ಪಶ್ಚಿಮ ಬಂಗಾಳದ ಅತ್ಯಂತ ಹೈ-ಪ್ರೊಫೈಲ್ ಕ್ಷೇತ್ರವಾದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡದಲ್ಲಿ ದಿಢೀರ್ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಶುಕ್ರವಾರ ಸಂಜೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಿಲನ್ ಪ್ರಧಾನ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಿಲನ್ ಪ್ರಧಾನ್ ಅವರಿಗೆ ತಮ್ಮ ಬೆಂಬಲವನ್ನು ಪ್ರಕಟಿಸಿದ ಕೆಲವೇ ಗಂಟೆಗಳ ಅವಧಿಯಲ್ಲಿ ಈ ಹಠಾತ್ ಬಂಧನ ನಡೆದಿದೆ.
ವರದಿಗಳ ಪ್ರಕಾರ, 2007ರ ನಂದಿಗ್ರಾಮ ಭೂಸ್ವಾಧೀನ ವಿರೋಧಿ ಚಳವಳಿಯ ಸಂದರ್ಭದಲ್ಲಿ ದಾಖಲಾಗಿದ್ದ ಹಳೆಯ ಕೊಲೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಿಲನ್ ಪ್ರಧಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆ: ಟಿಎಂಸಿ ಅಭ್ಯರ್ಥಿ ನಾಮಪತ್ರ ವಾಪಸ್; ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ
2007ರಲ್ಲಿ ನಂದಿಗ್ರಾಮದಲ್ಲಿ ನಡೆದ ಭೀಕರ ಚಳವಳಿಯಲ್ಲಿ ಮಿಲನ್ ಪ್ರಧಾನ್ ಪ್ರಮುಖ ಪಾತ್ರ ವಹಿಸಿದ್ದರು. ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಅದಕ್ಕೂ ಮುನ್ನವೇ ಈ ಬಂಧನವಾಗಿರುವು ಸ್ಪಷ್ಟವಾಗಿ ರಾಜಕೀಯ ಕುತಂತ್ರ ಎಂದು ಬಿಂಬಿತವಾಗುತ್ತಿದೆ.
ಅಕ್ಟೋಬರ್ 6 ರಂದು ನಡೆಯಲಿರುವ ಈ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣದಿಂದ ಸಂಚಿತಾ ಪ್ರಧಾನ್ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರು ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರು ಮಾಧ್ಯಮಗಳ ಮುಂದೆ ಬಂದು, ಬಿಜೆಪಿ ವಿರುದ್ಧ ‘ಇಂಡಿಯಾ’ ಒಕ್ಕೂಟದ ಐಕ್ಯತೆಯನ್ನು ಕಾಯ್ದುಕೊಳ್ಳಲು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು.
ಆದರೆ ಈ ಬೆಂಬಲ ಘೋಷಣೆಯಾದ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಅಭ್ಯರ್ಥಿಯನ್ನೇ ಬಂಧಿಸಿರುವುದು ವಿಪಕ್ಷಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.




