ಕಾಡಿನಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಕಲ್ಪಿಸದ ಪರಿಣಾಮ ರೈತರ ತೋಟಗಳೇ ವನ್ಯಜೀವಿಗಳ ಆಹಾರದ ಮೂಲವಾಗಿವೆ – ಮಾನವ-ಪ್ರಾಣಿ ಸಂಘರ್ಷ ತಡೆಗೆ ಸಮಗ್ರ ಯೋಜನೆ ರೂಪಿಸಲು ಒತ್ತಾಯ.
ಮಲೆನಾಡು ಭಾಗ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಇಲಾಖೆ ಸಮಗ್ರ ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಅನಿಲ್ ಹೊಸಕೊಪ್ಪ ಆಗ್ರಹಿಸಿದ್ದಾರೆ.
ದೇಶದಲ್ಲಿ ಪ್ರತಿದಿನ ಸರಾಸರಿ ಮೂವರು ಆನೆಗಳ ದಾಳಿಯಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ಆತಂಕಕಾರಿ ಅಂಕಿಅಂಶಗಳಿದ್ದು, ಪ್ರತಿ ವರ್ಷ 600ಕ್ಕೂ ಹೆಚ್ಚು ಜನರು ಆನೆ ತುಳಿತಕ್ಕೆ ಬಲಿಯಾಗುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಸುಮಾರು 5 ಸಾವಿರ ಜನರು ಆನೆ ತುಳಿತದಿಂದ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿಯೇ ಕಳೆದ ಎರಡು ವರ್ಷಗಳಲ್ಲಿ 160 ಜನರು ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಮಂಡಳಿಗಳು ಕಾಡಿನಲ್ಲಿ ವಾಸಿಸುವ ಪ್ರಾಣಿಗಳಿಗೆ ಸಮರ್ಪಕವಾಗಿ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವತ್ತ ಹೆಚ್ಚಿನ ಗಮನ ಹರಿಸುತ್ತಿಲ್ಲ. ಆನೆಗಳಿಗೆ ಅಗತ್ಯವಿರುವ ಹಲಸು, ಮಾವು, ಬೈನೆ, ಬಿದಿರು ಸೇರಿದಂತೆ ವಿವಿಧ ಆಹಾರ ಮೂಲದ ಸಸ್ಯಗಳನ್ನು ಅರಣ್ಯ ಪ್ರದೇಶಗಳಲ್ಲಿ ಬೆಳೆಸುವ ಕಾರ್ಯಕ್ಕೆ ಆದ್ಯತೆ ನೀಡುತ್ತಿಲ್ಲ. ಇದರ ಪರಿಣಾಮವಾಗಿ ಕಾಡುಪ್ರಾಣಿಗಳು ಆಹಾರಕ್ಕಾಗಿ ರೈತರ ತೋಟಗಳನ್ನೇ ಅವಲಂಬಿಸುವಂತಾಗಿದೆ ಎಂದು ದೂರಿದ್ದಾರೆ.
ಆನೆಗಳಿಂದ ಹಿಡಿದು ಮಂಗಗಳು, ಜೇನುನೊಣಗಳವರೆಗೂ ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ. ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ವನ್ಯಜೀವಿಗಳು ನಾಶಪಡಿಸುತ್ತಿದ್ದು, ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅರಣ್ಯ ಇಲಾಖೆಯು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಜೊತೆಗೆ ರೈತರ ಬದುಕು ಹಾಗೂ ಪ್ರಾಣಿಗಳ ಆಹಾರ ಮತ್ತು ನೀರಿನ ಅಗತ್ಯಗಳ ಬಗ್ಗೆಯೂ ಸಮಾನ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ನಿರ್ದಿಷ್ಟ ಅರಣ್ಯ ಪ್ರದೇಶದ ವಿಸ್ತೀರ್ಣಕ್ಕೆ ಅನುಗುಣವಾಗಿ ಎಷ್ಟು ಪ್ರಮಾಣದ ವನ್ಯಜೀವಿಗಳನ್ನು ಪೋಷಿಸಲು ಸಾಧ್ಯ ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಆನೆ, ಕಾಡುಕೋಣ, ಮಂಗ ಸೇರಿದಂತೆ ಕೆಲವು ವನ್ಯಜೀವಿಗಳ ಸಂಖ್ಯೆಯ ಹೆಚ್ಚಳ ಮತ್ತು ಅವುಗಳ ಆವಾಸಸ್ಥಾನದ ಸಾಮರ್ಥ್ಯದ ನಡುವಿನ ಸಂಬಂಧವನ್ನು ಪರಿಶೀಲಿಸಬೇಕು.
ಆನೆಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಅಗತ್ಯ ಆನೆಗಳ ಸಂಖ್ಯೆ ಅರಣ್ಯದ ಸಾಮರ್ಥ್ಯಕ್ಕಿಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ತಜ್ಞರ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಸಂತಾನೋತ್ಪತ್ತಿ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳಬೇಕು. ಆನೆಗಳಿಗೆ ಸಂತಾನ ನಿರೋಧಕ ಚುಚ್ಚುಮದ್ದು ನೀಡುವ ಸಾಧ್ಯತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ವಿಧಾನದಿಂದ ಆನೆಗಳ ಸಂಖ್ಯೆಯನ್ನು ನಿಯಂತ್ರಿಸುವ ಕುರಿತು ತಜ್ಞರ ಸಲಹೆ ಪಡೆದು ಸೂಕ್ತ ಯೋಜನೆ ರೂಪಿಸಬೇಕು ಎಂದು ಅನಿಲ್ ಹೊಸಕೊಪ್ಪ ಒತ್ತಾಯಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ವನ್ಯಜೀವಿಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಇಂತಹ ವೈಜ್ಞಾನಿಕ ವಿಧಾನಗಳನ್ನು ಬಳಸಿರುವ ಉದಾಹರಣೆಗಳಿವೆ. ಕೆಲವು ಸಂತಾನ ನಿರೋಧಕ ವಿಧಾನಗಳು ದೀರ್ಘಕಾಲದವರೆಗೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಆನೆಗಳ ಆರೋಗ್ಯ, ಸಂತಾನೋತ್ಪತ್ತಿ ಚಕ್ರ ಮತ್ತು ಪರಿಸರದ ಸಮತೋಲನಕ್ಕೆ ಯಾವುದೇ ತೊಂದರೆಯಾಗದಂತೆ ತಜ್ಞರ ಮಾರ್ಗದರ್ಶನದಲ್ಲಿ ಮಾತ್ರ ಇಂತಹ ಕ್ರಮಗಳನ್ನು ಜಾರಿಗೊಳಿಸಬೇಕು ಎಂದಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಎಸ್ಟೇಟ್ ಮಾಲೀಕರಿಂದ ಬಂದೂಕು ತೋರಿಸಿ ಮಹಿಳೆ,ಕಾರ್ಮಿಕರಿಗೆ ಮಾರಣಾಂತಿಕ ಹಲ್ಲೆ
ಕಾಡಿನಲ್ಲಿ ಆನೆಗಳಿಗೆ ಅಗತ್ಯವಾದ ಆಹಾರ ಮತ್ತು ನೀರಿನ ವ್ಯವಸ್ಥೆ ಕಲ್ಪಿಸುವುದು, ಆಹಾರ ಸಸ್ಯಗಳನ್ನು ಬೆಳೆಸುವುದು, ವನ್ಯಜೀವಿಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದು ಹಾಗೂ ಅಗತ್ಯವಿರುವ ಕಡೆ ಸಂತಾನೋತ್ಪತ್ತಿ ನಿಯಂತ್ರಣದ ಕ್ರಮಗಳನ್ನು ಪರಿಗಣಿಸುವುದು ಸರ್ಕಾರದ ಆದ್ಯತೆಯಾಗಬೇಕು. ಮಾನವ ಜೀವಗಳ ರಕ್ಷಣೆ, ರೈತರ ಬೆಳೆಗಳ ಸಂರಕ್ಷಣೆ ಮತ್ತು ವನ್ಯಜೀವಿಗಳ ಉಳಿವು ಈ ಮೂರನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ತಕ್ಷಣವೇ ದೀರ್ಘಕಾಲೀನ ಕಾರ್ಯಯೋಜನೆ ರೂಪಿಸಬೇಕು ಎಂದು ಅನಿಲ್ ಹೊಸಕೊಪ್ಪ ರಾಜ್ಯ ಪ್ರಧಾನ ಸಂಚಾಲಕರು ಮಲೆನಾಡು ಕರಾವಳಿ ಜನಪರ ಒಕ್ಕೂಟದಿಂದ ಆಗ್ರಹಿಸಿದ್ದಾರೆ.



