ಬಿಹಾರದ ಬಾಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ತೀವ್ರ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿದೆ. ಜನ ಸುರಾಜ್ ಪಾರ್ಟಿಯ (ಜೆಎಸ್‌ಪಿ) ಸಂಸ್ಥಾಪಕ ಹಾಗೂ ಈ ಚುನಾವಣೆಯ ಬಾಂಕಿಪುರ ಅಭ್ಯರ್ಥಿಯೂ ಆಗಿರುವ ಪ್ರಶಾಂತ್ ಕಿಶೋರ್, ಆಡಳಿತಾರೂಢ ಬಿಜೆಪಿ ಸೂಚನೆಯಂತೆ ಬಿಹಾರ ಪೊಲೀಸರು ತಮ್ಮ 16ಕ್ಕೂ ಹೆಚ್ಚು ಬೆಂಬಲಿಗರನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಬುಧವಾರ ತಡರಾತ್ರಿ ಪಟನಾದ ಜಕ್ಕನ್‌ಪುರ ಪೊಲೀಸ್ ಠಾಣೆಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಪ್ರಶಾಂತ್ ಕಿಶೋರ್, ಠಾಣಾಧಿಕಾರಿ (SHO) ಋತುರಾಜ್ ಕುಮಾರ್ ಸಿಂಗ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. “ನಮ್ಮ ಪಕ್ಷದ ಕಾರ್ಯಕರ್ತರನ್ನು ಅಕ್ರಮವಾಗಿ ವಶಕ್ಕೆ ಪಡೆದು, ಬೇರೆ ಬೇರೆ ಠಾಣೆಗಳಿಗೆ ಸ್ಥಳಾಂತರಿಸಲಾಗಿದೆ. ಅವರ ಬಗ್ಗೆ ಪೊಲೀಸರ ಬಳಿ ಯಾವುದೇ ದಾಖಲೆ ಅಥವಾ ಮಾಹಿತಿ ಇಲ್ಲ. ಒಂದು ವೇಳೆ ನಮ್ಮ ಕಾರ್ಯಕರ್ತರಿಗೆ ಏನಾದರೂ ಅನಾಹುತವಾದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ” ಎಂದು ಕಿಶೋರ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯದಲ್ಲಿ ಅನ್ಯಾಯ; ಮುಸ್ಲಿಂ ಸಮಾವೇಶದ ವರದಿ ಹೇಳಿದ್ದೇನು?
ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ತಮ್ಮ ಬೆಂಬಲಿಗರನ್ನು ಬಂಧನದಲ್ಲಿಟ್ಟುಕೊಳ್ಳಲು ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಈ ತಂತ್ರ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರಚಾರದ ವಿಡಿಯೋ ‘ಎಐ-ನಿರ್ಮಿತ ನಕಲಿ ವಿಡಿಯೋ’ (Deepfake) ಎಂದು ಕಿಶೋರ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಜೆಡಿಯು (JD-U) ನಾಯಕರು ಪ್ರಶಾಂತ್ ಕಿಶೋರ್ ವಿರುದ್ಧ ಪ್ರತ್ಯೇಕ ಪೊಲೀಸ್ ದೂರು ದಾಖಲಿಸಿದ್ದಾರೆ.
ಬಾಂಕಿಪುರ ವಿಧಾನಸಭಾ ಕ್ಷೇತ್ರದ ವಿವರ
ಬಿಹಾರದ ಪಟನಾ ಜಿಲ್ಲೆಯ ಬಾಂಕಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿದ್ದ ನಿತಿನ್ ನವೀನ್ ರಾಜೀನಾಮೆ ನೀಡಿ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಜನ ಸುರಾಜ್ ಪಾರ್ಟಿಯಿಂದ ಪ್ರಶಾಂತ್ ಕಿಶೋರ್, ಬಿಜೆಪಿಯಿಂದ ನೀರಜ್ ಕುಮಾರ್ ಸಿನ್ಹಾ ಕಣದಲ್ಲಿದ್ದಾರೆ. ಸುಮಾರು 3.80 ಲಕ್ಷ ಮತದಾರರು ಇರುವ ಈ ಕ್ಷೇತ್ರದಲ್ಲಿ ಒಟ್ಟಾಗಿ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1995ರಿಂದಲೂ ಬಿಜೆಪಿ ಹಿಡಿತದಲ್ಲಿರುವ ಈ ಕ್ಷೇತ್ರ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಪ್ರತ್ಯಕ್ಷ ಸ್ಪರ್ಧೆಯಿಂದಾಗಿ ದೇಶದ ಗಮನ ಸೆಳೆದಿದೆ. ಸದ್ಯ ಚುನಾವಣೆ ನಡೆಯುತ್ತಿದ್ದು ಬೆಳಿಗ್ಗೆ 11 ಗಂಟೆವರೆಗೆ ಬರೀ 11.50% ಮತದಾನವಾಗಿದೆ.




