ತಮಿಳುನಾಡು ಮೂಲದ ಪಿಎಚ್‌ಡಿ ವಿದ್ಯಾರ್ಥಿ, ಟ್ರಾನ್ಸ್‌ಜೆಂಡರ್ (ಲಿಂಗಪರಿವರ್ತಿತ) ಕ್ಯೂ ಮಣಿವಣ್ಣನ್ ಅವರು ಸ್ಕಾಟ್‌ಲ್ಯಾಂಡ್ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಆ ಮೂಲಕ ಸಂಸತ್ ಪ್ರವೇಶಿಸಿದ ಮೊದಲ ಟ್ರಾನ್ಸ್ ಸಂಸದರು ಎನಿಸಿದ್ದಾರೆ.
ಕಳೆದ ಗುರುವಾರ ನಡೆದ ಚುನಾವಣೆಯಲ್ಲಿ ಪ್ರತ್ಯೇಕತಾವಾದಿ ಸ್ಕಾಟಿಷ್ ಗ್ರೀನ್ಸ್ ಪಕ್ಷದಿಂದ ಎಡಿನ್‌ಬರ್ಗ್ ಮತ್ತು ಲೋಥಿಯನ್ಸ್ ಈಸ್ಟ್ ಪ್ರದೇಶದಲ್ಲಿ ಗೆಲುವು ಸಾಧಿಸಿದ್ದಾರೆ. “ಒಬ್ಬ ತಮಿಳು ವಲಸಿಗನಾಗಿ, ನಮ್ಮ ಕಾರ್ಮಿಕ ವರ್ಗ ಮತ್ತು ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಹೋರಾಡಲು ನಾನು ಸ್ಕಾಟ್‌ಲ್ಯಾಂಡ್ ಸಂಸದನಾಗಲು ಸ್ಪರ್ಧಿಸುತ್ತಿದ್ದೇನೆ” ಎಂದು ಮಣಿವಣ್ಣನ್ ಸ್ಕಾಟಿಷ್ ಗ್ರೀನ್ಸ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು.
ಸಂಸದರಾಗಿ ಆಯ್ಕೆಯಾದ ನಂತರ, “ಒತ್ತಡಕ್ಕೊಳಗಾದ ಸಮುದಾಯಗಳ ಪರವಾಗಿ ಅಚಲವಾಗಿ ನಿಲ್ಲುತ್ತೇನೆ. ಅದು ಎಡಿನ್‌ಬರ್ಗ್‌ನಲ್ಲಿರುವ ವಲಸಿಗರು ಮತ್ತು ವಿದ್ಯಾರ್ಥಿಗಳು, ವಿದೇಶಗಳಲ್ಲಿರುವ ಸ್ಕಾಟಿಷ್ ವಲಸಿಗ ಸಮುದಾಯಗಳಾಗಿರಲಿ ಅಥವಾ ಸಂಘರ್ಷದಿಂದ ನರಳುತ್ತಿರುವ ಪ್ಯಾಲೆಸ್ತೀನಿಯರೇ ಆಗಿರಲಿ ಅವರಿಗಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.
ವೀಸಾ ಹೊಂದಿರುವ ಯಾರೇ ಆದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ನಿಯಮ ಬದಲಾವಣೆಯಿಂದ ಇದು ಸಾಧ್ಯವಾಗಿದೆ. ಮಣಿವಣ್ಣನ್ ಅವರ ಚುನಾವಣಾ ಪ್ರಚಾರಕ್ಕೆ 1,600 ಪೌಂಡ್‌ಗಳನ್ನು ಕ್ರೌಡ್‌ಫಂಡರ್ ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್ ಮೂಲಕ ಸಂಗ್ರಹಿಸಲಾಗಿತ್ತು.




