"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು.
ಮುಂಗಾರು ಆರಂಭದಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರೈತರಿಗೆ ಇದೀಗ ಮಳೆ ಕೈಕೊಟ್ಟಿರುವುದು ಸಂಕಷ್ಟ ತಂದೊಡ್ಡಿದೆ. 2026ರ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಮಳೆಯಾಶ್ರಿತ ಬೆಳೆಗಳ ಒಟ್ಟು ಬಿತ್ತನೆ ಪ್ರಮಾಣ ಶೇ.88.7ರಷ್ಟಿದ್ದು, 51,894 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಆದರೆ ನಂತರ ಮಳೆ ಕೊರತೆಯಾಗಿದ್ದರಿಂದ ಕಾಯಿ ಬಿಡುವ ಹಂತದಲ್ಲಿದ್ದ ಹೆಸರು ಸೇರಿದಂತೆ ಹಲವು ಬೆಳೆಗಳು ಒಣಗಲಾರಂಭಿಸಿದ್ದು, ಶೇ.50ಕ್ಕೂ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ತಾಲೂಕಿನಲ್ಲಿ ಹೆಸರು 24,371 ಹೆಕ್ಟೇರ್, ಮೆಕ್ಕೆಜೋಳ(ಗೋವಿನಜೋಳ) 8,075 ಹೆಕ್ಟೇರ್, ತೊಗರಿ 1,932 ಹೆಕ್ಟೇರ್, ಸಜ್ಜೆ 1,773 ಹೆಕ್ಟೇರ್, ಸೂರ್ಯಕಾಂತಿ 590 ಹೆಕ್ಟೇರ್, ಹತ್ತಿ 540 ಹೆಕ್ಟೇರ್ ಹಾಗೂ ಶೇಂಗಾ 115 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಮೆಕ್ಕೆಜೋಳದ ಬಿತ್ತನೆ ಗುರಿ 21,210 ಹೆಕ್ಟೇರ್ ಆಗಿದ್ದರೂ, ಮಳೆ ಕೊರತೆಯಿಂದ ಕೇವಲ 8,075 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ. ಬಿತ್ತನೆಯಾದ ಬೆಳೆಗಳಿಗೂ ನಂತರ ಸಮರ್ಪಕ ಮಳೆಯಾಗದೆ ರೈತರ ನಿರೀಕ್ಷೆ ಹುಸಿಯಾಗಿದೆ.
ರಾಮದುರ್ಗದಂತೆ ಸವದತ್ತಿ ತಾಲೂಕಿನಲ್ಲಿಯೂ ಮುಂಗಾರು ಮಳೆ ಸಮರ್ಪಕವಾಗಿ ಆಗಿಲ್ಲ. ರೈತರು ಸೋಯಾಬಿನ್, ಹತ್ತಿ, ಹೆಸರು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರೂ, ನಂತರ ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ 15 ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಲಿ
ಈ ಕುರಿತು ಈ ದಿನ.ಕಾಮ್ ಜತೆ ಭಾರತೀಯ ಕೃಷಿಕ ಸಮಾಜದ ಮುಖಂಡ ಸಿದ್ದಗೌಡ ಮೋದಗಿ ಮಾತನಾಡಿ, “ಸರ್ಕಾರ ಮುಖ್ಯಮಂತ್ರಿಗಳು ಹಾಗೂ ಜನಪ್ರತಿನಿಧಿಗಳ ಹಿಡಿತದಲ್ಲಿ ಇಲ್ಲ. ಸರ್ಕಾರದಲ್ಲಿ ಹಣವೂ ಇಲ್ಲ. ಶಾಸಕರು ಸಚಿವ ಸ್ಥಾನದ ಕಚ್ಚಾಟದಲ್ಲಿದ್ದಾರೆ. ಇದರಿಂದ ಸರಿಯಾಗಿ ಬರ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.
“ಬೆಳಗಾವಿ ಜಿಲ್ಲೆಯ ಒಟ್ಟು 15 ತಾಲೂಕುಗಳನ್ನೂ ಬರಪೀಡಿತವೆಂದು ಘೋಷಣೆ ಮಾಡಬೇಕು. ಉತ್ತರ ಕರ್ನಾಟಕದ ಬರಪೀಡಿತ ತಾಲೂಕುಗಳನ್ನೂ ಗುರುತಿಸಿ ರೈತರಿಗೆ ಅಗತ್ಯ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ಈ ಕುರಿತು ರಾಮದುರ್ಗ ತಾಲೂಕಿನ ರೈತ ಸಂಘಟನೆಯ ಮುಖಂಡ ಮಲ್ಲಿಕಾರ್ಜುನ ರಾಮದುರ್ಗ ಈ ದಿನ.ಕಾಮ್ ಜತೆ ಮಾತನಾಡಿ, “ರಾಮದುರ್ಗ ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಬೇಕಾಗಿ ರಾಜ್ಯ ಸರ್ಕಾರ, ಶಾಸಕರು ಹಾಗೂ ವಿರೋಧ ಪಕ್ಷಗಳಿಗೂ ಮನವಿ ಮಾಡಿದ್ದೆವು. ಆದರೆ ಸರ್ಕಾರ ಇನ್ನೂ ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಿಲ್ಲ” ಎಂದರು.
“ರೈತರು ಬೆಳೆದ ಕಬ್ಬು, ಮೆಕ್ಕೆಜೋಳ, ಹೆಸರು, ತೊಗರಿ ಸೇರಿದಂತೆ ಹಲವು ಬೆಳೆಗಳು ಸರಿಯಾಗಿ ಬಂದಿಲ್ಲ. ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ” ಎಂದು ಹೇಳಿದರು.
ರಾಮದುರ್ಗ ತಾಲೂಕಿನ ಕೃಷಿ ಅಧಿಕಾರಿಗಳು ಈ ದಿನ.ಕಾಮ್ ಜತೆ ಮಾತನಾಡಿ, “ರಾಮದುರ್ಗ ತಾಲೂಕು ಕೂಡ ಬರಪೀಡಿತವೆಂದು ಘೋಷಣೆಯಾಗಬೇಕಿತ್ತು. ಈ ಕುರಿತು ಮೇಲಧಿಕಾರಿಗಳ ಜತೆ ಚರ್ಚಿಸಲಾಗುತ್ತಿದೆ” ಎಂದು ತಿಳಿಸಿದರು.
“ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ” ಎಂದು ಕೃಷಿ ಅಧಿಕಾರಿಗಳು ಹೇಳಿದರು.
ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ರಾಮದುರ್ಗ ತಾಲೂಕು ಇನ್ನೂ ಬರಪೀಡಿತ ಪಟ್ಟಿಗೆ ಸೇರದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಸವದತ್ತಿಯಲ್ಲೂ ಮಳೆ ಕೊರತೆಯಿಂದ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲವೆಂಬ ಕಳವಳ ವ್ಯಕ್ತವಾಗಿದೆ.
ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವುದರಿಂದ ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ರೈತರು ಸರ್ಕಾರದ ಬರ ಘೋಷಣೆಯತ್ತ ಎದುರು ನೋಡುತ್ತಿದ್ದಾರೆ. ಈಗಾಗಲೇ ಶೇ.50ಕ್ಕೂ ಹೆಚ್ಚು ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ವಿಳಂಬ ಮಾಡದೆ ವಾಸ್ತವ ಪರಿಸ್ಥಿತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿದ್ದೀರಾ? UPI ಮೇಲಿನ ಶುಲ್ಕದ ನೆರಳು: ಜನರ ವಿಶ್ವಾಸವಿಲ್ಲದ ಡಿಜಿಟಲ್ ಕ್ರಾಂತಿ ಸಾಧ್ಯವೇ?
ಈ ಕುರಿತು ರಾಮದುರ್ಗ ಕ್ಷೇತ್ರದ ಶಾಸಕ ಅಶೋಕ ಪಟ್ಟಣ ಅವರು ಮುಂದಿನ ವಾರ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. 10 ದಿನಗಳಲ್ಲಿ ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಶಾಸಕರ ಈ ಭರವಸೆ ರೈತರಲ್ಲಿ ನಿರೀಕ್ಷೆ ಮೂಡಿಸಿದ್ದು, ಅಧಿಕಾರಿಗಳ ಸಭೆ ಹಾಗೂ ಮುಂದಿನ ಕ್ರಮಗಳು ಎಷ್ಟರ ಮಟ್ಟಿಗೆ ರೈತರ ಸಂಕಷ್ಟಕ್ಕೆ ಪರಿಹಾರ ನೀಡಲಿವೆ ಎಂಬುದನ್ನು ಕಾದು ನೋಡಬೇಕಿದೆ.




