ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಪ್ರೀತಿ ಹೆಸರಿನಲ್ಲಿ ಯುವತಿಗೆ ಕಿರುಕುಳ ನೀಡಿ ಸ್ನೇಹಿತರ ಜತೆ ಸೇರಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಯುವತಿ ಕೋಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆ್ಯಂಡಿ ಜಾರ್ಜ್, ಸಂತೋಷ್ ಹಾಗೂ ಶಶಿ ಎಂಬುವವರನ್ನು ಬಂಧಿಸಿದ್ದಾರೆ.
ಏನಿದು ಘಟನೆ?
ಕಳೆದ ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತ ಯುವತಿಗೆ ಆರೋಪಿ ಆ್ಯಂಡಿ ಜಾರ್ಜ್ ಪರಿಚಯವಾಗುತ್ತಾನೆ. ಈ ಪರಿಚಯ ಪ್ರೀತಿಗೆ ತಿರುಗುತ್ತದೆ. ಆ್ಯಂಡಿ ಜಾರ್ಜ್ ಖಾಸಗಿ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕನಾಗಿ ಕೆಲಸ ಮಾಡಿಕೊಂಡಿದ್ದರು.
“ಪ್ರೀತಿಲಿ ಬಿದ್ದ ಇಬ್ಬರು ಎರಡು ವರ್ಷ ಜತೆಯಲ್ಲಿ ಓಡಾಡಿಕೊಂಡಿದ್ದರು. ಈ ವೇಳೆ, ಯುವತಿಯ ಜತೆ ಆರೋಪಿ ತೆಗೆಸಿಕೊಂಡಿದ್ದ ವಿಡಿಯೊ ಮತ್ತು ಫೋಟೊಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದನು. ಬಳಿಕ ಯುವತಿ ಆತಂಕಗೊಂಡು ಆತನಿಂದ ದೂರಾಗಿದ್ದಳು. ಇತ್ತಿಚೇಗೆ ಹಳೆಯ ವಿಡಿಯೊ ಮತ್ತು ಫೋಟೊ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ, ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ಆರೋಪಿ ಅತ್ಯಾಚಾರ ಮಾಡಿ ಮೊಬೈಲ್ ವಿಡಿಯೊವನ್ನು ಮಾಡಿಕೊಂಡಿದ್ದನು. ಇದೇ ರೀತಿಯಾಗಿ ಹಲವು ಬಾರಿ ಬೆದರಿಸಿ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ. ಯುವತಿಯ ಫೋಟೋ ಹಾಗೂ ವಿಡಿಯೊಗಳನ್ನು ಆತನ ಸ್ನೇಹಿತರಾದ ಸಂತೋಷ್ ಮತ್ತು ಶಶಿ ಎಂಬುವವರಿಗೆ ಕಳುಹಿಸಿದ್ದಾನೆ. ಈ ಇಬ್ಬರೂ ಕೂಡ ಯುವತಿಯ ಮೇಲೆ ಒತ್ತಡ ಹಾಕಿ ಅನ್ಯ ಸಂದರ್ಭಗಳಲ್ಲಿ ಅತ್ಯಾಚಾರ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶಂಕಿತರಿಂದ ವಶಪಡಿಸಿಕೊಂಡ ಗ್ರೆನೇಡ್‌ಗಳು ಭಾರತದಲ್ಲಿ ತಯಾರಿಸಿಲ್ಲ: ಸಿಸಿಬಿ
ಬಳಿಕ ಆರೋಪಿ ಆ್ಯಂಡಿ ಜಾರ್ಜ್ ತನ್ನ ಇನ್ಟಾಗ್ರಾಮ್ನಲ್ಲಿ ಯುವತಿಯ ಫೋಟೋ ಹಾಗೂ ವಿಡಿಯೋ ಅಪ್‌ಲೋಡ್ ಮಾಡಿ ವೈರಲ್ ಮಾಡಿದ್ದಾನೆ. ಅತ್ಯಾಚಾರ ಮಾಡುವುದರ ಜತೆಗೆ ತಮ್ಮ ಘನತೆಗೆ ಧಕ್ಕೆ ತಂದಿದ್ದಾನೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.
“ಯುವತಿ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಆರೋಪಿಗಳಿಂದ ಮೊಬೈಲ್, ಲ್ಯಾಪ್ಟಾಪ್ ಹಾಗೂ ಪೆಂಡ್ರೈವ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಮುಖ ಆರೋಪಿ ಆ್ಯಂಡಿ ಖಾಸಗಿ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕನಾಗಿದ್ದು, ಶಾಲಾ ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ ತೋರಿದ್ದಾನಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.