ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ ಧ್ಯೇಯವಾಕ್ಯದೊಂದಿಗೆ ಅದ್ಧೂರಿಯಾಗಿ ಆರಂಭವಾದ ‘ಕರ್ನಾಟಕ ಪರ್ವ 2026’ ಕಾರ್ಯಕ್ರಮವು ರಾಜ್ಯದ ಸಾಂಸ್ಕೃತಿಕ ಪರಂಪರೆ ಮತ್ತು ಕುಶಲಕರ್ಮಿಗಳ ಸ್ವಾವಲಂಬನೆಗೆ ಹೊಸ ಆಶಯ ನೀಡಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ವೈವಿಧ್ಯತೆಯಲ್ಲಿ ಏಕತೆ ಮತ್ತು ಕೌಶಲ್ಯದಲ್ಲಿ ಸ್ವಾವಲಂಬನೆ ಇದು ನಮ್ಮ ಸರ್ಕಾರದ ಪ್ರತಿಬಿಂಬವಾಗಿದ್ದು, ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ, ಕುಶಲಕರ್ಮಿಗಳ ಬದುಕು ಬೆಳಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಮಹಿಳೆಯರು ಸ್ವಾವಲಂಬಿಗಳಾಗಿ ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಸಬೇಕು ಎಂದು ಕರೆ ನೀಡಿದ ಅವರು, ಗ್ಯಾರಂಟಿ ಯೋಜನೆಗಳು ಮತ್ತು ಪ್ರತಿ ವರ್ಷ 1.20 ಲಕ್ಷ ಕೋಟಿ ರೂಪಾಯಿ ವಿನಿಯೋಗದ ಮೂಲಕ ಸಮಾಜದ ಎಲ್ಲಾ ವರ್ಗಗಳಿಗೆ ಆರ್ಥಿಕ ಶಕ್ತಿ ತುಂಬಲಾಗುತ್ತಿದೆ ಎಂದರು. ಯುವಜನರಿಗೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರನ್ನು ಕೈಬಿಡುವ ಸಂಚು ನಡೆಯುತ್ತಿದ್ದು, ಮತದಾನದ ಹಕ್ಕು ಬದುಕಿನ ಹಕ್ಕಾಗಿದೆ ಎಂದು ಎಚ್ಚರಿಸಿ ಅದನ್ನು ರಕ್ಷಿಸಿಕೊಳ್ಳುವಂತೆ ಮನವಿ ಮಾಡಿದರು.
ಪ್ರಸ್ತುತ ಕಾರ್ಯಕ್ರಮವು ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಮತ್ತು ರಾಜ್ಯದ ಸಾಂಸ್ಕೃತಿಕ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸುವ ಉದ್ದೇಶ ಹೊಂದಿದ್ದು, ಅಲ್ಪಸಂಖ್ಯಾತ ಕುಶಲಕರ್ಮಿಗಳಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶವನ್ನು ಒಳಗೊಂಡಿದೆ. ಸಾರ್ವಜನಿಕರು ಬೆಳಿಗ್ಗೆ 11 ಗಂಟೆಯಿಂದ ವೀಕ್ಷಿಸಬಹುದು.
ಕಾಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್, ಎಂಪಿಗಳು ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು. ಟೆಲಂಗಾಣದ ಅಲ್ಪಸಂಖ್ಯಾತರ ಸಚಿವರು ಹಾಗೂ ಮಾಜಿ ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.




