2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ, ಬೆಂಗಳೂರಿನ ಬಹುತೇಕ ಕಡೆ ರಸ್ತೆಗಳಿಗೆ ಟಾರು ಹಾಕಲಾಗಿತ್ತು. ಇದೀಗ ಟಾರು ಕಿತ್ತು ಬರುತ್ತಿದ್ದು, ರಸ್ತೆಯ ತುಂಬ ಗುಂಡಿಗಳು ನಿರ್ಮಾಣವಾಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಚ್‌ಎಎಲ್ ವಾರ್ಡ್‌ನ ವರ್ತೂರು, ವೈಟ್‌ಫೀಲ್ಡ್ ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತಿದ್ದು, ಟಾರು ಕಿತ್ತು ಹೋಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.
“ವರ್ತೂರು-ಬಳಗೆರೆ ಹಾಗೂ ಬಳಗೆರೆ ಪಾಣತ್ತೂರು ಮುಖ್ಯರಸ್ತೆಯಲ್ಲಿ ಗುಂಡಿಗಳು ತುಂಬಿವೆ. ಕಳಪೆ ಕಾಮಗಾರಿ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಬಾಕಿ ಬಿಲ್ ಪಾವತಿ ಮಾಡುವುದನ್ನು ತಡೆಹಿಡಿಯಬೇಕು” ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ವರ್ತೂರು ಸಮೀಪದ ಆದಿತ್ಯ ಫ್ರಾಂಡೋಸೊ ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರು ಮಾತನಾಡಿ, “ವಿಧಾನಸಭೆ ಚುನಾವಣೆ ಮುನ್ನವೇ ಟಾರ್ ಹಾಕಲಾಗಿದ್ದು, ಎರಡು ತಿಂಗಳಲ್ಲೇ ವರ್ತೂರು ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳನ್ನು ಬೇಗನೆ ಮುಚ್ಚಬೇಕು. ಇಲ್ಲದಿದ್ದರೆ, ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಧೂಳಿನ ಸಂಬಂಧಿತ ಸೋಂಕುಗಳು ಹೆಚ್ಚಾಗುತ್ತವೆ” ಎಂದರು.
“ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಹಣ ಪಾವತಿಯಾಗದಂತೆ ಹಾಗೂ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರಿಗೆ ಮನವಿ ಸಲ್ಲಿಸಲಾಗುವುದು. ಸಂಬಂಧಪಟ್ಟ ಗುತ್ತಿಗೆದಾರರು ರಸ್ತೆಗಳನ್ನು ಬೇಗನೆ ಸರಿಪಡಿಸಬೇಕು. ಸೊರಹುಣ್ಸೆ ಮುಖ್ಯರಸ್ತೆ, ಹಲಸಹಳ್ಳಿ ಮುಖ್ಯರಸ್ತೆ, ಬಳಗೆರೆ-ಪಾಣತ್ತೂರು ರಸ್ತೆ, ಬಳಗೆರೆ-ಗುಂಜೂರು ರಸ್ತೆಗಳಲ್ಲಿ ಇತ್ತೀಚೆಗೆ ಡಾಂಬರೀಕರಣ ಮಾಡಲಾಗಿದೆ” ಎಂದು ವರ್ತೂರಿನ ನಿವಾಸಿ ಜಗದೀಶ್ ರೆಡ್ಡಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಸ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲು
“ಆರ್ಟಿರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬಂದಿವೆ. ಬಿಡಬ್ಲ್ಯುಎಸ್‌ಎಸ್‌ಬಿಯ ಕಾಮಗಾರಿಗಳಿಂದಾಗಿ ಈ ಸಮಸ್ಯೆ ಉಂಟಾಗಿದೆ” ಎಂದು ಮಹದೇವಪುರ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್ ಮುನಿರೆಡ್ಡಿ ಹೇಳಿದರು.