ವಿಜಯಪುರ ಜಿಲ್ಲಾದ್ಯಂತ ಕಾಲುವೆ ನೀರು ಹರಿದು ಜಮೀನುಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿರುವ ನಡುವೆ, ಈರುಳ್ಳಿ ದರದಲ್ಲಿನ ಚೇತರಿಕೆ ಕಂಡುಬಂದಿರುವುದು ರೈತರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ಬೆಳೆ ಕೈಹಿಡಿದು ಶ್ರಮಕ್ಕೆ ತಕ್ಕ ಬೆಲೆ ಸಿಗುವುದೆಂಬ ವಿಶ್ವಾಸದೊಂದಿಗೆ ರೈತರು, ನೀರಾವರಿ ಭಾಗಗಳಲ್ಲಿ ವ್ಯಾಪಕವಾಗಿ ಈರುಳ್ಳಿ ನಾಟಿ ಮಾಡುತ್ತಿದ್ದು, ಉತ್ತಮ ಬೆಳೆ ಮತ್ತು ಸ್ಥಿರ ಬೆಲೆಯ ನಿರೀಕ್ಷೆಯಲ್ಲಿ ಮುಂದಿನ ಹಂಗಾಮಿನತ್ತ ದೃಷ್ಟಿ ನೆಟ್ಟಿದ್ದಾರೆ.
ಈರುಳ್ಳಿ ದರದಲ್ಲಿ ಚೇತರಿಕೆ ಕಂಡುಬರುತ್ತಿರುವ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ನೀರಾವರಿ ಪ್ರದೇಶದ ರೈತರು ಈರುಳ್ಳಿ ನಾಟಿಗೆ ಒತ್ತು ನೀಡುತ್ತಿದ್ದಾರೆ. ಕಾಲುವೆಗಳಿಗೆ ನೀರು ಹರಿದು ಕೃಷಿ ಚಟುವಟಿಕೆಗಳು ಗರಿಗೆದರಿರುವುದರಿಂದ, ಹಲವು ಗ್ರಾಮಗಳ ಜಮೀನುಗಳಲ್ಲಿ ಈರುಳ್ಳಿ ನಾಟಿಗೆ ಸಿದ್ಧಗೊಳಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಹಾಗೂ ಖುಷ್ಕಿ ಜಮೀನುಗಳಲ್ಲೂ ಈರುಳ್ಳಿ ಬೆಳೆಯುವುದು ಸಾಮಾನ್ಯ. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಈರುಳ್ಳಿ ಬಿತ್ತನೆ ಕ್ಷೇತ್ರ ಗಣನೀಯವಾಗಿ ಕುಸಿದಿದೆ. ಮಳೆಯ ನಿರೀಕ್ಷೆಯಲ್ಲಿ ಬಿತ್ತಿದ್ದ ಬೆಳೆ ಹಲವು ಕಡೆ ಮೊಳಕೆಯೊಡೆಯದೆ ಹಾಳಾಗಿದ್ದು, ಮೊಳಕೆಯೊಡೆದಿರುವ ಪ್ರದೇಶಗಳಲ್ಲಿಯೂ ಇಳುವರಿ ಕುಂಠಿತವಾಗಬಹುದೆಂಬ ಆತಂಕ ರೈತರಲ್ಲಿದೆ.
ಇದರ ಪರಿಣಾಮ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಏರುಗತಿಯಲ್ಲಿದ್ದು, ಸದ್ಯ ಗಾತ್ರ ಹಾಗೂ ಗುಣಮಟ್ಟ ಆಧರಿಸಿ ಪ್ರತಿ ಕ್ವಿಂಟಲ್ಗೆ ₹3,500ರಿಂದ ₹5,000ರವರೆಗೆ ದರವಿದೆ. ಕನಿಷ್ಠ ₹2,000 ದರವಿದ್ದರೂ ಖರ್ಚು ಸರಿದೂಗಿಸಿಕೊಂಡು ಲಾಭ ಗಳಿಸಬಹುದು ಎಂಬ ಲೆಕ್ಕಾಚಾರ ರೈತರಲ್ಲಿದೆ. ಹೀಗಾಗಿ ನೀರಾವರಿ ಸೌಲಭ್ಯವಿರುವ ರೈತರು ಸದ್ಯ ಈರುಳ್ಳಿ ಬೆಳೆಯತ್ತ ಮುಖ ಮಾಡಿದ್ದಾರೆ.
ಕಾಲುವೆ ವ್ಯಾಪ್ತಿಯಲ್ಲಿ ಚಟುವಟಿಕೆ ಚುರುಕು
ಆಲಮಟ್ಟಿ ಜಲಾಶಯದ ಕೃಷ್ಣಾ ಕಾಲುವೆ ಜಾಲದ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಈರುಳ್ಳಿ ನಾಟಿ ಪ್ರಮುಖ ಬೆಳೆಯಾಗಿ ಹೊರಹೊಮ್ಮುತ್ತಿದೆ. ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ಹಾಗೂ ಮುದ್ದೇಬಿಹಾಳ ತಾಲೂಕುಗಳ ಹಲವು ಭಾಗಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯುವ ರೈತರ ಸಂಖ್ಯೆ ಅಧಿಕವಾಗಿದೆ.
ತೆಲಗಿ, ಕೂಡಗಿ, ಗೊಳಸಂಗಿ, ಹೆಬ್ಬಾಳ, ಮುಕರ್ತಿಹಾಳ, ಹುಲ್ಲೂರು, ಕಾಳಗಿ, ಉಣ್ಣಿಭಾವಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಈರುಳ್ಳಿ ಬೆಳೆಯುವುದನ್ನೇ ಕೆಲ ರೈತರು ನಿರಂತರ ಕೃಷಿ ಚಟುವಟಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಈರುಳ್ಳಿ ಬೀಜ ಆಯ್ಕೆ, ಸಸಿ ಮಡಿ ತಯಾರಿಕೆ, ನಾಟಿ, ನೀರು ಹಾಗೂ ಗೊಬ್ಬರ ನಿರ್ವಹಣೆಯಲ್ಲಿ ಇಲ್ಲಿನ ರೈತರಿಗೆ ಉತ್ತಮ ಅನುಭವವೂ ಇದೆ.
ಸಸಿಗೂ ಹೆಚ್ಚಿದ ಬೇಡಿಕೆ
ಮಳೆ ಕೊರತೆಯಿಂದ ಈರುಳ್ಳಿ ಸಸಿ ಮಡಿ ತಯಾರಿಕೆಯೂ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಹೀಗಾಗಿ ಈಗಾಗಲೇ ಸಿದ್ಧವಾಗಿರುವ ಸಸಿಗಳಿಗೆ ಬೇಡಿಕೆ ಹೆಚ್ಚಾಗಿದೆ. ದೊಡ್ಡ ಸಸಿ ಮಡಿಗೆ ₹3,500ರಿಂದ ₹4,000ರವರೆಗೆ ಹಾಗೂ ಸಣ್ಣ ಮಡಿಗೆ ₹1,000ರಿಂದ ₹1,500ರವರೆಗೆ ದರವಿದೆ. ಒಟ್ಟಾರೆ ಒಂದು ಸಸಿ ಮಡಿಗೆ ಗಾತ್ರಕ್ಕೆ ಅನುಗುಣವಾಗಿ ₹1,000ರಿಂದ ₹4,000ರವರೆಗೆ ಬೆಲೆ ಇದೆ.
ಒಂದು ಎಕರೆ ಈರುಳ್ಳಿ ಬೆಳೆಯಲು ಸಸಿ, ಗೊಬ್ಬರ, ಕಳೆ ನಿಯಂತ್ರಣ, ಕೂಲಿ ಸೇರಿದಂತೆ ಸುಮಾರು ₹50 ಸಾವಿರದಿಂದ ₹60 ಸಾವಿರದವರೆಗೆ ವೆಚ್ಚವಾಗುತ್ತದೆ. ಉತ್ತಮ ನಿರ್ವಹಣೆಯಲ್ಲಿ ಎಕರೆಗೆ 80ರಿಂದ 100 ಕ್ವಿಂಟಲ್ವರೆಗೆ ಇಳುವರಿ ಪಡೆಯುವ ಸಾಧ್ಯತೆಯಿದ್ದು, ಸಾಮಾನ್ಯವಾಗಿ ಸುಮಾರು 60 ಕ್ವಿಂಟಲ್ ಇಳುವರಿ ದೊರೆಯುತ್ತದೆ.
ಉತ್ತಮ ದರದ ನಿರೀಕ್ಷಯಲ್ಲಿ ಐದು ಎಕರೆ ನಾಟಿ
“ಮಳೆ ಕೊರತೆಯಿಂದ ಜೂನ್–ಜುಲೈನಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ ಬೆಳೆ ಹಲವು ಕಡೆ ಹಾನಿಗೊಳಗಾಗಿದೆ. ಸಸಿ ಮಡಿ ತಯಾರಿಕೆಯ ಮೇಲೂ ಇದರ ಪರಿಣಾಮ ಬಿದ್ದಿದೆ. ಇದೀಗ ಮಾರುಕಟ್ಟೆಯಲ್ಲಿ ದರ ಹೆಚ್ಚಿರುವುದರಿಂದ ಉಳಿದಿರುವ ಸಸಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲೂ ದರ ಉತ್ತಮವಾಗಿರಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಹೊಸದಾಗಿ ನಾಟಿ ಮಾಡಲು ಮುಂದಾಗಿದ್ದಾರೆ” ಎಂದು ರೈತ ವಿಠ್ಠಲ್ ಬಿರಾದಾರ್ ಹೇಳಿದರು..
“ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಆರಂಭಿಕ ಹಂತದಲ್ಲೇ ಈರುಳ್ಳಿ ಬೆಳೆ ಹಾನಿಯಾಗಿದೆ. ಇದೀಗ ನೀರಾವರಿ ಸೌಲಭ್ಯವಿರುವ ಜಮೀನಿನಲ್ಲಿ ಈರುಳ್ಳಿ ನಾಟಿ ಮಾಡಲಾಗುತ್ತಿದೆ. ದರ ಉತ್ತಮವಾಗಿರುವುದರಿಂದ ಮುಂದಿನ ಬೆಳೆ ಕೈಹಿಡಿಯುವ ನಿರೀಕ್ಷೆಯಿದೆ. ಇದೇ ಭರವಸೆಯಲ್ಲಿ ನಾನೂ ಐದು ಎಕರೆ ಪ್ರದೇಶದಲ್ಲಿ ಈರುಳ್ಳಿ ನಾಟಿ ಮಾಡುತ್ತಿದ್ದೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಮತ್ತೆ ಕೆಲಸ
ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದರಿಂದ ಕೆಲಕಾಲ ಕೆಲಸದ ಕೊರತೆ ಎದುರಿಸಿದ್ದ ಕೃಷಿ ಕಾರ್ಮಿಕರಿಗೆ ಈರುಳ್ಳಿ ನಾಟಿ ಹೊಸ ಅವಕಾಶ ಕಲ್ಪಿಸಿದೆ. ಕಾಲುವೆ ಹಾಗೂ ನೀರಾವರಿ ಪ್ರದೇಶಗಳಲ್ಲಿ ನಾಟಿ ಕಾರ್ಯ ಭರದಿಂದ ಸಾಗುತ್ತಿರುವುದರಿಂದ ಮಹಿಳಾ ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ.
ಸಸಿ ಮಡಿಯಿಂದ ಸಸಿಗಳನ್ನು ಕೀಳುವುದು, ಗಾತ್ರಕ್ಕೆ ಅನುಗುಣವಾಗಿ ವಿಂಗಡಿಸುವುದು, ಜಮೀನನ್ನು ನಾಟಿಗೆ ಸಿದ್ಧಪಡಿಸುವುದು ಹಾಗೂ ಸಾಲುಗಳಲ್ಲಿ ಸಸಿ ನಾಟಿ ಮಾಡುವ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈರುಳ್ಳಿ ದರ ಏರಿಕೆಯ ನಿರೀಕ್ಷೆ ರೈತರ ಜಮೀನಿನಲ್ಲಷ್ಟೇ ಅಲ್ಲ, ಕೃಷಿ ಕಾರ್ಮಿಕರ ಕೈಗೂ ಕೆಲಸ ನೀಡಿದೆ.
ಇದನ್ನೂ ಓದಿದ್ದೀರಾ? ಈರುಳ್ಳಿ ದುಬಾರಿ: ಬೆಳೆ ಕಡಿಮೆಯಾದಾಗ ಗ್ರಾಹಕರಿಗೆ ಬರೆ, ಉತ್ತಮ ಬೆಳೆ ಬಂದಾಗ ರೈತರಿಗೆ ಹೊರೆ
ವಿಜಯಪುರ ಜಿಲ್ಲಾದ್ಯಂತ ಕಾಲುವೆ ನೀರು ಹರಿದು ಜಮೀನುಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿರುವ ನಡುವೆ, ಈರುಳ್ಳಿ ದರದಲ್ಲಿನ ಚೇತರಿಕೆ ಕಂಡುಬಂದಿರುವುದು ರೈತರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ಬೆಳೆ ಕೈಹಿಡಿದು ಶ್ರಮಕ್ಕೆ ತಕ್ಕ ಬೆಲೆ ಸಿಗುವುದೆಂಬ ವಿಶ್ವಾಸದೊಂದಿಗೆ ರೈತರು, ನೀರಾವರಿ ಭಾಗಗಳಲ್ಲಿ ವ್ಯಾಪಕವಾಗಿ ಈರುಳ್ಳಿ ನಾಟಿ ಮಾಡುತ್ತಿದ್ದು, ಉತ್ತಮ ಬೆಳೆ ಮತ್ತು ಸ್ಥಿರ ಬೆಲೆಯ ನಿರೀಕ್ಷೆಯಲ್ಲಿ ಮುಂದಿನ ಹಂಗಾಮಿನತ್ತ ದೃಷ್ಟಿ ನೆಟ್ಟಿದ್ದಾರೆ.




