ಅಪ್ರಾಪ್ತ ಮಗಳನ್ನು ಚುಡಾಯಿಸಿದ್ದಕ್ಕೆ ಕೋಪಗೊಂಡ ತಂದೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಡೇವಿಡ್ (22) ಕೊಲೆಯಾದ ದರ್ದೈವಿ. ಮಂಜುನಾಥ್ ಬಂಧಿತ ಆರೋಪಿ. ಈತನು ಬೆಂಗಳೂರಿನ ವಿಲ್ಸನ್ ಗಾರ್ಡನ್ ವಿನಾಯಕನಗರದ ನಿವಾಸಿ. ಯುವಕನನ್ನ ಚಾಕುವಿನಿಂದ ತಿವಿದು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಆರೋಪದಡಿ ಈತನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕೊಲೆಯಾದ ಡೇವಿಡ್, ಮಂಜುನಾಥರ ಅಪ್ರಾಪ್ತ ಮಗಳನ್ನು ಪ್ರೀತಿ ಮಾಡುತ್ತಿದ್ದನು. ಯುವತಿಯೂ ಸಹ ಡೇವಿಡ್‌ನನ್ನು ಪ್ರೀತಿ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಪ್ರೀತಿ ಮಾಡುತ್ತಿದ್ದ ಈ ಇಬ್ಬರ ಮದುವೆಗೆ ಆರೋಪಿ ಮಂಜುನಾಥ್ ಒಪ್ಪಿಗೆ ನೀಡಿರಲಿಲ್ಲ. ಆದರೆ, ಡೇವಿಡ್ ಪದೇ ಪದೇ ಮಂಜುನಾಥ್‌ನಿಗೆ ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದನು. ಮದುವೆ ಮಾಡಿ ಕೊಡದಿದ್ದರೆ, ಮಗಳ ಜೊತೆಗಿರುವ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದನು ಎಂದು ತಿಳಿದುಬಂದಿದೆ.
ಮಾನ ಮರ್ಯಾದೆಗೆ ಹೆದರಿದ ಮಂಜುನಾಥ್ ಡೇವಿಡ್ ಜತೆಗೆ ಮಾತನಾಡಲು ನ.21 ರಂದು ಸಾಯಂಕಾಲ 6.30 ಸುಮಾರಿಗೆ ಅಶೋಕ ನಗರದ ಸುಬ್ಬಣ್ಣ ಗಾರ್ಡನ್ ಬಳಿ ಆತನನ್ನು ಕರೆಯಿಸಿಕೊಂಡಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎಲೆಕ್ಟ್ರಾನಿಕ್ ಸಿಟಿ – ಮಾದವಾರ ಬಿಎಂಟಿಸಿ ಬಸ್ ಸೇವೆ ಆರಂಭ
ಈ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿದ್ದ ಮಂಜುನಾಥ್ ಡೇವಿಡ್‌ಗೆ ಚಾಕುವಿನಿಂದ ಚುಚ್ಚಿದ್ದಾನೆ. ಜತೆಗೆ, ಕಲ್ಲಿನಿಂದ ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.