀನ್-ಲ್ಯುಕ್ ಮೆಲೆನ್ಶೋನ್ (75) ತಮ್ಮ ಕಡೆಯ ಪ್ರಯತ್ನದ ಅಧ್ಯಕ್ಷೀಯ ಸ್ಪರ್ಧೆಗೆ ಇಳಿದಿದ್ದಾರೆ. ಪ್ರಚಾರ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ. ಪ್ಯಾರಿಸ್ನ ಉತ್ತರ ಭಾಗದಲ್ಲಿರುವ ಲೆ ಬೌರ್ಗೆಟ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸುಮಾರು 20,000ಕ್ಕೂ ಹೆಚ್ಚು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರತಿಯೊಂದೂ ಬದಲಾಗಬೇಕು’ ಎಂದು ಘೋಷಿಸುವ ಮೂಲಕ ಫ್ರೆಂಚ್ ಗಣರಾಜ್ಯದ ರಾಜಕೀಯ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. 1789ರ ಚಾರಿತ್ರಿಕ ಫ್ರೆಂಚ್ ಕ್ರಾಂತಿಯ ಅಸಂಪೂರ್ಣ ಭರವಸೆಗಳನ್ನು ಮರುಸ್ಥಾಪಿಸುವುದಾಗಿ ಪ್ರತಿಪಾದಿಸುತ್ತಿದ್ದಾರೆ. ಅವರೊಂದಿಗೆ ದೇಶದ ಯುವಜನತೆ ಮತ್ತು ತೀವ್ರಗಾಮಿ ಪಡೆಗಳು ಒಗ್ಗೂಡುತ್ತಿವೆ.
ಸುಮಾರು 50 ವರ್ಷಗಳಿಂದ ಉಗ್ರ ಬಲಪಂಥೀಯ ಸಿದ್ಧಾಂತಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ ಬಂದಿರುವ ಮೆಲೆನ್ಶೋನ್, 2027ರ ಅಧ್ಯಕ್ಷೀಯ ರೇಸ್ನಲ್ಲಿ ಗೆದ್ದರೆ, ಅದು ಅವರ ಜೀವನದ ಅತ್ಯಂತ ವಿಪರ್ಯಾಸದ ಗೆಲುವಾಗಬಹುದು. ಒಂದುವೇಳೆ, ಅವರು ಮೇ 2ರ ಅಂತಿಮ ಹಂತದ ಮತದಾನದಲ್ಲಿ ಉಗ್ರ ಬಲಪಂಥೀಯ ಮುಖಂಡೆ ಮರೀನ್ ಲೆ ಪೆನ್ ವಿರುದ್ಧ ಮುಖಾಮುಖಿಯಾಗಿ ಸೋಲು ಅನುಭವಿಸಿದರೆ, ಸ್ವತಃ ಮೆಲೆನ್ಶೋನ್ ಅವರೇ ಬಲಪಂಥೀಯರಿಗೆ ಮೊದಲ ಬಾರಿಗೆ ಎಲಿಸೀ ಪ್ಯಾಲೆಸ್ (ಅಧ್ಯಕ್ಷೀಯ ಪೀಠ) ಮತ್ತು ಫ್ರಾನ್ಸ್ನ ಪರಮಾಣು ಶಸ್ತ್ರಾಗಾರಗಳ ನಿಯಂತ್ರಣವನ್ನು ಹಸ್ತಾಂತರಿಸಿದಂತಾಗುತ್ತದೆ.
ಮತ್ತೊಂದೆಡೆ, ಮೆಲೆನ್ಶೋನ್ ಗೆದ್ದು ಅಧಿಕಾರಕ್ಕೆ ಬಂದರೂ ಸಹ ಜಾಗತಿಕ ರಾಜಕೀಯದಲ್ಲಿ ಭಾರೀ ಬಿರುಗಾಳಿ ಏಳಲಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿರುವಾಗ, ಉಕ್ರೇನ್ನಲ್ಲಿ ರಷ್ಯಾ ಯುದ್ಧ ನಡೆಸುತ್ತಿರುವ ಈ ನಿರ್ಣಾಯಕ ಸಮಯದಲ್ಲಿ, ಯುರೋಪಿಯನ್ ಯೂನಿಯನ್ನ ಏಕೈಕ ಪರಮಾಣು ಸಶಸ್ತ್ರ ರಾಷ್ಟ್ರವಾದ ಫ್ರಾನ್ಸ್ ಅನ್ನು ನ್ಯಾಟೋ (NATO) ಮಿಲಿಟರಿ ಒಕ್ಕೂಟದಿಂದ ಹೊರತರುವುದಾಗಿ ಮೆಲೆನ್ಶೋನ್ ಘೋಷಿಸಿದ್ದಾರೆ. ಜೊತೆಗೆ ಅವರ ಸಾಲ ನೀತಿಗಳು ಮತ್ತು ಆರ್ಥಿಕ ಯೋಜನೆಗಳು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ನೊಂದಿಗೆ ನೇರ ಸಂಘರ್ಷಕ್ಕೆ ಕಾರಣವಾಗಿ, ಮಾರುಕಟ್ಟೆಯಲ್ಲಿ ತೀವ್ರ ಆರ್ಥಿಕ ಅಸ್ಥಿರತೆ ಸೃಷ್ಟಿಯಾಗುವ ಭೀತಿಯೂ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ಹೊಂದಿದ್ದಾರೆ.
ಮೆಲೆನ್ಶೋನ್ ಅವರ 1,000 ಅಂಶಗಳ ಚುನಾವಣಾ ಪ್ರಣಾಳಿಕೆಯು ಫ್ರಾನ್ಸ್ ಅನ್ನು ಸಂಪೂರ್ಣವಾಗಿ ಮರುರೂಪಿಸುವ ನೀತಿಯನ್ನು ಹೊಂದಿದೆ. ಮತದಾನದ ವಯಸ್ಸನ್ನು 16ಕ್ಕೆ ಇಳಿಸುವುದು, ನಿವೃತ್ತಿ ವಯಸ್ಸನ್ನು 60ಕ್ಕೆ ಮರಳಿ ತರುವುದು, ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು ಹಾಗೂ ಕೃತಕ ಬುದ್ಧಿಮತ್ತೆಗೆ (AI) ತಾತ್ಕಾಲಿಕ ತಡೆ ನೀಡುವುದು ಅವರ ಮುಖ್ಯ ಭರವಸೆಗಳಾಗಿವೆ. ಎಲ್ಲಕ್ಕಿಂತ ಮಿಗಿಲಾಗಿ, 1958ರಲ್ಲಿ ಚಾರ್ಲ್ಸ್ ಡಿ ಗ್ವಾಲ್ ಸ್ಥಾಪಿಸಿದ ‘ಐದನೇ ಗಣರಾಜ್ಯ’ದ ಸಂವಿಧಾನವನ್ನು ರದ್ದುಗೊಳಿಸಿ, ನಾಗರಿಕರ ವಿಶೇಷ ಸಭೆಯ ಮೂಲಕ ಹೊಸ ಸಂವಿಧಾನ ರಚಿಸುವುದು ಪ್ರಮುಖ ಯೋಜನೆಯಾಗಿದೆ.
1951ರಲ್ಲಿ ಮೊರಾಕ್ಕೋದ ಟ್ಯಾಂಜಿಯರ್ನಲ್ಲಿ ಜನಿಸಿದ ಮೆಲೆನ್ಶೋನ್, ಆರಂಭದಲ್ಲಿ ಟ್ರಾಟ್ಸ್ಕಿಸ್ಟ್ ವಿದ್ಯಾರ್ಥಿ ನಾಯಕನಾಗಿ, ನಂತರ ಸೋಷಿಯಲಿಸ್ಟ್ ಪಕ್ಷದ ಸಂಸದ ಹಾಗೂ ಮಂತ್ರಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. 2008ರಲ್ಲಿ ಪಕ್ಷದಿಂದ ಹೊರಬಂದು ‘ಲಾ ಫ್ರಾನ್ಸ್ ಇನ್ಸೌಮಿಸ್’ (LFI) ಎಂಬ ತಮ್ಮದೇ ಆದ ಬಂಡಾಯ ಚಳವಳಿಯನ್ನು ರೂಪಿಸಿದರು. ಇವರ ಪ್ರಚಾರ ಸಭೆಗಳು ‘ಮೆಲೆನ್ಶೋ’ ಎಂದೇ ಪ್ರಸಿದ್ಧವಾಗಿದ್ದು, ಪ್ರತಿಯೊಂದು ಸಮಾವೇಶವನ್ನು ಭವಿಷ್ಯದ ಸರ್ಕಾರವನ್ನು ಪ್ರದರ್ಶಿಸುವ ಶೈಲಿಯಲ್ಲಿ ನಡೆಸಲಾಗುತ್ತದೆ. 2018ರಲ್ಲಿ ಪೋಲಿಸರು ಇವರ ಪಕ್ಷದ ಕಚೇರಿಯನ್ನು ಪರಿಶೀಲಿಸಿದಾಗ ‘ನಾನೇ ಗಣರಾಜ್ಯ!’ ಎಂದು ಆರ್ಭಟಿಸಿ ನಂತರ ಶಿಕ್ಷೆಗೆ ಗುರಿಯಾಗಿದ್ದರು.
ಅವರ ಈ ಉಗ್ರ ಸ್ವರೂಪ, ತೀವ್ರ ಪ್ರಚಾರ ಹಾಗೂ ಅಧಿಕಾರದ ಮೇಲಿನ ಪೂರ್ಣ ನಿಯಂತ್ರಣದ ಬಯಕೆಯನ್ನು ನೋಡಿ ಇವರ ವಿರೋಧಿಗಳು ಮತ್ತು ಕೆಲ ಮಾಧ್ಯಮಗಳು ಇವರನ್ನು ‘ಎಡಪಂಥೀಯ ಡೊನಾಲ್ಡ್ ಟ್ರಂಪ್’ ಎಂದು ಕರೆಯುತ್ತವೆ. 2025ರಲ್ಲಿ ಪ್ರಕಟವಾದ ತನಿಖಾ ಪುಸ್ತಕವೊಂದು, ಮೆಲೆನ್ಶೋನ್ ತಮ್ಮ ಬೆಂಬಲಿಗರಿಂದ ಕುರುಡು ನಿಷ್ಠೆಯನ್ನು ನಿರೀಕ್ಷಿಸುತ್ತಾರೆ ಮತ್ತು ಅನುಮಾನ ಪಡುವವರನ್ನು ದೇಶದ್ರೋಹಿಗಳಂತೆ ಕಾಣುತ್ತಾರೆ ಎಂದು ಬಹಿರಂಗಪಡಿಸಿತ್ತು.
ಈ ಲೇಖನ ಓದಿದ್ದೀರಾ?: ಟ್ರಂಪ್ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ ರಾಜಕೀಯ ನಿಲುವು ಯಾವ ದಿಕ್ಕಿಗೆ?
ಫ್ರಾನ್ಸ್ನ ಶಹೀನ್ ಬಾಗ್ ಎನ್ನಬಹುದಾದ ಸೀನ್-ಸೇಂಟ್-ಡೆನಿಸ್ ಪ್ರದೇಶದ ಬಡ ಯುವಜನರು ಮತ್ತು ಉಪನಗರಗಳ ನಿವಾಸಿಗಳನ್ನು ಮೆಲೆನ್ಶೋನ್ ತಮ್ಮ ಮುಖ್ಯ ಮತಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯಗಳ ಕುಸಿತ ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸಿದ ವ್ಯಾಪಕ ಪ್ರತಿಭಟನೆಯನ್ನು ಮೆಲೆನ್ಶೋನ್ ಬಹಿರಂಗವಾಗಿ ಬೆಂಬಲಿಸಿದ್ದರು. ಅಲ್ಲದೆ, ಬದುಕಿನ ವೆಚ್ಚ ಏರಿಕೆಯ ವಿರುದ್ಧ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದಾಗ, ಸಾರ್ವಜನಿಕ ಆಸ್ತಿಪಾಸ್ತಿ ನಾಶಕ್ಕೆ ಪೊಲೀಸರ ನಡವಳಿಕೆಯೇ ಕಾರಣ ಎಂದು ಸರ್ಕಾರವನ್ನು ಜಾಡಿಸಿದ್ದರು.
ಸದ್ಯದ ಪರಿಸ್ಥಿತಿಯಲ್ಲಿ ಫ್ರಾನ್ಸ್ನ ಹಳೆಯ ರಾಜಕೀಯ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದುಬಿದ್ದಿದೆ. ದಶಕಗಳ ಕಾಲ ಅಧಿಕಾರದಲ್ಲಿದ್ದ ಸೋಷಿಯಲಿಸ್ಟ್ ಮತ್ತು ಕನ್ಸರ್ವೇಟಿವ್ ಪಕ್ಷಗಳು 2022ರ ಮೊದಲ ಸುತ್ತಿನ ಚುನಾವಣೆಯಲ್ಲಿ ಕೇವಲ 6.5%ರಷ್ಟು ಮತಗಳನ್ನು ಮಾತ್ರ ಗಳಿಸಲು ಶಕ್ತವಾಗಿದ್ದವು. ಪ್ರಸ್ತುತ ಲೆ ಪೆನ್ ಮತ್ತು ಮೆಲೆನ್ಶೋನ್ ಅವರ ನಡುವಿನ ನೇರ ಸ್ಪರ್ಧೆಯು ಫ್ರಾನ್ಸ್ನ ಸಾಂಪ್ರದಾಯಿಕ ರಾಜಕೀಯ ರಂಗವನ್ನು ಸಂಪೂರ್ಣವಾಗಿ ಪಕ್ಕಕ್ಕೆ ತಳ್ಳಿದೆ.
ಪ್ರಸ್ತುತ, ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಮನವನ್ನು ‘ಇನ್ನಿಲ್ಲದ ಜನಾಂಗೀಯ ಹತ್ಯೆ’ (Genocide) ಎಂದು ಘೋಷಿಸಿರುವ ಮೆಲೆನ್ಶೋನ್ ಯುವಜನರ ಮನಗೆದ್ದಿದ್ದಾರೆ. ಆದರೆ, ಅವರು ಯಹೂದಿ ವಿರೋಧಿ ಭಾವನೆ ಹರಡುತ್ತಿದ್ದಾರೆಂದು ವಿರೋಧಿಗಳು ದೂರುತ್ತಿದ್ದಾರೆ. ಆದರೂ, ‘ನನ್ನ ನಿಲುವನ್ನು ತಗ್ಗಿಸಲು ಸಾಧ್ಯವಿಲ್ಲ’ ಎಂದು ಮೆಲೆನ್ಶೋನ್ ಸ್ಪಷ್ಟಪಡಿಸಿದ್ದಾರೆ. 1789ರ ಕ್ರಾಂತಿಕಾರಿಗಳ ಸಂಕೇತವಾಗಿ ಹೊರಹೊಮ್ಮುತ್ತಿರುವ ಈ 75 ವರ್ಷದ ನಾಯಕ, ಫ್ರಾನ್ಸ್ನ ಅಧ್ಯಕ್ಷೀಯ ಭವನವನ್ನು ತಲುಪುತ್ತಾರೋ ಅಥವಾ ಬಲಪಂಥೀಯರ ಅಧಿಕಾರಕ್ಕೆ ಬಾಗಿಲು ತೆರೆಯುತ್ತಾರೋ ಎಂಬುದು ಅವರ ತೀವ್ರಗಾಮಿ ರಾಜಕೀಯ ನಿಲುವಿನ ಮೇಲೆಯೇ ಅವಲಂಬಿತವಾಗಿದೆ.



