- 27ರ ಮಧ್ಯರಾತ್ರಿ 12ರವರೆಗೆ ಆಟೋ ಕ್ಯಾಬ್, ಖಾಸಗಿ ಬಸ್‌ಗಳ ಸಂಚಾರ ಬಂದ್
- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ‍್ಯಾಲಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ನಮ್ಮ ಸಂಪಾದನೆ ಕುಂಠಿತವಾಗಿದೆ ಎಂದು ಖಾಸಗಿ ಬಸ್, ಆಟೋರಿಕ್ಷಾ, ಟ್ಯಾಕ್ಸಿ ಹಾಗೂ 20ಕ್ಕೂ ಹೆಚ್ಚು ಸಂಘಟನೆಗಳು ಆರೋಪಿಸಿವೆ. ನಾನಾ ಬೇಡಿಕೆ ಈಡೇರಿಕೆಗಾಗಿ ಜುಲೈ 27ರಂದು ಬಂದ್‌ಗೆ ಮುಂದಾಗಿವೆ.
ಜುಲೈ 26ರ ಮಧ್ಯರಾತ್ರಿ 12ರಿಂದ 27ರ ಮಧ್ಯರಾತ್ರಿ 12ರವರೆಗೆ ಓಲಾ, ಉಬರ್, ಆಟೋ ಕ್ಯಾಬ್ ಹಾಗೂ ಖಾಸಗಿ ಬಸ್‌ಗಳ ಸಂಚಾರವಿರುವುದಿಲ್ಲ. ಜುಲೈ 27ರಂದು ಬೆಳಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ‍್ಯಾಲಿ ನಡೆಸಲು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ತೀರ್ಮಾನಿಸಿದೆ.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಎಸ್ ನಟರಾಜ್ ಶರ್ಮಾ ಮಾತನಾಡಿ, ”ಪ್ರತಿಯೊಂದು ಸಂಸ್ಥೆಗೂ ತನ್ನದೇ ಆದ ಬೇಡಿಕೆಗಳಿರುತ್ತವೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದ ನಂತರ ಖಾಸಗಿ ಬಸ್ ನಿರ್ವಾಹಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಸರ್ಕಾರ ಖಾಸಗಿ ಬಸ್‌ಗಳಿಗೂ ಈ ಯೋಜನೆ ವಿಸ್ತರಣೆ ಮಾಡಬೇಕು. ನಾವು ಬದುಕುವಂತಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಗೋವಿಂದರಾಜ ನಗರ | ₹217 ಕೋಟಿ ಮೊತ್ತದ ಯೋಜನೆಗಳ ಬಗ್ಗೆ ತನಿಖೆಗೆ ಶಾಸಕ ಪ್ರಿಯಕೃಷ್ಣ ಮನವಿ
ಕಳೆದ ವಾರ ಖಾಸಗಿ ಬಸ್‌ಗಳ ನಿರ್ವಾಹಕರು ಸಭೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒಂದು ವಾರ ಗಡುವು ನೀಡಿದ್ದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ.
ನಗರದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ನಿಷೇಧ ಹೇರಬೇಕು. ಶಕ್ತಿ ಯೋಜನೆಯು ನಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಆಟೋರಿಕ್ಷಾ ಚಾಲಕರ ಸಂಘಗಳು ಒತ್ತಾಯಿಸುತ್ತಿವೆ.
ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಯನ್ನು ಜೂನ್ 11 ರಂದು ಪ್ರಾರಂಭಿಸಲಾಯಿತು. ಇದುವರೆಗೂ 10 ಕೋಟಿಗೂ ಹೆಚ್ಚು ಮಹಿಳೆಯರು ಯೋಜನೆಯ ಲಾಭ ಪಡೆದಿದ್ದಾರೆ.