ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ, ಘಟನೆ ಸಂಭವಿಸಿದ 21 ದಿನಗಳ ನಿಗದಿತ ಅವಧಿಯೊಳಗೆ ನೋಂದಣಿ ಪೂರ್ಣಗೊಳಿಸಬೇಕು. ದಾಖಲೆಗಳ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚಿಸಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜನನ–ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಒಟ್ಟು 763 ಜನನ–ಮರಣ ನೋಂದಣಿ ಘಟಕಗಳಿದ್ದು, ಎಲ್ಲ ಘಟಕಗಳಲ್ಲಿಯೂ ದಾಖಲೆಗಳನ್ನು ನಿಯಮಾನುಸಾರ ನಿರ್ವಹಿಸಬೇಕು. ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು ಹಾಗೂ ಗ್ರಾಮ ಪಂಚಾಯಿತಿಗಳ ನೋಂದಣಿ ಘಟಕಗಳಲ್ಲಿ ಜನನ ಮತ್ತು ಮರಣ ಘಟನೆಗಳನ್ನು ನಿಗದಿತ ಅವಧಿಯೊಳಗೆ ನೋಂದಾಯಿಸಬೇಕು ಎಂದು ನಿರ್ದೇಶನ ನೀಡಿದರು.
ನಿಗದಿತ ಅವಧಿಯೊಳಗೆ ನೋಂದಣಿ ಮಾಡುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಸಭೆಗಳನ್ನು ಆಯೋಜಿಸಿ, ನೋಂದಣಿ ಪ್ರಕ್ರಿಯೆ, ದಾಖಲೆಗಳ ನಿರ್ವಹಣೆ ಹಾಗೂ ಅನುಸರಿಸಬೇಕಾದ ನಿಯಮಗಳ ಕುರಿತು ತರಬೇತಿ ನೀಡಬೇಕು. ತಾಲೂಕು ಮಟ್ಟದ ಜನನ–ಮರಣ ಸಮನ್ವಯ ಸಮಿತಿ ಸಭೆಗಳನ್ನು ಕಾಲಕಾಲಕ್ಕೆ ನಡೆಸಿ, ನೋಂದಣಿ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಜನನ ನಮೂನೆ–1 ಹಾಗೂ ಮರಣ ನಮೂನೆ–2ಗಳನ್ನು ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮರ್ಪಕವಾಗಿ ಭರ್ತಿ ಮಾಡಬೇಕು. ಮಾಹಿತಿದಾರರ ಹೆಸರು ಮತ್ತು ಸಹಿ, ಜನನ ದಿನಾಂಕ, ತಂದೆ–ತಾಯಿಯ ಹೆಸರು ಹಾಗೂ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕು. ಮರಣ ನೋಂದಣಿ ಸಂದರ್ಭದಲ್ಲಿ ಮೃತ ವ್ಯಕ್ತಿಯ ಹೆಸರನ್ನು ನಿಖರವಾಗಿ ದಾಖಲಿಸುವುದು ಕಡ್ಡಾಯ ಎಂದು ಸೂಚಿಸಿದರು.
ಜನನ ಮತ್ತು ಮರಣ ನೋಂದಣಿ ವೇಳೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಅಥವಾ ಚಾಲನಾ ಪರವಾನಗಿಯಂತಹ ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದರ ಜೆರಾಕ್ಸ್ ಪ್ರತಿಯನ್ನು ಪಡೆದು, ಅದರ ಆಧಾರದ ಮೇಲೆ ಸರಿಯಾದ ಹೆಸರನ್ನು ದಾಖಲಿಸಬೇಕು. ಮರಣ ನೋಂದಣಿ ಸಂದರ್ಭದಲ್ಲಿ ಮೃತ ವ್ಯಕ್ತಿಗೆ ಸಂಬಂಧಿಸಿದ ದಾಖಲೆಗಳನ್ನೇ ಬಳಸಬೇಕು. ದಾಖಲೆಗಳಲ್ಲಿನ ತಪ್ಪುಗಳಿಂದ ಭವಿಷ್ಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ನೋಂದಣಿ ಮತ್ತು ಉಪನೋಂದಣಿ ಘಟಕಗಳಿಗೆ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು. ಸಂಗ್ರಹಿಸಿದ ಶುಲ್ಕವನ್ನು ನಿಯಮಿತವಾಗಿ ಸರ್ಕಾರಕ್ಕೆ ಜಮೆ ಮಾಡಬೇಕು. ಸಾಂಖ್ಯಿಕ ಹಾಗೂ ಕಾನೂನು ವರದಿಗಳಲ್ಲಿ ನೋಂದಣಾಧಿಕಾರಿ ಮತ್ತು ಉಪನೋಂದಣಾಧಿಕಾರಿಗಳ ಸಹಿ, ಮಾಹಿತಿದಾರರ ಹೆಸರು ಮತ್ತು ಸಹಿ, ನೋಂದಣಿ ಸಂಖ್ಯೆ ಹಾಗೂ ನೋಂದಣಿ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ವಿಳಂಬ ನೋಂದಣಿ ಪ್ರಕರಣಗಳನ್ನು ನಿಯಮಾನುಸಾರವೇ ನಿರ್ವಹಿಸಬೇಕು. ನಿಗದಿತ ಪ್ರಾಧಿಕಾರದ ಲಿಖಿತ ಅನುಮತಿ ಇಲ್ಲದೆ ವಿಳಂಬ ನೋಂದಣಿ ಮಾಡಬಾರದು. ಅಗತ್ಯ ದಾಖಲೆಗಳನ್ನು ನಿಗದಿತ ಸಮಯದೊಳಗೆ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು.
ನೋಂದಣಿ ಪ್ರಕ್ರಿಯೆಯಲ್ಲಿನ ಲೋಪಗಳನ್ನು ತಕ್ಷಣ ಸರಿಪಡಿಸಿ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಜುಫಿಶಾನ್ ಹಕ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ರಾಮಯ್ಯ ಬರಗಿಮಠ, ಆರೋಗ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕ ಆಲ್ತಾಫ್ ಮಣಿಯಾರ್, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಎಂ.ಡಿ. ಕುಲಕರ್ಣಿ, ಪರಮೇಶ ಕೆಂಚಣ್ಣವರ, ಶ್ರೀಧರ ರಾಂಪೂರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.




