ಬೆಂಗಳೂರಿನ ರಾಜಾನುಕುಂಟೆಯಲ್ಲಿ ಹಣಕ್ಕಾಗಿ ತಂದೆಯೇ ಮಗಳನ್ನು ಚಾಕುವಿನಿಂದ ಇರಿದ ಘಟನೆ ನಡೆದಿದೆ. ಖಾಸಗಿ ಎಂಜಿನಿಯರ್ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ಮಗಳ ಬಳಿ 40 ಲಕ್ಷ ಹಣ ಕೊಡುವಂತೆ ದುಂಬಾಲು ಬಿದ್ದಿದ್ದ ತಂದೆ, ಆಕೆಯ ಚೇಂಬರ್‌ಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ.
ಪ್ರಕರಣದ ಆರೋಪಿ 52 ವರ್ಷದ ನಾಗೇಂದ್ರ, ಜುಲೈ 25ರಂದು ಮಗಳು ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಲೇಜಿಗೆ ಭೇಟಿ ನೀಡಿದ್ದಾನೆ. ಮೀಟಿಂಗ್ ಮುಗಿಸಿ ಮಗಳು ಹೊರಬರುವುದನ್ನೇ ಕಾದಿದ್ದ ಪಾಪಿ ತಂದೆ, ಆಕೆ ಚೇಂಬರ್‌ಗೆ ಬಂದ ಕೂಡಲೇ ಕೈಯಲ್ಲಿದ್ದ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಕಿಬ್ಬೊಟ್ಟೆ, ಎದೆ ಹಾಗೂ ಕುತ್ತಿಗೆಗೆ ಹಲವು ಬಾರಿ ಇರಿದದ್ದರಿಂದ ಯುವತಿ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದಾಳೆ.
ಘಟನೆ ನಡೆಯುತ್ತಿದ್ದಂತೆ ಸಂತ್ರಸ್ತೆಯ ಬಳಿ ಧಾವಿಸಿದ ಕಾಲೇಜು ಸಿಬ್ಬಂದಿ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ದುರದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
“ನಿನ್ನ ವಿದ್ಯಾಭ್ಯಾಸಕ್ಕೆ ನಾನು ಸಾಕಷ್ಟು ಹಣ ವ್ಯಯಿಸಿದ್ದು, ನೀನು ಮದುವೆಯಾದ ನಂತರವೂ ನನಗೆ ಹಣ ನೀಡುತ್ತಿರಬೇಕು” ಎಂದು ಸದಾ ಜಗಳ ಕಾಯುತ್ತಿದ್ದ ತಂದೆಯಿಂದ ಬೇಸತ್ತ ಪ್ರಾಧ್ಯಾಪಕಿ, ತಾಯಿಯೊಂದಿಗೆ ಬೇರೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಆರೋಪಿ ನಾಗೇಂದ್ರ ಪೊಲೀಸ್ ಕಸ್ಟಡಿಯಲ್ಲಿದ್ದು, ರಾಜಾನುಕುಂಟೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.




