ಅಜ್ಜಂಪುರ ತಾಲ್ಲೂಕಿನಲ್ಲಿ ಬರಗಾಲ ಅನುಭವಿಸುತ್ತಿರುವ ಜನರ ಒಳಿತಿಗೆ ಭದ್ರಾ ಉಪಕಣಿವೆ ಯೋಜನೆ ಮೂಲಕ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ತುರ್ತಾಗಿ ರೂಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಮುಖಂಡ ಗುರುಶಾಂತಪ್ಪ ಒತ್ತಾಯಿಸಿದರು.
ಅಜ್ಜಂಪುರ ತಾಲ್ಲೂಕಿನ ಸಿದ್ದಲಿಪುರ, ಕೆಂಚಾಪುರ, ಅತ್ತಿಗಟ್ಟೆ, ಮಾಕನಹಳ್ಳಿ, ಜಲದಿಹಳ್ಳಿ ಗ್ರಾಮಗಳು ಬರಗಾಲಕ್ಕೆ ತುತ್ತಾಗುತ್ತಿವೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐದು ಗ್ರಾಮಗಳು ಸೇರಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. 4 ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. ಕೆರೆ-ಕಟ್ಟೆಗಳು ಕೊಳವೆ ಬಾವಿಗಳಲ್ಲಿ ನೀರಿಲ್ಲದ ಕಾರಣ ಜಾನುವಾರುಗಳಿಗೆ ಮನೆಯ ಹತ್ತಿರವೇ ನೀರು ಒದಗಿಸಬೇಕಾಗಿದೆ. ಇಂತಹ ಸಂಕಷ್ಟ ಎದುರಿಸುತ್ತಿರುವ ಹಳ್ಳಿಗಳಲ್ಲಿ ಕೆರೆ ತುಂಬಿಸಲು ಯೋಜನೆ ಜಾರಿಗೆ ತರಬೇಕಾಗಿದೆ. ಶಾಸಕರಾಗಲಿ, ಸರ್ಕಾರವಾಗಲಿ ಗಮನ ಹರಿಸದೆ ಇರುವುದು ದುರ್ದೈವದ ಸಂಗತಿ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯ ನೀರು ಜಾವೂರು, ತಿಮ್ಮಾಪುರ ಗ್ರಾಮದ ಹತ್ತಿರ ಹರಿಯುತ್ತಿದ್ದು, ತಿಮ್ಮಾಪುರ ಪಂಪ್ ಹೌಸಿನಿಂದ 5 ಕಿಲೋ ಮೀಟರ್ ಪೈಪ್‌ಲೈನ್ ಅಳವಡಿಸಿ ಜಲದಿಹಳ್ಳಿ ಮಾರ್ಗವಾಗಿ ಸಿದ್ದರ ಕೆರೆಗೆ ಹರಿಸಬೇಕು. ಗುರುತ್ವಾಕರ್ಷಣೆ ಮೂಲಕ ಸಿದ್ದರ ಕೆರೆಯಿಂದ ಕೆಂಗಲಗಟ್ಟೆಗೆ ಒಂದು ಕಿಲೋ ಮೀಟರ್ ಪೈಪ್‌ಲೈನ್ ಅಳವಡಿಸಿದರೆ ಸುಬ್ಬಯ್ಯನಕಟ್ಟೆ ತುಂಬಿಸಬಹುದು. ಅಲ್ಲಿಂದ ಅರ್ಧ ಕಿಲೋ ಮೀಟರ್ ಇರುವ ಹಳ್ಳಕ್ಕೆ ನೀರು ಬಿಟ್ಟರೆ ಬಡಗಿಕಟ್ಟೆ, ಕೆಂಚಣ್ಣನಕೆರೆ ತುಂಬಿಸಬಹುದು.
ಹಾಗೆಯೇ, ಉಬ್ರಾಣಿ ಏತ ನೀರಾವರಿ ಯೋಜನೆ ಮೂಲಕ ಹರಿಯುವ ನೀರು ಮೆದೆಕೆರೆಗೆ ಬಂದಿದೆ. ಮೆದೆಕೆರೆಯಿಂದ 5 ಕಿಲೋ ಮೀಟರ್ ಪೈಪ್‌ಲೈನ್ ಅಳವಡಿಸಿ ಕೆಂಗಲಕಟ್ಟಿಗೆ ನೀರು ಹರಿಸಿದರೆ ಅಲ್ಲಿಂದ ಸಿದ್ದರಕೆರೆ, ಸುಬ್ಬಯ್ಯನಕಟ್ಟೆ, ಬಡಗಿಕಟ್ಟೆ, ಕೆಂಚಣ್ಣನ ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಬಹುದು. ಭದ್ರಾ ಮೇಲ್ದಂಡೆ ಯೋಜನೆ ಮತ್ತು ಉಬ್ರಾಣಿ ಏತನೀರಾವರಿ ಯೋಜನೆ ನೀರು ಕೇವಲ 5 ಕಿಲೋ ಮೀಟರ್ ದೂರದಲ್ಲಿ ಹರಿಯುತ್ತಿದೆ. ನೂರಾರು ಕಿ.ಮೀ ಕಾಲುವೆ ತೋಡಿ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಲಾಗುತ್ತಿದೆ. ಆದರೂ, ಗ್ರಾಮದ ಪಕ್ಕದಲ್ಲೆ ಹರಿಯುವ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸ. ಈ ಕಾರಣದಿಂದ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಬೇಕು. ತರೀಕೆರೆ ಶಾಸಕರು ಹಾಗೂ ಜಿಲ್ಲಾಧಿಕಾರಿ ಇತ್ತ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರ: ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಯೋಜನೆ
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಸಿ. ಬಸವರಾಜು, ಪ್ರಧಾನ ಕಾರ್ಯದರ್ಶಿ ಎಂ.ಬಿ. ಚಂದ್ರಶೇಖರ್, ಅಜಂಪುರ ತಾಲ್ಲೂಕು ಗೌರವಾಧ್ಯಕ್ಷ ರಮೇಶ್, ವಕ್ತಾರ ಸುನಿಲಕುಮಾರ್, ರೈತ ಮುಖಂಡರಾದ ಕುಮಾರನಾಯ್ಕ್, ಗೌತಮ್ ಪರಮೇಶ್ವರಪ್ಪ ಉಪಸ್ಥಿತರಿದ್ದರು.




