ಕರ್ನಾಟಕದಲ್ಲಿ ಎಸ್‌ಐಆರ್ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್ ಗೆ ಎಸ್‌ಐಆರ್ ಅಪಾಯಗಳ ಬಗ್ಗೆ ಮನವರಿಕೆ ಮಾಡಿದ್ದವು. ಡಿಸಿಎಂ ಆಗಿದ್ದಾಗಲೂ ಡಿ ಕೆ ಶಿವಕುಮಾರ್ ಎಸ್.ಐ.ಆರ್. ಅಕ್ರಮಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರು. ಎಸ್.ಐ.ಆರ್. ಅಪಾಯ ಕುರಿತ ಕಮ್ಮಟಕ್ಕೆ ಗೈರು ಹಾಜರಾದರೆಂದು ಪ್ರದೇಶ ಕಾಂಗ್ರೆಸ್ ಪಕ್ಷದ ಅನೇಕ ಪದಾಧಿಕಾರಿಗಳನ್ನು ಕಿತ್ತು ಹಾಕಿಸುವಷ್ಟು ಸಕ್ರಿಯರಾಗಿದ್ದರು. ಪರಿಣಾಮವಾಗಿ ಮೊದಲ ಎರಡು ಹಂತದವರೆಗೂ ಎಸ್‌ಐಆರ್ ಪ್ರಕ್ರಿಯೆ ಬಹುತೇಕ ಸರಿಯಾಗಿ ನಡೆದಿದೆ. ಫಾರಂ 7ರಲ್ಲಿ ಡಿಲೀಷನ್‌ಗೆ ಅರ್ಜಿಯನ್ನು ಬಿಜೆಪಿ ನಾಯಕರು ದುರುಪಯೋಗಪಡಿಸಿಕೊಂಡು ತಮ್ಮ ಕುತಂತ್ರ ಬುದ್ದಿ ತೋರಿಸಿದ್ದಾರೆ.
ರಾಜ್ಯದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಫಾರಂ 7 ಮೂಲಕ ಅರ್ಹ ಮತದಾರರ ಹೆಸರು ಅಳಿಸಿ ಹಾಕುವ ಷಡ್ಯಂತ್ರದ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿ ಸಿಎಂ ಡಿ ಕೆ ಶಿವಕುಮಾರ್ ಮತ್ತು ಅವರ ಸಂಪುಟದ ಎಲ್ಲ ಮಂತ್ರಿಗಳು ಗುರುವಾರ ಮಧ್ಯಾಹ್ನದಿಂದಲೇ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ಮೂರೂವರೆಗೆ ನಿಗದಿಯಾಗಿದ್ದ ರಾಜ್ಯ ಸಂಪುಟ ಸಭೆಯನ್ನು ರದ್ದುಗೊಳಿಸಿ ಸಿಎಂ ಅವರೇ ಧರಣಿ ನಡೆಸಿದ್ದು ರಾಜ್ಯದಲ್ಲಿ ಎಸ್‌ಐಆರ್ ಅನ್ಯಾಯದ ವಿರುದ್ಧದ ಮಹತ್ವದ ಪ್ರತಿಭಟನೆಯಾಗಿದೆ. ಚುನಾವಣಾ ಅಧಿಕಾರಿ ಅನ್ಬುಕುಮಾರ್ ಒಂದು ದಿನದ ಕಾಲಾವಕಾಶ ಕೋರಿದರೂ ಪಟ್ಟು ಬಿಡದೇ ಎಫ್‌ಐಆರ್ ದಾಖಲಿಸದೇ ವಾಪಸ್ ಹೋಗಲ್ಲ ಎಂದು ಡಿಕೆಶಿ ಧರಣಿ ಮುಂದುವರಿಸಿದಾಗ ಆಯೋಗಕ್ಕೆ ಬೇರೆ ದಾರಿ ಇರಲಿಲ್ಲ. ಹಾಗಾಗಿ ಸುಳ್ಳು ಮಾಹಿತಿಯ ಜೊತೆಗೆ ಆಕ್ಷೇಪ ಸಲ್ಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರಾಜ್ಯದ ಎಲ್ಲ ಚುನಾವಣಾ ಅಧಿಕಾರಿ, ಮತದಾರರ ನೋಂದಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಳ್ಳಾರಿಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ 13 ಸಾವಿರ ಫಾರಂ 7 ಮೂಲಕ ಅರ್ಜಿಗಳನ್ನು ಸಲ್ಲಿಸಿ, ಹಿಂಪಡೆದಿದ್ದಾರೆ. ಬಿಜಾಪುರದಲ್ಲಿ ಬಬಲೇಶ್ವರ ಹೊರತುಪಡಿಸಿ 13 ಸಾವಿರ ಅರ್ಜಿಗಳನ್ನು ಸಲ್ಲಿಸಿ ಅವುಗಳನ್ನು ಹಿಂಪಡೆದಿದ್ದಾರೆ. ಕಾಂಗ್ರೆಸ್ ಪಕ್ಷವು ಮೈಸೂರು, ಬೆಳಗಾವಿ, ಭಾಲ್ಕಿ ಕ್ಷೇತ್ರಗಳಲ್ಲಿನ ದಾಖಲೆ, ವಿಡಿಯೋಗಳ ದಾಖಲೆಗಳನ್ನು ಆಯೋಗಕ್ಕೆ ಕೊಟ್ಟರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಕಾಂಗ್ರೆಸ್ ಸಿಟ್ಟಿಗೆದ್ದಿರುವುದು ಸಕಾರಣವಾಗಿದೆ. ಸುಮಾರು 50 ಲಕ್ಷ ಮತದಾರರ ಹಕ್ಕು ಮೊಟಕುಗೊಳಿಸಲು ಬಿಜೆಪಿ ಯತ್ನಿಸಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ.
ಕಳೆದ ವಾರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಸುಮಾರು ಎರಡು ಸಾವಿರ ಮುಸ್ಲಿಂ ಮತದಾರರ ಹೆಸರುಗಳನ್ನು ಡಿಲಿಟ್ ಮಾಡಲು ಮುದ್ರಿತ ಫಾರಂ 7 ಸಲ್ಲಿಸಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದರು. ಚುನಾವಣಾ ಆಯೋಗದ ನಿಯಮ ಮೀರಿ ಅಕ್ರಮ ಎಸಗಿದವರ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿರುವುದು ಅನುಮಾನಕ್ಕೆ ಕಾರಣವಾಗಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಮುಸ್ಲಿಮರನ್ನು ಗುರಿಯಾಗಿಸಿ ಮಾಡಿದ ಈ ಕುತಂತ್ರದ ವಿರುದ್ಧ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರು ದಾಖಲೆ ಸಹಿತ ಆರೋಪಿಸುತ್ತಲೇ ಬಂದಿದ್ದರು. ವಾರದ ಹಿಂದೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಬಂದ ನಂತರ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ ಮುಗಿಲು ಮುಟ್ಟಿದೆ. ಕಾಕ್ರೋಚ್ ಜನತಾಪಾರ್ಟಿ ಈಗಾಗಲೇ ದೆಹಲಿಯಲ್ಲಿ ಪ್ರತಿಭಟನೆ ಶುರು ಮಾಡಿದೆ. ಇಂಡಿಯಾ ಮೈತ್ರಿ ಕೂಟ ಬುಧವಾರ ಸಭೆ ಸೇರಿ ಒಟ್ಟಾಗಿ ಎಸ್‌ಐಆರ್ ವಿರುದ್ಧ ಪ್ರತಿಭಟನೆ ನಡೆಸುವ ತೀರ್ಮಾನ ಮಾಡಿವೆ.
ಇಷ್ಟೊಂದು ಅಕ್ರಮಗಳು ನಡೆಯುತ್ತಿದ್ದರೂ ಚುನಾವಣಾ ಆಯೋಗ, ಫಾರಂ ೭ ದುರುಪಯೋಗದ ಬಗ್ಗೆ ಕಣ್ಣು ಮುಚ್ಚಿ ಕೂತಿರುವುದು ಸರಿಯಲ್ಲ. ಚುನಾವಣಾ ಆಯೋಗದ ಲೋಪಗಳನ್ನು ಎತ್ತಿ ತೋರಿಸಿದರೆ, ಬಿಜೆಪಿ ನಾಯಕರು ಪ್ರೆಸ್ ಮೀಟ್ ಮಾಡಿ ಸಮರ್ಥನೆಗೆ ಇಳಿಯುತ್ತಿರುವುದು ಹಾಸ್ಯಾಸ್ಪದ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮೇಲೆ ಇಬ್ಬರು ಆಯುಕ್ತರು ಮಾಡಿರುವ ಆರೋಪಗಳಿಗೆ ಉತ್ತರಿಸುವ ಧೈರ್ಯ ಮಾಡಿಲ್ಲ. ಎಲ್ಲವೂ ಬಿಜೆಪಿಯ ಅಣತಿಯಂತೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪೂರಕವಾಗಿ ಬಿಜೆಪಿ ನಾಯಕರು, ವಕ್ತಾರರು ಸಮರ್ಥನೆ ಮಾಡುತ್ತಿದ್ದಾರೆ. ದಾಖಲೆ ಸಹಿತ ಪ್ರಶ್ನೆ ಮಾಡಿದ ರಾಹುಲ್ ಗಾಂಧಿ ಅವರಿಗೆ ‘ಹುಚ್ಚ’ ಎಂಬ ಹಣೆಪಟ್ಟಿ ಕಟ್ಟಿರುವುದು ಪಲಾಯನದ ತಂತ್ರವಲ್ಲದೆ ಮತ್ತೇನೂ ಅಲ್ಲ. ಆದರೆ, ಸಾಮಾನ್ಯ ಪ್ರಜೆಯ ಪ್ರಶ್ನೆಗಳಿಗಾದರೂ ಉತ್ತರಿಸಬೇಕಲ್ಲವೇ? ಕರ್ನಾಟಕದಲ್ಲಿ ಎಸ್‌ಐಆರ್ ಶುರುವಾದಾಗಿನಿಂದ ನಾಗರಿಕ ಸಂಘಟನೆಗಳು ಜಾಗೃತಿ ಮೂಡಿಸುತ್ತಾ ಬಂದಿವೆ. ಪ್ರಕ್ರಿಯೆಯಲ್ಲಿನ ಲೋಪಗಳ ಬಗ್ಗೆ, ಜನ ಸಾಮಾನ್ಯರ ಪ್ರಶ್ನೆಗಳ ಬಗ್ಗೆ ʼಜಾಗೃತ ಕರ್ನಾಟಕʼ, ʼಎದ್ದೇಳು ಕರ್ನಾಟಕʼ ಚುನಾವಣಾ ಆಯೋಗದ ಕದ ತಟ್ಟುತ್ತಲೇ ಇವೆ. ಯಾವ ಪ್ರಶ್ನೆಗಳಿಗೂ ಚುನಾವಣಾಧಿಕಾರಿ ಅನ್ಬುಕುಮಾರ್ ಉತ್ತರಿಸುವ ಗೋಜಿಗೆ ಹೋಗಿಲ್ಲ.
ನಟ ಪ್ರಕಾಶ್ ರಾಜ್ ನಿರಂತರವಾಗಿ ಎರಡು ತಿಂಗಳಿನಿಂದ ರಾಜ್ಯದ ಎಸ್‌ಐಆರ್ ಸಂತ್ರಸ್ತರನ್ನು ಭೇಟಿಯಾಗಿ ಅಕ್ರಮಗಳನ್ನು ಆಯೋಗದ ಗಮನಕ್ಕೆ ತರುತ್ತಲೇ ಇದ್ದಾರೆ. ಆದರೂ ಆಯೋಗ ಮೌನ ಮುರಿಯುತ್ತಿಲ್ಲ. ಆದರೆ, ಫಾರಂ ೭ ದುರುಪಯೋಗ ಯಾವ ಮಟ್ಟಿಗೆ ಆಗಿದೆಯೆಂದರೆ ರಾಜ್ಯದ ಬಹುತೇಕ ಕಡೆ ಬಿಜೆಪಿ ಕಾರ್ಯಕರ್ತರು ಅರ್ಜಿ ಸಲ್ಲಿಸುವ ಕೊನೆಯ ಎರಡು ದಿನ ಬಿಜೆಪಿಯೇತರ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿದ್ದಾರೆ. ಈ ಫಾರಂ 7 ಅವಕಾಶ ಕಲ್ಪಿಸಿದ್ದೇ ದೊಡ್ಡದೊಂದು ಷಡ್ಯಂತ್ರದ ಭಾಗ. ಈ ಪ್ರಮಾದದ ಮೂಲಕ ಬೇರೆ ಬೇರೆ ರಾಜ್ಯಗಳಲ್ಲಿ ಲಕ್ಷಾಂತರ ಜನರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಯಾರು ಹೊಣೆಗಾರರು?
ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿದ ಅಮೂಲ್ಯ ಹಕ್ಕು ಮತದಾನ. ಆದರೆ ಮೋದಿ ಸರ್ಕಾರದ ಆಜ್ಞಾಪಾಲಕನಂತೆ ಕೆಲಸ ಮಾಡುತ್ತಿರುವ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಈಗಾಗಲೇ ಹಲವು ರಾಜ್ಯಗಳಲ್ಲಿ ಎಸ್‌ಐಆರ್ ಹೆಸರಿನಲ್ಲಿ ಕೋಟ್ಯಂತರ ಜನರ ಮತದಾನದ ಹಕ್ಕನ್ನೇ ಕಸಿದುಕೊಂಡಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರದಲ್ಲಿ ಬಾಂಗ್ಲಾದೇಶದ ನುಸುಳುಕೋರರು ಎಂದು ಸುಳ್ಳು ಹೇಳಿ ಮುಸ್ಲಿಮರ ಹಕ್ಕನ್ನು ಕಸಿಯಲಾಗಿದೆ. ಅದರಲ್ಲೂ ಧರ್ಮದ ಆಧಾರದಲ್ಲಿ ಮತದಾನದ ಹಕ್ಕನ್ನು ನಿರಾಕರಿಸುವುದು ಸಂವಿಧಾನ ವಿರೋಧಿ ಕೃತ್ಯ. ಆರಂಭದಲ್ಲಿಯೇ ಇದಕ್ಕೆ ಕಡಿವಾಣ ಹಾಕುವ ಬದಲು ಸುಪ್ರೀಂ ಕೋರ್ಟ್ ಕೂಡ ಆಯೋಗದ ನಿರ್ಧಾರವನ್ನು ಸರಿ ಎಂದಿತ್ತು.
ಕಳೆದ ಒಂದು ದಶಕದಲ್ಲಿ ಇವಿಎಂ ಟ್ಯಾಂಪರಿಂಗ್ ಬಗ್ಗೆ ಅನುಮಾನ, ಆರೋಪಗಳು ಕೇಳಿ ಬಂದಿವೆ. ಕರ್ನಾಟಕದಲ್ಲಿ ಎಸ್‌ಐಆರ್ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್ ಗೆ ಎಸ್‌ಐಆರ್ ಅಪಾಯಗಳ ಬಗ್ಗೆ ಮನವರಿಕೆ ಮಾಡಿದ್ದವು. ಉಪಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ಡಿ ಕೆ ಶಿವಕುಮಾರ್ ಎಸ್.ಐ.ಆರ್. ಅಕ್ರಮಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರು. ಎಸ್.ಐ.ಆರ್. ಅಪಾಯ ಕುರಿತ ಕಮ್ಮಟಕ್ಕೆ ಗೈರು ಹಾಜರಾದರೆಂದು ಪ್ರದೇಶ ಕಾಂಗ್ರೆಸ್ ಪಕ್ಷದ ಅನೇಕ ಪದಾಧಿಕಾರಿಗಳನ್ನು ಕಿತ್ತು ಹಾಕಿಸುವಷ್ಟು ಸಕ್ರಿಯರಾಗಿದ್ದರು. ಪಕ್ಷದ ಕಾರ್ಯಕರ್ತರು, ಶಾಸಕರು, ಎಲ್ಲರಿಗೂ ನಿಗಾ ಇಡುವಂತೆ ಸೂಚನೆ ನೀಡಿದ್ದರು. ಪರಿಣಾಮವಾಗಿ ಮೊದಲ ಎರಡು ಹಂತದವರೆಗೂ ಎಸ್‌ಐಆರ್ ಪ್ರಕ್ರಿಯೆ ಬಹುತೇಕ ಸರಿಯಾಗಿ ನಡೆದಿದೆ. ಆದರೆ, ಫಾರಂ 7ರಲ್ಲಿ ಡಿಲೀಷನ್‌ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ತಮ್ಮ ಕುತಂತ್ರ ಬುದ್ದಿ ತೋರಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಇಂತಹ ಅಕ್ರಮಗಳನ್ನು ಪತ್ತೆ ಹಚ್ಚಿ ಆಯೋಗಕ್ಕೆ ದೂರು ನೀಡಿದ್ದರೂ ಅಧಿಕಾರಿ ಅನ್ಬುಕುಮಾರ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಿನ್ನೆ ಸರ್ಕಾರವೇ ಚುನಾವಣಾ ಆಯೋಗದ ಬಾಗಿಲ ಬಳಿ ಪ್ರತಿಭಟನೆ ಮಾಡಿದ ಬಳಿಕ ಅಕ್ರಮ ಅರ್ಜಿ ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಂದು ವೇಳೆ ನ್ಯಾಯಯುತ ಮಾರ್ಗದಲ್ಲಿ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದ್ದರೆ ಇಂತಹ ಅಕ್ರಮಗಳ ಬಗ್ಗೆ ದೂರು ಬಂದಾಗಲೇ ಕ್ರಮ ಜರುಗಿಸುತ್ತಿತ್ತು. ಚುನಾವಣಾ ವ್ಯವಸ್ಥೆಯ ಬಗ್ಗೆ, ಆಯೋಗದ ಕಾರ್ಯ ನಿರ್ವಹಣೆಯ ಬಗ್ಗೆ ಸಾಮಾನ್ಯ ಜನರೂ ನಂಬಿಕೆ ಕಳೆಯುವಂತೆ ಮಾಡಿರುವುದು ಎಸ್‌ಐಆರ್ ಎಂಬ ಮಹಾ ಮೋಸದ ಯೋಜನೆ.
ಇನ್ನಾದರೂ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಚುನಾವಣಾ ಆಯೋಗ ಕೆಲಸ ಮಾಡಬೇಕಿದೆ. ಅಧಿಕಾರದಲ್ಲಿರುವ ಸರ್ಕಾರ, ಪಕ್ಷಗಳ ತುತ್ತೂರಿಯಾಗದಿರಲಿ.




