2026ರಲ್ಲಿ ನಡೆಯಲಿರುವ 99ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಯ (ಆಸ್ಕರ್) ‘ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ’ ವಿಭಾಗದ ಸ್ಪರ್ಧೆಗೆ ಭಾರತದ ಅಧಿಕೃತ ಪ್ರವೇಶವಾಗಿ ಮರಾಠಿ ಚಲನಚಿತ್ರ ʼಗೋಂಧಳ್ʼ ಆಯ್ಕೆಯಾಗಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (FFI) ರಚಿಸಿದ್ದ ತಜ್ಞರ ಆಯ್ಕೆ ಸಮಿತಿಯು ಈ ನಿರ್ಧಾರವನ್ನು ಪ್ರಕಟಿಸಿದೆ.
ದೇಶಾದ್ಯಂತ ವಿವಿಧ ಭಾಷೆಗಳಿಂದ ಸಲ್ಲಿಕೆಯಾಗಿದ್ದ ಹತ್ತಾರು ಪ್ರಸಿದ್ಧ ಸಿನಿಮಾಗಳನ್ನು ವೀಕ್ಷಿಸಿದ ಬಳಿಕ, ತೀರ್ಪುಗಾರರ ಮಂಡಳಿಯು ಸರ್ವಾನುಮತದಿಂದ ‘ಗೋಂಧಳ್’ ಚಿತ್ರವನ್ನು ಆಸ್ಕರ್ ರೇಸ್‌ಗೆ ಅಂತಿಮಗೊಳಿಸಿದೆ.
ಇದನ್ನೂ ಓದಿ: ಭಾರತದ ಪ್ರಸಕ್ತ ಬಿಕ್ಕಟ್ಟುಗಳಿಗೆ ಕನ್ನಡಿ ಹಿಡಿಯಲಿರುವ ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಿತ್ರೋತ್ಸವ
ಮಹಾರಾಷ್ಟ್ರದ ಗ್ರಾಮೀಣ ಭಾಗದ ವಿಶಿಷ್ಟ ಜಾನಪದ ಸಂಸ್ಕೃತಿ, ಆಚರಣೆಗಳು ಹಾಗೂ ಸಾಮಾಜಿಕ ಸಂಘರ್ಷಗಳ ಸುತ್ತ ಹೆಣೆದಿರುವ ಈ ಸಿನಿಮಾದ ಬಲವಾದ ಕಥಾವಸ್ತು ಮತ್ತು ತಾಂತ್ರಿಕ ಶ್ರೀಮಂತಿಕೆ ಜಾಗತಿಕ ಮಟ್ಟದ ಪ್ರೇಕ್ಷಕರನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ವಿಮರ್ಶಕರ ಮೆಚ್ಚುಗೆ ಗಳಿಸಿರುವ ಈ ಸಿನಿಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ವಿಶ್ವದ ಅತ್ಯುನ್ನತ ಸಿನಿಮಾ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ ಈ ಚಿತ್ರಕ್ಕೆ ಒಲಿದಿದ್ದು, ಚಿತ್ರತಂಡಕ್ಕೆ ದೇಶಾದ್ಯಂತ ಚಿತ್ರರಂಗದ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಈವರೆಗೆ ಭಾರತದಿಂದ ಮಹಬೂಬ್ ಖಾನ್ ಅವರ ‘ಮದರ್ ಇಂಡಿಯಾ’, ಮೀರಾ ನಾಯರ್ ಅವರ ‘ಸಲಾಂ ಬಾಂಬೆ’ ಹಾಗೂ ಆಶುತೋಷ್ ಗೊವಾರಿಕರ್ ಅವರ ‘ಲಗಾನ್’ ಚಲನಚಿತ್ರಗಳು ಆಸ್ಕರ್ ಪ್ರಶಸ್ತಿಯ ಈ ವರ್ಗೀಕರಣವನ್ನು ಪ್ರವೇಶಿಸಿವೆ. ಪ್ರಾದೇಶಿಕ ಭಾಷೆಯ ಚಲನಚಿತ್ರವೊಂದು ಇದೇ ಮೊದಲ ಬಾರಿ ವಿಕ್ರಮ ಸ್ಥಾಪಿಸಿದೆ.
ಇನ್ನು ದಕ್ಷಿಣ ಕನ್ನಡದ ಮರಾಠಿ ಭಾಷಿಕರಲ್ಲಿ ‘ಗೋಂದೋಳು’ ಹೆಸರಿನ ಆಚರಣೆ ಇದೆ. ಈ ಆಚರಣೆಯಲ್ಲಿ ಹಂದಿ ಬಲಿ ಕೊಡುವ ಪದ್ಧತಿ ಇದೆ.




