2016ರಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ ಇಂದು ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗ ಮತ್ತು ಸ್ವ-ಉದ್ಯೋಗದ ಅವಕಾಶಗಳನ್ನು ಒದಗಿಸುವ ಪ್ರಮುಖ ವೇದಿಕೆಯಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಗಣನೀಯವಾಗಿ ಬೆಳೆದಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಅವರು ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಉದ್ಯಮ ನೇತೃತ್ವದ ಕೌಶಲ್ಯಾಭಿವೃದ್ಧಿ ಯುವಕರ ಜೀವನವನ್ನು ಪರಿವರ್ತಿಸುವ ಶಕ್ತಿಯಿದೆ ಎಂದು ಹೇಳಿದರು. ಉಡುಪಿ ಐಐಜಿಜೆ ಕೇಂದ್ರವು ವಿದ್ಯಾರ್ಥಿಗಳಿಗೆ ಉದ್ಯೋಗಾರ್ಹ ಕೌಶಲ್ಯಗಳು, ಉದ್ಯಮಶೀಲತಾ ಅವಕಾಶಗಳು ಹಾಗೂ ಆರ್ಥಿಕ ಸ್ವಾವಲಂಬನೆಗೆ ದಾರಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ವರ್ಷ ಮಾತ್ರ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದು, ಕರಾವಳಿಯಿಂದ ಕೇರಳದವರೆಗೆ ಗ್ರಾಮೀಣ ಪ್ರದೇಶದ ಪ್ರತಿಭೆಗಳು ಈ ಸಂಸ್ಥೆಯ ಪ್ರಯೋಜನ ಪಡೆಯುತ್ತಿದ್ದಾರೆ. ತರಬೇತಿ ಪಡೆದ ಅನೇಕರು ತಮ್ಮದೇ ಆಭರಣ ತಯಾರಿಕಾ ಘಟಕಗಳನ್ನು ಆರಂಭಿಸಿ ಸ್ವ-ಉದ್ಯೋಗ ಕಂಡುಕೊಂಡಿದ್ದಾರೆ ಎಂದರು.
ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಭಾರತೀಯ ಸಾಂಪ್ರದಾಯಿಕ ಆಭರಣಗಳಿಗೆ ಮಧ್ಯಪ್ರಾಚ್ಯ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಸ್ಥಳೀಯ ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಸಾವಿರಾರು ಕುಶಲ ಕರ್ಮಿಗಳಿಗೆ ಸಾಲ ಸಹಾಯ ಒದಗಿಸಲಾಗಿದ್ದು, ಯೋಜನೆ ಅನುಷ್ಠಾನದಲ್ಲಿ ಈ ಕ್ಷೇತ್ರ ಮುಂಚೂಣಿಯಲ್ಲಿದೆ ಎಂದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ರತ್ನ ಮತ್ತು ಆಭರಣ ಉದ್ಯಮ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವುದರೊಂದಿಗೆ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಇದೇ ವೇಳೆ ಪ್ರಯೋಗಶಾಲೆಯಲ್ಲಿ ತಯಾರಾಗುವ ವಜ್ರೋದ್ಯಮವನ್ನು ಉತ್ತೇಜಿಸಲು ಐಐಟಿ ಮದ್ರಾಸ್ ಮತ್ತು ಐಐಜಿಜೆ ನಡುವಿನ ಒಡಂಬಡಿಕೆಗೂ ಸಹಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.






