ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದ್ದು, ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಣದ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಈ ದಿಢೀರ್ ಬೆಳವಣಿಗೆಯ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಬಣ ಬೆಂಬಲ ನೀಡಲಿದೆ ಎಂದು ಘೋಷಿಸಿದ್ದಾರೆ.
ಅಕ್ಟೋಬರ್ 6ರಂದು ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಹಿಂಪಡೆಯಲು ಸೆಪ್ಟೆಂಬರ್ 19 ಕೊನೆಯ ದಿನವಾಗಿತ್ತು. ಆದರೆ, ಶುಕ್ರವಾರವೇ (ಸೆ. 18) ಶಿಕ್ಷಕಿಯೂ ಆಗಿರುವ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ಅವರು ತಮ್ಮ ಪತಿಯೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದರು. ಈ ಭೇಟಿಯ ಕೆಲವೇ ಗಂಟೆಗಳಲ್ಲಿ ಅವರು ತಮ್ಮ ನಾಮಪತ್ರವನ್ನು ಅಧಿಕೃತವಾಗಿ ಹಿಂಪಡೆದರು. ಇದರಿಂದಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಬಣಕ್ಕೆ ಅಭ್ಯರ್ಥಿಯೇ ಇಲ್ಲದಂತಾಯಿತು.
ಇದನ್ನೂ ಓದಿ: ಮಮತಾ ಬೆಂಬಲಕ್ಕೆ ಕಾಂಗ್ರೆಸ್: ಮೋದಿಗೆ ಇಸಿಯಿಂದ ‘ಬರ್ತ್‌ಡೇ ಗಿಫ್ಟ್’ ಎಂದ ವೇಣುಗೋಪಾಲ್
ತಮ್ಮ ಅಭ್ಯರ್ಥಿ ರಂಗದಿಂದ ಹೊರಬಿದ್ದ ತಕ್ಷಣವೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಇಂಡಿಯಾ’ ಮೈತ್ರಿಕೂಟವನ್ನು ಬಲಪಡಿಸುವ ಉದ್ದೇಶದಿಂದ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ತಮ್ಮ ಬಣ ಪೂರ್ಣ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ಟಿಎಂಸಿಯ ಆಂತರಿಕ ಭಿನ್ನಮತ ಮತ್ತು ಪಕ್ಷದ ಮೇಲಿನ ಹಕ್ಕಿನ ಹೋರಾಟದ ಹಿನ್ನೆಲೆಯಲ್ಲಿ, ಭಾರತೀಯ ಚುನಾವಣಾ ಆಯೋಗವು (ಇಸಿ) ಟಿಎಂಸಿಯ ಸಾಂಪ್ರದಾಯಿಕ ‘ಜೋಡು ಹುಲ್ಲು-ಹೂವು’ ಚಿಹ್ನೆ ಹಾಗೂ ಪಕ್ಷದ ಮೂಲ ಹೆಸರನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆಯೋಗವು ಮಮತಾ ಬ್ಯಾನರ್ಜಿ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂದು ಹೆಸರಿಸಿ, ‘ಫುಟ್‌ಬಾಲ್ ಆಟಗಾರ’ ಚಿಹ್ನೆಯನ್ನು ನೀಡಿದೆ. ರೇಜಿನಗರ ಉಪಚುನಾವಣೆಗೆ ಸಂಬಂಧಿಸಿದ ಬೆಂಬಲದ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವುದಾಗಿ ಮಮತಾ ತಿಳಿಸಿದ್ದಾರೆ.




