- ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ವಾಹನಗಳಿಗೆ ಎಚ್ಚರಿಕೆ ನೀಡಲು ಪಾರ್ಕಿಂಗ್ ಲೈಟ್ ಆನ್ ಮಾಡಿದ್ದ ಎಸ್‌ಯುವಿ ಚಾಲಕ
ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ಚಿಕ್ಕಜಾಲ ಬಳಿ ಕಾರು ಡಿಕ್ಕಿಯಾಗಿ ರಾತ್ರಿವೇಳೆ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಸೇರಿದಂತೆ ಇಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ದೇವನಹಳ್ಳಿ ಠಾಣೆಯ 40 ವರ್ಷದ ಪೊಲೀಸ್ ಪೇದೆ ಎನ್ ಸುರೇಶ್ ಮೃತಪಟ್ಟ ವ್ಯಕ್ತಿ. ಇವರು ಮೂಲತಃ ದೇವನಹಳ್ಳಿಯವರು. ರಾತ್ರಿ ವೇಳೆ, ದೇವನಹಳ್ಳಿ ಇನ್ಸ್ಪೆಕ್ಟರ್ ಜತೆಗೆ ಸುರೇಶ್ ಕರ್ತವ್ಯದಲ್ಲಿದ್ದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ 1.50ರ ವೇಳೆಗೆ ಪೊಲೀಸ್ ಪೇದೆ ಹಾಗೂ ಇನ್ನೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತ ಮತ್ತೋರ್ವ ವ್ಯಕ್ತಿಯನ್ನು 28 ವರ್ಷದ ಶರತ್ ಎಂದು ಗುರುತಿಸಲಾಗಿದೆ. ಎಸ್‌ಯುವಿ ಚಾಲಕ ಭೈರೇಗೌಡ ಅವರ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಕಾನ್‌ಸ್ಟೆಬಲ್, ದೇವನಹಳ್ಳಿ ಇನ್ಸ್ಪೆಕ್ಟರ್ ಜತೆಗೆ ಭಾನುವಾರ ದೇವನಹಳ್ಳಿ ಉಪವಿಭಾಗದಲ್ಲಿ ರಾತ್ರಿ ರೌಂಡ್ಸ್‌ನಲ್ಲಿದ್ದರು. ಈ ವೇಳೆ, ಇನ್ಸ್‌ಪೆಕ್ಟರ್ ಸೂಚನೆಯಂತೆ ರಸ್ತೆ ಮಧ್ಯೆ ನಿಲ್ಲಿಸಿದ್ದ ಎಸ್‌ಯುವಿ ಕಾರನ್ನು ಪರಿಶೀಲಿಸುತ್ತಿದ್ದರು.
ಹಿಂದಿನಿಂದ ಬರುವ ಇತರ ವಾಹನಗಳಿಗೆ ಎಚ್ಚರಿಕೆ ನೀಡಲು ಎಸ್‌ಯುವಿ ಚಾಲಕ ಪಾರ್ಕಿಂಗ್ ಲೈಟ್ ಆನ್ ಮಾಡಿದ್ದನು. ಇನ್ಸ್ ಪೆಕ್ಟರ್ ಫೋನ್ ಬಂದ ಮೇಲೆ ಪಕ್ಕಕ್ಕೆ ತೆರಳಿದ್ದರು. ಈ ವೇಳೆ, ನಗರದಿಂದ ಬಂದ ಮತ್ತೊಂದು ಕಾರು ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪೊಲೀಸ್ ಪೇದೆ ಮತ್ತು ವಾಹನದಲ್ಲಿದ್ದ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದಾರೆ.
ಮದ್ಯದ ಅಮಲಿನಲ್ಲಿ ಕಾರಿನಲ್ಲಿದ್ದ ಆರು ಜನರು ಜಾಲಿ ಡ್ರೈವ್‌ನಲ್ಲಿದ್ದರು. ಹೆದ್ದಾರಿಯಲ್ಲಿ ಚಹಾ ಕುಡಿಯಲು ಹೋಗುತ್ತಿದ್ದರು ಎನ್ನಲಾಗಿದೆ.
“ಮೀನಕುಂಟೆ ಹೊಸೂರು ಬಳಿಯ ದೊಡ್ಡಜಾಲ ಮೇಲ್ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆಯ ಮಧ್ಯದಲ್ಲಿ ಎಸ್‌ಯುವಿ ಕಾರ್ ನಿಲ್ಲಿಸಿರುವುದನ್ನು ನೋಡಿ, ಪರಿಶೀಲನೆ ಮಾಡಲು ಹೋದೆವು. ಈ ವೇಳೆ, ನನಗೆ ಕರೆ ಬಂದ ಕಾರಣ ಮಾತನಾಡಲು ಪಕ್ಕಕ್ಕೆ ಬಂದೆ, ಸುರೇಶ್ ಎಸ್‌ಯುವಿ ಚಾಲಕನೊಂದಿಗೆ ಮಾತನಾಡುತ್ತಿದ್ದರು. ಹೆಬ್ಬಾಳ ಕಡೆಯಿಂದ ವಿಮಾನ ನಿಲ್ದಾಣದ ಕಡೆಗೆ ಬರುತ್ತಿದ್ದ ಕಾರು ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ” ಎಂದು ಅಪಘಾತದ ಪ್ರತ್ಯಕ್ಷದರ್ಶಿ ದೇವನಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಧರ್ಮೇಗೌಡ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 4 ತಿಂಗಳ ಬಳಿಕ ಶುದ್ಧ ಕುಡಿಯುವ ನೀರಿನ ನಿರೀಕ್ಷೆಯಲ್ಲಿ ಮೈಕಲ್ ಪಾಳ್ಯದ ನಿವಾಸಿಗಳು
“ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದು, ನಿಲ್ಲಿಸಿದ್ದ ಎಸ್‌ಯುವಿಯನ್ನು ಗಮನಿಸಿರಲಿಲ್ಲ. ಸುರೇಶ್ ಮತ್ತು ಕಾರಿನಲ್ಲಿದ್ದ ಶರತ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಾನಮತ್ತರಾಗಿ ಚಾಲನೆ ಮಾಡುತ್ತಿದ್ದ ಶಂಕಿತ ಕಾರಿನಲ್ಲಿದ್ದ ಮೂವರು ಮಹಿಳೆಯರು ಸೇರಿದಂತೆ ಐವರು ಬದುಕುಳಿದವರಿಗೆ ಗಾಯಗಳಾಗಿದ್ದು, ಎಲ್ಲರೂ ಮದ್ಯದ ಅಮಲಿನಲ್ಲಿದ್ದರು ಎಂದು ಶಂಕಿಸಲಾಗಿದೆ” ಎಂದರು.
ಗಾಯಗೊಂಡವರನ್ನು ಕಾರು ಚಾಲಕ ಚಂದ್ರಪ್ರಕಾಶ್(30), ಇಮ್ಯಾನುಯೆಲ್(29), ಪ್ರಿಯದರ್ಶಿನಿ(26), ಕೇಜಿಯಾ(24) ಮತ್ತು ಶೆರಿನ್(25) ಎಂದು ಗುರುತಿಸಲಾಗಿದೆ
ಸದ್ಯ ಈ ಘಟನೆ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.