ರಾಣೆಬೆನ್ನೂರು ಸೀಮೆಯ ಕನ್ನಡ | ‘ಟೀಸೀನೂ ಬ್ಯಾಡ, ನೀರಾವರಿನೂ ಬ್ಯಾಡ…’

Date:

"ಒಂದು ವಾರದ ಮ್ಯಾಲ ಆತು. ಪೀಕೆಲ್ಲ ಒಣಗಾಕ ಹತ್ಯಾವು. ಏಳು ತಾಸು ಕರೆಂಟ್ ಕೊಡ್ತೀವಿ ಅಂತಾರ, ಒಂತಾಸು ಲೇಟಾಗಿನ ಹಾಕ್ತಾರ; ಎರಡಕ್ಕ ಅಂದರ ಮೂರಕ್ಕ ಹಾಕ್ತಾರ, ಹತ್ತಕ್ಕ ಅಂದರ ಹನ್ನೊಂದಕ್ಕ ಹಾಕ್ತಾರ. ಮತ್ತ ಅದರಾಗ ಹದಿನೆಂಟ್ ಸಲ ಹೋಗೋದು ಬರದು... ಹೀಂಗಾದ್ರ ಹೆಂಗಪಾ ನೀರ ಹಾಸೋದು!"

“ಈ ಕರೆಂಟಿನ್ ಸಲ್ವಾಗಿ ಜೀವನ ಬ್ಯಾಸರಾಗಿ ಹೋತೋ ಶಿವಣ್ಣ… ನೀರಾವರಿನೂ ಬ್ಯಾಡ, ನಿದ್ದೀಗೆಡಾದೂ ಬ್ಯಾಡ. ಮಳೀಗಾಲ್ದ ಪೀಕು ಅಷ್ಟ ಹಾಕ್ಕೆಂಡು ಆರಾಮಿರೋದು ಬೇಸಿ ನೋಡಪ…” ವಾರದಿಂದ ಕಾಡುತ್ತಲೇ ಇದ್ದ ಕರೆಂಟಿನಿಂದ ರೋಸಿ ಹೋಗಿದ್ದ ಸಿದ್ದ ಬೇಸರದಲ್ಲೇ ಹೇಳಿದ‌.

“ಇದೊಂದು ಸಲ ಫ್ಯೂಜು ಹಾಕ್ಕನೂ ನಿಂತ್ರ ನಿಲ್ಲಲಿ. ಹೋದ್ರ ಹೋಗಲಿ; ನಾಳೆ ಎಲ್ಲಾರೂ ಸೇರಿ ಕೆಇಬಿಗೆ ಹೋಗಿ ಇಂಜಿನೀಯರನ್ನ ಭೇಟ್ಟಿಯಾಗೋಣು. ನಮಗ ಇನ್ನೊಂದು ಟಿ.ಸಿ ಬೇಕ್ರೀ ಅಂತ ಕೇಳಿ ಬರೋಣು,” ಅಂದ ಶಿವಪ್ಪ.

“ರೊಕ್ಕ ಹಾಕಾಕ ಗಟ್ಟಿ ಇದ್ರ ಅಲ್ಲಿಗ ಹೋಗ್ರೀ. ಸುಮ್ಮಕ ಖಾಲೀ ಕೈಯ್ಲಿ ಹೋಗಿ ಕಪಾಳಕ ಹೊಡಿಸ್ಕೆಂಡ್ ಬರಬ್ಯಾಡ್ರಿ,” ತಮ್ಮಣ್ಣ ಸ್ವಲ್ಪ ನಿಷ್ಟುರವಾಗಿಯೇ ಹೇಳಿದ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಹೆಚ್ಚು ಕಡಿಮೀ ಒಂದು ವಾರದ ಮ್ಯಾಲ ಆತು. ಇದ ಕತೀ ಆತು. ಪೀಕೆಲ್ಲ ಒಣಗಾಕ ಹತ್ಯಾವು. ಏಳು ತಾಸು ಕರೆಂಟ್ ಕೊಡ್ತೀವಿ ಅಂತಾರ, ಒಂತಾಸು ಲೇಟಾಗಿನ ಹಾಕ್ತಾರ; ಎರಡಕ್ಕ ಅಂದರ ಮೂರಕ್ಕ ಹಾಕ್ತಾರ, ಹತ್ತಕ್ಕ ಅಂದರ ಹನ್ನೊಂದಕ್ಕ ಹಾಕ್ತಾರ. ಮತ್ತ ಅದರಾಗ ಹದಿನೆಂಟ್ ಸಲ ಹೋಗೋದು ಬರದು… ಹೀಂಗಾದ್ರ ಹೆಂಗಪಾ ನೀರ ಹಾಸೋದು!” ಎಂದು ಗಂಗ್ಯಾ ಸಿಟ್ಟಲ್ಲೇ ಮಿಡುಕಿದ.

“ಅದ್ರಾಗ ಮೂರ್ನಾಲ್ಕು ಶಿಫ್ಟು ಮಾಡ್ಯಾರ. ಒಂದೊಂದು ಶಿಫ್ಟಿಗೂ ನಮ್‌-ನಮ್ ಊಟ, ನಿದ್ದಿ, ಕೆಲಸ ಬಗಸೀ ಎಲ್ಲಾನೂ ಅದಕ ಹೊಂದಿಸ್ಕೆಬೇಕು. ರಾತ್ರಿ ಅಂದರ ರಾತ್ರಿ, ಮಧ್ಯಾಹ್ನ ಅಂದ್ರ ಮಧ್ಯಾಹ್ನ! ರಾತ್ರಿ ಬಂದು ಕತ್ತಲದಾಗ ಗುದಮುರಗಿ ಹಾಕ್ಕದು. ಮತ್ತೊಂದು ವಾರ ಮಧ್ಯಾಹ್ನಕ ಬಂದು ಕೆಟ್ಟ ಬಿಸಿಲಾಗ ಶಿವ ಶಿವಾ ಅನ್ನೋದು, ಇನ್ನೊಂದು ವಾರ ಬೆಳ್‌ಬೆಳಿಗ್ಗೇನ ಕಪ್ ಚಾ ಕುಡ್ದ ಖಾಲಿ ಹೊಟ್ಟೀಲೆ ಓಡಿಬರದು. ಯಾವಾನಿಗೆ ಬೇಕಪಾ ಈ ಕರ್ಮ ಅಂತೀನಿ…” ಸಿದ್ಧ ತನ್ನ ಬ್ಯಾಸರಕೀನ ಮತ್ತೂ ಮುಂದುವರಿಸಿದ.

“ಹಂಗಾದ್ರ ತಡೀರೀ… ಈಗ ಬೆಳಿಗ್ಗೆ ಎಲ್ಲಾರೂ ಸೇರೇವೀ ಸೀದಾ ಕೆಇಬಿಗೆ ಹೋಗಿ ಬಂದ ಬಿಡಣು,” ಶಿವಪ್ಪ ಏನೋ ಒಂದ್ ನಿರ್ಧಾರಕ್ಕೆ ಬಂದಂತಿತ್ತು.

“ಆಗಲೇ ಎಂಟು ಗಂಟೇ ಆತು. ಬೆಳಿಗಿನ್ ಜಾವ ಮೂರಕ್ಕ ಕರೆಂಟು ಬರ್ತೈತೀ ಅಂತ ಎರಡಕ್ಕ ಎದ್ದು ಹೊಲಕ್ಕ ಬಂದೀವೀ. ನೆಟ್ಟಗ ಎರಡು ಸಾಲು ತೊಯ್ದಿಲ್ಲ. ಬರೇ ರಾಡ್ ಹಾರೋದು, ಫ್ಯೂಜು ಸುಡೋದು ಇದಾ ಕತೀ ಆತು. ಇನ್ನೂ ಒಂದ್ ಕಪ್ ಚಾ ಸೈತ ಕುಡದಿಲ್ಲ. ನಾನಂತೂ ಮನೀಗೆ ಹೋಗಿ ತಣ್ಣಗ ಒಂತಾಸು ಮಕ್ಕಂತೇನಪಾ. ನೀವೇನರ ಮಾಡ್ಕೆರಿ,” ಒಡಕ್ ಬಾಯಿ ಕರಿಯಾ ಅಪಸ್ವರಾ ಹಾಡೇಬಿಟ್ಟ.

“ಲೇ ಕರ್ಯಾ… ನೀ ಎದಕ ಗಟ್ಟಿ ಅದೀಲೇ, ರೊಕ್ಕ ಹಾಕಾಕೂ ವಲ್ಲಿ, ನೀರು ಹಾಸಾದು ಬಿಡವಲ್ಲಿ. ಬ್ಯಾರೇರ ಹಾಸಿಕೊಟ್ಟ್ರ ಮಕ್ಕಣಾಕ ಮುಂದ್ ಅದೀದಿ. ಎಲ್ಲಾರೂ ಬಡದಾಡಿ ಹೊಸ ಟಿ.ಸಿ ಹಾಕಿಸಿಕೊಂಡ್ ಬಂದ್ರ ಮೊದಲು ನೀರು ಹಾಸಿಗೇನಂವಾ ನೀನ. ಒಂದ್‌ಕರ ಗಟ್ಪಿ ಆಗಲೇ,” ಗಂಗ್ಯಾ ಕರ್ಯಾನ ಮೇಲೆ ಹರಿಹಾಯ್ದ.

“ಸುಮ್ಮನ ಯಾಕ ನಾವ್ ನಾವ ಜಗಳಾಡೋದು ಆ ಇಂಜಿನೀಯರ್ಗ ಫೋನು ಮಾಡಿ ಕೇಳ್ರೀ. ಅವರೇನು ಅಂತಾರ ಕೇಳ್ಕೆಂಡು ಮಂದುವರೀಯೋಣು,” ಅಂತ ಅವರೆಲ್ಲರಿಗೂ ಹಿರಿಯನಾಗಿದ್ದ ಬಸಪ್ಪಜ್ಜ ಸಲಹೆ ನೀಡಿದ್ದು ಉಳಿದವರಿಗೂ ಸಮ ಅನುಸ್ತು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ಕಲಬುರಗಿ ಸೀಮೆ | ಮಾತು ಮುಗಿವಷ್ಟರಲ್ಲಿ ಅವಳ ಮಗಳು ‘ಮಮ್ಮಿ ಮೈಯಾಗ ದೇವರು ಬರತಾರ’ ಅಂದಳು!

ಶಿವಪ್ಪ ಇಂಜಿನೀಯರಿಗೆ ಫೋನಾಯಿಸಿ, “ಇದು ನಮ್ಮದು ನೂರರ ಟಿ.ಸಿ ಐತ್ರೀ. ಆದ್ರ ಇದಕ ಬೋರವೆಲ್ಲು ಹದಿನಾರು ಅದವ್ರೀ! ಲೋಡು ಭಾಳಾ ಆಗೀ ಬರೇ ರಾಡು ಹಾರತೈತ್ರಿ, ಇಲ್ಲ ಫ್ಯುಜು ಸುಡತೈತ್ರಿ. ಅದೂ ಇಲ್ಲಾಂದ್ರ ನಮ್ಮವು ಯಾದರ ಒಂದ್ ಮಿಶನ್ ಸುಟ್ಟರ್ತೈತ್ರೀ. ನಮಗಂತೂ ಈ ಟಿ.ಸಿ ಸಲುವಾಗಿ ಸಾಕಾಗಿ ಹೋಗೇತೀ. ರೊಕ್ಕ ಹಾಕಿ-ಹಾಕಿ ನಾವ್ ಸಾಯೋದ್ ಒಂದ್ ಬಾಕೀ ಉಳದೈತಿರಿ. ಇನ್ನೊಂದು ಟಿ.ಸಿ ಕೊಡ್ರಿ ಅಂತ ಕೇಳಿ ಎರಡು ವರ್ಷ ಆತು.  ಊಂ-ಊಂ ಅನಕೋಂತನ ಮೊದಲಿನ ಸಾಹೇಬ್ರು ವರ್ಗ ಆಗಿ ಹೋದ್ರು, ಈಗ ನೀವರ ಸ್ವಲಪ ಕಣ್ ತೆರೀರಿ. ನಮ್ ಜೀವ ಉಳಿಸ್ರೀ,” ಎಂದು ಟಿ.ಸಿ ಸಮಾಚಾರವನ್ನು ಅರುಹಿದ.

ಆ ಕಡೀಯಿಂದ ಇಂಜಿನೀಯರು, “ಸರೀ, ಹೌದು-ಅದು ನನ್ನ ಗಮನಕ್ಕೂ ಬಂದೈತೀ ಯಜಮಾನ್ರ… ನಮ್ ಕಂಟ್ರಾಕ್ಟರ್‌ಗ ಹೇಳಿ ಕಳಿಸ್ತೀನಿ. ಅಂವಗ ಎಲ್ಲಾ ತೋರ್ಸರೀ‌. ಅಂವಾ ಎಸ್ಟೀಮೇಟ್ ಮಾಡಿ ಏನ್ ಹೇಳ್ತಾನ ನೋಡಿ, ಅವನ ಕೂಡ ಮಾತಾಡಿ ಸರಿ ಮಾಡ್ಕೆರಿ. ನಿಮಗ ಇನ್ನೊಂದು ಟಿ.ಸಿ.ನೂ ಬರ್ತದ, ನಿಮ್ಮ ಸಮಸ್ಯೇನೂ ಸಾಲ್ವ್ ಆಗ್ತದ,” ಎಂದರು.

“ಊಂ ಕಳಸ್ರೀ ಹಂಗಾದ್ರ… ನಾವಿಲ್ಲೇ ಟಿ.ಸಿ ತಾವನ ಎಲ್ಲಾ ರೈತರೂ ಸೇರೇವೀ,” ಅಂದು ಶಿವಪ್ಪ ಫೋನ್ ಕಟ್ ಮಾಡಿ ಉಳಿದವರ ಮಕಾ ನೋಡ್ದ.

“ಬಂದರ ಬರ್ಲಿ ಬಿಡ್ರೀ… ಏನರ ಒಂದು ತೀರ್ಮಾನಕ್ಕ ಬರೋಣು. ಇದು ಹೀಂಗ್ ಬಿಟ್ಟಂಕತ ಹೋದರ ಬಗೀಹರಿಯೊಲ್ಲ,” ಎಂದು ಅವರೂ ಸಮ್ಮತಿಯ ಮಾತನಾಡಿದರು.

ಒಂದರ್ಧ ತಾಸು ಕಾದ ನಂತರ ಯುವಕನೊಬ್ಬ ಬೈಕೇರಿಕೊಂಡು ಬಂದ. ಸಾಹೇಬರು ಕಳಿಸಿದ್ದಾರೆಂದೂ, ತನ್ನ ಹೆಸರು ಕಿರಣ ಎಂದೂ ಪರಿಚಯಿಸಿಕೊಂಡ. ಅವರೆಲ್ಲ ಸೇರಿ ಮೇನ್ ಲೈನ್ ಎಲ್ಲಿದೆ, ಇನ್ನೊಂದು ಟಿ.ಸಿ ಎಲ್ಲಿ ಕೂಡಬೇಕು ಇತ್ಯಾದೀ ವಿವರಗಳನೆಲ್ಲ ಅವನಿಗೆ ತಿಳಿಸಿದರು.

ಎಲ್ಲವನ್ನು ನೋಡಿಕೊಂಡು ಬಂದ ಕಿರಣ್, ಮೇನ್‌ ಲೈನ್‌ಗೆ ಕಂಬ ಎಷ್ಟು ಬೇಕು, ಬೇರೆ ಸರ್ಕಲ್ ಮಾಡಬೇಕು, ಅದಕ್ಕೆ ಲಿಂಕ್ ಕೊಡಲು ಎಷ್ಟು ಕಂಬ ಬೇಕು, ಗುಣಿ ತೋಡೋದು, ಲೇಬರ್ ಚಾರ್ಜು.., ಅದು ಇದೂ ಎಲ್ಲಾ ಲೆಕ್ಕ ಹಾಕಿ, ಎರಡು ಲಕ್ಷದಾ ಅರವತ್ತು ಸಾವಿರ ರೂಪಾಯಿಯ ಎಸ್ಟೀಮೇಟ್ ಹೇಳಿದ.

“ನಾವ್ ಹಗಲು-ರಾತ್ರಿ ನಿದ್ದಿಗೆಟ್ಟು ಮೂರು ತಿಂಗಳು ದುಡಿದ್ರೂ ನಮಗ ಹತ್ ಸಾವ್ರ ಉಳಿದ್ರ ಅದ ದೊಡ್ಡ ಮಾತಾತು. ಇನ್ನೆಲ್ಲಿಂದ್ ಇವ್ರಿಗೆ ರೊಕ್ಕ ಹುಟ್ಟಿಸೋದು? ಟಿ.ಸಿ.ನೂ ಬ್ಯಾಡ, ನೀರಾವರಿನೂ ಬ್ಯಾಡ,” ಅಂತ ಸಿದ್ದ ಮೈಕೊಡವೇ ಬಿಟ್ಟ.

ಶಿವಪ್ಪ, “ಸಾಹೇಬ್ರ, ನಾವ್ ವಿಚಾರ ಮಾಡಿ ಇನ್ನೊಂದೆರಡು ದಿನದಾಗ ನಿಮಗ ತಿಳಿಸ್ತೇವಿ,” ಅಂದ. ಕಿರಣ ಬೈಕ್ ಏರಿ, “ಆಯ್ತು ಹಂಗ ಮಾಡ್ರೀ,” ಎಂದು ಬೈಕ್ ಬುರ್ ಅನ್ನಿಸಿ ಹೊಂಟುಹೋದ.

ಅಷ್ಟೊತ್ತಿಗೆ ಟಿ.ಸಿ.ಯಲ್ಲಿ ಕಿಡಿ ಹೊತ್ತಿ ಢಂ ಅನ್ನೋ ಶಬ್ದ ಕೇಳಿಬಂತು. ರೈತರೆಲ್ಲ ಒಬ್ಬರೊಬ್ಬರ ಮಕಾ ನೋಡಿಕೊಂಡು ಮಕ ಒಣಗಿಸಿಕೊಂಡು ಮನೀ ಕಡೆ ಹೆಜ್ಜಿ ಹಾಕಿದ್ರು‌.

ಕಲಾಕೃತಿಗಳ ಕೃಪೆ: Unsplash ಜಾಲತಾಣ

ಪೋಸ್ಟ್ ಹಂಚಿಕೊಳ್ಳಿ:

ಚಂಸು ಪಾಟೀಲ
ಚಂಸು ಪಾಟೀಲ
ಮಾತು, ಕತೆ, ಕವಿತೆ, ಹಾಡು - ಪಾಟೀಲರು ಏನೇ ಮಾತನಾಡಿದರೂ ಅದಕ್ಕೆ ನೆಲದ ಘಮವಿರುತ್ತದೆ. ಏಕೆಂದರೆ, ಬೇಸಾಯವೇ ಇವರ ಬದುಕು. ಕೃಷಿ ಮಾಡುತ್ತ, ಅದರ ಅನುಭವ ಮತ್ತು ಅನುಭಾವವನ್ನು ಕವಿತೆಗಳಿಗೆ ದಾಟಿಸುತ್ತ ಬದುಕುತ್ತಿರುವ ಪಾಟೀಲರು ರಾಣೇಬೆನ್ನೂರಿನವರು. ತಮ್ಮ ಕವಿತೆಗಳಿಂದಾಗಿ ರಾಜ್ಯಾದ್ಯಂತ ಪರಿಚಿತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...