ಪರಿಶಿಷ್ಟ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿಯಾಗಬೇಕೆಂದು ಕಳೆದ 35 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದ ಮಾದಿಗ ಸಮಾಜ ಬೇಡಿಕೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ದಶಕಗಳಿಂದ ಹೋರಾಟ ನಿರತವಾಗಿದ್ದ ಮಾದಿಗ ಸಮುದಾಯಕ್ಕೆ ʼಒಳ ಮೀಸಲಾತಿʼ ಕೊಡುಗೆಯಾಗಿಸಿದ ಸರ್ಕಾರಕ್ಕೆ ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷ ರಮೇಶ ಗುಬ್ಬೆವಾಡ ಅಭಿನಂದನೆ ತಿಳಿಸಿದರು.
“35 ವರ್ಷಕ್ಕೂ ಹೆಚ್ಚು ಕಾಲ ಅರಬೆತ್ತಲೆ ಚಳವಳಿ, ತಮಟೆ ಚಳವಳಿ, ಮೌನ ಮೆರವಣಿಗೆ ಸೇರಿದಂತೆ ಹಲವಾರು ವಿಧದ ಹೋರಾಟಗಳನ್ನು ಮಾಡುತ್ತ ಸರ್ಕಾರದ ಮೇಲೆ ಒತ್ತಡ ಹಾಕುತ್ತ ಅತ್ಯಂತ ಶಾಂತ ರೀತಿಯಲ್ಲಿ ಮಾದಿಗರು ಹೋರಾಟ ಮಾಡಿದ್ದರು. ಯಾವ ಸರ್ಕಾರಗಳು ಮಾದಿಗರ ಕೂಗನ್ನು ಕೇಳಿಸಿಕೊಳ್ಳಲಿಲ್ಲ. ಬಿಜೆಪಿ ಪಕ್ಷವು ಚುನಾವಣೆ ಸಮಯದಲ್ಲಿ ಮಾದಿಗರಿಗೆ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ತಮ್ಮ ಚುನಾವಣೆ ಪ್ರಣಾಳಿಕೆಗಳಲ್ಲಿ ಹುಸಿ ಭರವಸೆಗಳನ್ನು ನೀಡಿ ಮಾದಿಗ ಸಮಾಜದ ಮೂಗಿಗೆ ತುಪ್ಪ ಸವರಿ ವಂಚಿಸುತ್ತಾ ಬಂದಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ>ವಿಜಯಪುರ | ಓದುವುದರ ಜತೆಗೆ ಸಂಪಾದನೆ: ಮಹಿಳಾ ವಿವಿಯ ವಿನೂತನ ಯೋಜನೆ
“ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಮಾದಿಗರಿಗೆ ಒಳ ಮೀಸಲಾತಿ ಜಾರಿ ಮಾಡುತ್ತವೆ ಎಂದು ಖಚಿತವಾಗಿ ಹೇಳಿದ್ದರು. ಅದರಂತೆ ಎಲ್ಲಾ ಅಡೆತಡೆಗಳನ್ನು ಎದುರಿಸಿ ಮಾದಿಗರಿಗೆ ಒಳ ಮೀಸಲಾತಿ ಜಾರಿ ಮಾಡಿದೆ. ಸಿದ್ದರಾಮಯ್ಯನವರು ಮಾದಿಗರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ, ನುಡಿದಂತೆ ನಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಪುಟದ ಎಲ್ಲಾ ಸಚಿವರಿಗೂ ಶಾಸಕರಿಗೂ ಮಾದಿಗ ಸಮಾಜವು ಅಭಿನಂದನೆಗಳು ಸಲ್ಲಿಸುತ್ತದೆ” ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಆರತಿ ಶಹಪೂರ, ವಸಂತ ವನಮೋಡೆ, ಬಾಬು ಗುಡಿಮಿ, ಪರಶುರಾಮ ಹೊಸಮನಿ,ರಾಘು ವಡವಡಗಿ, ಎಂ ಎಂ ಮುಲ್ಲಾ, ಮಾದೇಶ ಚಲವಾದಿ ಇದ್ದರು.




