ಬೀದಿ ವ್ಯಾಪಾರಿಗಳ ಎತ್ತಂಗಡಿ ಕಾರ್ಯಾಚರಣೆಯು ಸಂಪೂರ್ಣವಾಗಿ ಕಾನೂನುಬಾಹಿರ. ಇದನ್ನು ಕೂಡಲೇ ನಿಲ್ಲಿಸಬೇಕು. ಒಕ್ಕಲೆಬ್ಬಿಸಿದ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಅಥವಾ ತಾತ್ಕಾಲಿಕವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಜಪ್ತಿ ಮಾಡಿರುವ ಸಾಮಗ್ರಿಗಳನ್ನು ತಕ್ಷಣ ಹಿಂತಿರುಗಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಗರದ ಸುಮಾರು ಐದು ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. “ಬೆಂಗಳೂರಿನ ಜನರಿಗೆ ಉತ್ತಮ ಸರಕು ಮತ್ತು ಸೇವೆಗಳನ್ನು ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳ ಸ್ವಾವಲಂಬಿ ಬದುಕಿಗೆ ಆಧಾರವಾಗಿರುವ ಬೀದಿ ವ್ಯಾಪಾರವನ್ನು ಕಡೆಗಣಿಸಲಾಗಿದೆ. ಇತ್ತೀಚೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ‘ಮುಖ್ಯ ರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಜಾಗವಿಲ್ಲ’ ಎಂದು ಮೌಖಿಕ ಆದೇಶ ನೀಡಿದ್ದನ್ನೇ ನೆಪವಾಗಿಸಿಕೊಂಡ ಅಧಿಕಾರಿಗಳು, ಯಾವುದೇ ಮುನ್ಸೂಚನೆ ಇಲ್ಲದೆ ಜೆಸಿಬಿಗಳೊಂದಿಗೆ ಬಂದು ವ್ಯಾಪಾರಿಗಳ ಗಾಡಿ ಹಾಗೂ ಸರಕುಗಳನ್ನು ನಾಶಪಡಿಸಿ, ಜಪ್ತಿ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಸಿದ್ದಾರೆ.
“ಸರ್ವೋಚ್ಚ ನ್ಯಾಯಾಲಯವು ಬೀದಿ ವ್ಯಾಪಾರವನ್ನು ಮೂಲಭೂತ ಹಕ್ಕು ಎಂದು ಘೋಷಿಸಿದೆ. ಅಲ್ಲದೆ, ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿಯೇ 2014ರಲ್ಲಿ ಕಾಯ್ದೆ ತರಲಾಗಿದೆ. ಆದರೂ ಅಧಿಕಾರಿಗಳು ನಿಯಮ ಗಾಳಿಗೆ ತೂರಿ ಒಕ್ಕಲೆಬ್ಬಿಸುತ್ತಿದ್ದಾರೆ. ನಗರದಲ್ಲಿ ಸುಮಾರು ಒಂದೂವರೆ ಲಕ್ಷ ಬೀದಿ ವ್ಯಾಪಾರಿಗಳಿದ್ದು, ಅದರಲ್ಲಿ 80 ಸಾವಿರ ಜನರಿಗೆ ಸ್ವತಃ ಅಧಿಕಾರಿಗಳೇ ‘ಪಿಎಂ-ಸ್ವನಿಧಿ’ ಯೋಜನೆಯಡಿ ಸಾಲ ನೀಡಿದ್ದಾರೆ. ಆದರೆ, ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಕೇವಲ 34,000 ವ್ಯಾಪಾರಿಗಳನ್ನು ಮಾತ್ರ ಗುರುತಿಸಿ, ಲಕ್ಷಾಂತರ ಜನರನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ. ಗುರುತಿನ ಚೀಟಿ ನೀಡುವಲ್ಲಿ ವಿಫಲವಾಗಿರುವ ಅಧಿಕಾರಿಗಳು, ಈಗ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬೀದಿ ಬದಿಯಲ್ಲಿ ಪುಟ್ಟ ಕ್ಯಾಂಟೀನ್ ನಡೆಸುವ ಚಂದ್ರಮ್ಮ ಅವರು ಈದಿನ.ಕಾಮ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. “ಸಿಟಿ ಸಿವಿಲ್ ಕೋರ್ಟ್ ಮುಂದೆ 45 ವರ್ಷಗಳಿಂದ ಪುಟ್ಟ ಕ್ಯಾಂಟೀನ್ ನಡೆಸುತ್ತಿದ್ದೇನೆ. ಕೋರ್ಟ್‌ಗೆ ಬರುವ ಬಡ ಜನರಿಗೆ ಊಟ ಬಡಿಸಿ, ದುಡಿಯುತ್ತಿದ್ದೇನೆ. ಆ ದುಡಿಮೆಯಲ್ಲೇ ಮಕ್ಕಳನ್ನು ಓದಿಸಿದ್ದೇನೆ. ಕುಟುಂಬ ನಡೆಸುತ್ತಿದ್ದೇನೆ. ಬೆಂಗಳೂರಿನಂತ ನಗರದಲ್ಲಿ ಬದುಕು ಕಟ್ಟಿಕೊಳ್ಳಲು ಆ ಕ್ಯಾಂಟೀನ್‌ನೇ ಆಧಾರವಾಗಿದೆ. ಮಗಳ ಮದುವೆಗಾಗಿ ಸಾಲ ಮಾಡಿಕೊಂಡಿದ್ದೇನೆ. ಬದುಕು ಸಾಗಿಸಲು, ಸಾಲ ತೀರಿಸಲು ಕ್ಯಾಂಟೀನ್ ನಮಗೆ ಮೂಲ. ಆದರೆ, ಈಗ ಏಕಾಏಕಿ ನನ್ನ ಕ್ಯಾಂಟಿನ್‌ಅನ್ನು ಧ್ವಂಸಗೊಳಿಸಿದ್ದಾರೆ. ಈ ನಮ್ಮ ಬದುಕು ಬೀದಿ ಪಾಲಾಗಿದೆ. ನಮಗೆ ಯಾರು ದಿಕ್ಕು” ಎಂದು ಕಣ್ಣೀರಾಕಿದ್ದಾರೆ.
ಪ್ರತಿಭಟನೆಯಲ್ಲಿ ಈದಿನ.ಕಾಮ್ ಜೊತೆ ಮಾತನಾಡಿದ, ಕೆಂಗೇರಿಯಲ್ಲಿ ಚಿಲ್ಲರೆ ಅಂಗಡಿ ನಡೆಸುವ ರಾಜಮ್ಮ, “ನಮ್ಮನ್ನು ಪೊಲೀಸ್ ಠಾಣೆಯಲ್ಲಿ ಕೂಡಿಟ್ಟುಕೊಂಡು, ನನ್ನ ಅಂಗಡಿಯನ್ನು ಎತ್ತಂಗಡಿ ಮಾಡಿದ್ದಾರೆ. 20 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದೆ. ಅಂಗಡಿಯಲ್ಲಿ ಸುಮಾರು 25 ಸಾವಿರದಷ್ಟು ಸಾಮಗ್ರಿಗಳಿದ್ದವು. ಅಂಗಡಿಗಾಗಿ 50,000 ರೂ. ಖರ್ಚು ಮಾಡಿದ್ದೇನೆ. ನಮ್ಮ ಅಂಗಡಿ ಫುಟ್‌ಪಾತ್‌ನಲ್ಲಿಯೂ ಇರಲಿಲ್ಲ. ರಸ್ತೆಯಿಂದ ಬಹಳಷ್ಟು ಹಿಂದೆಯೇ ಇತ್ತು. ಆದರೂ, ನಾವು ಸಂಘಟನೆ ಕಟ್ಟಿಕೊಂಡು ಹೋರಾಟ ಮಾಡುತ್ತೇವೆ ಎಂಬ ಕಾರಣಕ್ಕೆ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ. 2 ಗಂಟೆ ಸಮಯ ಕೊಡಿ, ನಮ್ಮ ಅಂಗಡಿಯನ್ನು ತೆಗೆದುಕೊಂಡು ಹೋಗುತ್ತೇನೆ ಎಂದರೂ ಕೇಳದೆ, ಅಂಗಡಿಯನ್ನು ಅಧಿಕಾರಿಗಳು ಹೊತ್ತೊಯ್ದಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ 31 ದಿನಗಳಾಗಿವೆ. ಈ 31 ದಿನಗಳಲ್ಲಿ ನಮ್ಮ ಬದುಕನ್ನು 31 ರೀತಿ ಮಾಡಿದ್ದಾರೆ. ಅನ್ಯಾಯ ಮಾಡಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ನಾವೇನು ಪೊಲೀಸ್ ಠಾಣೆ ಎದುರು ಸಾಯಬೇಕೇ? ನಮಗೆ ನ್ಯಾಯ ಕೊಡಿಸಿ” ಎಂದು ಅಂಗಲಾಚಿಸಿದ್ದಾರೆ.

ಮಹದೇವಪುರದಿಂದ ಪ್ರತಿಭಟನೆಗೆ ಬಂದಿದ್ದ ಜಮೀಲಾ ಬಾನು ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದು, “ನಾವು ಪ್ರತಿಭಟನೆಗೆ ಬಂದ ಬಳಿಕ, ಅಧಿಕಾರಿಗಳು ನಮ್ಮ ಅಂಗಡಿಗಳನ್ನು ಎತ್ತಂಗಡಿ ಮಾಡುತ್ತಿದ್ದಾರೆ. ಇದು ಹೇಡಿ ಕೆಲಸ. ನಾವಿದ್ದಾಗ ಅವರು ಅಂಗಡಿ ತೆರವುಗೊಳಿಸಲು ಬರಬೇಕಿತ್ತು. ನಾವು ಹೋರಾಟ ಮಾಡುತ್ತಿದ್ದೆವು. ಆದರೆ, ನಾವಿಲ್ಲದಾಗ ಅಂಗಡಿ ತೆರವು ಮಾಡುತ್ತಿದ್ದಾರೆ. ನಾವೇನು ಪಾದಚಾರಿಗಳಿಗೆ ತೊಂದರೆ ಕೊಡುತ್ತಿಲ್ಲ. ಪಾದಚಾರಿಗಳಿಗೂ ಜಾಗ ಕೊಡಲಿ, ನಮಗೂ ಜಾಗ ಕೊಡಲಿ. ಬೀದಿ ಬದಿ ವ್ಯಾಪಾರ ನಮ್ಮ ಹಕ್ಕು. ನಮಗೂ ಹೊಟ್ಟೆ ಇದೆ. ನಾವು ಬದುಕಬೇಕು. ಮಕ್ಕಳ ಶಾಲಾ ಶುಲ್ಕ ಕಟ್ಟಿಲ್ಲವೆಂದು ನಮ್ಮ ಮಕ್ಕಳನ್ನು ಶಾಲೆಯಿಂದ ಹೊರಗೆ ನಿಲ್ಲಿಸಿದ್ದಾರೆ. ನಾವೇನು ಮಾಡಬೇಕು. ನಾವು ಬದುಕಲು ಅವಕಾಶ ಕೊಡಿ” ಎಂದಿದ್ದಾರೆ.
“ಕೊರೊನಾ ಸಮಯದಲ್ಲಿ ಇಡೀ ನಗರವೇ ಮನೆಯೊಳಗಿದ್ದಾಗ, ಮನೆ-ಮನೆಗಳಿಗೆ ದಿನಸಿ ಸಾಮಗ್ರಿಗಳನ್ನು ಬೀದಿ ವ್ಯಾಪಾರಿಗಳು ತಲುಪಿಸಿದ್ದಾರೆ. ಅಂದು ಎಲ್ಲರ ಹೊಟ್ಟೆ ತುಂಬಲು ಕಾರಣರಾದವರ ಹೊಟ್ಟೆಮೇಲೆ ಇಂದು ಸರ್ಕಾರದವರು ಹೊಡೆಯುತ್ತಿದ್ದಾರೆ. ಸರ್ಕಾರದ ಧೋರಣೆಯನ್ನು ಹಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರ ಹೊಟ್ಟೆ ಮೇಲೆ ಈ ಸರ್ಕಾರದವರು ಹೊಡೆದಾಗ, ನಮ್ಮ ಕಷ್ಟ ಅವರಿಗೆ ಅರ್ಥವಾಗುತ್ತದೆ. ನಾವು ಹೇಡಿಗಳಲ್ಲ – ಸಾಯುವುದಿಲ್ಲ. ಹೋರಾಟ ಮಾಡುತ್ತೇವೆ. ನಮ್ಮ ಹಕ್ಕುಗಳನ್ನು ಪಡೆಯುತ್ತೇವೆ” ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬೀದಿ ಬದಿ ವ್ಯಾಪಾರಿ ಬಾಬು ಎಂಬವರು, “35 ವರ್ಷಗಳಿಂದ ಇಂದಿರಾ ನಗರದಲ್ಲಿ ಎಳನೀರು ವ್ಯಾಪಾರ ಮಾಡುತ್ತಿದ್ದೇನೆ. ಈಗ ಏಕಾಏಕಿ ನಮ್ಮ ಅಂಗಡಿ ತೆಗೆಸಿದ್ದಾರೆ. ಈಗ ಊಟಕ್ಕೂ ತುಂಬಾ ಕಷ್ಟವಾಗಿದೆ. ಸಾಲ ತೀರಿಸಲಾಗದೆ, ಮನೆ ಬಾಡಿಗೆ ಕಟ್ಟಲಾಗದೆ ತೊಂದರೆಗೆ ಸಿಲುಕಿದ್ದೇವೆ. ಸರ್ಕಾರ ನಮ್ಮ ಮೇಲೆ ಕರುಣೆ ತೋರಬೇಕು” ಎಂದು ಮನವಿ ಮಾಡಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಸಂಘಟನೆಯ ಲತಾ ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದಾರೆ. “ಬೀದಿಗಳಲ್ಲಿ ವ್ಯಾಪಾರ ಮಾಡಬಾರದು ಎಂದು ಸರ್ಕಾರದವರು ಈಗ ಹೇಳುತ್ತಿದ್ದಾರೆ. ಇದೇ ಸರ್ಕಾರಗಳು ನಮ್ಮ ವ್ಯಾಪಾರಿಗಳಿಗೆ ಸಾಲ ಕೊಟ್ಟಿವೆ, ವ್ಯಾಪಾರಕ್ಕೆ ಪರವಾನಗಿ ಕೊಟ್ಟಿವೆ. ಈ ವ್ಯಾಪಾರವನ್ನೇ ನೆಚ್ಚಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಈಗ ಏಕಾಏಕಿ ತೆರವು ಮಾಡಿ ಎಂದರೆ, ಈ ಕುಟುಂಬಗಳು ಎಲ್ಲಿಗೆ ಹೋಗಬೇಕು. ಸರ್ಕಾರವೇ ಈ ಬೀದಿ ವ್ಯಾಪಾರಿಗಳಿಗೆ ಅಂಗಡಿಗಳನ್ನು ಕಟ್ಟಿಸಿ ಕೊಡಲಿ, ಆಗ ಬೀದಿ ಬದಿ ಅಂಗಡಿಗಳನ್ನು ತೆಗೆಯುತ್ತೇವೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಬಡವರ ಪಕ್ಷವೆಂದು ಹೇಳುತ್ತಿದ್ದರು. ಆದರೆ, ಈಗ ಕಾಂಗ್ರೆಸ್ ಭ್ರಷ್ಟರ ಪಕ್ಷವಾಗಿದೆ. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಬುಲ್ಡೋಜರ್‌ಗಳನ್ನು ತಂದು ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ಇದರ ನಷ್ಟವನ್ನು ಯಾರು ಕಟ್ಟಿಕೊಡುತ್ತಾರೆ. ಸರ್ಕಾರ ತನ್ನ ಧೋರಣೆಯನ್ನು ಬದಲಿಸಲಿದ್ದರೆ, ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ, ಉಪವಾಸ ಸತ್ಯಾಗ್ರಹಗಳು ನಡೆಯಲಿವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಪೀಣ್ಯದಲ್ಲಿ ಸುಮಾರು 20 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿರುವ ಪ್ರೇಮ್‌ಕುಮಾರ್, “ಅಧಿಕಾರಿಗಳು ಏಕಾಏಕಿ ಬಂದು ನಮ್ಮ ವ್ಯಾಪಾರ ಸಾಮಗ್ರಿಗಳನ್ನು ರಸ್ತೆಗೆ ಎಸೆದಿದ್ದಾರೆ. ಅನ್ಯಾಯ ಮಾಡಿದ್ದಾರೆ. ನನಗೆ 69 ವರ್ಷ. ನನಗೆ ಯಾರು ಕೆಲಸ ಕೊಡುತ್ತಾರೆ. ಬೀದಿ ವ್ಯಾಪಾರವೇ ನಮಗೆ ಆಧಾರ. ದುಡಿಮೆ ಇಲ್ಲದೆ ನಾವು ಬದುಕುವುದಾದರೂ ಹೇಗೆ? ನಾವು ಇಲ್ಲೇ ಹುಟ್ಟಿದವರು. ಚುನಾವಣೆ ಸಮಯದಲ್ಲಿ ಮತಕ್ಕಾಗಿ ನಮ್ಮ ಕಾಲು ಹಿಡಿಯುತ್ತಾರೆ. ಗೆದ್ದ ಮೇಲೆ ನಮ್ಮ ಮೇಲೆಯೇ ದೌರ್ಜನ್ಯ ಎಸಗುತ್ತಾರೆ. ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳ ಮೇಲಿನ ದೌರ್ಜನ್ಯ ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು:
- ಒಕ್ಕಲೆಬ್ಬಿಸಿದ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಅಥವಾ ತಾತ್ಕಾಲಿಕವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಅಂತಿಮ ನಿರ್ಧಾರವನ್ನು ಪಟ್ಟಣ ವ್ಯಾಪಾರ ಸಮಿತಿಯೇ ತೆಗೆದುಕೊಳ್ಳಬೇಕು ಹಾಗೂ ಜಪ್ತಿ ಮಾಡಿದ ಸಾಮಗ್ರಿಗಳನ್ನು ತಕ್ಷಣ ಹಿಂತಿರುಗಿಸಬೇಕು.
- ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಿ, ಸಮಗ್ರ ಸಮೀಕ್ಷೆಯೊಂದಿಗೆ ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು.
- ಹೊಸ ನಗರಪಾಲಿಕೆಗಳಲ್ಲಿ ನೈಜ ವ್ಯಾಪಾರಿ ಪ್ರತಿನಿಧಿಗಳನ್ನೊಳಗೊಂಡ ‘ಟೌನ್ ವೆಂಡಿಂಗ್ ಸಮಿತಿ’ಗಳನ್ನು ರಚಿಸಬೇಕು.
- ನಗರಾದ್ಯಂತ ಪಾದಚಾರಿ ಮಾರ್ಗಗಳನ್ನು ಅಗಲಗೊಳಿಸಿ, ಪಾದಚಾರಿಗಳಿಗೂ ಹಾಗೂ ವ್ಯಾಪಾರಿಗಳಿಗೂ ಜಾಗ ಕಲ್ಪಿಸಬೇಕು.
- ಅಕ್ರಮ ವಾಹನ ನಿಲುಗಡೆ, ಖಾಸಗಿ ತೋಟಗಳಂತಹ ನಿಜವಾದ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- ನಗರಾಭಿವೃದ್ಧಿ ಸಚಿವರು ತಕ್ಷಣವೇ ಬೀದಿ ವ್ಯಾಪಾರಿ ಸಂಘಗಳ ಪ್ರತಿನಿಧಿಗಳ ಸಭೆ ಕರೆದು, ಕಾನೂನಾತ್ಮಕ ಮತ್ತು ಮಾನವೀಯ ಪರಿಹಾರ ಕಂಡುಕೊಳ್ಳಬೇಕು.



