ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆ ಅವರಿಗೆ ಸರ್ಕಾರ ನಿವೇಶನ, ಮನೆ ಹಾಗೂ ಎರಡು ಎಕರೆ ಜಮೀನು ಮಂಜೂರು ಮಾಡಬೇಕು. ಅಲ್ಲದೆ, ಬಿದ್ರಿ ನಿಗಮ ಸ್ಥಾಪಿಸಿ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್ ಒತ್ತಾಯಿಸಿದರು.
ನಗರದ ಸಮತಾ ಪ್ರೌಢಶಾಲೆಯಲ್ಲಿ ನ.21ರಂದು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಸಮತಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿದ್ರಿ ಕಲಾವಿದೆ ಶಾಂತಾಬಾಯಿ ಕಾಂಬಳೆ ಅವರೊಂದಿಗಿನ ಸಂವಾದ ಮತ್ತು ಜಾನಪದ ಗೀತ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಂತಾಬಾಯಿ ಕಾಂಬಳೆ ಅವರ ಕಲಾಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಐದು ದಶಕಗಳಿಂದ ಬಿದ್ರಿ ಕಲೆಯಲ್ಲಿ ತೊಡಗಿಸಿಕೊಂಡಿರುವ ಶಾಂತಾಬಾಯಿ ಅವರು ತಮ್ಮ ಮಕ್ಕಳಿಗೂ, ಮೊಮ್ಮಕ್ಕಳಿಗೂ ಈ ಕಲೆಯನ್ನು ಕಲಿಸುವ ಮೂಲಕ ಕಲೆಯನ್ನೇ ಬದುಕಿನ ಆಧಾರವಾಗಿಸಿಕೊಂಡಿದ್ದಾರೆ. ಇಂತಹ ಸಾಧಕಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಜಾನಪದ ಗಾಯಕ ಶಂಭುಲಿಂಗ ವಾಲ್ದೊಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸುಮಾರು 50 ವರ್ಷಗಳಿಂದ ಬಿದ್ರಿ ಕಲೆಯಲ್ಲಿ ತೊಡಗಿಸಿಕೊಂಡಿರುವ ಶಾಂತಾಬಾಯಿ ಕಾಂಬಳೆ ಅವರು ಪತಿಯ ನಿಧನದ ನಂತರ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಮಕ್ಕಳನ್ನು ಬೆಳೆಸಿದ್ದಾರೆ. ತಮ್ಮ ಕಲೆಯನ್ನು ಮುಂದಿನ ಪೀಳಿಗೆಗೂ ಹಸ್ತಾಂತರಿಸುವ ಮೂಲಕ ಬಿದ್ರಿ ಕಲೆಯ ಉಳಿವಿಗೆ ಶ್ರಮಿಸುತ್ತಿದ್ದಾರೆ. ಇಂತಹ ಸಾಧಕಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಬೀದರ್ ಜಿಲ್ಲೆಗೆ ಹೆಮ್ಮೆಯ ಸಂಗತಿ. ಇವರ ಕಲಾಸೇವೆ ರಾಜ್ಯವ್ಯಾಪಿ ಪರಿಚಯವಾಗುವ ನಿಟ್ಟಿನಲ್ಲಿ ದೂರದರ್ಶನದಲ್ಲಿ ಇವರೊಂದಿಗಿನ ಸಂವಾದ ಪ್ರಸಾರವಾಗಲಿದೆ” ಎಂದು ಆಶಿಸಿದರು.

ಬಸವೇಶ್ವರ ಬಿ.ಇಡಿ.ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ಕೋಟೆರ್ ಮಾತನಾಡಿ, “ಬಡತನದ ನಡುವೆಯೂ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ಸರ್ಕಾರವೂ ಸಾಧನೆಯನ್ನು ಗುರುತಿಸಿ ಗೌರವಿಸುತ್ತದೆ ಎಂಬುದಕ್ಕೆ ಶಾಂತಾಬಾಯಿ ಕಾಂಬಳೆ ಅವರೇ ಸಾಕ್ಷಿ” ಎಂದು ಹೇಳಿದರು.
ಟೀಂ ಯುವಾ ಸಂಚಾಲಕ ವಿನಯಕುಮಾರ ಮಾಳಗೆ ಅವರು ಶಾಂತಾಬಾಯಿ ಕಾಂಬಳೆ ಅವರೊಂದಿಗೆ ಸಂವಾದ ನಡೆಸಿದರು. ಯುವ ಗಾಯಕಿ ಸಂಗೀತಾ ಕಾಂಬಳೆ ಜಾನಪದ ಗೀತೆಗಳನ್ನು ಹಾಡಿದರು.

ಸಮತಾ ಪ್ರೌಢಶಾಲೆಯ ಮುಖ್ಯಗುರು ಬಳಿರಾವ ಕುರನಳೆ ಅಧ್ಯಕ್ಷತೆ ವಹಿಸಿದ್ದರು. ದಲಿತ ಯುನಿಟಿ ಮೂವ್ಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ ರಾವಣ ಸೇರಿದಂತೆ ಪ್ರಮುಖರಾದ ಸಂಗೀತಾ ವಿಜಯಕುಮಾರ, ಚಂದ್ರಕಾಂತ ಹೊಸದೊಡ್ಡೆ, ಹಿರಾಮಣಿ ಚೌವ್ಹಾಣ, ಆಶಾ ಬಿರಾದರ, ಪ್ರಕಾಶ ಬೊರೆ, ಪವನ ಕಾಂಬಳೆ, ಅನಿರುದ್ಧ ಅಭಿಧಮ್ಮ, ಬಿ.ಇಡಿ. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗಮೇಶ ಗಂದಗೆ ನಿರೂಪಿಸಿದರು. ಸೌಮ್ಯ ಗುರುಮಿಟಕಲ್ ಸ್ವಾಗತಿಸಿದರು. ನಾಗಪ್ಪ ಕೆಲೊಸಕರ್ ವಂದಿಸಿದರು.
ಇದನ್ನೂ ಓದಿ : ಬೀದರ್ | ಟನ್ ಕಬ್ಬಿಗೆ ₹4,000 ಬೆಲೆ ಘೋಷಣೆಗೆ ಪಟ್ಟು: ರೈತರ ಧರಣಿ 11ನೇ ದಿನಕ್ಕೆ



