- ಕೇಂದ್ರಕ್ಕೆ ಪತ್ರ ಬರೆದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ
- ರಾಜ್ಯಪಾಲರ ಅಂಕಿತದ ಬಳಿಕ ಮೀಸಲು ಹೆಚ್ಚಳ ಕೇಂದ್ರ ಅಂಗಳಕ್ಕೆ
ವಿರೋಧ ಪಕ್ಷಗಳ ತೀವ್ರ ಟೀಕೆಯ ಬೆನ್ನಲ್ಲೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಹೆಚ್ಚಳದ ಕಾಯಿದೆಯನ್ನು ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಕೋರಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಶೇ.15ರಿಂದ ಶೇ.17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ರಷ್ಟು ಮೀಸಲಾತಿ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿತ್ತು. ಈ ಕುರಿತು ವಿಧಾನಸಭೆಯಲ್ಲೂ ಸಹ ಕಾಯಿದೆ ಅಂಗೀಕಾರವಾಗಿತ್ತು. ಆದರೆ, ರಾಜ್ಯ ಸರ್ಕಾರ ಪರಿಶಿಷ್ಟರ ಮೀಸಲು ಹೆಚ್ಚಳದ ಕುರಿತು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವ ಸಲ್ಲಿಸಿರಲಿಲ್ಲ.
ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷಗಳು ವ್ಯಾಪಕವಾಗಿ ಟೀಕಿಸಿದ್ದವು. ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಪರಿಶಿಷ್ಟ ಜಾತಿಗೆ ಶೇ 15ರಿಂದ ಶೇ 17, ಪರಿಶಿಷ್ಟ ಪಂಗಡಕ್ಕೆ ಶೇ 3ರಿಂದ ಶೇ7ರಷ್ಟು ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ಮಾಡಿದ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಕಾಯಿದೆ–2022’ನ್ನು ಸಂವಿಧಾನದ ಶೆಡ್ಯೂಲ್ 9ರಲ್ಲಿ ಸೇರಿಸಬೇಕೆಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರಿಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಪತ್ರ ಬರೆದಿದ್ದಾರೆ.
“ಕಾಯಿದೆಯನ್ನು ಸಂವಿಧಾನದ ಶೆಡ್ಯೂಲ್ 9ರಲ್ಲಿ ಸೇರಿಸಲು ಫೆಬ್ರವರಿ 9ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಾಯಿದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಹೀಗಾಗಿ, ಕಾಯಿದೆಯನ್ನು ತಮಗೆ ಕಳುಹಿಸುತ್ತಿದ್ದೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.