ಅಧಿಕಾರಕ್ಕೆ ಮಾತ್ರ ವಿಳಾಸವಿದ್ದು, ಹೊಣೆಗಾರಿಕೆಗೆ ವಿಳಾಸವೇ ಇಲ್ಲ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದಕ್ಕೂ ಹೊಣೆಗಾರಿಕೆ ಇದ್ದೇ ಇದೆ. ಅದರಿಂದ, ಮೋದಿ ಆಗಲೀ, ಅಮಿತ್ ಶಾ ಆಗಲೀ ಹೊರತಲ್ಲ. ಅವರೂ ಹೊಣೆ ಹೊರಬೇಕು, ಉತ್ತರ ನೀಡಬೇಕು, ಉತ್ತರದಾಯಿ ಆಗಬೇಕು.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಭೀಕರ ಪೊಲೀಸ್ ದೌರ್ಜನ್ಯ ನಡೆದು 18 ದಿನಗಳು ಕಳೆದಿವೆ. ಈವರೆಗೆ, ಈ ಕ್ರೌರ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸದನದ ಒಳಗಾಗಲೀ, ಹೊರಗಾಗಲೀ ಉತ್ತರಿಸಿಲ್ಲ. ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ. ಈ ಭೀಕರ ಘಟನೆಗೆ ಹೊಣೆಗಾರಿಕೆ ವಹಿಸುವಂತೆ ವಿಪಕ್ಷಗಳು ನಿರಂತರವಾಗಿ ಆಗ್ರಹಿಸುತ್ತಿದ್ದರೆ, ಇಬ್ಬರೂ ನಾಯಕರು ನಡೆಯುತ್ತಿರುವ ಸದನದಿಂದಲೇ ಕಾಣೆಯಾಗಿದ್ದಾರೆ. ಪ್ರಧಾನಿ ಮೋದಿ ಅವರು ರಾತ್ರಿ 11 ಪಾಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ‘ಫ್ರಾಂಡ್ಸ್’ ಎನ್ನುತ್ತ ವಿಡಿಯೋ ಅಪ್‌ಲೋಡ್ ಮಾಡಿಕೊಂಡು ಕಾಲ ಕಳೆಯುತ್ತಿದ್ದರೆ, ಗೃಹ ಸಚಿವ ಅಮಿತ್ ಶಾ ನಾಪತ್ತೆಯಾಗಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬ, ಶಿಕ್ಷಣ ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ಬೀದಿಗಿಳಿದ ಯುವಜನರನ್ನು ಜುಲೈ 20ರಂದು ಕೇಂದ್ರ ಸರ್ಕಾರ ನಡೆಸಿಕೊಂಡ ರೀತಿಗೆ ಉತ್ತರವೂ-ಉತ್ತರದಾಯಿಯೂ ಇಲ್ಲದಂತಾಗಿವೆ. ಜಂತರ್ ಮಂತರ್‌ನಲ್ಲಿ ನಡೆದ ಪೊಲೀಸ್ ದಾಳಿಯಲ್ಲಿ ಬಳಸಿದ ಲಾಠಿಗಳ ಸಂಖ್ಯೆಯನ್ನಾದರೂ ಎಣಿಸಬಹುದು. ಆದರೆ, ಲಾಠಿಗಳ ಹಿಂದಿನ ರಾಜಕೀಯ ಹೊಣೆಗಾರಿಕೆಯನ್ನು ಎಣಿಸುವುದು ಜಟಿಲವಾಗಿದೆ.
ಅನ್ಯಾಯ-ಅಕ್ರಮಗಳ ವಿರುದ್ಧ ಪ್ರತಿಭಟನೆಗಾಗಿ ಬೀದಿಗಿಳಿದಿದ್ದ ಯುವಜನರು ದೇಶದ ಗಡಿ ದಾಟಿ ಬಂದವರಲ್ಲ. ಸರ್ಕಾರವನ್ನು ಉರುಳಿಸಲು ಶಸ್ತ್ರ ಹಿಡಿದು ಬಂದವರೂ ಅಲ್ಲ. ಅವರ ಕೈಯಲ್ಲಿದ್ದದ್ದು ತಮ್ಮ ಭವಿಷ್ಯದ ಕುರಿತ ಪ್ರಶ್ನೆಗಳು. ವರ್ಷಗಟ್ಟಲೆ ಓದಿದ ಪರೀಕ್ಷೆ ಏಕೆ ರದ್ದಾಗುತ್ತದೆ? ಪ್ರಶ್ನೆಪತ್ರಿಕೆ ಹೇಗೆ ಸೋರಿಕೆಯಾಗುತ್ತದೆ? ನೇಮಕಾತಿ ಏಕೆ ವರ್ಷಗಟ್ಟಲೆ ನಡೆಯುವುದಿಲ್ಲ? ನಮ್ಮ ಬದುಕಿನ ಅಮೂಲ್ಯ ವರ್ಷಗಳಿಗೆ ಯಾರು ಉತ್ತರ ಕೊಡುತ್ತಾರೆ? -ಈ ಪ್ರಶ್ನೆಗಳಿಗೆ ಶಿಕ್ಷಣ ಇಲಾಖೆ ಉತ್ತರಿಸಬೇಕು. ಸರ್ಕಾರ ಉತ್ತರಿಸಬೇಕು. ಸಂಸತ್ತು ಚರ್ಚಿಸಬೇಕು ಎಂಬುದು ಅವರ ಆಗ್ರಹವಾಗಿತ್ತು.
ಆದರೆ, ಪ್ರಜಾಪ್ರಭುತ್ವದ ಸೋಗಿನಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ಪ್ರಭುತ್ವವು ಪ್ರಶ್ನೆಗೆ ಉತ್ತರಿಸುವುದನ್ನು ಬಿಟ್ಟು ಪ್ರಶ್ನೆ ಕೇಳುವವರನ್ನೇ ‘ಕಾನೂನು ಸುವ್ಯವಸ್ಥೆಯ ಸಮಸ್ಯೆ’ಯಾಗಿ ಬಿಂಬಿಸಿತು. ದೇಶದ್ರೋಹಿಗಳು ಎಂಬ ಪಟ್ಟ ಕಟ್ಟಿತು. ಉತ್ತರ ಇರಬೇಕಿದ್ದ ಜಾಗದಲ್ಲಿ ಪೊಲೀಸ್ ಲಾಠಿಗಳು ಬಂದವು. ಜಂತರ್ ಮಂತರ್‌ನಲ್ಲಿ ಅಪ್ರಾಪ್ತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ನಡೆಯಿತು. ಪೊಲೀಸರು ಲಾಠಿ ಬೀಸಿದರು. ಕ್ರೌರ್ಯ ಮೆರೆದರು. ಈ ದೌರ್ಜನ್ಯದ ವೇಳೆ, ಕೆಲ ಪೊಲೀಸ್ ಸಿಬ್ಬಂದಿ ಗುರುತು ಮರೆಮಾಚಿಕೊಂಡಿದ್ದರು, ಪ್ರತಿಭಟನಾಕಾರರು ಗಾಯಗೊಂಡರು.
ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದಾರೆ. ಹಾಗಾಗಿ, ಜಂತರ್ ಮಂತರ್‌ನಲ್ಲಿ ಪೊಲೀಸರು ಕಾನೂನಿನ ಮಿತಿಯಲ್ಲೇ ನಡೆದುಕೊಂಡಿದ್ದರೆ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ನಿಂತು ಅದನ್ನು ವಿವರಿಸಬೇಕಿತ್ತು. ಪೊಲೀಸರು ಕಾನೂನು ಮೀರಿ ವರ್ತಿಸಿದ್ದರೆ, ಅಂದಿನ ಇಡೀ ಘಟನೆ ಸ್ವತಂತ್ರ ತನಿಖೆಗೆ ಒಳಪಡಬೇಕಿತ್ತು. ಪೊಲೀಸ್ ಅಲ್ಲದ ವ್ಯಕ್ತಿಗಳು ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪಗಳನ್ನು ಸಾಕ್ಷ್ಯಾಧಾರಗಳೊಂದಿಗೆ ತನಿಖೆ ಮಾಡಬೇಕಿತ್ತು. ಅತಿಯಾದ ಬಲಪ್ರಯೋಗದ ತನಿಖೆ ನಡೆಸಿ ಹೊಣೆಗಾರರನ್ನು ಗುರುತಿಸಬೇಕಿತ್ತು. ಆದರೆ, ಅದಾಗಲಿಲ್ಲ. ಉತ್ತರವೂ ದೊರೆಯುತ್ತಿಲ್ಲ. ಹೊಣೆಗಾರಿಕೆಯಂತೂ ಇಲ್ಲವೇ ಇಲ್ಲ. ಇದೆಲ್ಲವನ್ನೂ ಮಾಡಬೇಕಿದ್ದ ಅಮಿತ್ ಶಾ ಪತ್ತೆಯೇ ಇಲ್ಲ!
ಅಧಿಕಾರ ಮೇಲಿನ ಮಹಡಿಯಲ್ಲಿ ಕೇಂದ್ರೀಕೃತವಾಗಿರಬೇಕು; ವೈಫಲ್ಯ ಸಂಭವಿಸಿದಾಗ ಹೊಣೆ ಮಾತ್ರ ಕೆಳಗಿನ ಕಾನ್‌ಸ್ಟೆಬಲ್‌ಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದಾದರೆ ಅದನ್ನು ಉತ್ತರದಾಯಿ ಆಡಳಿತ ಎನ್ನಲಾಗದು. ಉತ್ತರ ಮತ್ತು ಉತ್ತರದಾಯಿ – ಎರಡೂ ಮೇಲಿನ ಮಹಡಿಯಲ್ಲಿ ಕುಳಿತವರದ್ದೇ ಆಗಿರುತ್ತದೆ.
ಇದರರ್ಥ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಚಿವರ ಹೊಣೆಗಾರಿಕೆ ಎಂದರೆ ಇಲಾಖೆಯ ಪ್ರತಿಯೊಂದು ಕೆಲಸವನ್ನೂ ಸಚಿವರೇ ಮಾಡುತ್ತಾರೆ ಎಂದಲ್ಲ. ಆದರೆ, ಅವರ ಅಧೀನದ ವ್ಯವಸ್ಥೆಯ ಗಂಭೀರ ವೈಫಲ್ಯಗಳಿಗೆ ಅವರೇ ರಾಜಕೀಯವಾಗಿ ಉತ್ತರದಾಯಿ ಆಗಿರುತ್ತಾರೆ.
ಆದ್ದರಿಂದಲೇ, ಕಳೆದ ವಾರ ಲೋಕಸಭೆಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ನೇರವಾಗಿ ಗೃಹ ಸಚಿವರೇ ಹೊಣೆ ಎಂದು ವಾಗ್ದಾಳಿ ನಡೆಸಿದ್ದರು. “ಪೊಲೀಸರ ಬಲಪ್ರಯೋಗಕ್ಕೆ ಗೃಹ ಸಚಿವರು ಅಥವಾ ಪ್ರಧಾನ ಮಂತ್ರಿಯಷ್ಟೇ ಅಧಿಕಾರ ನೀಡಲು ಸಾಧ್ಯ. ಆದ್ದರಿಂದ, ಅಮಿತ್ ಶಾ ಅವರು ಈ ಕೃತ್ಯದ ಜವಾಬ್ದಾರಿ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದರು.
ಆದಾಗ್ಯೂ, ಮೋದಿ ಆಡಳಿತದಲ್ಲಿ ಉತ್ತರದಾಯಿತ್ವ ಎಂಬುದೇ ಮರೀಚಿಕೆಯಾಗಿದೆ. ದೇಶದ ನಾಗರಿಕರ ಮೇಲೆ ಆಡಳಿತಾತ್ಮಕ ಕ್ರೌರ್ಯ ನಡೆದಾಗ ಅಮಿತ್ ಶಾ ನಾಪತ್ತೆಯಾಗುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ, 2020-21ರಲ್ಲಿ ನಡೆದ ರೈತ ಹೋರಾಟದ ಸಮಯದಲ್ಲಿ ದೆಹಲಿಯ ಗಡಿಗಳಲ್ಲಿ ಕಾಂಕ್ರೀಟ್ ತಡೆಗೋಡೆ, ಮುಳ್ಳುತಂತಿ ಹಾಗೂ ರಸ್ತೆಗಳಿಗೆ ಕಬ್ಬಿಣದ ಮೊಳೆಗಳನ್ನು ಹೊಡದು ರೈತರನ್ನು ತಡೆಯಲು ಮೋದಿ ಸರ್ಕಾರ ಮತ್ತು ಅಮಿತ್ ಶಾ ಅವರ ಗೃಹ ಇಲಾಖೆ ಯತ್ನಿಸಿತ್ತು. ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲು ದೆಹಲಿಗೆ ಬರುತ್ತಿದ್ದ ರೈತರ ಎದುರು ಕೋಟೆ ಕಟ್ಟಿಕೊಂಡು ಅಡಗಿ ಕುಳಿತಿತ್ತು. ಮಾತ್ರವಲ್ಲ, ರೈತರ ಮೇಲೆ ಜಲಪಿರಂಗಿ, ಲಾಠಿ ಪ್ರಹಾರ ಹಾಗೂ ಟಿಯರ್ ಗ್ಯಾಸ್‌ಗಳನ್ನು ಪ್ರಯೋಗಿಸಿ, ದೌರ್ಜನ್ಯ ಎಸಗಿತು.
ಅದೇ ರೈತ ಹೋರಾಟದ ವೇಳೆ, ಲಖೀಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಇದೇ ಗೃಹ ಸಚಿವ ಅಮಿತ್ ಶಾ ಅವರ ಸಹೋದ್ಯೋಗಿ, ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಠೇಣಿಯ ಮಗ ಆಶಿಶ್ ಮಿಶ್ರಾ ಜೀಪು ಹರಿಸಿ 8 ಮಂದಿ ರೈತರನ್ನು ಕೊಂದಿದ್ದನು. ಆಗ, ರಾಜಕೀಯ ಹೊಣೆಗಾರಿಕೆಯ ಪ್ರಶ್ನೆ ಮುನ್ನೆಲೆಗೆ ಬಂದರೂ, ಯಾವುದೇ ಹೊಣೆಗಾರಿಕೆಗೆ ಮೋದಿ ಸರ್ಕಾರ ಮುಂದಾಗಲಿಲ್ಲ.
ಅಂತೆಯೇ, 2023ರಲ್ಲಿ ಇದೇ ಜಂತರ್ ಮಂತರ್‌ನಲ್ಲಿ ದೇಶಕ್ಕಾಗಿ ಪದಕ ಗೆದ್ದ ಮಹಿಳಾ ಕುಸ್ತಿಪಟುಗಳು ನ್ಯಾಯ ಕೇಳಿ ಧರಣಿ ಕುಳಿತಿದ್ದರು. ಹೊಸ ಸಂಸತ್ ಭವನ ಉದ್ಘಾಟನೆಯ ದಿನವೇ ಅವರನ್ನು ಅದೇ ದೆಹಲಿ ಪೊಲೀಸರು ಬೀದಿಗಳಲ್ಲಿ ಎಳೆದೊಯ್ದು, ಹಿಂಸಿಸಿ ಕ್ರೌರ್ಯ ಮರೆದರು.
ಇನ್ನೊಂದೆಡೆ, ಮಣಿಪುರದಲ್ಲಿ 2023ರಲ್ಲಿ ಆರಂಭವಾದ ಜನಾಂಗೀಯ ಸಂಘರ್ಷ ಜೀವಗಳನ್ನು ಕಸಿದುಕೊಂಡಿತು, ಮಹಿಳೆಯರನ್ನು ಬೆತ್ತಲುಗೊಳಿಸಿ ಬೀದಿಗಳಲ್ಲಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಯಿತು, ಸಾವಿರಾರು ಜನರನ್ನು ಮನೆಗಳಿಂದ ಹೊರದಬ್ಬಲಾಯಿತು, ಸಮಾಜವನ್ನು ಜನಾಂಗೀಯ ಗಡಿಗಳಲ್ಲಿ ವಿಭಜಿಸಿತು. ಶಸ್ತ್ರಾಗಾರಗಳಿಂದ ಆಯುಧಗಳು ಕಳವಾದವು. ಕುಟುಂಬಗಳು ಪರಿಹಾರ ಶಿಬಿರಗಳಿಗೆ ತಳ್ಳಲ್ಪಟ್ಟವು. ಒಂದು ರಾಜ್ಯ ಇಷ್ಟು ದೀರ್ಘಕಾಲ ಅಶಾಂತಿಯಲ್ಲಿದ್ದರೂ, ಆಂತರಿಕ ಭದ್ರತೆಯ ಹೊಣೆಹೊತ್ತಿರುವ ಕೇಂದ್ರ ಗೃಹ ಇಲಾಖೆ ನಿರ್ಲಜ್ಜ ಮೌನಕ್ಕೆ ಜಾರಿತು.
ಈ ಲೇಖನ ಓದಿದ್ದೀರಾ?: FCRA ತಿದ್ದುಪಡಿ | ವಿದೇಶಿ ದೇಣಿಗೆ ನಿಯಂತ್ರಣವೋ, ಧಾರ್ಮಿಕ ಸಂಸ್ಥೆಗಳ ಮೇಲಿನ ಸರ್ಕಾರಿ ಹಿಡಿತವೋ?
ಈ ಎಲ್ಲ ಸಂದರ್ಭಗಳಲ್ಲೂ ಕೇಂದ್ರ ಗೃಹ ಸಚಿವಾಲಯವು ‘ಘಟನೆಗಳ ರಾಜಕೀಯ ಹೊಣೆಗಾರಿಕೆ ಯಾರದ್ದು’ ಎಂಬ ಪ್ರಶ್ನೆಗೆ ಉತ್ತರಿಸಬೇಕಿತ್ತು. ಹೊಣೆಹೊರಬೇಕಿತ್ತು. ಉತ್ತರ ನೀಡಬೇಕಿತ್ತು. ಆದರೆ, ಉತ್ತರಿಸಲಿಲ್ಲ. ಬದಲಾಗಿ, ವೈಫಲ್ಯಗಳು ಸರಣಿಯಾಗಿ ಎದುರಾಗುತ್ತಿದ್ದರೂ ಅಧಿಕಾರದ ಶಿಖರದಲ್ಲಿರುವವರು ಯಾವತ್ತೂ ಉತ್ತರಿಸಬೇಕಿಲ್ಲ ಎಂಬಂತಹ ಧೋರಣೆಗೆ ಮೋದಿ-ಶಾ ಜೋಡಿ ತಲುಪಿದೆ.
ಮುಖ್ಯವಾಗಿ, ಈವರೆಗೆ ವೈಫಲ್ಯಗಳಿಗೆ ಹೊಣೆಗಾರಿಕೆ ಕೇಳುವ ಗಟ್ಟಿಧ್ವನಿಗಳು ಕಳೆದ ಒಂದು ದಶಕದಲ್ಲಿ ಕೊಂಚ ಹಿಂದೆ ಉಳಿದಿದ್ದವು. ಈಗ ಆ ಧ್ವನಿ ಬಿರುಗಾಳಿಯಂತೆ ಮುಂದೆ ಬಂದಿದೆ. ಈ ಬಿರುಗಾಳಿಗೆ ‘ಜೆನ್-ಝೀ’ ಎಂಬ ಹೊಸತಲೆಮಾರಿನ ಯುವಪಡೆ ನಾಯಕತ್ವ ನೀಡಿದೆ. ಅದು ವೈಫಲ್ಯಗಳಿಗೆ ಉತ್ತರದಾಯಿತ್ವ ಕೇಳುತ್ತಿದೆ.
ಈಗಾಗಲೇ, ಪರೀಕ್ಷಾ ಅಕ್ರಮಗಳ ಹೊಣೆಹೊತ್ತು ಕೇಂದ್ರ ಶಿಕ್ಷಣ ಖಾತೆಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತೆ ಮಾಡುವಲ್ಲಿ ‘ಜೆನ್-ಝೀ’ ಪ್ರತಿಭಟನೆ ಯಶಸ್ವಿಯಾಗಿದೆ. ಇಷ್ಟು ದಿನ ‘ನಾವು ನಡೆಸಿದ್ದೇ ಆಡಳಿತ – ಮಾಡಿದ್ದೇ ಕಾನೂನು’ ಎಂಬ ಧೋರಣೆಯಲ್ಲಿದ್ದ ಮೋದಿ ಸರ್ಕಾರದ ನಿದ್ರೆಗೆಡಿಸಿದೆ. ಈಗ, ದೇಶವಾಸಿಗಳ ಮೇಲೆ ನಿರಂತರವಾಗಿ ನಡೆದಿರುವ ಆಡಳಿತಾತ್ಮಕ ಕ್ರೌರ್ಯಕ್ಕೂ ಹೊಣೆಗಾರಿಕೆಯನ್ನು ಕೇಳುತ್ತಿದೆ.
ಪೊಲೀಸ್ ಅತಿರೇಕಗಳು ನಡೆದರೆ ಕಾನ್‌ಸ್ಟೆಬಲ್‌ಗಳ ಅಮಾನತುಗಳು ನಡೆಯುತ್ತವೆ. ಗುಪ್ತಚರ ವೈಫಲ್ಯವಾದರೆ ಅಧಿಕಾರಿಯ ವರ್ಗಾವಣೆ ಆಗುತ್ತದೆ. ಯಾವುದೇ ಇಲಾಖೆಯಲ್ಲಿನ ಅಕ್ರಮಗಳ ನಡೆದರೆ, ಅಲ್ಲಿನ ಅಧಿಕಾರಿಗಳ ಅಮಾನತು-ವಜಾ-ವರ್ಗಾವಣೆಗಳು ಜರುಗುತ್ತವೆ. ಹಾಗಿದ್ದಾಗ, ಭದ್ರತೆ ಹೆಸರಿನಲ್ಲಿ ದೇಶದ ಜನರ ಮೇಲೆ ನಡೆಯುವ ಕ್ರೌರ್ಯ ಮತ್ತು ವ್ಯವಸ್ಥೆಯಲ್ಲಿನ ಲೋಪಕ್ಕೆ ಅಮಿತ್ ಶಾ ಹೊಣೆ ಹೊರಬೇಕಲ್ಲವೇ? ರಾಜೀನಾಮೆ ನೀಡಬೇಕಲ್ಲವೇ?
ಅಧಿಕಾರಕ್ಕೆ ಮಾತ್ರ ವಿಳಾಸವಿದ್ದು, ಹೊಣೆಗಾರಿಕೆಗೆ ವಿಳಾಸವೇ ಇಲ್ಲ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದಕ್ಕೂ ಹೊಣೆಗಾರಿಕೆ ಇದ್ದೇ ಇದೆ. ಅದರಿಂದ, ಮೋದಿ ಆಗಲೀ, ಅಮಿತ್ ಶಾ ಆಗಲೀ ಹೊರತಲ್ಲ. ಅವರೂ ಹೊಣೆ ಹೊರಬೇಕು, ಉತ್ತರ ನೀಡಬೇಕು, ಉತ್ತರದಾಯಿ ಆಗಬೇಕು.
ಸರ್ಕಾರವು ಶಿಕ್ಷಣ ಸಚಿವರ ರಾಜೀನಾಮೆಯೊಂದಿಗೆ ರಾಜಕೀಯ ಹೊಣೆಗಾರಿಕೆಯ ತತ್ವವನ್ನು ಒಪ್ಪಿಕೊಂಡಿದೆ. ಈಗ ಅದೇ ಮಾನದಂಡ ಗೃಹ ಸಚಿವರಿಗೂ ಅನ್ವಯಿಸಬೇಕು. ಜಂತರ್ ಮಂತರ್‌ನ ಲಾಠಿಗಳಿಗೆ, ಮಣಿಪುರದ ವೈಫಲ್ಯಕ್ಕೆ, ಪ್ರತಿಭಟನೆಯ ಮೇಲಿನ ನಿರಂತರ ಬಲಪ್ರಯೋಗಕ್ಕೆ ಯಾರಾದರೂ ರಾಜಕೀಯವಾಗಿ ಉತ್ತರಿಸಲೇಬೇಕು. ಆ ಸರಪಳಿಯ ಕೊನೆಯ ಮೇಜು ಕೇಂದ್ರ ಗೃಹ ಸಚಿವರದ್ದೇ.



