ಹಾವೇರಿ ವಿವಿ ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅಪರಿಚಿತನ ಅನುಚಿತ ವರ್ತನೆಯಿಂದ ವಿದ್ಯಾರ್ಥಿನಿಯರು ಭಯಭೀತರಾಗಿದ್ದು, ವಸತಿ ನಿಲಯಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.
ಹಾವೇರಿ ಜಿಲ್ಲೆಯ ಕೆರೆಮತ್ತಿಹಳ್ಳಿಯ ಹಾವೇರಿ ವಿವಿ ವಿದ್ಯಾರ್ಥಿಗಳು ಹಾಸ್ಟೆಲ್ ಬಳಿ ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್‌ನಲ್ಲಿ ಕನಿಷ್ಠ ಭದ್ರತಾ ಕ್ರಮಗಳನ್ನೂ ಕೈಗೊಳ್ಳದಿರುವುದೇ ಇಂತಹ ಅಹಿತಕರ ಘಟನೆಗಳಿಗೆ ದಾರಿಯಾಗಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ವಸತಿ ನಿಲಯದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ನಿಂತಿದ್ದು, ಕಣ್ಗಾವಲು ಇಲ್ಲದಂತಾಗಿದೆ. ಇದರ ಜೊತೆಗೆ ರಾತ್ರಿ ವೇಳೆ ಕಾವಲು ಕಾಯಲು ಯಾವುದೇ ಭದ್ರತಾ ಸಿಬ್ಬಂದಿಯನ್ನು (ವಾಚ್‌ಮನ್) ನೇಮಿಸಿಲ್ಲ. ಇದು ಕಿಡಿಗೇಡಿಗಳಿಗೆ ವರದಾನವಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ಹೊರಹಾಕಿದರು.
“ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರಿಕಿರಿ ಉಂಟುಮಾಡುವ ಅಪರಿಚಿತ ವ್ಯಕ್ತಿಯನ್ನು ಪೋಲಿಸ್ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು ಶೀಘ್ರವಾಗಿ ಬಂಧಿಸಬೇಕು. ಕಾನೂನು ರೀತಿ ಕ್ರಮಕೈಗೊಳ್ಳಬೇಕು. ಹಾಸ್ಟೆಲ್ ಎದುರು ಹೈಮಾಸ್ಕ್ ಲೈಟ್, ಸಿಸಿ ಕ್ಯಾಮರಾಗಳು, ರಾತ್ರಿ ಕಾವಲುಗಾರನ್ನು ಒದಗಿಸಬೇಕು. ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಸಬೇಕು” ಎಂದು ಎಸ್ಎಫ್ಐ ವಿವಿ ಘಟಕ ಉಪಾಧ್ಯಕ್ಷ ಬಸವರಾಜ ಎಸ್ ಆಗ್ರಹಿಸಿದರು.
ಬಿಸಿಎಮ್ ಇಲಾಖೆಯ ಜಿಲ್ಲಾ ಅಧಿಕಾರಿ ಆನಂದ ಅವರು ಸ್ಥಳಕ್ಎ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಇಲಾಖೆಯ ವತಿಯಿಂದ ಪೋಲಿಸ್ ಠಾಣೆಗೆ ದೂರ ನೀಡುತ್ತೇವೆ. ಸಿಸಿ ಕ್ಯಾಮರಾ, ಲೈಟ್ ವ್ಯವಸ್ಥೆ, ರಾತ್ರಿ ಕಾಲವುಗಾರರನ್ನು ನೇಮಕ ಸೇರಿದಂತೆ ಹಾಸ್ಟೆಲ್ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ” ಎಂದು ಭರವಸೆ ನೀಡಿದರು.
ರಾಜ್ಯ ಅಲ್ಪಾ ಸಂಖ್ಯಾತರ ಆಯೋಗದ ಸದಸ್ಯ ಪರಿಮಳ ಜೈನ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ವಿ ವಿ ಘಟಕದ ಅಧ್ಯಕ್ಷೆ ಪೂಜಾ ಬಾರ್ಕಿ, ಹಾಸ್ಟೆಲ್ ಘಟಕ ಅಧ್ಯಕ್ಷೆ ನಂದಿನಿ ಕೆ, ಕಾರ್ಯದರ್ಶಿ ವಿನೋದ ಪಿ, ಉಪಾಧ್ಯಕ್ಷರು ನಾಗರತ್ನ ಕೆ, ವಿದ್ಯಾಶ್ರೀ ಎಮ್, ಅಕ್ಷತ ಎಮ್, ಚೈತ್ರಾ ಎಸ್, ಸಹ ಕಾರ್ಯದರ್ಶಿ ನಿಂಗಮ್ಮ ಕೆ, ಅನನ್ಯ ವೈ, ಸಂಜನಾ ಜಿ, ವೀಣಾ ಆರ್, ಮುಖಂಡರು ಪೂಜಾ ಎಸ್, ಈಶ್ವರಿ ಡಿ ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.



