ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡವನ್ನು (SIT) ಪುನರ್‌ರಚಿಸಬೇಕು ಎಂದು ಆಗ್ರಹಿಸಿ ಕೊಂದವರು ಯಾರು? ಆಂದೋಲನದ ಸದಸ್ಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.
ಸೌಜನ್ಯ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ SITಯಲ್ಲಿ ಭ್ರಷ್ಟಾಚಾರದ ಆರೋಪ ಇರುವ ಅಧಿಕಾರಿಗಳಿದ್ದಾರೆ. ರಾಜ್ಯದಲ್ಲಿ ಹಲವು ದಕ್ಷ, ನಿಷ್ಠಾವಂತ ಪೊಲೀಸ್ ಅಧಿಕಾರಿಗಳಿದ್ದರೂ ಸರ್ಕಾರ ಅಸಮರ್ಥ ಅಧಿಕಾರಿಗಳನ್ನು ನೇಮಕ ಮಾಡಿರುವುದು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಆಶಯಕ್ಕೆ ವಿರುದ್ಧವಾಗಿದೆ. ನಿಷ್ಪಕ್ಷಪಾತ, ಪಾರದರ್ಶಕ ತನಿಖೆ ನಡೆದು ಸೌಜನ್ಯ ಹಂತಕರಿಗೆ ಶಿಕ್ಷೆಯಾಗಬೇಕು ಎಂಬ ಸೌಜನ್ಯ ಪರ ಹೋರಾಟಗಾರರ ಹಲವು ವರ್ಷಗಳ ಹೋರಾಟಕ್ಕೆ ಜಯ ಸಿಗಬೇಕು. ಸೌಜನ್ಯ ತಾಯಿ ಕುಸುಮಾವತಿಯವರ ಹದಿನಾಲ್ಕು ವರ್ಷಗಳ ಈ ಕಾನೂನು ಸಮರಕ್ಕೆ ಜಯ ಸಿಗಬೇಕು. ಅದಕ್ಕಾಗಿ ಎಸ್‌ಐಟಿ ಪುನರ್ರಚನೆ ಆಗಲೇಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
SITಗೆ ಸೇರ್ಪಡೆಗೊಳಿಸಲಾಗಿರುವ ಎಸ್ಪಿ ವೆಂಕಟೇಶ್ ಪ್ರಸನ್ನ ಅವರ ವಿರುದ್ಧ ಗಂಭೀರ ಆರೋಪಗಳ ಕುರಿತು ಇಲಾಖಾ ತನಿಖೆಗಳು ನಡೆದಿದ್ದವು. ಇಂತಹ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿಯನ್ನು ಸೌಜನ್ಯ ಪ್ರಕರಣದ ಮರುತನಿಖಾ ತಂಡದಲ್ಲಿ ಸೇರಿಸಿರುವುದು ಸುಪ್ರೀಂ ಕೋರ್ಟ್‌ನ ಆದೇಶದ ಮೂಲ ಆಶಯಕ್ಕೆ ವಿರುದ್ಧವಾಗಬಹುದು ಎಂದು ಆಂದೋಲನ ಆತಂಕ ವ್ಯಕ್ತಪಡಿಸಿದೆ.
ಮರುರಚಿಸಲಾಗುವ SITಗೆ ಅಧಿಕಾರಿಗಳ ಆಯ್ಕೆಯಲ್ಲಿ ಮೂರು ಅಂಶಗಳನ್ನು ಪಾಲಿಸಬೇಕು ಎಂದು ಆಂದೋಲನ ಒತ್ತಾಯಿಸಿದೆ.
೧.ಸುಪ್ರೀಂ ಕೋರ್ಟ್ ನಿರ್ದೇಶನದಂತೆ DG ಅಥವಾ ADGP ದರ್ಜೆಯ ಅಧಿಕಾರಿಯನ್ನು SIT ಮುಖ್ಯಸ್ಥರನ್ನಾಗಿ ನೇಮಿಸಬೇಕು.
೨.ತನಿಖಾ ತಂಡದಲ್ಲಿ ಫೊರೆನ್ಸಿಕ್ ಪರಿಣತಿ ಹೊಂದಿರುವ ಅಧಿಕಾರಿಗಳನ್ನು ಒಳಗೊಳ್ಳಬೇಕು.
೩.ಭ್ರಷ್ಟಾಚಾರ, ಕರ್ತವ್ಯಲೋಪ, ಮಹಿಳೆಯರ ವಿಚಾರದಲ್ಲಿ ಅಸೂಕ್ಷ್ಮತೆ ಹಾಗೂ ಕೋಮುವಾದಿ ಶಕ್ತಿಗಳೊಂದಿಗೆ ನೇರ ಸಂಪರ್ಕದ ಆರೋಪಗಳನ್ನು ಹೊಂದಿರುವ ಅಧಿಕಾರಿಗಳನ್ನು ತಂಡದಿಂದ ದೂರವಿಡಬೇಕು.
ಸೌಜನ್ಯ ಪ್ರಕರಣದ ಮರುತನಿಖೆಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖಾ ತಂಡ ಅಗತ್ಯವಾಗಿದ್ದು, ಯಾವುದೇ ಸ್ಥಳೀಯ ಪ್ರಭಾವ ಅಥವಾ ಹಿಂದಿನ ತನಿಖೆಯ ಲೋಪಗಳಿಗೆ ಒಳಗಾಗದ ಅಧಿಕಾರಿಗಳನ್ನು ನೇಮಿಸಬೇಕು ಎಂದು ‘ಕೊಂದವರು ಯಾರು?’ ಆಂದೋಲನ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಒತ್ತಾಯಿಸಿದೆ. ಇಲ್ಲದಿದ್ದರೆ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.




