“ಕಳೆದ ಒಂದು ವರ್ಷದಿಂದ ಕರ್ನಾಟಕದ ನಾಗರಿಕ ಸಂಘಟನೆಗಳು ಎಸ್‌ಐಆರ್ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಇಡೀ ರಾಜ್ಯ ಪ್ರವಾಸ ಮಾಡಿ, ನೂರಾರು ಬೂತ್‌ಗಳಲ್ಲಿ ಸಮೀಕ್ಷೆ ನಡೆಸಿ ಜನರ ಸಮಸ್ಯೆಗಳನ್ನು ದಾಖಲಿಸಿದ್ದೇವೆ. ಕರ್ನಾಟಕದಲ್ಲಿ ಏನಾಗಿದೆ ಎಂಬುದನ್ನು ದೇಶದ ಮುಂದೆ ಇಡುವ ಪ್ರಯತ್ನ ಮಾಡಿದ್ದೇವೆ” ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್ ವಿರೋಧಿ ಒಕ್ಕೂಟದ ವತಿಯಿಂದ ನಡೆದ ‘ಜನತಾ ನ್ಯಾಯಾಲಯ’ದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಂಗ್ರಹಿಸಿದ ವರದಿಯನ್ನು ದೆಹಲಿಗೆ ಕೊಂಡೊಯ್ದು ಮಂಡಿಸಲಾಗಿದೆ. ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿಯೂ ಪತ್ರಿಕಾಗೋಷ್ಠಿಗಳನ್ನು ನಡೆಸಿ ಎಸ್‌ಐಆರ್‌ನಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಜನರ ಗಮನಕ್ಕೆ ತರಲಾಗಿದೆ ಎಂದರು.
“ಇಂದು ನಾವು ಜನತಾ ನ್ಯಾಯಾಲಯ ನಡೆಸುತ್ತಿದ್ದೇವೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ. ಕಳೆದ ಒಂದು ವರ್ಷದಲ್ಲಿ ಜನರು ಅನುಭವಿಸಿದ ಸಮಸ್ಯೆಗಳನ್ನು, ಆತಂಕಗಳನ್ನು ಮತ್ತು ಪ್ರಶ್ನೆಗಳನ್ನು ಸಾರ್ವಜನಿಕವಾಗಿ ದಾಖಲಿಸುವ ವೇದಿಕೆ. ಈ ಹೋರಾಟದಲ್ಲಿ ಜೆನ್ ಜೀ, ಕಾಕ್ರೋಚ್ ಸೇರಿದಂತೆ ಅನೇಕ ಯುವಕರು ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ಕರ್ನಾಟಕದ ಎಲ್ಲ ಜನಪರ ಸಂಘಟನೆಗಳು, ಯುವಕರು ಮತ್ತು ಸ್ವಯಂಸೇವಕರಿಗೆ ಧನ್ಯವಾದ ಹೇಳಬೇಕು” ಎಂದು ಹೇಳಿದರು.
ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹೋರಾಟಗಳಷ್ಟೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೂ ಮಹತ್ವವಿದೆ ಎಂದು ಅವರು ಹೇಳಿದರು.
“ದೇಶಾದ್ಯಂತ ಈ ವಿಚಾರದ ಬಗ್ಗೆ ಪ್ರಶ್ನೆಗಳು ಎದ್ದಿವೆ. ದೊಡ್ಡವರಷ್ಟೇ ಅಲ್ಲ, ಚಿಕ್ಕ ಹುಡುಗರು, ಧೈರ್ಯಶಾಲಿ ಯುವಕರು ಕೂಡ ಈ ಪ್ರಶ್ನೆಯನ್ನು ಎತ್ತುತ್ತಿದ್ದಾರೆ. ಎಸ್‌ಐಆರ್ ಒಂದು ದೊಡ್ಡ ಸಮಸ್ಯೆಯಾಗಿದೆ. ಭಾಷೆಗಳು ಬೇರೆ ಇರಬಹುದು, ಆದರೆ ಭಾವನೆ ಒಂದೇ” ಎಂದರು.
ಕರ್ನಾಟಕದಾದ್ಯಂತ ಪ್ರವಾಸ ಮಾಡಿದಾಗ ಮತದಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳು ಕಂಡುಬಂದಿವೆ. ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಅದನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದು ಪ್ರಕಾಶ್ ರಾಜ್ ಹೇಳಿದರು.
“ಪ್ರತಿಭಟಿಸುವ ಅವಕಾಶಗಳಿಗೂ ನಿರ್ಬಂಧಗಳು ಎದುರಾಗುತ್ತಿರುವ ಸಂದರ್ಭದಲ್ಲಿ, ನಾಗರಿಕರು ತಮ್ಮ ಮತದಾನದ ಹಕ್ಕಿನ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಈ ಪ್ರಶ್ನೆ ಕರ್ನಾಟಕದ್ದಷ್ಟೇ ಅಲ್ಲ, ದೇಶದ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಪ್ರಶ್ನೆ” ಎಂದು ಅವರು ಹೇಳಿದರು.




