ಕೃಷಿರಂಗ | ರೈತರ ಉಪ ಕಸುಬಾಗಬೇಕಿರುವ ಜೇನು ಕೃಷಿ

Date:

‘ಎರೆಹುಳು ರೈತನ ಮಿತ್ರ’ ಎಂಬ ಅಂಶವನ್ನು ಪ್ರಾಥಮಿಕ ಅಥವಾ ಮಾಧ್ಯಮಿಕ ವಿದ್ಯಾಭ್ಯಾಸದಲ್ಲಿ ನಾವು ಓದಿದ್ದೇವೆ. ಹಾಗೆಯೇ, ಜೇನು ನೋಣವೂ ಕೂಡ ರೈತನ ಮಿತ್ರ. ಬಹುತೇಕ ಬೆಳೆಗಳು ಪರಕೀಯ ಪರಾಗಸ್ಪರ್ಶದ ಬೆಳೆಗಳು. ಅಂತಹ ಪರಕೀಯ ಪರಾಗ ಸ್ಪರ್ಶಕ್ಕೆ ಅನುವು ಮಾಡಿಕೊಡುವುದು ಹೂವನ್ನು ಮುತ್ತಿಕ್ಕಿ ಮಕರಂದ ಹೀರುವ ಜೇನು ನೊಣಗಳು ಮತ್ತಿತರ ಕೆಲವು ಉಪಯೋಗಿ ದುಂಬಿಗಳು. 

ಇದೇ ಮೇ 20, 2026ರಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಜೇನು ದಿನದ ಅಂಗವಾಗಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಚಾಮರಾಜನಗರ, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿತ್ರದುರ್ಗ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತಿತರ ಜಿಲ್ಲೆಗಳ ಜೇನು ಸಾಕಾಣಿಕೆಯ ರೈತರು ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಸಕ್ತ ರೈತರು ವಸ್ತು ಪ್ರದರ್ಶನಕ್ಕೆ ಆಗಮಿಸಬಹುದಾಗಿದೆ. ಜೇನು ಕೃಷಿಯಿಂದ ರೈತರಿಗೆ ಡಬಲ್ ಧಮಾಕ. ಒಂದು ಕಡೆ ಜೇನು ತುಪ್ಪದ ಉತ್ಪಾದನೆ. ಮತ್ತೊಂದು ಕಡೆ ತಮ್ಮ ಬೆಳೆಗಳಿಗೆ ಜೇನು ನೊಣಗಳಿಂದ ಪರಕೀಯ ಪರಾಗಸ್ಪರ್ಶವಾಗುವುದರಿಂದ ಅಧಿಕ ಇಳುವರಿ. ಅಧಿಕ ಲಾಭ.

- Advertisement -

ಜೇನು ನೊಣಗಳ ನೃತ್ಯ ಭಾಷೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

 ಜೇನು ನೊಣಗಳು ತಮ್ಮ ಆಹಾರವಾದ ಮಕರಂದವನ್ನು ಕೂಡಿಹಾಕಿ ಜೇನು ತುಪ್ಪವನ್ನು ಉತ್ಪಾದಿಸುತ್ತವೆ. ಹೂಗಳಲ್ಲಿ ಸಿಗುವ ಮಕರಂದವೇ ಅವುಗಳ ಆಹಾರ. ಆಹಾರ ಹುಡುಕಾಟಕ್ಕೆ ಹೊರಟ ಜೇನು ನೋಣವು, ಜೇನು ಗೂಡಿನ ಸಂಸಾರಕ್ಕೆ ಆಹಾರ ಲಭ್ಯತೆಯನ್ನು ಸೂಚಿಸಲು ಜೇನು ಗೂಡಿನ ಬಳಿ ಎರಡು ರೀತಿಯ ನೃತ್ಯಭಾಷೆಯನ್ನು ಪ್ರದರ್ಶಿಸುತ್ತದೆ. ಮೊದಲನೆಯದು, ಚಕ್ರಾಕಾರದ ನೃತ್ಯ (Round Dance). ಈ ನೃತ್ಯದಂತೆ 100 ಮೀಟರ್ ದೂರದಲ್ಲಿ ಯಾವುದೇ ದಿಕ್ಕಿನಲ್ಲಿ ಆಹಾರ ಲಭ್ಯತೆಯಿರುತ್ತದೆ. ಎರಡನೆಯದು: ತೂಗಾಡುವ ನೃತ್ಯ (Waggle Dance). ಅದರಂತೆ, ನಿರ್ದಿಷ್ಟ ದಿಕ್ಕಿನಲ್ಲಿ 100 ಮೀಟರುಗಳಾಚೆ ಆಹಾರ ಸಿಗುತ್ತಿದೆ ಎಂದರ್ಥ. ಜೇನು ನೊಣಗಳ ಇಂತಹ ನೃತ್ಯ ಭಾಷೆಯನ್ನು ನಿರೂಪಿಸಿದ ಆಸ್ಟ್ರೀಯಾ ದೇಶದ ಕಾರ್ಲ್ ವಾನ್ ಫ್ರಿಶ್ಕ್ (Karl von Frisch) ಅವರಿಗೆ 1973ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು. ವೈದ್ಯಕೀಯ ವಿಜ್ಞಾನ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಉಳಿದ ಇಬ್ಬರು ಪ್ರಾಣಿ ವರ್ತನೆಯ ಅಧ್ಯಯನ ವಿಜ್ಞಾನಿ (Ethologists)ಗಳಾದ ನಿಕೊಲಾಸ್ ಟಿನ್‌ಬೆರ್ಗನ್ ಮತ್ತು ಕೊನ್ರಾಡ್ ಲೊರೆಂಜ್ ಅವರೊಂದಿಗೆ ಫ್ರಿಶ್ಕ್ ಅವರು ಹಂಚಿಕೊಂಡರು.

ಐದು ಪ್ರಬೇಧಗಳ ಜೇನುನೊಣಗಳು

 ಜೇನು ನೊಣಗಳಲ್ಲಿ ಒಟ್ಟು ಐದು ಪ್ರಬೇಧಗಳಿವೆ. ಅವೆಂದರೆ: 1. ಹೆಜ್ಜೇನು, 2. ಕಡ್ಡಿಜೇನು, 3. ತುಡುವೆ ಜೇನು, 4. ಮಿಲ್ಲಿಫೆರಾ (ಯೂರೋಪಿಯನ್ ಜೇನು) ಹಾಗೂ 5. ನಸುರು ಜೇನು. ಮೊದಲ ಎರಡು ಪ್ರಬೇಧಗಳನ್ನು ಸಾಕಲಾಗುವುದಿಲ್ಲ. ಕೊನೆಯ ಮೂರು ಪ್ರಬೇಧಗಳನ್ನು ಸಾಕಲಾಗುತ್ತಿದೆ.

ಜೇನು ನೊಣಗಳಲ್ಲಿ ಸಂತಾನೋತ್ಪತ್ತಿ

 ಜೇನು ನೊಣಗಳಲ್ಲಿ ಮೂರು ವಿಧಗಳಿವೆ. ಒಂದು ಗೂಡಿನಲ್ಲಿ 50ರಿಂದ 100 ಗಂಡು ಜೇನು ನೊಣಗಳಿರುತ್ತವೆ. ಅವುಗಳ ಆಯಸ್ಸು ಎರಡು ತಿಂಗಳು. ಒಂದು ರಾಣಿ ಹುಳು ಮಾತ್ರ ಇರುತ್ತದೆ. ಅದರ ಆಯಸ್ಸು 4ರಿಂದ 5 ವರ್ಷಗಳು! ಒಂದು ಗೂಡಿನಲ್ಲಿ ಸುಮಾರು 5,000ದಿಂದ 50,000ದವರೆಗೆ ಕೆಲಸಗಾರ ಹೆಣ್ಣು ಹುಳುಗಳು ಇರುತ್ತವೆ. ಅವುಗಳ ಆಯಸ್ಸು 2ರಿಂದ 3 ತಿಂಗಳು.

Jenu 02

ರಾಣಿ ಹುಳುವು ಗಂಡು ಜೇನು ಹುಳುಗಳೊಂದಿಗೆ ಮಿಲನವಾಗುವುದು ತಾನು ಹಾರಾಡುವಾಗ. ಅಂತಹ ಮಿಲನವನ್ನು ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಅದು ಹೊಂದುತ್ತದೆ. ಅದೂ ಕೂಡ ಒಮ್ಮೆಲೆ 10ರಿಂದ 15 ಗಂಡುಹುಳುಗಳ ಜೊತೆಗೆ. ಗಂಡುಹುಳುಗಳನ್ನು ಡ್ರೋನ್‌ಗಳು ಎಂದು ಕರೆಯಲಾಗುತ್ತದೆ. ಬೇರೆ ಬೇರೆ ಜೇನು ಗೂಡಿನ ಡ್ರೋನ್‌ಗಳ ಜೊತೆ ರಾಣಿ ನೊಣವು ಒಂದಾದ ಮೇಲೆ ಒಂದರಂತೆ ಮಿಲನ ಕ್ರಿಯೆಯನ್ನು ನಡೆಸಿಕೊಳ್ಳುತ್ತದೆ. ಪ್ರತಿ ಗಂಡಿನಿಂದ ಮಿಲಿಯನ್‌ಗಟ್ಟಲೆ ವೀರ್ಯಾಣುಗಳು ರಾಣಿ ಹುಳುವಿನ ಸ್ಪರ್ಮಾತಿಕಾ (Spermatheca) ಎಂಬ ಚೀಲದಲ್ಲಿ ಶೇಖರಣೆಯಾಗುತ್ತವೆ. ವಿವಿಧ ಡ್ರೋನ್‌ಗಳಿಂದ ಒಟ್ಟು 10 ಮಿಲಿಯನ್ ವಿರ್ಯಾಣುಗಳು ಅಲ್ಲಿ ಸಂಗ್ರಹವಾಗುತ್ತವೆ. ಮಿಲನದ ನಂತರ ಡ್ರೋನ್‌ಗಳು ಸತ್ತು ಬೀಳುತ್ತವೆ. ಗೂಡಿನಲ್ಲಿ ರಾಣಿ ಹುಳು ಒಂದು ದಿನಕ್ಕೆ 150ರಿಂದ 1500 ಮೊಟ್ಟೆ ಇಡುತ್ತದೆ. ಅವು 15ರಿಂದ 20 ದಿನಗಳಲ್ಲಿ ಮರಿಯಾಗುತ್ತವೆ. ಮೊಟ್ಟೆ ಇಡುವಿಕೆಯು ನಿರಂತರವಾಗಿ ಸಾಗುತ್ತಿರುತ್ತದೆ. ಮೊಟ್ಟೆಗಳಲ್ಲಿ ಎರಡು ವಿಧವಿದ್ದು, ಹ್ಯಾಪ್ಲಾಯ್ಡ್ (ಫಲಿತವಾಗದ) ಮೊಟ್ಟೆಗಳು ಗಂಡು ಹುಳುಗಳಾದರೆ, ಡಿಪ್ಲಾಯ್ಡ್ (ಫಲಿತಗೊಂಡ) ಮೊಟ್ಟೆಗಳು ಹೆಣ್ಣು ಹುಳುಗಳಾಗುತ್ತವೆ. ಹೆಣ್ಣು ಹುಳುಗಳು ತಿನ್ನುವ ಆಹಾರವನ್ನು ಅವಲಂಬಿಸಿ ಕೆಲವೇ ಸಂಖ್ಯೆಯಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯದ ಹೆಣ್ಣು ಹುಳುಗಳಾಗುತ್ತವೆ. ಅವು ರಾಣಿ ಹುಳುಗಳಾಗುತ್ತವೆ. ಉಳಿದವು ಬಂಜೆ ಹೆಣ್ಣು ಹುಳುಗಳಾಗಿ ಕೆಲಸಗಾರ ಹುಳುಗಳಾಗುತ್ತವೆ. ಗಂಡು ಹುಳುಗಳು ಡ್ರೋನ್‌ಗಳಾಗಿ ಸಂತಾನೋತ್ಪತ್ತಿಗಾಗಿ ರಾಣಿ ಜೇನ್ನೊಣದೊಂದಿಗೆ ಮಿಲನ ಕ್ರಿಯೆ ನಡೆಸುತ್ತದೆ.

ಜೇನುತುಪ್ಪದ ಸಂಯೋಜನೆ

ಜೇನು ನೊಣಗಳು ಹೂಗಳ ಮೇಲೆ ಕುಳಿತು ಹೀರಿಕೊಳ್ಳುವ ಮಕರಂದವು ರಾಸಾಯನಿಕವಾಗಿ ಸುಕ್ರೋಸ್ ಎಂಬ ಶರ್ಕರ ಪಿಷ್ಟವಾಗಿರುತ್ತದೆ. ಅದು ಜೇನು ಹುಳುವಿನ ಜೀರ್ಣಾಂಗ ವ್ಯೂಹದಲ್ಲಿ ಇನ್‌ವರ್ಟೇಸ್ (ಸುಕ್ರೇಸ್) ಕಿಣ್ವದ ಹೊಡೆತಕ್ಕೆ ಸಿಕ್ಕಿ ಫ್ರಕ್ಟೋಸ್ ಮತ್ತು ಗ್ಲುಕೋಸ್ ಆಗಿ ಇಬ್ಬಾಗವಾಗುತ್ತದೆ. ಜೇನುತುಪ್ಪದಲ್ಲಿ ಫ್ರಕ್ಟೋಸ್ ಶೇ. 34ರಿಂದ 36ರಷ್ಟು ಪ್ರಮಾಣದಲ್ಲಿದ್ದರೆ, ಗ್ಲುಕೋಸ್ ಶೇ. 32ರಿಂದ 34ರಷ್ಟು ಪ್ರಮಾಣದಲ್ಲಿರುತ್ತದೆ. ಜೇನು ನೊಣದ ಜೀರ್ಣಾಂಗ ವ್ಯೂಹದಲ್ಲಿ ಜೀರ್ಣವಾಗದೆ ಉಳಿದ ಸುಕ್ರೋಸ್‌ನ ಪ್ರಮಾಣ ಶೇ.5. ಮಾಲ್ಟೋಸ್ ಎಂಬ ಶರ್ಕರ ಪಿಷ್ಟದ ಪ್ರಮಾಣ ಅತ್ಯಲ್ಪ. ಜೇನುತುಪ್ಪದಲ್ಲಿರುವ ಒಟ್ಟು ಶರ್ಕರ ಪಿಷ್ಟದ ಪ್ರಮಾಣ ಶೇ. 70ರಿಂದ 75ರಷ್ಟು. ನೀರಿನಾಂಶ ಶೇ. 20ರಿಂದ 30ರಷ್ಟಿರುತ್ತದೆ. ಜೀವಸತ್ವ ಮತ್ತು ಲವಣಗಳಿರುತ್ತವೆ. ಜೇನುತುಪ್ಪವನ್ನು ಹಲವಾರು ವರ್ಷಗಳವರೆಗೆ ಶೇಖರಿಸಿಡಬಹುದು. ಆದರೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದವರ ಶಿಫಾರಸ್ಸಿನಂತೆ 18 ತಿಂಗಳವರೆಗೆ ಶೇಖರಣೆ ಮಾಡಬಹುದು.

ಜೇನು ಕಟ್ಟುವ ಅವಧಿ

ಜೇನು ನೊಣಗಳಿಗೆ ಹೂಗಳಿಂದ ಸಾಕಷ್ಟು ಪ್ರಮಾಣದಲ್ಲಿ ಆಹಾರ ಸಿಕ್ಕರೆ ಗೂಡು ಕಟ್ಟಿದ 15 ದಿನಗಳಲ್ಲೇ ಜೇನು ಗೂಡಿನಲ್ಲಿ ತುಪ್ಪವು ಶೇಖರಣೆಯಾಗುತ್ತದೆ. ಆಹಾರ ಪ್ರಮಾಣದ ಲಭ್ಯತೆ ಕಡಿಮೆಯಿರುವ ದಿನಮಾನಗಳಲ್ಲಿ ಜೇನು ತುಪ್ಪದ ಶೇಖರಣೆಗೆ ಎರಡರಿಂದ ಮೂರು ತಿಂಗಳ ಅವಧಿ ಬೇಕಾಗುತ್ತದೆ. ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಬಹುತೇಕ ಮರಗಿಡ, ಸಸ್ಯಗಳು ಹೂಬಿಡುವ ಹಂತವಾಗಿರುವುದರಿಂದ, ಜೇನು ನೊಣಗಳಿಗೆ ಮಕರಂದವೆಂಬ ಆಹಾರವು ಹೇರಳವಾಗಿ ಸಿಗುವುದರಿಂದ ಅತಿ ಕಡಿಮೆ ಅವಧಿಯಲ್ಲಿ ಜೇನು ಕಟ್ಟುತ್ತವೆ.

Jenu 01

ರೈತನ ಮಿತ್ರ ಜೇನು ನೊಣ

 ‘ಎರೆಹುಳು ರೈತನ ಮಿತ್ರ’ ಎಂಬ ಅಂಶವನ್ನು ಪ್ರಾಥಮಿಕ ಅಥವಾ ಮಾಧ್ಯಮಿಕ ವಿದ್ಯಾಭ್ಯಾಸದಲ್ಲಿ ನಾವು ಓದಿದ್ದೇವೆ. ಹಾಗೆಯೇ, ಜೇನು ನೋಣವೂ ಕೂಡ ರೈತನ ಮಿತ್ರ. ಬಹುತೇಕ ಬೆಳೆಗಳು ಪರಕೀಯ ಪರಾಗಸ್ಪರ್ಶದ ಬೆಳೆಗಳು. ಅಂತಹ ಪರಕೀಯ ಪರಾಗ ಸ್ಪರ್ಶಕ್ಕೆ ಅನುವು ಮಾಡಿಕೊಡುವುದು ಹೂವನ್ನು ಮುತ್ತಿಕ್ಕಿ ಮಕರಂದ ಹೀರುವ ಜೇನು ನೊಣಗಳು ಮತ್ತಿತರ ಕೆಲವು ಉಪಯೋಗಿ ದುಂಬಿಗಳು. ಅಂತಹ ಪ್ರಕ್ರಿಯೆಯಲ್ಲಿ ಹೂಗಳಿಗೆ ಪರಾಗ ರೇಣುಗಳು ಸಿಕ್ಕಿ ಪರಕೀಯ ಪರಾಗಸ್ಪರ್ಶಕ್ಕೆ ಒಳಗಾಗಿ ಕಾಯಿ ಕಟ್ಟುತ್ತವೆ. ಹೂಗಳು ವೃಥಾ ಉದುರಿಹೋಗುವುದಿಲ್ಲ. ರೈತರಿಗೆ ಬಂಪರ್ ಬೆಳೆ ಸಿಕ್ಕಂತಾಗುತ್ತದೆ. ಏನಿಲ್ಲವೆಂದರೂ ಶೇ. 30ರಿಂದ ಶೇ. 100 ರಷ್ಟು ಅಧಿಕ ಫಸಲು ದೊರೆಯುತ್ತದೆ. ಎಣ್ಣೆ ಕಾಳಿನ ಬೆಳೆಗಳು, ಹಣ್ಣಿನ ಬೆಳೆಗಳು, ತರಕಾರಿಗಳು ಮತ್ತಿತರ ಬೆಳೆಗಳಿಗೆ ಇಂತಹ ಪರಕೀಯ ಪರಾಗ ಸ್ಪರ್ಶ ಅತ್ಯಗತ್ಯ. ಪಾಲಿಹೌಸ್‌ಗಳಲ್ಲಿ ವಿವಿಧ ಬೆಳೆಗಳ ಕೃಷಿ ಮಾಡುವವರು ಪಾಲಿಹೌಸ್‌ನೊಳಗೆ ಜೇನು ನೊಣಗಳು ಮತ್ತಿತರ ಕೀಟಗಳ ಪ್ರವೇಶಕ್ಕೆ ಆಸ್ಪದವಿಲ್ಲದಿರುವುದರಿಂದ ಜೇನು ನೊಣಗಳ ಕಾಲೋನಿಯೊಂದನ್ನು ಸಾಕಿಕೊಳ್ಳುತ್ತಾರೆ. ಜೇನು ನೊಣವನ್ನು ಸಂಘ ಜೀವಿ ಅಥವಾ ಸಾಮಾಜಿಕ ಕೀಟವೆಂದು ತಿಳಿಯಲಾಗಿದೆ.

ಈ ಲೇಖನ ಓದಿದ್ದೀರಾ?: ಕೃಷಿರಂಗ | ಕೃಷಿ ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣ ಅಧ್ಯಯನಕ್ಕೆ ಇಲ್ಲಿವೆ ಹತ್ತಾರು ಆಯ್ಕೆ

 ಅತಿಮುಖ್ಯವಾಗಿ ಕುಕುರ್‌ಬಿಟ್ಸ್ ಸಸ್ಯ ಸಂಸಾರಕ್ಕೆ ಸೇರಿದ ಹಿರೇಕಾಯಿ, ಸೊರೆಕಾಯಿ, ತೊಂಡೆಕಾಯಿ, ಕುಂಬಳಕಾಯಿ, ಹಾಗಲಕಾಯಿ, ಸೌತೆಕಾಯಿಯಂತಹ ಬೆಳೆಗಳಲ್ಲಿ ಹೂಗಳು ಕಾಯಿ ಕಟ್ಟಲು ಜೇನು ನೊಣ ಮತ್ತಿತರ ಉಪಯೋಗಿ ದುಂಬಿಗಳಿಂದ ಪರಕೀಯ ಪರಾಗ ಸ್ಪರ್ಶಕ್ರಿಯೆ ನಡೆಯಲೇಬೇಕು. ಕಾಫಿ, ದಾಳಿಂಬೆ, ಡ್ರ್ಯಾಗನ್ ಹಣ್ಣುಗಳ ಬೆಳೆಗಳಿಗೆ ಜೇನು ನೊಣಗಳಿಂದಾಗುವ ಪರಕೀಯ ಪರಾಗ ಸ್ಪರ್ಶ ಬೇಕು.

ಜೇನು ಗೂಡಿನ ವಾತಾವರಣ

 ಜೇನು ಗೂಡಿನಲ್ಲಿ ವರ್ಷದ ಎಲ್ಲ ಕಾಲದಲ್ಲೂ 33ರಿಂದ 34 ಡಿಗ್ರಿ ಸೆಲ್ಶಿಯಸ್‌ನಷ್ಟು ಉಷ್ಣಾಂಶವನ್ನು ಜೇನು ನೊಣಗಳು ಕಾಪಾಡಿಕೊಳ್ಳುತ್ತವೆ. ಜೇನು ನೊಣಗಳು ನೀರನ್ನು ಹುಡುಕಿ ನೀರು ಕುಡಿಯುತ್ತವೆ. ಜೇನು ಗೂಡಿಗೆ ನೀರು ತರುತ್ತವೆ. ತಂಪಾದ ವಾತಾವರಣವನ್ನು ಉಂಟುಮಾಡಿಕೊಳ್ಳುತ್ತವೆ. ಜೇನುಗೂಡನ್ನು ಇಂಗ್ಲಿಷಿನಲ್ಲಿ ಕಾಲೋನಿ, ಕೂಂಬ್ ಎಂಬ ಹೆಸರುಗಳಿಂದ ಕರೆದರೆ, ಕನ್ನಡದ ಪ್ರಾದೇಶಿಕ ನುಡಿಗಟ್ಟುಗಳಲ್ಲಿ ಎರಿ, ರಾಡೆ, ರೊಟ್ಟಿ, ಕುಟ್ಟಿ, ಕುಟ್ಟು ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ.

Jenu 03

ಜೇನು ನೊಣದ ವಿಷದ ಉಪಯೋಗ

ಜೇನು ಕಚ್ಚಿದಾಗ ಕೊಂಡಿಯಿಂದ ಬಿಡುಗಡೆಯಾಗುವ ಜೇನು ನೊಣದ ವಿಷವು ಒಂದು ಸಂಕೀರ್ಣ ಸಸಾರಜನಕದಿಂದ ಕೂಡಿದೆ. ಅದನ್ನು ಮೆಲಿಟ್ಟಿನ್ (Melittin) ಎಂದು ಕರೆಯಲಾಗಿದೆ. ಮಾನವರ ಕೀಲುನೋವಿಗೆ ಉಪಶಮನಕಾರಿಯಾಗಿ ಬಳಸಲಾಗುತ್ತಿದೆ. ಅದು ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಕೋಶಗಳು ದ್ವಿಗುಣಗೊಳ್ಳುವುದನ್ನು ಮೆಲಿಟ್ಟಿನ್ ತಡೆಯುವುದರಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಪ್ರಯತ್ನಗಳಾಗಿವೆ.

ಜೇನು ತುಪ್ಪದ ದರ

 ಜೇನುತುಪ್ಪಕ್ಕೆ ನಿಗದಿತ ದರಗಳಿಲ್ಲ. ಅದರ ಗುಣಮಟ್ಟದ ಜೊತೆಗೆ ಯಾವ ಪ್ರಾಂತ್ಯದಲ್ಲಿ ಅದನ್ನು ತಯಾರಿಸಲಾಗಿದೆ ಎಂಬುದರ ಆಧಾರದ ಮೇಲೆ ದರವನ್ನು ನಿಷ್ಕರ್ಷೆ ಮಾಡಲಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೇನು ತುಪ್ಪದ ಉತ್ಪಾದನೆಯಿದೆ. ರೈತರು ಒಂದು ಕಿಲೋ ಜೇನುತುಪ್ಪವನ್ನು ರೂ. 800ರಿಂದ 900 ರೂಗಳ ಆಸುಪಾಸಿನ ದರದಲ್ಲಿ ಮಾರಾಟ ಮಾಡುತ್ತಾರೆ. ಕೆಲವು ರೈತರು ಜೇನು ಸಾಕಾಣಿಕೆಯಲ್ಲಿ ಲಾಭದಾಯಕ ಉದ್ದಿಮೆದಾರರಾಗಿದ್ದಾರೆ. ನಮ್ಮ ದೇಶವು ಜೇನು ತುಪ್ಪದ ಉತ್ಪಾದನೆಯಲ್ಲಿ ಜಾಗತಿಕವಾಗಿ ಆರನೇ ಸ್ಥಾನದಲ್ಲಿದೆ. ಅಮೆರಿಕಾ, ಕೆನಡಾ, ಅರಬ್ ದೇಶಗಳು ಮತ್ತಿತರ ದೇಶಗಳಿಗೆ ಜೇನು ತುಪ್ಪವು ರಫ್ತಾಗುತ್ತಿದೆ.

ಪ್ರಸಿದ್ಧ ಜೇನು ವಿಜ್ಞಾನಿಗಳು

 ನಮ್ಮ ರಾಜ್ಯದ ಪ್ರಸಿದ್ಧ ಜೇನು ಸಾಕಾಣಿಕೆಯ ವಿಜ್ಞಾನಿಗಳೆಂದರೆ ಡಾ. ಜಿ. ಕೆ. ವೀರೇಶ್, ಡಾ. ಎನ್. ಎಸ್. ಭಟ್, ಡಾ. ಗವಿ ಗೌಡ, ಡಾ. ಪ್ರಭುಸ್ವಾಮಿ, ಡಾ. ವಿ. ವಿ. ಬೆಳವಾಡಿ ಮತ್ತು ಡಾ. ಕೆ. ಟಿ. ವಿಜಯಕುಮಾರ್. ಪ್ರಸ್ತುತ ಡಾ. ಕೆ. ಟಿ. ವಿಜಯಕುಮಾರ್ ಅವರು ಜೇನು ಸಾಕಾಣಿಕೆಯ ಹಲವು ತರಬೇತಿ ಶಿಬಿರಗಳಲ್ಲಿ ತಜ್ಞ ವಿಜ್ಞಾನಿಯಾಗಿ ಭಾಗವಹಿಸಿ ರೈತರಿಗೆ ಉತ್ತೇಜನ ಮತ್ತು ಪ್ರೇರೇಪಣೆ ನೀಡುತ್ತಿದ್ದಾರೆ. ಡಾ. ಕೆ. ಟಿ. ವಿಜಯಕುಮಾರ್ ಅವರ ಸಂಪರ್ಕ ಸಂಖ್ಯೆ : 9986051852. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಜೇನು ಉತ್ಪಾದನೆ ಮತ್ತು ಮಾರಾಟ ನಡೆಯುತ್ತಿದೆ. ಭಾರತದಲ್ಲಿ ಮೊಟ್ಟ ಮೊದಲಿಗೆ 1996ರಲ್ಲಿ ಆರಂಭವಾದ ಜೇನು ಕೃಷಿ ವಿಭಾಗವಿದೆ. ಅಖಿಲ ಭಾರತ ಸುಸಂಘಟಿತ ಜೇನು ನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆಯು 2009ರಿಂದ ನಡೆಯುತ್ತಿದೆ. ಜೇನು ಕೃಷಿ (Apiculture)ಯಲ್ಲಿ ಮಾಸ್ಟರ್ಸ್ ಪದವಿ ವ್ಯಾಸಂಗವಿದೆ.

 ಸಿದ್ದಿ, ಸೋಲಿಗ, ಕಾಡು ಕುರುಬ, ಜೇನು ಕುರುಬ ಮುಂತಾದ ಆದಿವಾಸಿಗಳಿಗೆ ಜೇನು ಸಾಕಾಣಿಕೆಯು ಮುಖ್ಯ ಕಸುಬಾಗಿದೆ. ರೈತರು ಜೇನು ಸಾಕಾಣಿಕೆಯನ್ನು ಉಪಕಸುಬಾಗಿ ಕೈಗೊಂಡರೆ ಜೇನು ತುಪ್ಪದ ಮಾರಾಟದಿಂದ ತಾವು ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ತಮ್ಮ ಊರಿನ ರೈತರ ಬೆಳೆಗಳ ಉತ್ಪಾದನೆ ಅಧಿಕವಾಗಲು ಸಹಾಯ ಮಾಡಿದಂತಾಗುತ್ತದೆ. ಜೇನು ಸಾಕಾಣಿಕೆಗಾಗಿ ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ರೈತರು ಪಡೆಯಬಹುದು.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರಿಲ್ಲದ ಸಂಪುಟ; ಮಾತು ತಪ್ಪಿತೇ ಕಾಂಗ್ರೆಸ್?

ರಾಜ್ಯದ ಮಹಿಳೆಯರು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿದ್ದರೂ, ಅಧಿಕಾರದ ವಿಚಾರ ಬಂದಾಗ ಅವರು...

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...