- ದರೋಡೆ ಆಗಿರುವ ಬಗ್ಗೆ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ ಗಿರೀಶ್
- ಕದ್ದ ಆಭರಣ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್
ಕಳ್ಳತನ ಮಾಡಲು ವಿಮಾನ ಹಾಗೂ ದುಬಾರಿ ಕಾರುಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ಕಳ್ಳರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜತೆಗೆ ₹67 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಲೀಂ ರಫೀಕ್ ಶೇಖ್ (46) ಅಲಿಯಾಸ್ ಬಾಂಬೆ ಸಲೀಂ ಮತ್ತು ಯಾಸಿನ್ ಮಕ್ಬುಲ್ ಖಾನ್ (47) ಬಂಧಿತ ಆರೋಪಿಗಳು. ಈ ಪೈಕಿ, ಇಬ್ಬರಿಂದ 11 ಮನೆಗಳಲ್ಲಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಒಂದು ಕೆಜಿ ಚಿನ್ನ, 6.5 ಕೆಜಿ ಬೆಳ್ಳಿ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೃತನಗರದಲ್ಲಿರುವ ಆರ್ ಗಿರೀಶ್ ಎಂಬವರು ತಮ್ಮ ಕುಟುಂಬಸ್ಥರೊಂದಿಗೆ ತಿರುಪತಿಗೆ ತೆರಳಿದ್ದರು. ಅವರ ಮನೆಯಲ್ಲಿ ಜನವರಿ 23ರಂದು ಕಳ್ಳತನವಾಗಿತ್ತು. ಅವರ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಗಿರೀಶ್ ಅವರು ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಗಿರೀಶ್ ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಆ ವೇಳೆ, ಕಳ್ಳತನ ಮಾಡಿದ್ದವರು ವೃತ್ತಿಪರ ಕಳ್ಳರು ಎಂದು ತಿಳಿದುಬಂದಿದೆ. ಆರೋಪಿಗಳು ಮುಂಬೈ, ಗುಜರಾತ್ ಸೇರಿದಂತೆ ನಾನಾ ಪ್ರದೇಶಗಳಲ್ಲಿ ಕಳ್ಳತನ ಮಾಡಿದ್ದಾರೆ. ಅವರ ಅಡಗುತಾಣಗಳನ್ನು ಬದಲಾಯಿಸುತ್ತಿದ್ದರು. ಈ ಹಿಂದೆ ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದರು. ಮುಂಬೈ ಪೊಲೀಸರು ಅವರ ಮೇಲೆ ನಿಗಾ ವಹಿಸಿದ ಬಳಿಕ ಆರೋಪಿಗಳು ತಮ್ಮ ನೆಲೆಯನ್ನು ಬೆಂಗಳೂರಿಗೆ ಬದಲಾಯಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮೋದಿ ಉದ್ಘಾಟನೆಗಾಗಿ ತರಾತುರಿ ಅವೈಜ್ಞಾನಿಕ ಮೆಟ್ರೋ ಕಾಮಗಾರಿ: ನೆಟ್ಟಿಗರ ಕಿಡಿ
ಬೆಂಗಳೂರಿನಲ್ಲಿ ಅಮೃತಹಳ್ಳಿ, ಕೊಡಿಗೇಹಳ್ಳಿ, ಎಂಐಸಿಒ ಲೇಔಟ್, ಆರ್.ಆರ್.ನಗರ ಹಾಗೂ ತುಮಕೂರು ಮತ್ತು ಬೆಳಗಾವಿಯಲ್ಲಿ ಆರೋಪಿಗಳು ಮನೆ ಕಳ್ಳತನ ಮಾಡಿದ್ದರು. ಇಬ್ಬರಿಬ್ಬರ ಪೈಕಿ ಖಾನ್ ಎಂಬುವವನು ಸುಮಾರು 35 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜಮೀನು ಖರೀದಿ ಮಾಡಿದ್ದಾನೆ.
ಪೊಲೀಸರ ಪ್ರಕಾರ, ಸಲೀಂ ಕದ್ದ ಆಭರಣಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದನು.