ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ ಬದುಕಿನ ಅರ್ಥ ಇವುಗಳಲ್ಲೇ ಮುಗಿದು ಹೋಗಬೇಕೆ? ಅವಳಿಗೆ ತನ್ನದೇ ಆದ ಕನಸು, ಆಸೆ, ವೃತ್ತಿ, ದೇಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇರಬಾರದೇ? ಲಕ್ಷ್ಮಣ್ ಉಟೇಕರ್ ನಿರ್ದೇಶನದ ಮಿಮಿ ಈ ಪ್ರಶ್ನೆಗಳನ್ನು ನೇರವಾಗಿ ಕೇಳುವುದಿಲ್ಲ. ಆದರೆ ಮಿಮಿಯ ಬದುಕನ್ನು ನೋಡುತ್ತಾ ಹೋದಂತೆ ಈ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುತ್ತವೆ.
ಮಿಮಿ ರಾಜಸ್ಥಾನದ ಯುವತಿ. ಅವಳದೊಂದು ಕನಸಿದೆ. ಮುಂಬೈಗೆ ಹೋಗಿ ನಟಿಯಾಗಬೇಕು. ಕನಸು ಕಾಣೋಕೆ ಹಣ ಬೇಕಿಲ್ಲ. ಆದರೆ ಕಂಡ ಕನಸು ಬೆನ್ನಟ್ಟುವುದಕೆ ಹಣ ಬೇಕು. ಅವಕಾಶ ಸಿಗುವವರೆಗೆ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಿ ಹಣ ಸಂಪಾದಿಸುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಭಾನು ತ್ರಿಪಾಠಿ ಎಂಬಾತನ ಮೂಲಕ ವಿದೇಶಿ ದಂಪತಿ ಜಾನ್ ಮತ್ತು ಸಮರ್‌ಗಾಗಿ ಸರೋಗೇಟ್ ತಾಯಿಯಾಗಲು 20 ಲಕ್ಷದ ಅವಕಾಶ ಬರುತ್ತದೆ. ಆ ಹಣ ತನ್ನ ನಟಿಯಾಗುವ ಕನಸಿಗೆ ದಾರಿ ಮಾಡಿಕೊಡಬಹುದು ಎಂದು ಮಿಮಿ ಒಪ್ಪಿಕೊಳ್ಳುತ್ತಾಳೆ.
ಇಲ್ಲಿಯೇ ಸಿನಿಮಾ ಮಹಿಳೆಯ ಆಯ್ಕೆಯ ಬಗ್ಗೆ ಒಂದು ಮುಖ್ಯ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಮಿಮಿ ತನ್ನ ದೇಹದ ಬಗ್ಗೆ ತಾನೇ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಆದರೆ ಆ ನಿರ್ಧಾರದ ಹಿಂದೆ ಆರ್ಥಿಕ ಅಗತ್ಯತೆಯೂ ಇದೆ. ಹಾಗಾಗಿ ‘ಆಯ್ಕೆ’ ಎಂಬ ಪದವನ್ನು ಸರಳವಾಗಿ ನೋಡಲು ಆಗುವುದಿಲ್ಲ. ಅವಳು ಆಯ್ಕೆ ಮಾಡಿದ್ದಾಳೆ. ಆದರೆ ಆ ಆಯ್ಕೆ ಅವಳ ಕನಸಿನ ಕಾರಣಕ್ಕೋ, ಅಥವಾ ಅವಳ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೊ? ಒಬ್ಬರ ಬಳಿ ಹಣ ಇದೆ. ಮತ್ತೊಬ್ಬರ ಬಳಿ ಗರ್ಭ ಇದೆ. ಸರೋಗಸಿಯೊಳಗಿನ ಈ ಅಸಮಾನತೆಯನ್ನು ಸಿನಿಮಾ ಸಂಪೂರ್ಣವಾಗಿ ಹೇಳುವುದಿಲ್ಲ. ಆದರೆ, ಕಥೆಯುದ್ದಕ್ಕೂ ಅದು ಕಾಣುತ್ತಲೇ ಹೋಗುತ್ತದೆ.
ಗರ್ಭಿಣಿಯಾದ ನಂತರ ಮಿಮಿಯ ಬದುಕು ನಿಧಾನವಾಗಿ ಬದಲಾಗುತ್ತದೆ. ಶುರುವಾತಿನಲ್ಲಿ ಸರೋಗಸಿಯು ಅವಳಿಗೆ ತನ್ನ ಕನಸಿಗಾಗಿ ಹಣ ಸಂಪಾದಿಸುವ ಒಂದು ದಾರಿಯಾಗಿ ಕಾಣುತ್ತದೆ. ನಂತರದಲ್ಲಿ ಗರ್ಭದಲ್ಲಿರುವ ಮಗುವಿನೊಂದಿಗೆ ಅವಳಿಗೆ ಭಾವನಾತ್ಮಕ ಸಂಬಂಧ ಬೆಳೆಯಲು ಶುರುವಾಗುತ್ತದೆ. ಕನ್ನಡಿಯ ಮುಂದೆ ನಿಂತು ಬದಲಾಗುತ್ತಿರುವ ತನ್ನ ದೇಹವನ್ನು ನೋಡಿಕೊಳ್ಳುವ ಮಿಮಿಯ ದೃಶ್ಯ ಇಲ್ಲಿ ಗಮನ ಸೇಳೆಯುತ್ತದೆ. ಒಮ್ಮೆ ತನ್ನ ಕನಸಿಗಾಗಿ ದೇಹವನ್ನು ಒಂದು ಸಾಧನವಾಗಿ ನೋಡುತ್ತಿದ್ದ ಯುವತಿ, ಈಗ ಅದೇ ದೇಹ ತನ್ನ ಬದುಕಿನ ದಿಕ್ಕು ಬದಲಾಯಿಸುತ್ತಿರುವುದನ್ನು ಅರಿಯತೊಡಗುತ್ತಾಳೆ.
This video cannot be played in your browser. Open the video directly
ಮಿಮಿಯ ಕಥೆ ಇಲ್ಲಿಂದ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಸರೋಗಸಿಯ ಒಪ್ಪಂದಕ್ಕಿಂತಲೂ ದೊಡ್ಡದಾಗಿ, ಮಿಮಿಗೆ ಗರ್ಭದಲ್ಲಿರುವ ಮಗು ಅವಳಿಗೆ ಮುಖ್ಯವಾಗತೊಡಗುತ್ತದೆ. ಮಗುವಿಗೆ Down syndrome ಇರಬಹುದು ಎಂದು ವೈದ್ಯರು ತಿಳಿಸಿದಾಗ ಜಾನ್ ಮತ್ತು ಸಮರ್ ಆ ಮಗು ತಮಗೆ ಬೇಡವೆಂದು ಹೇಳುತ್ತಾರೆ. ಗರ್ಭಪಾತ ಮಾಡಿಸಿಕೊಳ್ಳುವಂತೆ ಮಿಮಿಗೆ ಹೇಳಿ ಅಮೆರಿಕಕ್ಕೆ ಹೊರಟು ಹೋಗುತ್ತಾರೆ. ಆದರೆ ಮಿಮಿ ಗರ್ಭಪಾತಕ್ಕೆ ಒಪ್ಪುವುದಿಲ್ಲ. ಆಕೆ ಮಗುವನ್ನು ಉಳಿಸಿಕೊಳ್ಳಬೇಕು ಎಂದು ತೀರ್ಮಾನಕ್ಕೆ ಬರುತ್ತಾಳೆ.
ಮಹಿಳೆಯ ದೇಹದ ಬಗ್ಗೆ ಅಂತಿಮ ನಿರ್ಧಾರ ಅವಳದೇ ಆಗಬೇಕು. ಆ ದೃಷ್ಟಿಯಿಂದ ನೋಡಿದಾಗ ಮಿಮಿ ಮಗುವನ್ನು ಉಳಿಸಿಕೊಳ್ಳುವ ನಿರ್ಧಾರ ಮುಖ್ಯವಾದುದು. ಆರಂಭದಲ್ಲಿ ಹಣಕ್ಕಾಗಿ ಸರೋಗಸಿಗೆ ಒಪ್ಪಿಕೊಂಡ ಅವಳಿಗೆ, ನಿಧಾನವಾಗಿ ಮಗುವಿನ ಮೇಲೆ ಪ್ರೀತಿ ಮತ್ತು ಜವಾಬ್ದಾರಿ ಬೆಳೆಯುತ್ತದೆ. ಹಾಗಾಗಿ ಅವಳು ಮಗುವನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ಕೇವಲ ‘ಒಳ್ಳೆಯ ತಾಯಿ’ಯ ನಿರ್ಧಾರವಾಗಿ ನೋಡಲಾಗುವುದಿಲ್ಲ. ಅದು ಅವಳ ಒಳಗೆ ಬೆಳೆದ ಭಾವನೆಯೂ ಕೂಡ. ಆದರೆ ಮಿಮಿಯೊಳಗೆ ಆಗುವ ಈ ಬದಲಾವಣೆಯನ್ನು ಸಿನಿಮಾ ಇನ್ನಷ್ಟು ತೋರಿಸಿದ್ದರೆ ಅವಳ ಪಾತ್ರ ಚೆನ್ನಾಗಿ ಕಾಣುತ್ತಿತ್ತು. ಮಹಿಳೆಯ ಆಯ್ಕೆಯನ್ನು ಗೌರವಿಸುವ ಸಿನಿಮಾ, ಅದೇ ಸಮಯದಲ್ಲಿ ತಾಯ್ತನವನ್ನು ಮಹಿಳೆಯ ಬದುಕಿನ ದೊಡ್ಡ ಸಾಧನೆ ಎಂಬಂತೆ ನೋಡುವ ಹಳೆಯ ಚೌಕಟ್ಟಿನಿಂದ ಸಂಪೂರ್ಣವಾಗಿ ಹೊರಗೆ ಬರುವುದಿಲ್ಲ.
ರಾಜ್ ಹುಟ್ಟಿದ ಮೇಲೆ ಮಿಮಿ ನಾಲ್ಕು ವರ್ಷ ಅವನನ್ನು ಬೆಳೆಸುತ್ತಾಳೆ. ಅವಳು ಅವನ ಲಾಲನೆ ಪಾಲನೆಯಲ್ಲಿ ಎಷ್ಟು ಮುಳುಗಿ ಬಿಡುತ್ತಾಳೆಂದರೆ ನಟಿಯಾಗಬೇಕೆಂಬ ಕನಸನ್ನು ಬದಿಗಿಟ್ಟು ಬಿಟ್ಟಿರುತ್ತಾಳೆ. ರಾಜ್ ಜೊತೆಗಿನ ಅವಳ ವಿಡಿಯೋ ವೈರಲ್ ಆದದ್ದನ್ನು ಕಂಡು ಜಾನ್ ಮತ್ತು ಸಮರ್ ಮತ್ತೆ ಭಾರತಕ್ಕೆ ಬರುತ್ತಾರೆ. ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಬಯಸುತ್ತಾರೆ. ಮಿಮಿ ಇದಕ್ಕೆ ಒಪ್ಪುವುದಿಲ್ಲ. ಇದನ್ನು ಅರಿತ ಜಾನ್ ಸರೋಗಸಿಯ ಒಪ್ಪಂದವನ್ನು ಮುಂದಿಟ್ಟು ಕಾನೂನು ಕ್ರಮದ ಬೆದರಿಕೆಯನ್ನೂ ಹಾಕುತ್ತಾನೆ. ಈ ಹೋರಾಟದಲ್ಲಿ ರಾಜ್ ಗೆ ಹೆಚ್ಚು ತೊಂದರೆ ಎಂದರಿತ ಮಿಮಿ ರಾಜ್‌ನನ್ನು ಅವರಿಗೆ ಒಪ್ಪಿಸಲು ಸಿದ್ಧಳಾಗುತ್ತಾಳೆ.
ಆದರೆ ಸಿನಿಮಾ ಕೊನೆಯಲ್ಲಿ ಮತ್ತೆ ಒಂದು ತಿರುವು ತೆಗೆದುಕೊಳ್ಳುತ್ತದೆ. ಮಿಮಿ ರಾಜ್‌ನನ್ನು ಕರೆದುಕೊಂಡು ಜಾನ್ ಮತ್ತು ಸಮರ್ ಇರುವಲ್ಲಿಗೆ ಹೋಗುತ್ತಾಳೆ. ಅವರು ಅಮೆರಿಕಕ್ಕೆ ಹಿಂದಿರುಗಲು ಸಿದ್ಧರಾಗುತ್ತಿದ್ದಾರೆ. ಜಾನ್ಅ ತಾರಾ ಎಂಬ ಹುಡುಗಿಯನ್ನು ಎತ್ತಿಕೊಂಡು ಕಾರ್ ಕಡೆ ಬರುತ್ತಿದ್ದಾನೆ. ಅವಳನ್ನು ಅವರು ದತ್ತು ಪಡೆದಿರುತ್ತಾರೆ. ಆ ವೇಳೆಗಾಗಲೇ ಆ ದಂಪತಿ ಮಗುವನ್ನು ಬೆಳೆಸಲು ರಕ್ತಸಂಬಂಧವೇ ಎಲ್ಲವೂ ಅಲ್ಲ, ಪ್ರೀತಿ ಮತ್ತು ಆರೈಕೆಯೂ ಮುಖ್ಯ ಎನ್ನುವುದನ್ನು ಅವರು ಒಪ್ಪಿಕೊಂಡಿರುತ್ತಾರೆ. ರಾಜ್‌ನನ್ನು ಮಿಮಿಯ ಬಳಿಯೇ ಬಿಟ್ಟು ತಾರಾಳೊಂದಿಗೆ ಅಮೆರಿಕಕ್ಕೆ ಹಿಂದಿರುಗುತ್ತಾರೆ.
ಈ ಅಂತ್ಯ ಭಾವನಾತ್ಮಕವಾಗಿ ತಟ್ಟುತ್ತದೆ. ಆದರೆ ಒಂದು ವಿಷಯವನ್ನು ಸಿನಿಮಾ ಗಂಭೀರವಾಗಿ ಪ್ರಶ್ನಿಸುವುದಿಲ್ಲ. ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದು ತಿಳಿದು ಬಂದಾಗ ಕೂಡಲೇ ಜಾನ್ ಮತ್ತು ಸಮರ್ ಆ ಮಗುವನ್ನು ಬೇಡ ಎಂದು ತಿರಸ್ಕರಿಸಿದ್ದರು. ಕೊನೆಯಲ್ಲಿ ಅವರು ತಮ್ಮ ಮನಸ್ಸು ಬದಲಿಸುವುದರಿಂದ ಆ ಹಿಂದಿನ ನಿರ್ಧಾರದ ಕಠಿಣತೆ ಸ್ವಲ್ಪ ಮೃದುವಾಗಿಬಿಡುತ್ತದೆ. ಆದರೂ ರಕ್ತಸಂಬಂಧ ಇಲ್ಲದಿದ್ದರೂ ಮಗುವನ್ನು ಪ್ರೀತಿಯಿಂದ ಬೆಳೆಸಬಹುದು ಎಂಬ ಮಾತನ್ನು ಸಿನಿಮಾ ಇಲ್ಲಿ ಹೇಳುತ್ತದೆ.
ಮಿಮಿಯ ಕಥೆ 2013ರಲ್ಲಿ ನಡೆಯುತ್ತದೆ. ಆ ಸಮಯದಲ್ಲಿ ವಿದೇಶಿ ದಂಪತಿಗಳು ಭಾರತಕ್ಕೆ ಬಂದು ಸರೋಗಸಿ ಮೂಲಕ ಮಗು ಪಡೆಯಬಹುದಿತ್ತು. ನಂತರ ಈ ಬಗ್ಗೆ ಕಾನೂನು ಬದಲಾಯಿತು. ಹಾಗಾಗಿ ಇಂದು ಸಿನಿಮಾ ನೋಡುವಾಗ, ಚಿತ್ರದಲ್ಲಿ ತೋರಿಸುವ ಸರೋಗಸಿ ಆ ಕಾಲದ ಪರಿಸ್ಥಿತಿಗೆ ಸೇರಿದ್ದು ಅನ್ನೋದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಸಿನಿಮಾದ ಮೊದಲ ಭಾಗದಲ್ಲಿ ಹಾಸ್ಯ ಹೆಚ್ಚು ಕಂಡು ಬರುತ್ತದೆ. ಭಾನು ಪಾತ್ರದಲ್ಲಿನ ಪಂಕಜ್ ತ್ರಿಪಾಠಿ ಅದನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಮಿಮಿಯ ಜೊತೆಗಿನ ಅವರ ದೃಶ್ಯಗಳು ಸಿನಿಮಾದ ವಾತಾವರಣವನ್ನು ಹಗುರವಾಗಿಸುತ್ತವೆ. ಕೃತಿ ಸನನ್ ಕೂಡ ಮಿಮಿಯಲ್ಲಿ ಆಗುವ ದೈಹಿಕ ಮಾನಸಿಕ ಬದಲಾವಣೆಯನ್ನು ಚೆನ್ನಾಗಿ ತೋರಿಸಿದ್ದಾರೆ. ಆರಂಭದ ಉತ್ಸಾಹ, ಗರ್ಭಾವಸ್ಥೆಯ ಗೊಂದಲ, ಮಗುವಿನ ಮೇಲಿನ ಪ್ರೀತಿ, ಅದನ್ನು ಕಳೆದುಕೊಳ್ಳುವ ಭಯ ಎಲ್ಲದರಲ್ಲೂ ಅವರ ಅಭಿನಯ ಗಮನ ಸೆಳೆಯುವಂಥದ್ದು. ಸಾಯಿ ತಮ್ಹಾಂಕರ್ ಅವರ ಪಾತ್ರಕ್ಕೆ ಇನ್ನಷ್ಟು ಜಾಗ ಸಿಗಬೇಕಿತ್ತು. ಆ ಪಾತ್ರದ ಸ್ವಭಾವ ಮತ್ತು ಅದರ ಹಿಂದಿರುವ ಕಾರಣಗಳು ಸ್ಪಷ್ಟವಾಗುತ್ತಿತ್ತು. ಈಗಿರುವಷ್ಟು ದೃಶ್ಯಗಳಲ್ಲಿ ಪಾತ್ರ ಕಥೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಆದರೆ ಆಕೆಯ ದೃಷ್ಟಿಕೋನ, ಭಾವನಾತ್ಮಕ ಸಂಘರ್ಷ ಮತ್ತು ಮಿಮಿಯೊಂದಿಗಿನ ಸಂಬಂಧವನ್ನು ಇನ್ನಷ್ಟು ವಿಸ್ತರಿಸಿದ್ದರೆ, ಕಥೆಗೆ ಮತ್ತೊಂದು ಮಗ್ಗಲು ಸಿಕ್ಕಿರುತ್ತಿತ್ತು.
ರಾಜಸ್ಥಾನದ ಬಣ್ಣಗಳು ಮತ್ತು ಅಲ್ಲಿನ ವಾತಾವರಣ ಸಿನಿಮಾದಲ್ಲಿ ಚೆನ್ನಾಗಿ ಮೂಡಿಬಂದಿವೆ. Param Sundari ಹಾಡಿನ ದೃಶ್ಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಅಲ್ಲದೇ ಈ ಹಾಡು ಮಿಮಿಯ ಕನಸು ಎಂಥದ್ದು ಎಂಬುದನ್ನು ಬಹಳ ಸ್ಪಷ್ಟವಾಗಿ ಹೇಳುತ್ತದೆ. ಆರ್. ರೆಹಮಾನ್ ಅವರ ಸಂಗೀತದಲ್ಲಿ ಮೂಡಿಬಂದ Rihaayi De ಮತ್ತು Choti Si Chiraiya ಹಾಡುಗಳು ಕಥೆಯ ಭಾವನಾತ್ಮಕ ಭಾಗಗಳನ್ನು ಬಹಳ ಚೆನ್ನಾಗಿ ಸ್ಪರ್ಶಿಸಿವೆ.
ಮಿಮಿ 2011ರ ಮರಾಠಿಯ ‘ಮಲಾ ಆಯಿ ವ್ಹಾಯಚಿ!’ (ನಾನು ತಾಯಿಯಾಗಬೇಕು) ಸಿನಿಮಾದ ರೂಪಾಂತರ. ಹಿಂದಿ ಪ್ರೇಕ್ಷಕರಿಗೆ ತಕ್ಕಂತೆ ಇಲ್ಲಿ ಹಾಸ್ಯ ಮತ್ತು ಭಾವನಾತ್ಮಕತೆಯನ್ನು ಹೆಚ್ಚು ಬಳಸಲಾಗಿದೆ. ಸಿನಿಮಾ ಆರಂಭದಲ್ಲಿ ಸರೋಗಸಿಯ ಹಿಂದಿರುವ ಹಣ, ದೇಹ ಮತ್ತು ಸಂಬಂಧಗಳ ಪ್ರಶ್ನೆಗಳ ಕಡೆಗೆ ಹೋಗುವಂತೆ ಕಂಡರೂ ಮುಂದೆ ಅದು ತಾಯಿ ಮತ್ತು ಮಗುವಿನ ಸಂಬಂಧದ ಕಥೆಯಾಗಿ ಹೆಚ್ಚು ಬದಲಾಗುತ್ತದೆ. ಹಾಗಾಗಿ ಆರಂಭದಲ್ಲಿ ಹುಟ್ಟುವ ಕೆಲವು ಪ್ರಶ್ನೆಗಳು ಮುಂದೆ ಅಷ್ಟಾಗಿ ಉಳಿಯುವುದಿಲ್ಲ.
ಇದೇ ವಿಚಾರವನ್ನು ಇತ್ತೀಚಿನ Vishwanath and Sons ಸಿನಿಮಾದಲ್ಲಿ ಭಿನ್ನವಾಗಿ ತೋರಿಸುತ್ತದೆ. ಅಲ್ಲಿ ಮ್ಯಾಡಿ ಎಂಬ ಅನಾಥ ಹುಡುಗಿ ತನ್ನ ವೈದ್ಯಕೀಯ ಓದಿನ ಸರೋಗಸಿಗೆ ಒಳಗಾಗುತ್ತಾಳೆ. ಅವಳಿಗೂ ಮಗುವಿನ ಜೊತೆಗೆ ನಂಟು ಬೆಳೆಯುತ್ತದೆ. ಅವಿವಾಹಿತನಾದ ಸೂರ್ಯನ ಮೇಲೆ ಒಲವಾಗುತ್ತದೆ. ಆ ಕುಟುಂಬಕ್ಕೆ ಸೊಸೆಯಾಗಬೇಕು ಎಂದೂ ಸಹ ಅನಿಸುತ್ತದೆ. ಆಕೆ ಅದಕ್ಕಾಗಿ ಪ್ರಯತ್ನಿಸುತ್ತಾಳೆ ಮತ್ತು ಕೊನೆಗೆ ಯಶಸ್ವಿಯಾಗುತ್ತಾಳೆ ಕೂಡ. ಆದರೆ ಚಿತ್ರದಲ್ಲಿ ಆಕೆ ಅರ್ಧಕ್ಕೆ ನಿಲ್ಲಿಸಿದ ವೈಧ್ಯಕೀಯ ಶಿಕ್ಷಣವನ್ನು ಮುಂದುವರೆಸುತ್ತಾಳೆ. ತರಗತಿಗೆ ಮೊದಲ ಸ್ಥಾನ ಪಡೆಯುತ್ತಾಳೆ. ನಂತರ ಆಸ್ಪತ್ರೆಯೊಂದರಲ್ಲಿ ಉದ್ಯೋಗದ ಅವಕಾಶವನ್ನೂ ಪಡೆಯುತ್ತಾಳೆ. ಪ್ರೀತಿ, ಮಗು, ಕುಟುಂಬ ಅವಳ ಬದುಕಿನಲ್ಲಿದ್ದರೂ ಅವಳ ಕನಸು ಅಲ್ಲಿಗೇ ನಿಂತು ನಿಲ್ಲುವುದಿಲ್ಲ. ಮಿಮಿ ಚಿತ್ರದಲ್ಲಿ ಮಾತ್ರ ತಾಯಿಯಾದ ನಂತರ ಮಿಮಿಯ ನಟಿಯಾಗುವ ಕನಸು ಮುನ್ನೆಲೆಗೆ ಬರುವುದೇ ಇಲ್ಲ.
ಹೀಗಾಗಿ ಮಿಮಿ ಚಿತ್ರವನ್ನು ಸ್ತ್ರೀವಾದಿ ಸಿನಿಮಾ ಎಂದು ಸರಳವಾಗಿ ಹೇಳಿಬಿಡಲು ಆಗುವುದಿಲ್ಲ. ಮಹಿಳೆಯ ದೇಹದ ಮೇಲಿನ ಅವಳ ಹಕ್ಕು, ಅವಳ ಆಯ್ಕೆ, ಅವಳ ನಿರ್ಧಾರ, ಆಕೆ ತಾಯಿಯಾಗುವಿಕೆ ಇವೆಲ್ಲದರ ಬಗ್ಗೆ ಸಿನಿಮಾ ಚೆನ್ನಾಗಿಯೇ ಮಾತನಾಡುತ್ತದೆ. ಆದರೆ ಕೊನೆಗೆ ಮಿಮಿಯ ಬದುಕನ್ನು ತಾಯ್ತನದ ಸುತ್ತಲೇ ಕಟ್ಟಿಕೊಂಡು ಹೋಗುತ್ತದೆ. ಮಹಿಳೆಯ ಬದುಕು ಬದಲಾಗಬಹುದು, ಹಾಗೆಯೇ ಅವಳ ಆಸೆಗಳೂ ಸಹ. ತಾಯಿಯಾಗುವುದು ಕೂಡ ಅವಳ ಬದುಕಿನ ಆಯ್ಕೆ ಮತ್ತು ನಿರ್ಧಾರ ಆಗಬಹುದು. ಆದರೆ ಆ ಸ್ಥಿತ್ಯಂತರದ ನಂತರ ಅವಳ ಮೊದಲಿನ ಕನಸುಗಳು ಯಾಕೆ ಕಣ್ಮರೆಯಾಗಬೇಕು?
ತಾಯಿಯಾಗುವುದನ್ನು ಸಿನಿಮಾ ಒಂದು ಯಶಸ್ಸಿನಂತೆ ಕಟ್ಟಿಕೊಡುತ್ತದೆ. ಆದರೆ ತಾಯಿಯಾಗುವುದಕ್ಕೂ ಮೊದಲು ನಟಿಯಾಗಬೇಕು, ತನ್ನದೇ ಆದ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಕಂಡಿದ್ದ ಮಿಮಿಯ ಆ ಕನಸಿಗೂ ತಾಯ್ತನದ ಜೊತೆಗೊಂದು ಜಾಗ ಇರಬೇಕಿತ್ತು. ತಾಯಿಯಾಗುವುದರಿಂದ ಅವಳ ಬದುಕು ಅಲ್ಲಿಗೇ ಮುಗಿಯಬೇಕಿರಲಿಲ್ಲ. ಸಿನಿಮಾ ಆ ಬದುಕಿನ ಮುಂದಿನ ಹಂತವನ್ನೂ ತೋರಿಸಬಹುದಿತ್ತು.

ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.




