ತನ್ನ ಚಾಳಿಯನ್ನು ಬಿಟ್ಟು ಬಹುಕಾಲ ಇರಲಾರೆ ಎಂಬಂತೆ ಆಡಿರುವ ಕಾಂಗ್ರೆಸ್ಸು ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ತಾನಾಗಿಯೇ ಎಳೆದು ಮೈಮೇಲೆ ಕೆಡವಿಕೊಂಡಿದೆ. ಕೋಮುವಾದಿ ವಿಷಯದಲ್ಲಿ ವಿಜೃಂಭಿಸುವ ಬಿಜೆಪಿಯ ಕೈಗೆ ತಾನಾಗಿಯೇ ಬಡಿಗೆ ಇತ್ತು, ಬಾರಿಸುವಂತೆ ಆಹ್ವಾನಿಸಿದೆ.
ಗೆಲುವಿನ ದವಡೆಯಿಂದ ಸೋಲನ್ನು ಕಿತ್ತುಕೊಳ್ಳುವುದು ಹೇಗೆಂಬ ವಿಷಯದಲ್ಲಿ ಪಿಎಚ್.ಡಿ. ಮಾಡಿದಂತಿದೆ ಕಾಂಗ್ರೆಸ್ ಪಕ್ಷ. ರಾಜ್ಯ ವಿಧಾನಸಭಾ ಚುನಾವಣೆಗಳ ಮತದಾನಕ್ಕೆ ಹತ್ತೇ ದಿನಗಳು ಉಳಿದಿವೆ. ಇಲ್ಲಿಯ ತನಕ ಅತ್ಯಂತ ಸಂಯಮ ವಹಿಸಿ, ಗೆಲುವಿನ ಹಾದಿಯಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡತೊಡಗಿದ್ದ ಈ ಪಕ್ಷ ಇಂದು ಹಠಾತ್ತನೆ ಹಾದಿ ತಪ್ಪಿದೆ. ಸರಿದಾರಿಯಲ್ಲಿ ಸಾಗುತ್ತಿರುವುದೇ ಈ ಪಕ್ಷಕ್ಕೆ ಚಡಪಡಿಕೆಯಾಗಿ ಕಾಡಿದಂತಿದೆ. ಹೀಗಾಗಿ ಕಾಲಮೇಲೆ ಕೊಡಲಿ ಹೊಡೆದುಕೊಂಡಿದೆ.
ಅಧಿಕಾರಕ್ಕೆ ಬಂದರೆ ಭಜರಂಗದಳ ಮತ್ತು ಪಿಎಫ್ಐನಂತಹ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಾರಿದೆ. ಜನ ಸಮುದಾಯಗಳನ್ನು ನಿತ್ಯ ಕಿತ್ತು ತಿನ್ನುತ್ತಿರುವ ಬೆಲೆ ಏರಿಕೆ, ಭ್ರಷ್ಟಾಚಾರಕ್ಕೆ ಕಾರಣಕರ್ತೃ ಎಂದು ಬಿಜೆಪಿಯನ್ನು ಕಟಕಟೆಯಲ್ಲಿ ನಿಲ್ಲಿಸುತ್ತ ಬಂದಿತ್ತು. ಕೋಮುವಾದದ ಮಡುವಿನಲ್ಲೇ ಮುಳುಗೇಳುತ್ತಿದ್ದ ಬಿಜೆಪಿ ಕೂಡ ಅಭಿವೃದ್ಧಿ ವಿಷಯಗಳ ಹಾದಿ ಹಿಡಿಯಲೇಬೇಕಾಗಿ ಬಂದಿತ್ತು. ಹಿಂದೂ-ಮುಸ್ಲಿಮ್ ಧೃವೀಕರಣದ ಯಾವುದೇ ವಿಷಯ ಚುನಾವಣಾ ವಾತಾವರಣವನ್ನು ಪ್ರವೇಶಿಸದಂತೆ ಕಾಂಗ್ರೆಸ್ ಎಚ್ಚರಿಕೆಯಿಂದ ಕಾವಲು ಕಾದಿತ್ತು. ರಾಷ್ಟ್ರೀಯ ವಿಷಯಗಳನ್ನು ಕೂಡ ಎಳೆದು ತಾರದೆ ಸ್ಥಳೀಯ ವಿಷಯಗಳು ಮತ್ತು ಸಮಸ್ಯೆಗಳ ಮೇಲೆಯೇ ಚರ್ಚೆಯನ್ನು, ನಿರೂಪಣೆಯನ್ನು ನೇಯತೊಡಗಿತ್ತು.
ಆದರೆ ತನ್ನ ಚಾಳಿಯನ್ನು ಬಿಟ್ಟು ಬಹುಕಾಲ ಇರಲಾರೆ ಎಂಬಂತೆ ಆಡಿರುವ ಕಾಂಗ್ರೆಸ್ಸು ಭಜರಂಗದಳವನ್ನು ತಾನಾಗಿಯೇ ಎಳೆದು ಮೈಮೇಲೆ ಕೆಡವಿಕೊಂಡಿದೆ. ಕೋಮುವಾದಿ ವಿಷಯದಲ್ಲಿ ವಿಜೃಂಭಿಸುವ ಬಿಜೆಪಿಯ ಕೈಗೆ ತಾನಾಗಿಯೇ ಬಡಿಗೆ ಇತ್ತು, ಬಾರಿಸುವಂತೆ ಆಹ್ವಾನಿಸಿದೆ. ಉತ್ತರ ಭಾರತದಲ್ಲಿ ಹಿಂದೀ ಗಾದೆಯೊಂದಿದೆ. ‘ಬಾ ಗೂಳಿ, ನನ್ನನ್ನು ಗುಮ್ಮು ಬಾ ಬಾ’ ಎಂದು ವೀಳೆಯ ಇಟ್ಟು ಕರೆದಂತೆ.
ಇಂತಹ ಅವಕಾಶವಿಲ್ಲದೆ ಹಸಿದು ಕಂಗಾಲಾಗಿದ್ದ ಬಿಜೆಪಿ, ಹಠಾತ್ತನೆ ಎದ್ದು ಕುಳಿತು ಶಕ್ತಿ ತುಂಬಿಕೊಳ್ಳತೊಡಗಿದೆ. ಗೆಲುವಿನ ದವಡೆಯಿಂದ ಸೋಲನ್ನು ಕಿತ್ತುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ತೊಡಗಿದ್ದು ಇದೇ ಮೊದಲೇನಲ್ಲ. ಇದು ಕಡೆಯದೂ ಆಗಲಾರದು. ಅತ್ಯಂತ ಅವಿವೇಕದ ಮೂರ್ಖ ನಡೆಯಿದು. ಹಿಂದುತ್ವ ಎಂಬುದು ಹಿಂಸಾತ್ಮಕ ಕೋಮುವಾದಿ ರಾಜಕೀಯ ಸಿದ್ಧಾಂತ. ಹಿಂದೂಯಿಸಂ ಎಂಬುದು ಒಂದು ಧರ್ಮ. ಹಿಂಸಾತ್ಮಕ ಕೋಮುವಾದಿ ರಾಜಕಾರಣದ ಸಮುದ್ರಗಳಲ್ಲಿ ಮುಳುಗೆದ್ದಿರುವ ಬಿಜೆಪಿಯನ್ನು ಅದರದೇ ಅಂಗಳಕ್ಕೆ ನುಗ್ಗಿ ಸೋಲಿಸುವುದು ಅಸಂಭವ. ಕಾಂಗ್ರೆಸ್ಸು ಹಿಂದೂ ವಿರೋಧಿ ಮತ್ತು ಮುಸಲ್ಮಾನರ ಪರವಾದ ಪಕ್ಷ ಎಂಬ ಸಂಘಪರಿವಾರದ ಅಪಪ್ರಚಾರ ದೈತ್ಯಯಂತ್ರ ಇಂದು ಮಧ್ಯಾಹ್ನದಿಂದಲೇ ರಭಸದಿಂದ ತಿರುಗತೊಡಗಿತು. ಇನ್ನೂ ಹತ್ತು ದಿನಗಳ ಕಾಲ ಈ ಯಂತ್ರ ನಿರಂತರ ಭುಸುಗುಟ್ಟಿ ಘರ್ಜಿಸಿ ಬೆಂಕಿ ಕಾರುವಲ್ಲಿ ಅನುಮಾನವೇ ಇಲ್ಲ.
ಭಜರಂಗದಳ ನಿಷೇಧದ ಪ್ರಸ್ತಾಪ ಮಾಡಿ ಅಲ್ಪಸಂಖ್ಯಾತರ ಮತಗಳನ್ನು ಇಡಿಯಾಗಿ ಸೆಳೆಯಬಹುದೆಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರ ಇದ್ದೀತು. ಆದರೆ ಈ ವಿಚಾರದಲ್ಲಿ ಗಳಿಸಿಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಆಲೋಚಿಸಿದರೆ ತಿಳಿಯದಿರುವ ಘನಂದಾರಿ ವಿಷಯವೇನಲ್ಲ ಇದು.
ಪಂಜಾಬಿನಲ್ಲಿ ಬಿಜೆಪಿ ಮತ್ತು ಅಕಾಲಿಗಳು ಮತ್ತೊಂದು ಗೆಲುವನ್ನು ಕಾಂಗ್ರೆಸ್ಸಿಗೆ ತಟ್ಟೆಯಲ್ಲಿಟ್ಟು ಕೊಟ್ಟಿದ್ದರು. ರೈತರ ಕುರಿತು ಬಿಜೆಪಿ ತಳೆದಿದ್ದ ದುರಹಂಕಾರದ ನಿಲುವನ್ನು ಖಂಡಿಸಿ ದೂರ ನಡೆಯುವುದು ಅಕಾಲಿದಳಕ್ಕೆ ಅನಿವಾರ್ಯವಾಗಿತ್ತು. ಹೀಗಾಗಿ ದಶಕಗಳ ಅಕಾಲಿ-ಬಿಜೆಪಿ ದೋಸ್ತಿ ಮುರಿದುಬಿದ್ದಿತ್ತು. ರೈತರ ಮೇಲೆ ಬಲವಂತದ ಕೃಷಿ ಕಾಯಿದೆಗಳ ಹೇರಿಕೆ, ಕೋವಿಡ್ ಲಾಕ್ ಡೌನ್ ನಿಂದ ಉಂಟಾದ ಕ್ಷೋಭೆ, ಮಹಾವಲಸೆಯ ಸ್ಥಿತಿಗಳು ಪಂಜಾಬಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಾದಿಯನ್ನು ಸಲೀಸು ಮಾಡಿದ್ದವು. ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧದ ಆಂತರಿಕ ಬಂಡಾಯವನ್ನು ಶಾಂತಿಯುತವಾಗಿ ಬಗೆಹರಿಸಬಹುದಿತ್ತು. ಅದರ ಬದಲು ಬಂಡಾಯದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದರು ಕಾಂಗ್ರೆಸ್ ವರಿಷ್ಠರು. ಆಮ್ ಆದ್ಮಿ ಪಾರ್ಟಿಯ ಗೆಲುವಿನ ಹಾದಿ ಸಲೀಸಾಯಿತು. ಉತ್ತರಾಖಂಡ, ಗೋವಾ ಹಾಗೂ ಮಣಿಪುರವೂ ಇದೇ ಬಗೆಯಲ್ಲಿ ‘ಕೈ’ಬಿಟ್ಟವು.
ಪರಿಸ್ಥಿತಿ ಹೀಗೆಯೇ ಮುಂದುವರೆದರೆ ದೇಶಕ್ಕೆ ಕಾಂಗ್ರೆಸ್ ಪಕ್ಷದ ಅಗತ್ಯ ಇದೆಯೇ ಎಂಬ ಪ್ರಶ್ನೆಗಳು ಎದುರಾದರೆ ಆಶ್ಚರ್ಯಪಡಬೇಕಿಲ್ಲ. ಯಾರಿಗೆ ಬೇಡದಿದ್ದರೂ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಅಗತ್ಯ ಇದ್ದೇ ಇದೆ. ಕಾಂಗ್ರೆಸ್ ಮುಕ್ತ ಭಾರತವನ್ನು ಕೇಸರಿ ಪಕ್ಷ ಬಯಸುತ್ತಿರುವುದು ಕೇವಲ ತುಟಿ ಮೇಲಿನ ಮಾತು. ಆತ್ಮಹತ್ಯೆ ಮಾಡಿಕೊಳ್ಳುವ, ತನ್ನ ಕಾಲಮೇಲೆ ತಾನೇ ಕೊಡಲಿ ಹೊಡೆದುಕೊಳ್ಳುವ ಬೆಪ್ಪುತಕ್ಕಡಿ ಎದುರಾಳಿ ಯಾರಿಗೆ ತಾನೇ ಬೇಡ? ಬಿಜೆಪಿಗೂ ಇದೇ ಕಾರಣಕ್ಕೆ ಕಾಂಗ್ರೆಸ್ ಬೇಕು. ಹಿಂದೂವೈರಿ, ಮುಸಲ್ಮಾನರ ಪಕ್ಷ, ಎಂದೆಲ್ಲ ಬಿಂಬಿಸಿ ಚಚ್ಚಲು ಕಾಂಗ್ರೆಸ್ ಬೇಕೇ ಬೇಕು.
ಕಾಂಗ್ರೆಸ್ ಪಕ್ಷವಿಲ್ಲದೆ ಬಿಜೆಪಿಯ ಹಿಂದುತ್ವದ ರಾಜಕಾರಣ ನಡೆಯದು. ಬಿಜೆಪಿಗೆ ಅನುಕೂಲ ಮಾಡಿಕೊಡಲೆಂಬ ಕಾರಣಕ್ಕಾಗಿಯಾದರೂ ತನ್ನನ್ನು ಬದುಕಿಸಿಕೊಳ್ಳಬೇಕಿದೆ ಬಿಜೆಪಿ ಉಪಕಾರಿ ಕಾಂಗ್ರೆಸ್ಸು. ಬಿಜೆಪಿಗೆ ಉಪಕಾರ ಮಾಡುವ ಕಾಂಗ್ರೆಸ್ಸಿನ ಪರೋಪಕಾರಿ ಔದಾರ್ಯವನ್ನು ಹಾಡಿ ಹೊಗಳಬೇಕೇ ಅಥವಾ …………?
