ಇರಾನ್ ವಿರುದ್ಧದ ದಾಳಿಯಿಂದಾಗಿ ಅಮೆರಿಕದ ರಕ್ಷಣಾ ಇಲಾಖೆ ಈಗಾಗಲೇ ಬರೋಬ್ಬರಿ 48.3 ಬಿಲಿಯನ್ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ.) ನೇರ ಸೇನಾ ವೆಚ್ಚ ಭರಿಸಿದೆ. ಇದರ ಜತೆಗೆ ಇಂಧನ ಬೆಲೆ ಏರಿಕೆ, ಹಣದುಬ್ಬರ ಮತ್ತು ಸಾಗಣೆ ವೆಚ್ಚದಿಂದ ಅಮೆರಿಕದ ಗ್ರಾಹಕರು ಹಾಗೂ ತೆರಿಗೆದಾರರಿಗೆ ಭಾರೀ ಆರ್ಥಿಕ ಹೊರೆಯಾಗಿದೆ. ಭಾರಿ ನಷ್ಟದ ನಡುವೆಯೂ ಟ್ರಂಪ್ ಮತ್ತೊಂದು ದಾಳಿಗೆ ಮುಂದಾಗಿರುವುದು ಅಮೆರಿಕದ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ.
2026ರ ಆರಂಭದಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಭೀಕರ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಭೀಕರ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇನ್ನೂ ಶಮನಗೊಂಡಿಲ್ಲ. ಅಮೆರಿಕ ಯುದ್ಧದಿಂದಾಗಿ ತೀವ್ರ ಆರ್ಥಿಕ ನಷ್ಟದಲ್ಲಿದೆ. ಆದರೂ ಇದೀಗ ಮತ್ತೆ ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.
ಟ್ರಂಪ್ ಇರಾನ್ ನಾಯಕರನ್ನು ತೀವ್ರವಾಗಿ ಟೀಕಿಸಿದ್ದು, ಪರಮಾಣು ಒಪ್ಪಂದಕ್ಕೆ ಬರಲು ಹೊಸ ವರ್ಷದವರೆಗೆ ಮಾತ್ರ ಗಡುವು ನೀಡಿದ್ದಾರೆ. ಅಲ್ಲದೆ, ಹೆಚ್ಚುವರಿ ವಿಮಾನವಾಹಕ ನೌಕೆಯನ್ನು ನಿಯೋಜಿಸುವ ಮೂಲಕ ಮತ್ತು ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನವನ್ನು ಬಿಗಿಗೊಳಿಸುವ ಮೂಲಕ ಮತ್ತೊಂದು ಸುತ್ತಿನ ಸೇನಾ ಕಾರ್ಯಾಚರಣೆಯ ಸ್ಪಷ್ಟ ಮುನ್ಸೂಚನೆಯನ್ನು ನೀಡಿದ್ದಾರೆ.
ಇದನ್ನೂ ಓದಿ: 84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?
ಈಗಾಗಲೇ ನಡೆದಿರುವ ಸಂಘರ್ಷದಿಂದ ಅಮೆರಿಕ ಸೇರಿದಂತೆ ಜಾಗತಿಕ ಆರ್ಥಿಕತೆ ಭಾರಿ ನಷ್ಟ ಅನುಭವಿಸಿದೆ. ಯುದ್ಧದ ಪರಿಣಾಮವಾಗಿ ಇಂಧನ ಬೆಲೆಗಳು ಗಗನಕ್ಕೇರಿದ್ದು, ಹಣದುಬ್ಬರ ಮತ್ತು ಜೀವನ ವೆಚ್ಚ ಹೆಚ್ಚಳದಿಂದಾಗಿ ಅಮೆರಿಕದ ಮತದಾರರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇದರ ನೇರ ಪರಿಣಾಮವಾಗಿ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷವು ಕಾಂಗ್ರೆಸ್‌ನ ನಿಯಂತ್ರಣವನ್ನು ಕಳೆದುಕೊಳ್ಳುವಂತಾಯಿತು. ಇಷ್ಟೆಲ್ಲಾ ಆರ್ಥಿಕ ಮತ್ತು ರಾಜಕೀಯ ಹಿನ್ನಡೆಗಳ ನಡುವೆಯೂ, ಇರಾನ್‌ನ ತೈಲ ರಫ್ತನ್ನು ತನ್ನ ನಿಯಂತ್ರಣಕ್ಕೆ ಪಡೆಯುವ ತನ್ನ ದುರಾಸೆಯನ್ನು ಟ್ರಂಪ್ ಬಿಟ್ಟಿಲ್ಲ.
ಒಂದು ವೇಳೆ ಅಮೆರಿಕ ಮತ್ತೆ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದರೆ, ಅದರ ಪರಿಣಾಮಗಳು ಅತ್ಯಂತ ಭೀಕರವಾಗಿರಲಿವೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಪ್ರಮುಖವಾಗಿ ಜಾಗತಿಕ ತೈಲ ಪೂರೈಕೆಯ ಜೀವನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ಹಡಗುಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಅಪಾಯವಿದೆ. ಇದರಿಂದ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 100 ರಿಂದ 135 ಡಾಲರ್‌ವರೆಗೆ ಏರಿಕೆಯಾಗಬಹುದು ಮತ್ತು ರಸಗೊಬ್ಬರ, ಅಲ್ಯೂಮಿನಿಯಂ ಹಾಗೂ ಸೆಮಿಕಂಡಕ್ಟರ್‌ಗಳ ಜಾಗತಿಕ ಪೂರೈಕೆ ಸರಪಳಿ ತುಂಡಾಗಲಿದೆ.
ಇದರ ಜತೆಗೆ, ಮಧ್ಯಪ್ರಾಚ್ಯದ ಗಲ್ಫ್ ರಾಷ್ಟ್ರಗಳ ಆರ್ಥಿಕತೆಗೆ ಮುಂದಿನ ಕೆಲವು ವರ್ಷಗಳಲ್ಲಿ 200 ಬಿಲಿಯನ್‌ನಿಂದ 790 ಬಿಲಿಯನ್ ಡಾಲರ್‌ವರೆಗೆ ನಷ್ಟವಾಗುವ ಸಾಧ್ಯತೆಯಿದೆ. ಕುವೈತ್, ಸೌದಿ ಅರೇಬಿಯಾ ಮತ್ತು ಯುಎಇಯಂತಹ ರಾಷ್ಟ್ರಗಳ ಮೇಲೆ ಇರಾನ್ ಪ್ರತೀಕಾರದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿದರೆ, ಇಡೀ ಪ್ರದೇಶವು ದೀರ್ಘಕಾಲದ ಯುದ್ಧಕ್ಕೆ ಸಿಲುಕಲಿದೆ. ಇದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳ ಕರೆನ್ಸಿ ಮೌಲ್ಯ ಕುಸಿದು, ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುವ ಭೀತಿಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವ್ಯಕ್ತಪಡಿಸಿದೆ.
ಒಟ್ಟಾರೆಯಾಗಿ, ಟ್ರಂಪ್ ಅವರ ಈ ಮರುದಾಳಿಯ ನಿರ್ಧಾರವು ಕೇವಲ ಎರಡು ದೇಶಗಳ ನಡುವಿನ ಸೇನಾ ಸಂಘರ್ಷವಾಗಿ ಉಳಿಯದೆ, ಇಡೀ ವಿಶ್ವದ ಆರ್ಥಿಕ ಸ್ಥಿರತೆಯನ್ನೇ ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ತೈಲ ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ಬಳಲುತ್ತಿರುವ ಅಮೆರಿಕ ಹಾಗೂ ಜಾಗತಿಕ ಮಾರುಕಟ್ಟೆಗಳಿಗೆ ಮತ್ತೊಂದು ಯುದ್ಧವನ್ನು ಭರಿಸುವ ಶಕ್ತಿ ಇಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯ. ಆದ್ದರಿಂದ, ಸೇನಾ ಕಾರ್ಯಾಚರಣೆಗಿಂತಲೂ ರಾಜತಾಂತ್ರಿಕ ಮಾತುಕತೆ ಮತ್ತು ಕದನ ವಿರಾಮದ ಮೂಲಕ ಬಿಕ್ಕಟ್ಟು ಬಗೆಹರಿಸುವುದೇ ಸದ್ಯದ ಅನಿವಾರ್ಯತೆಯಾಗಿದೆ.



