ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್) 

“ಹೊರ ಉಡುಪು ಹಾಕಿಕೊಂಡು ಇರುವಾಗಲೇ ಒಳಗಿನ ಬ್ರಾವನ್ನು ಹೊರಗೆ ತೆಗೆಯುವ ಕೌಶಲ್ಯ ನಿಮಗೆ ಸಿದ್ಧಿಸಿದರೆ ನೀವು ಜಗತ್ತನ್ನೇ ಗೆಲ್ಲಬಹುದು, ಏನನ್ನಾದರೂ ಸಾಧಿಸಬಹುದು,” ಎಂಬ ಮಾತು ಅಂತರ್ಜಾಲದಲ್ಲಿ ಕಂಡಾಗ ನನಗೆ ನಿಜಕ್ಕೂ ಮಜಾ ಅನಿಸಿತ್ತು. ನಾವು ಹಾಸ್ಟೆಲ್‍ನಲ್ಲಿ ಇರುವಾಗ ಹೆಣ್ಣುಮಕ್ಕಳು ಇಂತಹ ಪ್ರಯೋಗ ಮಾಡಿ ಭಾರೀ ಆನಂದ ಅನುಭವಿಸುವುದು ಇತ್ತು…

‘ಬ್ರಾ’ಗೂ ಸ್ತ್ರೀವಾದಕ್ಕೂ ಏನಪ್ಪಾ ಸಂಬಂಧ ಅಂತ ಅನಿಸಬಹುದು. ಇದೆ… ಇದೆ – ಬಹಳ ಸಂಬಂಧ ಇದೆ. ಉಡುಪು ಕೂಡ ರಾಜಕಾರಣಕ್ಕೆ ಹೊರತಾಗಿಲ್ಲ. ಒಬ್ಬ ಹೆಣ್ಣುಮಗಳ ಅಂಗಿಗೆ ಜೇಬು ಇಲ್ಲದೇ ಇರುವುದು ಕೂಡ ಪುರುಷಪ್ರಧಾನತೆಯ ಒಂದು ಮುಖ್ಯ ಪ್ರತೀಕವೇ ಆಗಿದೆ. ಹಿಂದೆಲ್ಲ, ಸ್ತ್ರೀವಾದಿ ಅಂತ ಹೇಳಿದ ತಕ್ಷಣ, “ಓಹ್ ನೀವು ಸ್ತ್ರೀವಾದಿಯಾ, ಬ್ರಾ ಸುಡುವ ಗುಂಪಿಗೆ ಸೇರಿದವರಾ?” ಅಂತ ಅಣಕವಾಡುವದೂ ಇತ್ತು.

ನಾನು ಚಿಕ್ಕವಳಿರುವಾಗ ಆಗಿನ್ನೂ ಸ್ತ್ರೀವಾದ ಅಂತ ಅಷ್ಟಾಗಿ ಗೊತ್ತೂ ಇರಲಿಲ್ಲ. ಒಬ್ಬ ಹುಡುಗಿಯಾಗಿ ನನ್ನ ಮೇಲೆ ನಡೆವ ತಾರತಮ್ಯಗಳನ್ನು ಗುರುತಿಸಿ, ಅದರ ಕುರಿತು ಪ್ರಶ್ನಿಸುವುದು ಸಹಜವೆಂಬಂತೆ ನನ್ನಲ್ಲಿ ಬಂದಿತ್ತು. ನನ್ನ ಹಕ್ಕುಗಳನ್ನು ಗುರುತಿಸಿಕೊಂಡು ಪ್ರತಿಪಾದಿಸುವ ಹವಣಿಕೆಯಲ್ಲಿ ಇದ್ದೆ. ಆ ದಿನಗಳಲ್ಲಿ ಸ್ತ್ರೀವಾದಿಗಳು ಬ್ರಾ ಸುಡುವುದರ ಮೂಲಕ ತಮ್ಮ ಸ್ವಾತಂತ್ರ್ಯವನ್ನು ಪ್ರತಿಪಾದಿಸಲು ಸಾರ್ವಜನಿಕ ಸ್ಥಳದಲ್ಲಿ ತಮ್ಮ ಬ್ರಾ ಸುಟ್ಟರು ಅನ್ನುವ ವಿಚಾರ ನನಗೆ ಕೇಳಿಬಂತು. ನನಗೆ ಅರ್ಥ ಆಗಿರಲಿಲ್ಲ. ಬ್ರಾ ಸುಟ್ಟರೆ ಸ್ವಾತಂತ್ರ್ಯ ಸಿಗುತ್ತಾ, ಹೀಗೆಲ್ಲ ಮಾಡುತ್ತಾರೆಯೇ, ಮಾಡಬೇಕೇ ಎಂಬ ಪ್ರಶ್ನೆಯೂ ಬಂದಿತ್ತು. ನಾನು ಆ ರೀತಿಯ ಸ್ತ್ರೀವಾದಿ ಆಗಲಾರೆಯಪ್ಪಾ ಅಂತ ಯೋಚಿಸಿದ್ದೆ ಕೂಡ. ಬಹಳ ಸಮಯದ ನಂತರ ಈ ಬ್ರಾ ರಾಜಕಾರಣವೂ ಅರ್ಥವಾಗತೊಡಗಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಮಾರು ಐವತ್ತು ವರುಷಗಳ ಹಿಂದೆ 1968ರಲ್ಲಿ, ನ್ಯೂಜೆರ್ಸಿಯಲ್ಲಿ ನಡೆದ ಮಿಸ್ ಅಮೆರಿಕ ಸೌಂದರ್ಯ ಸ್ಪರ್ಧೆಯ ವಿರುದ್ಧ ಮಹಿಳೆಯರು ಪ್ರತಿಭಟಿಸಿದರು. ಮಹಿಳೆಯರ ಗುಂಪು ತಮ್ಮ ನೆಲ ಒರೆಸುವ ಬಟ್ಟೆ, ಲಿಪ್ ಸ್ಟಿಕ್, ಹೈ ಹೀಲ್ಡ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಸ್ವಾತಂತ್ರ್ಯ ಕಸದ ಕ್ಯಾನ್‌ಗೆ (ಫ್ರೀಡಮ್ ಟ್ರ್ಯಾಶ್ ಕ್ಯಾನ್) ಎಸೆದರು. ಅಂದರೆ, ಯಾವುದು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೋ ಅವನ್ನು ಎಸೆಯುವ ಕಸದ ತೊಟ್ಟಿಯನ್ನು ‘ಫ್ರೀಡಂ ಟ್ರ್ಯಾಶ್ ಕ್ಯಾನ್’ ಅಂತ ಕರೆದುಕೊಂಡರು. ಒಟ್ಟಿನಲ್ಲಿ ಮಹಿಳೆಯರನ್ನು ತುಳಿತಕ್ಕೆ ಒಳಪಡಿಸಲಾದ ವಸ್ತುಗಳನ್ನು ಸಾಂಕೇತಿಕವಾಗಿ ಎಸೆಯುವುದು ಇದರ ಉದ್ದೇಶವಾಗಿತ್ತು ಎಂದು ಸಂಘಟಕರಲ್ಲಿ ಒಬ್ಬರಾದ ರಾಬಿನ್ ಮಾರ್ಗನ್ ವಿವರಿಸಿದರು. ಆಸುಪಾಸಿನ ದಾರಿಹೋಕರನ್ನೂ ಈ ಪ್ರತಿಭಟನೆಗೆ ಆಹ್ವಾನಿಸಿದರು. ಅವರಲ್ಲಿ ಯಾರೋ ಒಬ್ಬರು ಆ ಹೊತ್ತಿನ ಉಮೇದಿನಲ್ಲಿ ತನ್ನ ಅಂಗಿಯ ಕೆಳಗಿನಿಂದ ಬ್ರಾವನ್ನು ಸಡಿಲಿಸಿ ತೆಗೆದು ಎಲ್ಲಾ ಗಲಗಲಗಳ ನಡುವೆ ಬೀಸಿ ಎಸೆದಳು. ವಿಶೇಷವೆಂದರೆ, ಅನಿರೀಕ್ಷಿತವಾಗಿ ನಡೆದ ಈ ಒಂದು ಪುಟ್ಟ ಕ್ರಿಯೆ ಪ್ರಪಂಚಾದ್ಯಂತ ಸುದ್ದಿ ಮಾಡಿತು. ಈ ಪ್ರತಿಭಟನೆಗೆ ಇತಿಹಾಸದಲ್ಲಿ ಭದ್ರವಾದ ಸ್ಥಾನ ಸಿಕ್ಕಿತು. ಸ್ತನಬಂಧವನ್ನು ಸುಡುವ ಸ್ತ್ರೀವಾದಿ – ಎಂಬ ಚಿತ್ರಣ ಹುಟ್ಟಿಕೊಂಡಿತು.

ಫ್ರೀಡಮ್ ಟ್ರ್ಯಾಶ್ ಕ್ಯಾನ್‍ನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಚ್ಚಿನ ಮಹಿಳೆಯರು ನಾಗರಿಕ ಹಕ್ಕುಗಳು ಅಥವಾ ವಿಯೆಟ್ನಾಂ ಯುದ್ಧ ವಿರೋಧಿ ಚಳುವಳಿಗಳಲ್ಲಿ ಈ ಹಿಂದೆ ಭಾಗವಹಿಸಿದ ಅನುಭವ ಹೊಂದಿದ್ದರು. ಯಾರಿಗೂ ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಅನುಭವ ಇರಲಿಲ್ಲ. ಈ ಸಂದರ್ಭದಲ್ಲಿ ಅವರ ಒಂದು ಅನಿಸಿಕೆ – “ನಾವು ಯುವ ತೀವ್ರಗಾಮಿಗಳಾಗಿದ್ದು, ಸ್ತ್ರೀವಾದದ ಹುಡುಕಾಟದಲ್ಲಿ ಇದ್ದೇವೆ. ನೀತಿ ರೂಪಿಸುವ ಕೆಲಸ ಮಾಡದೆ ಬರೀ ಕಾಫಿ ಮಾಡಿ-ಮಾಡಿ ಸುಸ್ತಾಗಿದ್ದೇವೆ…” “ಬಲಪಂಥೀಯ ಪುರುಷರು ತಮ್ಮ ಸಂಗಾತಿಗಳಲ್ಲ ಎಂಬುದು ಮೊದಲೇ ಗೊತ್ತಿತ್ತು. ಎಡಪಂಥೀಯರು ನಮ್ಮ ಸಹೋದರರು ಎಂದು ಭಾವಿಸಿದ್ದರೂ, ನಾವು ನಮ್ಮ ಸ್ವಂತ ಹಕ್ಕುಗಳ ಬಗ್ಗೆ ಮಾತಾಡುವಾಗ ಅವರು ನಮ್ಮ ಜೊತೆಗಿಲ್ಲ ಎಂಬುದನ್ನು ಕಂಡುಕೊಂಡಿದ್ದೆವು,” ಎಂದು ಈ ಹೋರಾಟಗಾರರು ಹಂಚಿಕೊಳ್ಳುತ್ತಾರೆ. ಏನೇ ಇರಲಿ, ಈ ಬ್ರಾ ಸುಡುವ ಕತೆಯಿಂದಾಗಿ 50 ವರುಷಗಳ ನಂತರವೂ ಅವರ ಪ್ರತಿಭಟನೆಯು ಪ್ರತಿಧ್ವನಿಸಬಹುದು ಅಂತ ಯಾವುದೇ ಮಹಿಳೆಯರು ಊಹಿಸಿರಲಿಲ್ಲ. ವಿರೋಧಾಭಾಸವೆಂದರೆ, ಪ್ರತಿಭಟನೆಯ ಬಗ್ಗೆ ಸಾರ್ವಜನಿಕ ಪ್ರಜ್ಞೆಯಲ್ಲಿ ಅಂಟಿಕೊಂಡಿರುವುದು ಬ್ರಾ ಸುಡುವ ಸ್ತ್ರೀವಾದಿಯ ಚಿತ್ರಣವಾಗಿತ್ತು. ಕೆಲವು ಮಹಿಳೆಯರು ಬ್ರಾ ಸೇರಿದಂತೆ ಒಳಉಡುಪುಗಳನ್ನು ಸ್ವಾತಂತ್ರ್ಯ ಕಸದ ಕ್ಯಾನ್‍ಗೆ ಎಸೆದಿದ್ದರು, ಬ್ರಾ ಸುಡುವ ಕ್ರಿಯೆ ನಡೆದೇ ಇರಲಿಲ್ಲ ಅಂತ ಸಂಘಟಕರ ಅಭಿಪ್ರಾಯ. ಸ್ತ್ರೀವಾದ ಮತ್ತು ಬ್ರಾ ಸುಡುವುದು ಸ್ತ್ರೀವಾದದ ಜನಪ್ರಿಯ ಸಂಸ್ಕೃತಿಯಲ್ಲಿ ಸೇರಿಹೋಗುವಂತಾಯಿತು. ಹೊಸಅಲೆಯ ಸ್ತ್ರೀವಾದ ಇದರ ಜೊತೆಗೇ ಹುಟ್ಟಿಕೊಂಡಿತು ಅಂತ ಕೂಡ ಹೇಳುತ್ತಾರೆ.

ಮಿಸ್ ಅಮೆರಿಕ ಸ್ಪರ್ಧೆಯು ನಿರ್ದಿಷ್ಟ ರೀತಿಯ ಸ್ತ್ರೀ ಸೌಂದರ್ಯವನ್ನು ಗುರುತಿಸಿ ಪುರಸ್ಕರಿಸಿತ್ತು. 1921ರಲ್ಲಿ ಪ್ರಾರಂಭವಾದಾಗಿನಿಂದ ಈ ಸ್ಪರ್ಧೆಯು ಬಿಳಿಯೇತರ ಮಂದಿಯನ್ನು ಹೊಂದಿರಲಿಲ್ಲ. ಪ್ರತಿಭಟನಾಕಾರರು ವಿರೋಧಿಸಲು ಹೊರಟ ಹತ್ತು ಅಂಶಗಳಲ್ಲಿ ವರ್ಣಭೇದ ನೀತಿಯೂ ಒಂದಾಗಿತ್ತು. ಆದರೆ, ಪ್ರತಿಭಟನೆಯ ನಂತರ ತಿರುಗಿ ನೋಡುವಾಗ ಹೋರಾಟಗಾರರಿಗೆ ಒಂದು ಅಂಶ ಗಮನಕ್ಕೆ ಬಂತು. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಚ್ಚಿನ ಮಂದಿ ಉಚಿತ ವಿದ್ಯಾರ್ಥಿವೇತನಕ್ಕಾಗಿ ಪ್ರಯತ್ನಿಸುತಿದ್ದ ಕಾರ್ಮಿಕ ವರ್ಗದ ಮಹಿಳೆಯರಾಗಿದ್ದರು. “ನಾವು ಸ್ಪರ್ಧೆಗೆ ಇಳಿದ ಹೆಣ್ಣುಮಕ್ಕಳನ್ನೇ ಬಹಳ ತೀವ್ರವಾಗಿ ದೂಷಿಸಿದ್ದೇವಲ್ಲ…” ಎಂದು ಹೋರಾಟ ನಡೆಸಿದ ಮಹಿಳೆಯರಿಗೆ ಅನಿಸಿತ್ತು. ಈ ವಿಚಾರ ಈ ಲೇಖನಕ್ಕೆ ನೇರ ಸಂಬಂಧಿಸಿದ್ದು ಅಲ್ಲವಾದರೂ ಯಾವುದೇ ಇಶ್ಯೂವಿನ ಸಂಕೀರ್ಣತೆಯನ್ನು ಗಮನಿಸಲು ಇದನ್ನು ಇಲ್ಲಿ ಬರೆದಿದ್ದೇನೆ.

ಏನೇ ಇರಲಿ, ದೊಡ್ಡ-ದೊಡ್ಡ ಸಮಸ್ಯೆಗಳ ನಡುವೆ ಈ ಬ್ರಾದಂತಹ ಒಳಉಡುಪು ಪ್ರತಿಭಟನೆಯ ಒಂದು ವಸ್ತುವಾಗಬೇಕೇ ಎಂಬ ಪ್ರಶ್ನೆ ಬಂದೇ ಬರಬಹುದು. ಇದೊಂದು ಚಿಕ್ಕ ವಿಷಯವೇ ಇರಬಹುದು. ಆದರೆ, ಮಹಿಳೆಯರ ಬದುಕಿನಲ್ಲಿ ಇಂತಹ ವಿಷಯಗಳಿಗೂ ಅರ್ಥವಿದೆ. ದಿನದ ಕೊನೆಯಲ್ಲಿ, “ಎಲ್ಲ ಕೆಲಸಕಾರ್ಯಗಳ ನಂತರ ಬ್ರಾ ಬಿಚ್ಚಿ ಬಿಸಾಕುವುದೇ ಒಂದು ಆರಾಮದ ಅನುಭವ,” ಅಂತ ದೂರ-ದೂರ ದೇಶದ ಮಹಿಳೆಯರು ಹೇಳುವ ಮಾತುಗಳು ಈ ದೇಶದ ಒಂದು ಮೂಲೆಯಲ್ಲಿ ಇರುವ ನಮ್ಮಂತಹ ಮಧ್ಯಮ ವರ್ಗದ ಮಹಿಳೆಯರಿಗೂ ‘ಹೌದಲ್ಲ…’ ಅಂತ ಅನಿಸುವ ಹಾಗೆ ಮಾಡುತ್ತದಲ್ಲ, ಅದುವೇ ವಿಶೇಷ. ಇದರ ಸುತ್ತಮುತ್ತ ಎಷ್ಟು ಅನುಭವಗಳು, ಜೋಕುಗಳು ಹುಟ್ಟಿಕೊಂಡಿವೆ. ಸ್ತನಬಂಧಗಳು ಎಷ್ಟು ನಿರ್ಬಂಧಿತ ಮತ್ತು ಅಹಿತಕರವಾಗಿ ಇರುತ್ತವೆ ಎಂಬುದನ್ನು ಮಹಿಳೆಯರು ವಿವಿಧ ರೀತಿಯಲ್ಲಿ ಸೂಚಿಸಿದ್ದಾರೆ.

“ಅಯ್ಯೋ ನಾನು ಹೊರಗೆ ಹೋಗಬಹುದಿತ್ತು, ನನಗೆ ಅದು ಇಷ್ಟ. ಆದರೆ ನಾನು ಈಗಾಗಲೇ ನನ್ನ ಬ್ರಾವನ್ನು ತೆಗೆದು ಇರಿಸಿ ಆಯಿತು” – ಹೀಗೊಂದು ಮಾತು. ಇನ್ನೊಂದು ಮಾತು ಇದೆ, “ನಿರಾಳವಾದ ಪ್ಯಾಂಟ್, ಎತ್ತಿ ಕಟ್ಟಿದ ಕೂದಲು, ಯಾವುದೇ ಮೇಕಪ್ ಇಲ್ಲದೆ ಆರಾಮವಾಗಿರುವಾಗ ನೀವು ಅತ್ಯಂತ ಸುಂದರವಾಗಿ ಕಾಣುವಿರಿ, ಈ ಪಟ್ಟಿಗೆ ಬ್ರಾ-ರಹಿತವಾಗಿರುವುದು ಎಂದೂ ಸೇರಿಸಬಹುದು.” “ಹೊರ ಉಡುಪು ಹಾಕಿಕೊಂಡು ಇರುವಾಗಲೇ ಒಳಗಿನ ಬ್ರಾವನ್ನು ಹೊರಗೆ ತೆಗೆಯುವ ಕೌಶಲ್ಯ ನಿಮಗೆ ಸಿದ್ಧಿಸಿದರೆ ನೀವು ಜಗತ್ತನ್ನೇ ಗೆಲ್ಲಬಹುದು, ಏನನ್ನಾದರೂ ಸಾಧಿಸಬಹುದು” – ಎಂಬ ಮಾತು ಅಂತರ್ಜಾಲದಲ್ಲಿ ಕಂಡಾಗ ನನಗೆ ನಿಜಕ್ಕೂ ಮಜಾ ಅನಿಸಿತ್ತು. ನಾವು ಹಾಸ್ಟೆಲ್‍ನಲ್ಲಿ ಇರುವಾಗ ಹೆಣ್ಣುಮಕ್ಕಳು ಇಂತಹ ಪ್ರಯೋಗ ಮಾಡಿ ಭಾರೀ ಆನಂದ ಅನುಭವಿಸುವುದು ಇತ್ತು. ಒಬ್ಬರಿಗೊಬ್ಬರು ಈ ಕೌಶಲ್ಯವನ್ನು ಹೇಳಿಕೊಡುವುದಿತ್ತು.

ಬ್ರಾ ಸುಡದೇಹೋದರೂ ಸುಟ್ಟ ಹಾಗೆ ಸುದ್ದಿ ಆಗಿ, ಅದು ಸ್ತ್ರೀವಾದವನ್ನು ಅಣಕಿಸುವ ಪ್ರತೀಕವಾಗಿ ತಳಕುಹಾಕಿಕೊಂಡ ರೀತಿ ನೋಡಿದರೆ, ಇದರೊಳಗೆ ಏನೋ ಒಂದು ಮಸಾಲಾ ಇದೆ ಅಂತ ಅನಿಸುತ್ತದೆ. ಒಂದಂತೂ ಸತ್ಯ – ಪ್ರಪಂಚಾದ್ಯಂತ ಅನೇಕಾನೇಕ ಮಹಿಳೆಯರು ಬ್ರಾದಿಂದ ಒಂದಿಷ್ಟು ಹೊತ್ತು ಬಿಡುಗಡೆ ಪಡೆಯಲು ಇಷ್ಟಪಡುತ್ತಾರೆ. ಯಾವುದೋ ಹೊತ್ತಿನಲ್ಲಿ ಯಾವುದೋ ಕಾರಣಕ್ಕಾಗಿ ಯಾವುದೋ ಒಂದು ಚಿಕ್ಕ ವಿಷಯವೂ ಬಂಧನವೆನಿಸಿ, ಅದರಿಂದ ಬಿಡುಗಡೆಯನ್ನು ಅನುಭವಿಸಬೇಕು ಅನಿಸಿದರೆ, ಇರಲಿಬಿಡಿ… ‘ಬಿಡುಗಡೆಯ ಭಾವ’ ಸಿಗುತ್ತದೆ ಅಂದರೆ ಅದು ಕೂಡ ಸ್ತ್ರೀವಾದ ಅಷ್ಟೇ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 20 | ಡಿವೋರ್ಸ್‌ವರೆಗೂ ಮುಂದುವರಿದಿದ್ದ ಗರ್ಭಿಣಿ ಹರಿಣಿಯ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...