ಸ್ಥಳೀಯ ಹೊಸ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುವವರೆಗೂ ಗ್ರಾಹಕರಿಗೆ ತಕ್ಷಣದ ದರ ಇಳಿಕೆ ನಿರೀಕ್ಷಿಸುವುದು ಕಷ್ಟ. ಆದರೆ ಸೆಪ್ಟೆಂಬರ್ ನಂತರ ಹೊಸ ಬೆಳೆ ಬಂದಾಗ ಮಾರುಕಟ್ಟೆ ಸ್ಥಿರಗೊಳ್ಳಬಹುದು. ಭಾರತದ ಈರುಳ್ಳಿ ಮಾರುಕಟ್ಟೆಯಲ್ಲಿ ಗ್ರಾಹಕ ʼದುಬಾರಿಯಾಗಿದೆʼ ಎಂದಾಗ, ರೈತ ʼನನಗೆ ಸೂಕ್ತ ಬೆಲೆ ಸಿಕ್ಕಿಲ್ಲʼ ಎನ್ನುವುದು ಸಹಜವೆಂಬಂತಾಗಿದೆ. ಹಾಗಾಗಿ ಈ ಇಬ್ಬರ ನಡುವಿರುವ ಸಾಗಣೆ, ನಷ್ಟ, ಸಂಗ್ರಹಣಾ ಅಸಮಾನತೆ ಮತ್ತು ಮಧ್ಯವರ್ತಿಗಳ ಸರಪಳಿಯನ್ನು ಸರಿಪಡಿಸುವುದು ಅತ್ಯಗತ್ಯ.
ಅಡುಗೆಮನೆಯ ಅವಿಭಾಜ್ಯ ಅಂಗವೂ, ಭಾರತೀಯ ಆಹಾರ ಸಂಸ್ಕೃತಿಯ ಪ್ರಮುಖ ಭಾಗವೂ ಆಗಿರುವ ಈರುಳ್ಳಿ ದುಬಾರಿಯಾಗುತ್ತಿದ್ದು, ಕಳೆದೊಂದು ತಿಂಗಳಿನಿಂದ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಒಂದು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ತುಸು ಸಮಾಧಾನಕರವಾಗಿದ್ದ ಈರುಳ್ಳಿ ದರ ಈಗ ನಿಧಾನವಾಗಿ ಏರುಮುಖವಾಗುತ್ತಿದೆ.
ದೊಡ್ಡ ಪ್ರಮಾಣದ ದರ ಏರಿಕೆಯಾಗಿಲ್ಲವಾದರೂ, ಕಳೆದ ಕೆಲವು ವಾರಗಳಲ್ಲಿ ಕಂಡಿರುವ ಏರಿಕೆ ಮುಂದಿನ ದಿನಗಳ ಬಗ್ಗೆ ಆತಂಕ ಮೂಡಿಸಿದೆ. ವಿಶೇಷವೆಂದರೆ, ಗ್ರಾಹಕರು ಒಂದು ಕೆಜಿ ಈರುಳ್ಳಿಗೆ ಹೆಚ್ಚು ಹಣ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಈ ದರ ಏರಿಕೆಯ ಲಾಭ ಸ್ಥಳೀಯ ಈರುಳ್ಳಿ ಬೆಳೆಗಾರರ ಕೈಗೆ ಸೇರುತ್ತಿಲ್ಲ. ಪ್ರಸ್ತುತ ಮಾರುಕಟ್ಟೆಯ ಈ ಸ್ಥಿತಿ, ಭಾರತದ ಕೃಷಿ ಕ್ಷೇತ್ರದಲ್ಲಿ ದಶಕಗಳಿಂದ ನೆಲೆಸಿರುವ ಮೂಲಭೂತ ವೈರುಧ್ಯ ಮತ್ತು ಮಾರುಕಟ್ಟೆ ಅಸಮಾನತೆಯನ್ನು ಮತ್ತೊಮ್ಮೆ ಬಯಲಿಗೆಳೆದಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಲೆ ನಿಗಾ ವ್ಯವಸ್ಥೆಯ ಅಂಕಿಅಂಶಗಳನ್ನು ಗಮನಿಸಿದರೆ, ಜುಲೈ ಮಧ್ಯಭಾಗದಲ್ಲಿ ದೇಶದ ಸರಾಸರಿ ಚಿಲ್ಲರೆ ಈರುಳ್ಳಿ ದರ ಕೆ.ಜಿಗೆ ₹34.71 ಇತ್ತು. ಆಗಸ್ಟ್ ಮಧ್ಯದ ವೇಳೆಗೆ ಅದು ₹39.48ಕ್ಕೆ ಏರಿಕೆಯಾಗಿದೆ. ಅಂದರೆ ಕೇವಲ ಒಂದು ತಿಂಗಳಲ್ಲಿ ಶೇ 13.74ರಷ್ಟು ಏರಿಕೆ ದಾಖಲಾಗಿದೆ.
ಬೆಂಗಳೂರಿನ ಹಲವು ಮಾರುಕಟ್ಟೆಗಳಲ್ಲಿ ದೊಡ್ಡ ಈರುಳ್ಳಿ ಚಿಲ್ಲರೆ ದರ ಕೆಜಿಗೆ ₹42ರಿಂದ ₹49ರ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿದ್ದರೆ, ಕರ್ನಾಟಕದ ವಿವಿಧ ಎಪಿಎಂಸಿಗಳಲ್ಲಿ ಸಗಟು ದರ ಕೆ.ಜಿಗೆ ₹12ರಿಂದ ₹34ರವರೆಗೆ ವ್ಯತ್ಯಾಸವಿತ್ತು.
ಭಾರತದ ಈರುಳ್ಳಿ ಮಾರುಕಟ್ಟೆಯ ಚಕ್ರವನ್ನು ಅರ್ಥೈಸಿಕೊಳ್ಳಲು ಬೆಳೆ ಬೆಳೆಯುವ ಋತುಮಾನಗಳನ್ನು ಗಮನಿಸುವುದಾದರೆ, ದೇಶದಲ್ಲಿ ಹಿಂಗಾರು, ಮುಂಗಾರು ಮತ್ತು ತಡ ಮುಂಗಾರು ಹಂಗಾಮುಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಎಲ್ ನಿನೋ ಪ್ರಭಾವದಿಂದಾಗಿ ಮಾರ್ಚ್-ಏಪ್ರಿಲ್‌ನಲ್ಲಿ ಮಳೆ ಕೈಕೊಟ್ಟ ಕಾರಣ ರಾಜ್ಯದಲ್ಲಿ ಸಮರ್ಪಕವಾಗಿ ಈರುಳ್ಳಿ ಬಿತ್ತನೆಯಾಗಿಲ್ಲ. ಚಿತ್ರದುರ್ಗ ಮತ್ತು ಚಳ್ಳಕೆರೆ ಪ್ರದೇಶಗಳಲ್ಲಿ ಮುಂಗಾರು ಈರುಳ್ಳಿ ಬಿತ್ತನೆ ಸಾಮಾನ್ಯ ಪ್ರಮಾಣದ ಶೇ 60ರಷ್ಟು ಮಾತ್ರವಾಗಿದ್ದು, ಮಹಾರಾಷ್ಟ್ರದ ನಾಸಿಕ್ ಭಾಗದಲ್ಲೂ ಬಿತ್ತನೆ 15 ದಿನ ತಡವಾಗಿದೆ. ಬಿತ್ತನೆ ಮತ್ತು ಬೆಳೆ ಬೆಳವಣಿಗೆ ವಿಳಂಬವಾದ್ದರಿಂದ ದಕ್ಷಿಣ ಭಾರತದ ಹೊಸ ಈರುಳ್ಳಿ ಮಾರುಕಟ್ಟೆಗೆ ಪ್ರವೇಶಿಸುವುದು ತಡವಾಗಿದ್ದು, ಹಳೆಯ ಸಂಗ್ರಹಿತ ಈರುಳ್ಳಿ ಮೇಲಿನ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.
ದೇಶದ ಈರುಳ್ಳಿ ಬೆಲೆಯ ದಿಕ್ಕನ್ನು ನಿರ್ಧರಿಸುವ ಪ್ರಮುಖ ಮಾರುಕಟ್ಟೆಗಳಲ್ಲಿ ಮಹಾರಾಷ್ಟ್ರದ ಲಾಸಲ್‌ಗಾಂವ್ ಎಪಿಎಂಸಿ ಒಂದು. ಅದೇ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣದ ನಿತ್ಯದ ಆವಕವು 15 ಸಾವಿರ ಕ್ವಿಂಟಲ್‌ನಿಂದ ಸುಮಾರು 8 ಸಾವಿರ ಕ್ವಿಂಟಲ್‌ಗೆ ಕುಸಿದಿದ್ದೇ ಇತ್ತೀಚಿನ ಬೆಲೆ ಏರಿಕೆಗೆ ಮುಖ್ಯ ಚಾಲಕ ಶಕ್ತಿಯಾಗಿದೆ. ಮಹಾರಾಷ್ಟ್ರದಲ್ಲಿ ಸಗಟು ದರ ಹೆಚ್ಚಾದಾಗ ಅದರ ಬಿಸಿ ಸಹಜವಾಗಿಯೇ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಮಾರುಕಟ್ಟೆಗಳಿಗೂ ತಟ್ಟುತ್ತದೆ.
ಆಗಸ್ಟ್ 5ರಂದು ಸರಾಸರಿ ಸಗಟು ದರ ಕೆ.ಜಿಗೆ ₹21.50ರಷ್ಟಿದ್ದರೆ, ಆಗಸ್ಟ್ 12ರ ವೇಳೆಗೆ ಅದು ₹27ಕ್ಕೆ ತಲುಪಿತ್ತು. ಒಂದೇ ವಾರದಲ್ಲಿ ಸುಮಾರು ಶೇ.25ರಷ್ಟು ಏರಿಕೆಯಾಗಿತ್ತು. ಅದರ ನಂತರವೂ ಏರಿಕೆ ಮುಂದುವರಿದಿದ್ದು, ಆಗಸ್ಟ್ 14ರಂದು ಕ್ವಿಂಟಲ್‌ಗೆ ₹2,800 ಇದ್ದ ಸರಾಸರಿ ಸಗಟು ದರ ಆಗಸ್ಟ್ 18ಕ್ಕೆ ಸುಮಾರು ₹3,700ಕ್ಕೆ ಏರಿತು. ಮಾರುಕಟ್ಟೆಯ ನಿತ್ಯದ ಈರುಳ್ಳಿ ಆಗಮನ ಎರಡು-ಮೂರು ವಾರಗಳ ಹಿಂದೆ ಸುಮಾರು 15 ಸಾವಿರ ಕ್ವಿಂಟಲ್ ಇದ್ದದ್ದು, ಇತ್ತೀಚೆಗೆ ಸುಮಾರು 8 ಸಾವಿರ ಕ್ವಿಂಟಲ್‌ಗೆ ಇಳಿದಿರುವುದೇ ದರ ಏರಿಕೆಯ ಪ್ರಮುಖ ಕಾರಣ ಎಂಬುದು ಎಪಿಎಂಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಒಂದೆಡೆ ನಗರದ ಗ್ರಾಹಕ ಕೆ.ಜಿಗೆ ₹45ಕ್ಕೂ ಹೆಚ್ಚು ಹಣ ಪಾವತಿಸುತ್ತಿದ್ದರೆ, ಬೆಳೆದ ರೈತನಿಗೆ ಈ ಹಣ ತಲುಪದಿರಲು ಮುಖ್ಯ ಕಾರಣ ಮಾರುಕಟ್ಟೆಯ ಸಮಯ ಮತ್ತು ಸಾಲದ ಒತ್ತಡ.
ಭಾರತೀಯ ಕೃಷಿ ಅನುಸಂಧಾನ ಪರಿಷತ್(ICAR) ಪ್ರಕಾರ, ಮಾರ್ಚ್‌ನಿಂದ ಜೂನ್ ನಡುವೆ ಕಟಾವಾಗುವ ಹಿಂಗಾರು ಬೆಳೆಯು ದೇಶದ ಒಟ್ಟು ಉತ್ಪಾದನೆಯ ಸುಮಾರು ಶೇ.60ರಷ್ಟನ್ನು ಹೊಂದಿದೆ. ಕಟಾವಾದ ಈ ಹಿಂಗಾರು ಈರುಳ್ಳಿಯನ್ನೇ ವೈಜ್ಞಾನಿಕವಾಗಿ ಗೋದಾಮುಗಳಲ್ಲಿ ಸಂಗ್ರಹಿಸಿ, ಅಕ್ಟೋಬರ್-ನವೆಂಬರ್‌ನಲ್ಲಿ ಮುಂಗಾರಿನ ಹೊಸ ಬೆಳೆ ಬರುವವರೆಗೆ ಬಳಸಲಾಗುತ್ತದೆ. ಈಗ ಮಾರಾಟವಾಗುತ್ತಿರುವ ಬಹುಪಾಲು ಈರುಳ್ಳಿ ಮಾರ್ಚ್-ಏಪ್ರಿಲ್‌ನಲ್ಲಿ ಕೊಯ್ಲಾದ ಹಿಂಗಾರು ಬೆಳೆ.
ಬಿತ್ತನೆಬೀಜ, ಗೊಬ್ಬರ, ಕೀಟನಾಶಕ, ಟ್ರ್ಯಾಕ್ಟರ್, ಕೂಲಿ ಮತ್ತು ಕುಟುಂಬದ ಖರ್ಚುಗಳು ಸೇರಿದಂತೆ ಸಾಲದ ಒತ್ತಡದಲ್ಲಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ನಗದು ಬೇಕಿರುವುದರಿಂದ ಕಟಾವಾದ ಬೆಳೆಯನ್ನು ಕೂಡಲೇ ದರ ಕಡಿಮೆ ಇದ್ದರೂ ತಮ್ಮ ಬೆಳೆಯನ್ನು ಮಾರಾಟ ಮಾಡುತ್ತಾರೆ. ಅಲ್ಲದೆ ಈರುಳ್ಳಿ ಬೇಗ ಹಾಳಾಗುವ ಬೆಳೆಯಾಗಿದ್ದು, ಸರಿಯಾದ ತೇವಾಂಶ ಮತ್ತು ಉಷ್ಣಾಂಶ ನಿಯಂತ್ರಣವಿಲ್ಲದಿದ್ದರೆ ಶೇ 30ರಿಂದ 40ರಷ್ಟು ಕೊಳೆಯುತ್ತದೆ ಅಥವಾ ತೂಕ ಕಳೆದುಕೊಳ್ಳುತ್ತದೆ. ಇಂತಹ ನಷ್ಟದ ಅಪಾಯ, ಬಡ್ಡಿ ಮತ್ತು ಸಂಗ್ರಹಣಾ ವೆಚ್ಚವನ್ನು ಹೊರಲು ಎಲ್ಲ ರೈತರಿಗೂ ಆರ್ಥಿಕ ಸಾಮರ್ಥ್ಯವಿರುವುದಿಲ್ಲ. ಪರಿಣಾಮವಾಗಿ ಸಣ್ಣ ರೈತರು ಬೆಳೆ ಕಟಾವಾದ ಕೂಡಲೇ ಮಾರಾಟ ಮಾಡುತ್ತಾರೆ. ಈರುಳ್ಳಿ ಸಂಗ್ರಹಣಾ ಸಾಮರ್ಥ್ಯವಿರುವ ದೊಡ್ಡ ರೈತರು, ಖಾಸಗಿ ಸಂಗ್ರಹಕಾರರು ಹಾಗೂ ವ್ಯಾಪಾರಿ ಮಧ್ಯವರ್ತಿಗಳು ಈರುಳ್ಳಿಯನ್ನು ಕಾಪಿಟ್ಟುಕೊಳ್ಳುವುದರಿಂದ ಹೆಚ್ಚುವರಿ ಲಾಭ ಪಡೆಯುತ್ತಾರೆ.
ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಬಫರ್ ಸ್ಟಾಕ್(ಅನುಪಾತ ಸಂಗ್ರಹ) ವ್ಯವಸ್ಥೆಯನ್ನು ಬಳಸುತ್ತದೆ. ಈ ಬಾರಿ NAFED ಮತ್ತು NCCF ಮೂಲಕ ಈರುಳ್ಳಿ ಬಫರ್ ಸ್ಟಾಕ್ ನಿರ್ಮಿಸಿ, ಜುಲೈನಲ್ಲಿ ಬಫರ್ ಖರೀದಿ ದರವನ್ನು ಕ್ವಿಂಟಲ್‌ಗೆ ₹1,875ರಿಂದ ₹2,125ಕ್ಕೆ, ಅಂದರೆ ಸುಮಾರು ಶೇ.13ರಷ್ಟು ಹೆಚ್ಚಿಸಲಾಗಿತ್ತು. ಈಗ ಆಗಸ್ಟ್‌ನಲ್ಲಿ ದರ ಏರಿಕೆಯಾಗುತ್ತಿದ್ದಂತೆ ಸೆಪ್ಟೆಂಬರ್ ಮೊದಲ ವಾರದಿಂದ ಬಫರ್ ಸ್ಟಾಕ್‌ನ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯ ಬಗ್ಗೆ ವರದಿಗಳು ಬಂದಿವೆ. ಬಫರ್ ಸ್ಟಾಕ್ ಬಿಡುಗಡೆ ಮಾಡಿದರೆ ನಗರಗಳ ಸಗಟು ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ದರದ ಏರಿಕೆ ತಗ್ಗಬಹುದು. ಆದರೆ ಇದು ತಾತ್ಕಾಲಿಕ ಶಮನ ನೀಡಬಲ್ಲದೇ ಹೊರತು ಶಾಶ್ವತ ಪರಿಹಾರವಾಗುವುದಿಲ್ಲ. ಈ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಬೇಕಾದರೆ, ಸರ್ಕಾರ ಮೂಲಸೌಕರ್ಯ ಮತ್ತು ಮಾರುಕಟ್ಟೆ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಿದೆ.
ಬಫರ್ ವ್ಯವಸ್ಥೆಯ ಉದ್ದೇಶ ಕೇವಲ ಗ್ರಾಹಕರ ದರ ಕಡಿಮೆ ಮಾಡುವುದಷ್ಟೇ ಆಗಬಾರದು. ಬೆಳೆ ಬಂದಾಗ ರೈತನಿಗೆ ಕನಿಷ್ಠ ಸಮಂಜಸ ದರ ನೀಡುವ ಖರೀದಿ ವ್ಯವಸ್ಥೆ ಮತ್ತು ದರ ಏರಿದಾಗ ಗ್ರಾಹಕರಿಗೆ ಸಮಂಜಸ ಬೆಲೆಯಲ್ಲಿ ಬಿಡುಗಡೆ ಮಾಡುವ ಎರಡು ಉದ್ದೇಶಗಳೂ ಒಂದೇ ವ್ಯವಸ್ಥೆಯಲ್ಲಿರಬೇಕು. ಖರೀದಿ ಕೆಲವೇ ದೊಡ್ಡ ಉತ್ಪಾದನಾ ಪ್ರದೇಶಗಳಿಗೆ ಸೀಮಿತವಾಗದೆ ಕರ್ನಾಟಕದಂತಹ ರಾಜ್ಯಗಳ ಪ್ರಮುಖ ಈರುಳ್ಳಿ ಬೆಲ್ಟ್‌ಗಳಿಗೂ ಪರಿಣಾಮಕಾರಿಯಾಗಿ ತಲುಪಿದರೆ ರೈತರಿಗೆ ನೇರ ಪ್ರಯೋಜನವಾಗುತ್ತದೆ.
ಶಾಶ್ವತ ಪರಿಹಾರಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳು:
ಸ್ಥಳೀಯ ವೈಜ್ಞಾನಿಕ ಗೋದಾಮುಗಳು: ಈರುಳ್ಳಿ ಬೆಲೆ ವರ್ಷದಿಂದ ವರ್ಷಕ್ಕೆ ಇದೇ ರೀತಿಯ ಚಕ್ರದಲ್ಲಿ ಸಿಲುಕಬಾರದೆಂದರೆ ಉತ್ಪಾದನೆಯಷ್ಟೇ ಸಂಗ್ರಹಣೆಯ ಮೇಲೂ ಸರ್ಕಾರ ಹೂಡಿಕೆ ಮಾಡಬೇಕಿದ್ದು, ಚಿತ್ರದುರ್ಗ, ಚಳ್ಳಕೆರೆ, ಬಾಗಲಕೋಟೆ, ವಿಜಯಪುರ, ಗದಗ ಮತ್ತು ಧಾರವಾಡದಂತಹ ಪ್ರಮುಖ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ರೈತರು ಅಥವಾ ರೈತ ಉತ್ಪಾದಕ ಸಂಸ್ಥೆಗಳಿಗೆ(FPO) ವೈಜ್ಞಾನಿಕ ಸಂಗ್ರಹಣಾ ಘಟಕಗಳನ್ನು ನಿರ್ಮಿಸಲು ಹೆಚ್ಚಿನ ನೆರವು ನೀಡಬೇಕು.
ಗೋದಾಮು ರಸೀದಿ ಆಧಾರಿತ ಬೆಲೆ : ರೈತರು, ಕಟಾವಾದ ಬೆಳೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದನ್ನು ತಪ್ಪಿಸಲು ಗೋದಾಮು ರಸೀದಿ ಆಧಾರಿತ ಕಡಿಮೆ ಬಡ್ಡಿ ಸಾಲ ವ್ಯವಸ್ಥೆಯನ್ನು ಬಲಪಡಿಸಬೇಕು. ರೈತ ತನ್ನ ಉತ್ಪನ್ನವನ್ನು ಸಂಗ್ರಹಿಸಿ ಅದನ್ನು ಅಡಮಾನವಾಗಿ ಇಟ್ಟು ಸಾಲ ಪಡೆದು, ಉತ್ತಮ ದರ ಬಂದಾಗ ಮಾರಲು ಸಾಧ್ಯವಾಗಬೇಕು. ಇದರಿಂದ ರೈತನಿಗೆ ಉತ್ತಮ ದರ ಬರುವವರೆಗೆ ಕಾಯುವ ವಿಶ್ವಾಸ ಮೂಡುತ್ತದೆ.
ಪಾರದರ್ಶಕ ಮಾರುಕಟ್ಟೆ ಮಾಹಿತಿ: ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ, ಖಾಸಗಿ ಹಾಗೂ ಸರ್ಕಾರಿ ಸಂಗ್ರಹಣೆಯ ನಿಖರ ದತ್ತಾಂಶ ಪಾರದರ್ಶಕವಾಗಿರಬೇಕು. ಮಾಹಿತಿಯ ಕೊರತೆಯೇ ಕೃತಕ ಅಭಾವ ಮತ್ತು ಊಹಾಪೋಹದ ದರ ಏರಿಕೆಗೆ ಹಾದಿಮಾಡಿಕೊಡುತ್ತದೆ. ಹಾಗಾಗಿ ಪಾರದರ್ಶಕ ಮಾರುಕಟ್ಟೆ ಮಾಹಿತಿಯನ್ನು ಸಾರ್ವಜನಿಕವಾಗಿ ಒದಗಿಸಬೇಕು.
ಇದನ್ನೂ ಓದಿದ್ದೀರಾ? ರಾಜ್ಯದ ಅನ್ನದ ಬಟ್ಟಲಿಗೆ ಭಾರೀ ಹೊಡೆತ: ಬರಗಾಲದ ಡೊಮಿನೊ ಎಫೆಕ್ಟ್ ಹೇಗಿದೆ? ಓದಿ….
ಸ್ಥಳೀಯ ಹೊಸ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುವವರೆಗೂ ಗ್ರಾಹಕರಿಗೆ ತಕ್ಷಣದ ದರ ಇಳಿಕೆ ನಿರೀಕ್ಷಿಸುವುದು ಕಷ್ಟ. ಆದರೆ ಸೆಪ್ಟೆಂಬರ್ ನಂತರ ಹೊಸ ಬೆಳೆ ಬಂದಾಗ ಮಾರುಕಟ್ಟೆ ಸ್ಥಿರಗೊಳ್ಳಬಹುದು. ಭಾರತದ ಈರುಳ್ಳಿ ಮಾರುಕಟ್ಟೆಯಲ್ಲಿ ಗ್ರಾಹಕ ʼದುಬಾರಿಯಾಗಿದೆʼ ಎಂದಾಗ, ರೈತ ʼನನಗೆ ಸೂಕ್ತ ಬೆಲೆ ಸಿಕ್ಕಿಲ್ಲʼ ಎನ್ನುವುದು ಸಹಜವೆಂಬಂತಾಗಿದೆ. ಹಾಗಾಗಿ ಈ ಇಬ್ಬರ ನಡುವಿರುವ ಸಾಗಣೆ, ನಷ್ಟ, ಸಂಗ್ರಹಣಾ ಅಸಮಾನತೆ ಮತ್ತು ಮಧ್ಯವರ್ತಿಗಳ ಸರಪಳಿಯನ್ನು ಸರಿಪಡಿಸುವುದು ಅತ್ಯಗತ್ಯ.
ಬೆಲೆ ಏರಿದಾಗ ಗ್ರಾಹಕನಿಗೆ ಅಗ್ಗದ ದರದಲ್ಲಿ ಈರುಳ್ಳಿ ನೀಡುವುದು ಎಷ್ಟು ಮುಖ್ಯವೋ, ಹೊಸ ಬೆಳೆ ಮಾರುಕಟ್ಟೆಗೆ ಬಂದಾಗ ಬೆಲೆ ಕುಸಿದು ರೈತ ಬೀದಿಗೆ ಬೀಳದಂತೆ ರಕ್ಷಿಸುವುದೂ ಅಷ್ಟೇ ಮುಖ್ಯ. ಈ ಎರಡೂ ತುದಿಗಳನ್ನು ಸಮತೋಲನಗೊಳಿಸುವ ನ್ಯಾಯಯುತ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ಮಿಸುವುದೇ ಸರ್ಕಾರದ ಮುಂದಿರುವ ನೈಜ ಸವಾಲು.




