‘ಎಡಿಟ್’ ಅಥವಾ ‘ಕಟ್ ಅಂಡ್ ಪೇಸ್ಟ್’ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವ ವೀಡಿಯೊ ತುಣುಕುಗಳು ಸಮಾಜದ ಸ್ವಾಸ್ಥ್ಯವನ್ನು ಯಾವ ಮಟ್ಟಿಗೆ ಕೆಡಿಸಬಹುದು ಎಂಬುದಕ್ಕೆ ತಿರುಮಕೂಡಲು ನರಸೀಪುರದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳು ಒಂದು ಉದಾಹರಣೆಯಾಗಿ ಚರ್ಚೆಯಾಗುತ್ತಿವೆ.
ಯಾವುದೇ ವಿಚಾರದ ಸಂಪೂರ್ಣ ಹಿನ್ನೆಲೆಯನ್ನು ತಿಳಿಯದೆ, ಅದರ ಒಂದು ಭಾಗವನ್ನು ಮಾತ್ರ ಕತ್ತರಿಸಿ, ತಿರುಚಿ ಅಥವಾ ನಿರ್ದಿಷ್ಟ ಅರ್ಥ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಈಗ ಹೊಸದೇನಲ್ಲ. ಅಪೂರ್ಣ ಮಾಹಿತಿಯನ್ನು ಸಂಪೂರ್ಣ ಸತ್ಯವೆಂಬಂತೆ ಬಿಂಬಿಸಿ, ಅದನ್ನು ಮತ್ತಷ್ಟು ಹಂಚಿಕೊಳ್ಳುವ ಮೂಲಕ ಸಾಮಾಜಿಕವಾಗಿ ಅಥವಾ ರಾಜಕೀಯವಾಗಿ ಲಾಭ ಪಡೆಯುವ ಪ್ರಯತ್ನಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನೇ ವ್ಯಂಗ್ಯವಾಗಿ ಕರೆಯಲಾಗುವ ‘ವಾಟ್ಸಾಪ್ ಯೂನಿವರ್ಸಿಟಿ’ ಸಂಸ್ಕೃತಿ ಸಾರ್ವಜನಿಕ ಚರ್ಚೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ.
ಸಾಮಾಜಿಕ ಜಾಲತಾಣಗಳು ಮಾಹಿತಿ ಹಂಚಿಕೊಳ್ಳುವ ವೇದಿಕೆಗಳಾಗಿರುವುದರ ಜೊತೆಗೆ, ಕೆಲವೊಮ್ಮೆ ತಪ್ಪು ಅರ್ಥೈಸುವಿಕೆ ಮತ್ತು ತಪ್ಪು ಮಾಹಿತಿಯ ವೇಗದ ಪ್ರಸರಣಕ್ಕೂ ಕಾರಣವಾಗುತ್ತಿವೆ. ಹೇಳಿದ್ದು ಒಂದು, ಕಾಣಿಸುವುದು ಇನ್ನೊಂದು ಎಂಬ ಭೀತಿ ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲಿ, ಲೈಕ್, ಕಾಮೆಂಟ್, ಶೇರ್ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಗೀಳು ಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ.

ಒಂದು ಸಮುದಾಯಕ್ಕೆ ಸಂಬಂಧವೇ ಇಲ್ಲದ ವಿಚಾರಕ್ಕೂ ಆ ಸಮುದಾಯದ ಮೇಲೆ ಕೋಪ ತಿರುಗಿಸುವುದು, ಆ ಕೋಪವನ್ನು ಮತ್ತಷ್ಟು ಕೆರಳಿಸುವ ರೀತಿಯಲ್ಲಿ ವೀಡಿಯೊಗಳನ್ನು ಹಂಚುವುದು, ಕೊನೆಗೆ ‘ಅಲ್ಲಿಗೇ ಹೋಗುತ್ತೇವೆ’ ಎಂಬ ಹಂತದ ಪ್ರತಿಕ್ರಿಯೆಗಳಿಗೆ ಕಾರಣವಾಗುವುದು ಕಟ್ ಅಂಡ್ ಪೇಸ್ಟ್ ವೀಡಿಯೊಗಳ ಅಪಾಯಕಾರಿ ಪರಿಣಾಮವನ್ನು ತೋರಿಸುತ್ತದೆ. ಇಂತಹ ಬೆಳವಣಿಗೆಗಳನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ನಿಲ್ಲಿಸುವುದು ನಾಗರಿಕ ಕರ್ತವ್ಯವಾಗಲಾರದು.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಚಾರ ಕಂಡ ತಕ್ಷಣ ಅದನ್ನು ನಂಬುವುದು ಅಥವಾ ಅದರ ಆಧಾರದ ಮೇಲೆ ಪ್ರತಿಕ್ರಿಯಿಸುವ ಬದಲು, ಅದರ ಸಂಪೂರ್ಣ ವೀಡಿಯೊ ಏನು ಹೇಳುತ್ತದೆ, ಘಟನೆ ನಡೆದ ಸಂದರ್ಭವೇನು, ಹೇಳಿಕೆಯ ಹಿನ್ನೆಲೆ ಏನು ಎಂಬುದನ್ನು ಪರಿಶೀಲಿಸುವುದು ಅಗತ್ಯ. ಸರಿ-ತಪ್ಪು ಯಾವುದೆಂಬುದನ್ನು ಅರಿತುಕೊಂಡ ನಂತರವೇ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದ್ದಾಗಿದೆ.
‘ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಜವಾಬ್ದಾರಿ’

ಈ ಹಿನ್ನೆಲೆಯಲ್ಲಿ ದಸಂಸ ರಾಜ್ಯ ಸಂಚಾಲಕ ದೇವಗಳ್ಳಿ ಸೋಮಶೇಖರ್ ಅವರು ‘ಈದಿನ.ಕಾಂ’ ಜೊತೆ ಮಾತನಾಡಿ, ಪ್ರಚಾರಕ್ಕಾಗಿ ಹಾಗೂ ಬಿಜೆಪಿ ಕೇಂದ್ರ ನಾಯಕರನ್ನು ಓಲೈಸುವ ಉದ್ದೇಶದಿಂದ ಸಣ್ಣಪುಟ್ಟ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಭೇದಭಾವ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ತರುವ ಪ್ರಯತ್ನ ಸಲ್ಲದು ಎಂದು ಅವರು ಹೇಳಿದರು.
ತಿರುಮಕೂಡಲು ನರಸೀಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧನಂಜಯ್ ಅವರು ಗಣೇಶೋತ್ಸವದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿವಿಧ ಸಮುದಾಯಗಳ ಮುಖಂಡರನ್ನು ಕರೆದು ಸಭೆ ನಡೆಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಸೂಚನೆ ನೀಡಿದ್ದಾರೆ. ಮೆರವಣಿಗೆಯ ಸಂದರ್ಭದಲ್ಲಿ ಮಸೀದಿ ಸೇರಿದಂತೆ ಧಾರ್ಮಿಕ ಸ್ಥಳಗಳ ಸಮೀಪ ಪ್ರಚೋದನಕಾರಿ ವರ್ತನೆ, ಘೋಷಣೆ, ಪಟಾಕಿ ಸಿಡಿಸುವುದು ಅಥವಾ ಇತರರಿಗೆ ಅಸಮಾಧಾನ ಉಂಟುಮಾಡುವ ರೀತಿಯಲ್ಲಿ ನಡೆದುಕೊಳ್ಳದಂತೆ ತಿಳಿಸಿರುವುದು ಕಾನೂನು-ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕೆಯ ಕ್ರಮವಾಗಿದೆ. ಆದರೆ, ಈ ವಿಚಾರವನ್ನು ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
‘ಪೊಲೀಸರ ಮುನ್ನೆಚ್ಚರಿಕೆಯನ್ನು ರಾಜಕೀಯಗೊಳಿಸಬಾರದು’

ಹಿರಿಯರಾದ ಕೊತ್ತವಾಡಿ ಮಹದೇವ್ ಮಾತನಾಡಿ, ಕಾನೂನು ಉಲ್ಲಂಘನೆಯಾಗಬಾರದು ಎಂಬ ದೃಷ್ಟಿಯಿಂದ ಇನ್ಸ್‌ಪೆಕ್ಟರ್ ಧನಂಜಯ್ ಅವರು ಪೀಸ್ ಕಮಿಟಿ ಸಭೆ ನಡೆಸಿ, ಕಾನೂನಾತ್ಮಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಹಿಂದೆ ಹನುಮ ಜಯಂತಿ ಸಂದರ್ಭದಲ್ಲಿ ನಡೆದ ಘಟನೆಗಳು ಮತ್ತೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ. ಆ ಹಿನ್ನೆಲೆಯಲ್ಲಿ ಮಾತನಾಡುವುದು, ಸೂಚನೆ ನೀಡುವುದು ಅಥವಾ ಮುನ್ನೆಚ್ಚರಿಕೆ ವಹಿಸುವುದರಲ್ಲಿ ತಪ್ಪೇನಿಲ್ಲ. ಮುನ್ನೆಚ್ಚರಿಕೆ ವಹಿಸದಿದ್ದಾಗ ಪ್ರಶ್ನಿಸಬೇಕು; ಆದರೆ ತಮ್ಮ ಕರ್ತವ್ಯದ ಅರಿವಿನಲ್ಲಿ ಅಧಿಕಾರಿಗಳು ಕೈಗೊಂಡ ಕ್ರಮವನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುವುದು ಶೋಚನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಟೀಕೆ ವ್ಯಕ್ತಪಡಿಸಿದ ಅವರು, “ಪ್ರತಾಪ್ ಸಿಂಹ ಜನಪ್ರತಿನಿಧಿ ಎನಿಸಲು ಅರ್ಹರಲ್ಲ” ಎಂದು ಟೀಕಿಸಿದರು. ಪೊಲೀಸ್ ಅಧಿಕಾರಿಯ ಮಾತನ್ನು ಪೂರ್ಣವಾಗಿ ಕೇಳಿಸಿಕೊಳ್ಳದೆ ಅವರನ್ನು ವಿಲನ್‌ನಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿರುವುದು ಬಿಜೆಪಿಗರ ಉದ್ದೇಶವೇನು ಎಂಬುದನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮಾಧ್ಯಮ ಹೇಳಿಕೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಸೂಚನೆ ನೀಡುವುದು ತಪ್ಪಲ್ಲ; ಆ ಹೇಳಿಕೆಯನ್ನು ತಿರುಚಿ ಬಿಂಬಿಸುವುದೇ ತಪ್ಪು ಎಂದು ಬೇಸರ ವ್ಯಕ್ತಪಡಿಸಿದರು.
‘ದಲಿತ ಅಧಿಕಾರಿ ಎಂಬ ಕಾರಣಕ್ಕೆ ಗುರಿಯಾಗಿಸಿದ್ದಾರೆಯೇ?’

ದಸಂಸ ಜಿಲ್ಲಾ ಸಂಯೋಜಕ ಕಾರ್ಯಬಸವಣ್ಣ ಮಾತನಾಡಿ, ಗಣೇಶ ಹಬ್ಬದ ನೆಪದಲ್ಲಿ ಪೊಲೀಸ್ ಅಧಿಕಾರಿ ಹೇಳಿದ ಮಾತನ್ನೇ ತಿರುಚಿದ ವೀಡಿಯೊ ತುಣುಕನ್ನು ಬಳಸಿ ಅವರನ್ನು ಅವಾಚ್ಯವಾಗಿ ನಿಂದಿಸುವುದು ಸರಿಯಲ್ಲ. “ದಲಿತ ಅಧಿಕಾರಿ ಎಂಬ ಕಾರಣಕ್ಕಾಗಿಯೇ ಅವರನ್ನು ಗುರಿಯಾಗಿಸಲಾಗುತ್ತಿದೆಯೇ?” ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು. ಪ್ರತಾಪ್ ಸಿಂಹ ಅವರು ಏಕವಚನದಲ್ಲಿ ಸಾಮಾಜಿಕ ಮಾಧ್ಯಮದ ಮುಂದೆ ‘ಏಯ್’ ಎಂದು ಸಂಬೋಧಿಸುವುದು ಹಾಗೂ ಪೊಲೀಸ್ ಠಾಣೆಗೆ ನುಗ್ಗುವ ಧಮ್ಕಿ ನೀಡುವ ರೀತಿಯಲ್ಲಿ ಮಾತನಾಡುವುದು ಕಾನೂನಾತ್ಮಕವಾಗಿ ಹೇಗೆ ಸರಿ ಎಂದು ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿ ಧನಂಜಯ್ ಮತ್ತು ಪ್ರತಾಪ್ ಸಿಂಹ ಅವರ ಮಾತುಕತೆಯನ್ನು ಗಮನಿಸಿದರೆ, ಮಾನಹಾನಿ ಹಾಗೂ ಧಮ್ಕಿ ಹಾಕುವಂತಹ ಪದಪ್ರಯೋಗಗಳು ಬಹಿರಂಗವಾಗಿಯೇ ಕಾಣಿಸುತ್ತವೆ. ಪ್ರತಿಭಟನೆಯ ಸಂದರ್ಭದಲ್ಲಿಯೂ ಇಂತಹ ವರ್ತನೆ ನಡೆದಿದೆ ಎಂದು ಅವರು ಆರೋಪಿಸಿದರು. ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಒಂದು ಕಡೆಯದ್ದೇ ತಪ್ಪು ಎಂದು ಹೇಳಿ, ಇನ್ನೊಂದು ಕಡೆ ಅದಕ್ಕಿಂತಲೂ ಮೀರಿದ ತಪ್ಪು ಅಥವಾ ವರ್ತನೆಯನ್ನು ತೋರಿಸುವುದು ಹೇಗೆ ಸರಿ? ಪೊಲೀಸ್ ಠಾಣೆಗೆ ನುಗ್ಗಲು ಯಾರ ಅಧಿಕಾರ ನೀಡಿದ್ದಾರೆ? ಅಧಿಕಾರಿಗಳ ಕೆಲಸದಲ್ಲಿ ಹಸ್ತಕ್ಷೇಪ ಏಕೆ? ಎಂಬ ಪ್ರಶ್ನೆಗಳನ್ನು ಅವರು ಮುಂದಿಟ್ಟರು. ಇಡೀ ಬೆಳವಣಿಗೆಯಲ್ಲಿ ರಾಜಕೀಯ ದುರುದ್ದೇಶವಿದೆ ಎಂದು ಆರೋಪಿಸಿದ ಅವರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕೆಲಸವೇ ಹೊರತು ಮಾಜಿ ಸಂಸದ ಪ್ರತಾಪ್ ಸಿಂಹ ಅಥವಾ ಬಿಜೆಪಿಗರ ಕೆಲಸವಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
‘ಅಧಿಕಾರಿಯನ್ನು ರಾಜಕೀಯವಾಗಿ ಬಳಸುವುದು ಸರಿಯಲ್ಲ’

ಜಾನಪದ ಕಲಾವಿದ ಚೆಲುವರಾಜ್ ಮಾತನಾಡಿ, ಒಬ್ಬ ಅಧಿಕಾರಿಯನ್ನು ರಾಜಕೀಯವಾಗಿ ಬಳಸಿ ತುಳಿಯುವ ಪ್ರಯತ್ನ ಬಿಜೆಪಿಗರಿಗೆ ಶೋಭೆ ತರುವುದಿಲ್ಲ. ಬಿಜೆಪಿ ಮುಖಂಡರು ಈ ವಿಚಾರದಲ್ಲಿ ಮುಗಿಬೀಳುವುದಕ್ಕೆ ಅರ್ಥವಿಲ್ಲ ಎಂದು ಹೇಳಿದರು. ಯಾವುದೇ ಹಬ್ಬ, ಹರಿದಿನ, ಆಚರಣೆ, ಮೆರವಣಿಗೆ ಅಥವಾ ರ್ಯಾಲಿಯಾಗಿರಲಿ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಾನೂನು-ಸುವ್ಯವಸ್ಥೆಯ ಭಾಗವಾಗಿದೆ. ಅದರಲ್ಲಿ ಅಧಿಕಾರಿಗಳು ಯಾರೇ ಆಗಿರಲಿ, ಸೂಚನೆ ಮತ್ತು ಸಲಹೆ ನೀಡುವುದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ಅವರು ಹೇಳಿದರು.
ಅಧಿಕಾರಿಗಳ ಸೂಚನೆಗಳನ್ನು ಸಾರ್ವಜನಿಕರಲ್ಲಿ ವಿಶ್ವಾಸ ಮೂಡುವ ರೀತಿಯಲ್ಲಿ ಸ್ವೀಕರಿಸಿ, ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಅಧಿಕಾರಿಗಳು ಹೇಳಿದ್ದೇ ತಪ್ಪು ಎನ್ನುವುದು ಸರಿಯಲ್ಲ; ಅದು ಅವರ ಕರ್ತವ್ಯ. ಹಿಂದಿನ ಸುಳ್ವಾಡಿ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವುದನ್ನೂ ಅವರು ಪ್ರಸ್ತಾಪಿಸಿದರು. ಗಣೇಶೋತ್ಸವಕ್ಕೆ ಚಿಕ್ಕ ಮಕ್ಕಳು ಸೇರಿದಂತೆ ಅನೇಕರು ಆಸಕ್ತಿಯಿಂದ ಆಗಮಿಸುವುದರಿಂದ ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಧಿಕಾರಿಗಳ ಯೋಚನಾ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
“ಇದೆಲ್ಲಾ ಬಿಜೆಪಿ ಮುಖಂಡರಿಗೆ, ಪ್ರತಾಪ್ ಸಿಂಹರಿಗೆ ಕೇಳಿಸುವುದಿಲ್ಲವೇ? ಕಾಣಿಸುವುದಿಲ್ಲವೇ?” ಎಂದು ಪ್ರಶ್ನಿಸಿದ ಅವರು, ಅನಗತ್ಯ ವಿಚಾರವನ್ನು ಮುಂದುವರಿಸಿ ಶಾಂತಿ ಮತ್ತು ನೆಮ್ಮದಿ ಕೆಡಿಸುವುದೇ ಉದ್ದೇಶವಾಗಬಾರದು. ದಲಿತ ಅಧಿಕಾರಿ ಎಂಬ ಕಾರಣಕ್ಕೆ ಬಿಜೆಪಿ ಮುಖಂಡರು ಹರಿಹಾಯ್ದಿರುವುದು ಸರಿಯಲ್ಲ ಎಂದು ಹೇಳಿದರು.
‘ಪೊಲೀಸರ ಮೇಲೆ ಸವಾರಿ ಮಾಡುವುದು ಸರಿಯಲ್ಲ’

ರೈತ ಮುಖಂಡ ರಾಚಪ್ಪ ಮಾತನಾಡಿ, ಇತ್ತೀಚೆಗೆ ದಲಿತರ ಅಸ್ತಿತ್ವ ಮತ್ತು ಅಸ್ಮಿತೆಗೆ ಕೈಹಾಕುತ್ತಿರುವುದು ಬೇಸರ ತರಿಸುತ್ತಿದೆ. ತಾಲ್ಲೂಕಿನಲ್ಲಿ ಉತ್ತಮವಾಗಿ ಕೆಲಸ ಮಾಡಿರುವ ಪೊಲೀಸ್ ಅಧಿಕಾರಿ, ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜವಾಬ್ದಾರಿಯಿಂದ ಮುನ್ನೆಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ. ಅದನ್ನು ರಾಜಕೀಯ ವಿಚಾರವಾಗಿ ಪರಿವರ್ತಿಸುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದರು. ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಎಲ್ಲರಿಗೂ ಅನ್ವಯಿಸುವ ಪ್ರಕ್ರಿಯೆ. ನಾಳೆ ಬಿಜೆಪಿ ವತಿಯಿಂದ ಮೆರವಣಿಗೆ ನಡೆಸಿದರೂ ಅನುಮತಿ ಪಡೆಯಬೇಕು. ಪೊಲೀಸರು ಭದ್ರತೆ ಒದಗಿಸಬೇಕು ಹಾಗೂ ಅವರು ಸೂಚಿಸುವ ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಇಂತಹ ಕಾನೂನು-ಸುವ್ಯವಸ್ಥೆಯ ಕ್ರಮವನ್ನೇ ತಪ್ಪು ಎಂದು ಹೇಳಿ ಪೊಲೀಸರ ಮೇಲೆ ಸವಾರಿ ಮಾಡುವುದು ಸರಿಯಲ್ಲ ಎಂದು ರಾಚಪ್ಪ ಹೇಳಿದರು.
‘ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’

ಸ್ಥಳೀಯರಾದ ಮಹಮ್ಮದ್ ಸಾಧಿಕ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ವಿಚಾರವೊಂದು ಚರ್ಚೆಯಾಗುತ್ತಿದೆ. ಆದರೆ ಸ್ಥಳೀಯವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಗಲಾಟೆ ಮಾಡುವ ಅಗತ್ಯವಿಲ್ಲ. ಎಲ್ಲರೂ ಸಂತೋಷದಿಂದ ಗಣೇಶ ಹಬ್ಬದಲ್ಲಿ ಭಾಗವಹಿಸಿ ಹೊಂದಾಣಿಕೆಯಿಂದ ಇರುವಾಗ ಬೇಡದ ವಿಚಾರವನ್ನು ಮಧ್ಯೆ ತರುವುದು ಅಗತ್ಯವಿಲ್ಲ ಎಂದರು.
“ಮಸೀದಿ ಹತ್ತಿರ ಬರಬಾರದು ಎಂದು ಯಾರು ಹೇಳಿಲ್ಲ. ಯಾರು ಬೇಕಾದರೂ ಮಸೀದಿಗೆ ಬರಲಿ, ನಾವು ಕೂಡ ಬರುತ್ತೇವೆ. ಖುಷಿಯಾಗಿ ಇರೋಣ” ಎಂದು ಹೇಳಿದ ಅವರು, ಸಮುದಾಯಗಳ ನಡುವಿನ ಪರಸ್ಪರ ಗೌರವಕ್ಕೆ ಧಕ್ಕೆಯಾಗುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದರು. ‘ನಾವೆಲ್ಲರೂ ಒಂದೇ. ಇವತ್ತಿಗೂ, ನಾಳೆಗೂ ಹೀಗೆಯೇ ಅನ್ಯೋನ್ಯವಾಗಿ ಇರೋಣ’ ಎಂದು ಅವರು ಕರೆ ನೀಡಿದರು.
ಕಟ್ ಅಂಡ್ ಪೇಸ್ಟ್‌ಗಿಂತ ಪೂರ್ಣ ಸತ್ಯ ಮುಖ್ಯ
ತಿರುಮಕೂಡಲು ನರಸೀಪುರದ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಒಂದು ಮುಖ್ಯ ಪ್ರಶ್ನೆ ಮತ್ತೆ ಎದುರಾಗುತ್ತದೆ-ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಪ್ರತಿಯೊಂದು ವೀಡಿಯೊವೂ ಸಂಪೂರ್ಣ ಸತ್ಯವೇ?. ವೀಡಿಯೊದ ಒಂದು ತುಣುಕು ಮಾತ್ರ ವೈರಲ್ ಆಗುವುದರಿಂದ ಅದರ ಹಿಂದಿನ ಸಂದರ್ಭ, ಮೊದಲು ಮತ್ತು ನಂತರ ನಡೆದ ಮಾತುಕತೆ, ಅಧಿಕಾರಿಯ ಉದ್ದೇಶ ಹಾಗೂ ಸಭೆಯ ಸಂಪೂರ್ಣ ಚರ್ಚೆ ಸಾರ್ವಜನಿಕರ ಗಮನಕ್ಕೆ ಬಾರದಿರುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ವೀಡಿಯೊ ಅಥವಾ ಹೇಳಿಕೆಯನ್ನು ಆಧರಿಸಿ ಸಮುದಾಯಗಳ ನಡುವೆ ಅನುಮಾನ, ದ್ವೇಷ ಅಥವಾ ಸಂಘರ್ಷ ಉಂಟಾಗುವ ಮುನ್ನ ಅದರ ಮೂಲವನ್ನು ಪರಿಶೀಲಿಸುವುದು ಅತ್ಯಗತ್ಯ.

ವಿಶೇಷವಾಗಿ ಹಬ್ಬ-ಹರಿದಿನ, ಮೆರವಣಿಗೆ, ಧಾರ್ಮಿಕ ಆಚರಣೆಗಳಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ನೀಡುವ ಮುನ್ನೆಚ್ಚರಿಕೆಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವುದು, ಅದೇ ವೇಳೆ ಅಧಿಕಾರಿಗಳೂ ತಮ್ಮ ಸೂಚನೆಗಳನ್ನು ಸ್ಪಷ್ಟವಾಗಿ ಮತ್ತು ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅನ್ವಯಿಸುವ ರೀತಿಯಲ್ಲಿ ನೀಡುವುದು ಮುಖ್ಯ. ಸಾಮಾಜಿಕ ಜಾಲತಾಣದಲ್ಲಿ ಒಂದು ‘ಶೇರ್’ ಮಾಡುವ ಮೊದಲು ಒಂದಿಷ್ಟು ಪರಿಶೀಲನೆ, ಒಂದು ‘ಕಾಮೆಂಟ್’ ಮಾಡುವ ಮೊದಲು ಸ್ವಲ್ಪ ಯೋಚನೆ, ಒಂದು ‘ವೀಡಿಯೊ’ ವೈರಲ್ ಮಾಡುವ ಮೊದಲು ಅದರ ಸಂಪೂರ್ಣ ಹಿನ್ನೆಲೆ ತಿಳಿದುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ.
ಈ ವಿಶೇಷ ವರದಿ ಓದಿದ್ದೀರಾ? ಗ್ರೌಂಡ್ ರಿಪೋರ್ಟ್ | ಪೊಲೀಸ್ ಸೂಚನೆ ಸುತ್ತ ವಿವಾದ: ಶಾಂತಿ ಕಾಪಾಡುವ ಕರ್ತವ್ಯಕ್ಕೆ ರಾಜಕೀಯ ಬಣ್ಣ ಬೇಡವೆಂದ ಸ್ಥಳೀಯರು
‘ಕಟ್ ಅಂಡ್ ಪೇಸ್ಟ್’ಮಾಡಿದ ಕೆಲವೇ ಸೆಕೆಂಡುಗಳ ವೀಡಿಯೊ ಒಂದು ಕ್ಷಣದ ಕುತೂಹಲವನ್ನು ತಣಿಸಬಹುದು; ಆದರೆ, ಅದರ ಪರಿಣಾಮವಾಗಿ ಹಾಳಾಗುವ ಸಾಮಾಜಿಕ ಸಾಮರಸ್ಯವನ್ನು ಮರಳಿ ಕಟ್ಟುವುದು ಅಷ್ಟು ಸುಲಭವಲ್ಲ. ತಿರುಮಕೂಡಲು ನರಸೀಪುರದ ಜನಜೀವನದ ಮೂಲವಾಗಿರುವ ಸಹಬಾಳ್ವೆ, ಪರಸ್ಪರ ಗೌರವ ಮತ್ತು ಶಾಂತಿ ಯಾವುದೇ ರಾಜಕೀಯ ಅಥವಾ ಸಾಮಾಜಿಕ ಮಾಧ್ಯಮದ ಕ್ಷಣಿಕ ಪ್ರಚಾರಕ್ಕಿಂತ ದೊಡ್ಡದು. ಅದನ್ನು ಕಾಪಾಡುವ ಜವಾಬ್ದಾರಿ ಅಧಿಕಾರಿಗಳಷ್ಟೇ ಅಲ್ಲ, ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು, ಮಾಧ್ಯಮಗಳು ಹಾಗೂ ಪ್ರತಿಯೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರ ಮೇಲೂ ಇದೆ.




