ಉದ್ಯೋಗದ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬೈಂದೂರು ತಾಲೂಕಿನ ನಾಡ-ಪಡುಕೋಣೆ ಸಮೀಪದ ಚುಂಗಿಗುಡ್ಡೆ ನಿವಾಸಿ ಪ್ರತಿಭಾವಂತ ಯುವ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಸಂಭವಿಸಿದೆ.
ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಮೃತಪಟ್ಟ ಯುವಕ.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಕ್ಷಯ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಪಡೆದಿದ್ದರು. ವರ್ಕ್ ಫ್ರಮ್ ಹೋಮ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಅವರು, ತಿಂಗಳಿಗೊಮ್ಮೆ ಕಚೇರಿಗೆ ತೆರಳಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ರವಿವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಚುಂಗಿಗುಡ್ಡೆಯ ತಮ್ಮ ಮನೆಯಿಂದ ಬೈಕ್‌ನಲ್ಲಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದರು.
ಚನ್ನರಾಯಪಟ್ಟಣ ಸಮೀಪ ಬೈಕ್‌ನ ಹ್ಯಾಂಡಲ್ ಟ್ರಕ್‌ಗೆ ತಾಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅಕ್ಷಯ್ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.
ಮೃತರ ತಂದೆ ನಾರಾಯಣ ಹೆಬ್ಬಾರ್ ಎಲ್‌ಐಸಿ ಏಜೆಂಟ್ ಆಗಿದ್ದು, ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಯುವ ಇಂಜಿನಿಯರ್‌ನ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಶೋಕ ಆವರಿಸಿದೆ.






