- ಮನೆಗಳ ಎದುರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಹಲ್ಲೆ ದೃಶ್ಯ ಸೆರೆ
- ಗಂಭಿರವಾಗಿ ಗಾಯಗೊಂಡಿರುವ ಸತೀಶ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಕಸ ಸಂಗ್ರಹಿಸುವ ಆಟೋ ಚಾಲಕ ಸತೀಶ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಜುಲೈ 2ರಂದು ನಗರದ ಕಾಟನಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಿ ಮೊಹಲ್ಲದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕಸ್ತೂರಬಾ ನಗರದ ನಿವಾಸಿ ಸತೀಶ್(24) ಎಂಬುವವರು ಹಲ್ಲೆಗೊಳಗಾದವರು. ಎರಡು ಗುಂಪುಗಳು ಮಾರಕಾಸ್ತ್ರಗಳನ್ನು ಹಿಡಿದು ರಸ್ತೆಯಲ್ಲಿ ಪರಸ್ಪರ ಹಲ್ಲೆ ನಡೆಸುತ್ತಿರುವ ದೃಶ್ಯ ರಸ್ತೆ ಪಕ್ಕದ ಅಂಗಡಿ ಮತ್ತು ಮನೆಗಳ ಎದುರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಂಭೀರವಾಗಿ ಗಾಯಗೊಂಡಿರುವ ಸತೀಶ್ ಅವರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ತನ್ನ ಸ್ನೇಹಿತ ಮತ್ತು ಇತರರು ಕಸದ ವಾಹನವನ್ನು ಚಲಾಯಿಸುತ್ತಿದ್ದಾಗ ಮಾರಕಾಸ್ತ್ರಗಳೊಂದಿಗೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಸತೀಶ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಎಮ್‌ಸಿ ಮೊದಲ ಮುಸ್ಲಿಂ ಮಹಿಳಾ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಡಾ. ಅಸಿಮಾ ಬಾನು
ಸತೀಶ್ ಅವರ ಸ್ನೇಹಿತರಾದ ರಾಮಮೂರ್ತಿ, ರಿತಿಕ್, ಮೋಹನ್ ರನ್ನು ಪೊಲೀಸರು ಬಂಧಿಸಿದ್ದಾರೆ.
“ದಾಳಿಕೋರರೊಂದಿಗೆ ಸತೀಶ್ ಗೆಳೆತನವಿತ್ತು. ಆದರೆ, ಅವರೊಂದಿಗೆ ಭಿನ್ನಾಭಿಪ್ರಾಯ ಬೆಳೆದು ದಾಳಿಗೆ ಕಾರಣವಾಗಿದೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಮತ್ತು ಕೊಲೆ ಯತ್ನದಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.