“ನಾನು ಯಾವುದೇ ಸರ್ಕಾರವನ್ನು ಕೆಡವಲು ಅಥವಾ ಬದಲಾಯಿಸಲು ಇಲ್ಲಿಗೆ ಬಂದಿಲ್ಲ. ನನಗೆ ಎಲಾನ್ ಮಸ್ಕ್ ಅಥವಾ ಜಾರ್ಜ್ ಸೊರೊಸ್ ಹಣವನ್ನೂ ನೀಡಿಲ್ಲ. ದೇಶದ ಒಬ್ಬ ಸಾಮಾನ್ಯ ನಾಗರಿಕನಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನಿಸಲು ಬಂದಿದ್ದೇನೆ” ಎಂದು ಖ್ಯಾತ ಯೂಟ್ಯೂಬರ್ ಹಾಗೂ ಸಾಮಾಜಿಕ ವಿಶ್ಲೇಷಕ ಧ್ರುವ್ ರಾಠಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ಒಕ್ಕೂಟವು ಆಯೋಜಿಸಿದ್ದ ‘ಜನತಾ ನ್ಯಾಯಾಲಯ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಮ್ಮ ಮೊದಲ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ದೇಶದಲ್ಲಿ ನಡೆಯುತ್ತಿರುವ ಮತ ಕಳವು ಅಥವಾ ಚುನಾವಣಾ ಅಕ್ರಮಗಳು ಪ್ರತಿಯೊಬ್ಬ ನಾಗರಿಕನ ಮೇಲೂ ಪರಿಣಾಮ ಬೀರುತ್ತವೆ. ಹೀಗಾಗಿ ಇದು ಕೇವಲ ವಿರೋಧ ಪಕ್ಷಗಳ ವಿಷಯವಲ್ಲ, ಪ್ರತಿಯೊಬ್ಬ ಭಾರತೀಯನ ಮತ್ತು ಸ್ವತಃ ಬಿಜೆಪಿ ಬೆಂಬಲಿಗರ ಮೇಲೂ ಪರಿಣಾಮ ಬೀರುವ ವಿಷಯವಾಗಿದೆ. ಬಿಜೆಪಿ ಬೆಂಬಲಿಗರು ಕೂಡ ಈ ಹೋರಾಟವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಮತದಾರರ ಪಟ್ಟಿಯಲ್ಲಿ ಬೃಹತ್ ಪ್ರಮಾಣದ ಅಕ್ರಮಗಳು ನಡೆಯುತ್ತಿವೆ ಎಂಬುದಕ್ಕೆ ಮೂರು ಪ್ರಮುಖ ಸಾಕ್ಷ್ಯಗಳನ್ನು ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಇದಕ್ಕೆ ಉತ್ತರಿಸಬೇಕು ಎಂದು ಸವಾಲು ಹಾಕಿದರು. ಮೊದಲನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಆರಂಭಿಕ ಪಟ್ಟಿಯಲ್ಲಿದ್ದ ಸುಮಾರು 70 ಲಕ್ಷ ಜನರ ಹೆಸರುಗಳನ್ನು ಚುನಾವಣೆಯ ಸಮಯದಲ್ಲಿ ಮತದಾರರ ಪಟ್ಟಿಯಿಂದ ಏಕಾಏಕಿ ತೆಗೆದುಹಾಕಿ, ಚುನಾವಣೆ ಮುಗಿದ ನಂತರ ಮತ್ತೆ ಸೇರಿಸಲಾಯಿತು. ಎರಡನೆಯದಾಗಿ, ಬಿಹಾರದಲ್ಲಿ 75 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಯಿತು. ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡುವವರೆಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಮೂರನೆಯದಾಗಿ, ಲಕ್ಷಾಂತರ ಹೊಸ ಹೆಸರುಗಳನ್ನು ಅನಾಮಧೇಯವಾಗಿ ಸೇರಿಸಲಾಗಿದ್ದು, ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಯಾರ ಹೆಸರುಗಳನ್ನು ಸೇರಿಸಲಾಗಿದೆ ಎಂಬುದರ ವಿವರಗಳನ್ನೇ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದರು. ಗೋವಾದಲ್ಲಿ ಸಣ್ಣಮಟ್ಟದ ಹೆಸರಿನ ತಿದ್ದುಪಡಿಯನ್ನು ಸರಿಯಾಗಿ ಮಾಡಲು ಸಹ ಸಹಾಯಕ ಚುನಾವಣಾಧಿಕಾರಿಗೆ ಸಾಧ್ಯವಾಗಿಲ್ಲ, ಆಯೋಗ ತನಗೆ ತೋಚಿದಂತೆ ನಡೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತದಾರರ ಪಟ್ಟಿಯಿಂದ ಗ್ಯಾನೇಶ್ ಕುಮಾರ್ ಅವರ ಆಡಳಿತಾವಧಿಯಲ್ಲಿ ಜೀವಂತವಿರುವ ಜನರನ್ನೇ ‘ಮೃತಪಟ್ಟಿದ್ದಾರೆ’ ಎಂದು ಘೋಷಿಸಿ ಹಕ್ಕು ಕಸಿಯಲಾಗಿದೆ. ಅಂತಹ ಸಂತ್ರಸ್ತರು ಸಹ ಈ ಸಭೆಗೆ ಬಂದಿದ್ದಾರೆ. ಮತದಾರರ ಜಾಗೃತಿಗಾಗಿ ಪ್ರತಿಯೊಂದು ಜಿಲ್ಲೆಗೂ ಪ್ರವಾಸ ಮಾಡಿ ಜನರನ್ನು ಸಂಘಟಿಸಿದ ಕರ್ನಾಟಕದ ವಿವಿಧ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸಿದ ಅವರು, ಇಲ್ಲಿ ಒಗೂಡಿರುವ ಜನರಿಗಿಂತ ದೊಡ್ಡ ದೇಶಭಕ್ತರು ಬೇರಾರೂ ಇಲ್ಲ ಎಂದರು.
ಅಂತಿಮವಾಗಿ, ಗ್ಯಾನೇಶ್ ಕುಮಾರ್ ಅವರಂತಹ ಅಧಿಕಾರಿಗಳು ಮಾಡುತ್ತಿರುವ ತಪ್ಪುಗಳನ್ನು ಮತ್ತು ಅಕ್ರಮಗಳನ್ನು ಬೆಂಬಲಿಸಲು ಅಥವಾ ರಕ್ಷಿಸಲು ಯಾರು ಪ್ರಯತ್ನಿಸುತ್ತಾರೋ ಅವರಿಗಿಂತ ದೊಡ್ಡ ದೇಶದ್ರೋಹಿಗಳು ಬೇರಾರೂ ಇರಲು ಸಾಧ್ಯವಿಲ್ಲ ಎಂದು ಕಟುವಾಗಿ ಆಕ್ರೋಶ ಹೊರಹಾಕಿದ ಅವರು, ‘ವೋಟ್ ಚೋರ್ ಗದ್ದಿ ಛೋಡ್’ (ಮತ ಕದಿಯುವವರೇ ಅಧಿಕಾರ ಬಿಟ್ಟು ತೊಲಗಿ) ಮತ್ತು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.




