ಭಾರತದಲ್ಲಿ ವಿದೇಶಿ ದೇಣಿಗೆ ಸ್ವೀಕರಿಸುವ ಸಂಸ್ಥೆಗಳು, ಎನ್‌ಜಿಒಗಳು ಹಾಗೂ ಧಾರ್ಮಿಕ ಸಂಘಟನೆಗಳನ್ನು ನಿಯಂತ್ರಿಸುವ ‘ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ’ (Foreign Contribution Regulation Act – FCRA) ಮತ್ತೊಮ್ಮೆ ತೀವ್ರ ಕಾನೂನು ಮತ್ತು ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಮೋದಿ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಲು ಮುಂದಾಗಿರುವ ‘FCRA (ತಿದ್ದುಪಡಿ) ಮಸೂದೆ-2026’ ಕೇವಲ ಹಣಕಾಸಿನ ಲೆಕ್ಕಪತ್ರಕ್ಕೆ ಸಂಬಂಧಿಸಿದ ತಾಂತ್ರಿಕ ಬದಲಾವಣೆಯಲ್ಲ; ಬದಲಿಗೆ ಇದು ಸರ್ಕಾರ, ಸ್ವಯಂಸೇವಾ ವಲಯ, ಧಾರ್ಮಿಕ ಸಂಸ್ಥೆಗಳು ಹಾಗೂ ಸಂವಿಧಾನಾತ್ಮಕ ಆಸ್ತಿಯ ಹಕ್ಕುಗಳ ನಡುವಿನ ಸಂಬಂಧವನ್ನೇ ಸಂಪೂರ್ಣವಾಗಿ ಮರುಪರಿಭಾಷಿಸಲು ಹೊರಟಿದೆ ಎಂದು ವಿರೋಧ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸುತ್ತಿವೆ.
ಕೇಂದ್ರ ಸರ್ಕಾರವು ಈ ತಿದ್ದುಪಡಿಯನ್ನು ರಾಷ್ಟ್ರೀಯ ಭದ್ರತೆ, ವಿದೇಶಿ ಹಣದ ಪಾರದರ್ಶಕತೆ ಹಾಗೂ ಅಕ್ರಮಗಳ ತಡೆಗೆ ಕಡ್ಡಾಯವೆಂದು ಸಮರ್ಥಿಸಿಕೊಳ್ಳುತ್ತಿದ್ದರೆ; ಕಾಂಗ್ರೆಸ್, ಟಿಎಂಸಿ, ಚರ್ಚ್‌ಗಳ ಕೌನ್ಸಿಲ್‌ಗಳು, ಮಾನವ ಹಕ್ಕುಗಳ ಸಂಸ್ಥೆಗಳು ಹಾಗೂ ಅಮೆರಿಕದ ಕೆಲವು ಸಂಸದರು ಇದನ್ನು ‘ಕಾರ್ಯನಿರ್ವಾಹಕ ಅಧಿಕಾರದ ಅಪಾಯಕಾರಿ ಅತಿಕ್ರಮಣ’ ಎಂದು ಕರೆಯುತ್ತಿದ್ದಾರೆ.
FCRA ಎಂದರೇನು? ಇತಿಹಾಸ ಮತ್ತು ಹಿನ್ನೆಲೆ
ಭಾರತದಲ್ಲಿರುವ ಯಾವುದೇ ವ್ಯಕ್ತಿ, ಸ್ವಯಂಸೇವಾ ಸಂಸ್ಥೆ (NGO), ಟ್ರಸ್ಟ್, ಧಾರ್ಮಿಕ ಸಂಘಟನೆ ಅಥವಾ ಶಿಕ್ಷಣ ಸಂಸ್ಥೆಗಳು ವಿದೇಶಗಳಿಂದ ಹಣ, ದೇಣಿಗೆ ಅಥವಾ ಆತಿಥ್ಯವನ್ನು ಪಡೆಯುವುದನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕೇಂದ್ರ ಗೃಹ ಸಚಿವಾಲಯವು ಜಾರಿಗೆ ತಂದಿರುವ ಕಾನೂನು ಎಫ್‌ಸಿಆರ್‌ಎ.
ವಿದೇಶಿ ಹಣವು ಭಾರತದ ಆಂತರಿಕ ಭದ್ರತೆ, ರಾಜಕೀಯ ಅಥವಾ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರದಂತೆ ತಡೆಯುವುದು. ವಿದೇಶದಿಂದ ಬರುವ ಹಣದ ಮೂಲ ಯಾವುದು ಮತ್ತು ಅದನ್ನು ಯಾವ ಉದ್ದೇಶಕ್ಕೆ (ಶಿಕ್ಷಣ, ಆರೋಗ್ಯ, ಸಮಾಜಸೇವೆ ಇತ್ಯಾದಿ) ಬಳಸಲಾಗುತ್ತಿದೆ ಎಂಬುದರ ಸ್ಪಷ್ಟ ಲೆಕ್ಕಪತ್ರವನ್ನು ಮೇಲ್ವಿಚಾರಣೆ ಮಾಡುವುದು ಹಾಗೂ ವಿದೇಶಿ ಹಣವನ್ನು ಕಳ್ಳಸಾಗಣೆ, ಬಲವಂತದ ಮತಾಂತರ, ದೇಶವಿರೋಧಿ ಚಟುವಟಿಕೆಗಳು ಅಥವಾ ರಾಜಕೀಯ ಪ್ರಭಾವಕ್ಕೆ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವುದು ಈ ಕಾಯ್ದೆಯ ಮುಖ್ಯ ಉದ್ದೇಶ.
ಅಂದಹಾಗೆ, ಯಾವುದೇ ದೇಶವು ತನ್ನ ಆಂತರಿಕ ರಾಜಕೀಯ ಅಥವಾ ಸಾಮಾಜಿಕ ವ್ಯವಸ್ಥೆಯ ಮೇಲೆ ವಿದೇಶಿ ಹಣದ ಅನಗತ್ಯ ಪ್ರಭಾವವನ್ನು ಬಯಸುವುದಿಲ್ಲ. ಆದ್ದರಿಂದಲೇ, ಶೀತಲ ಸಮರದ ಕಾಲದಲ್ಲಿ ವಿದೇಶಿ ಶಕ್ತಿಗಳು ಹಣದ ಮೂಲಕ ಭಾರತದ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಪ್ರಭಾವಿಸುತ್ತಿವೆ ಎಂಬ ಆತಂಕ ಹೆಚ್ಚಾಗಿದ್ದಾಗ, ಅಂದಿನ ಇಂದಿರಾ ಗಾಂಧಿ ಸರ್ಕಾರ 1976ರ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಮೊದಲ ಬಾರಿಗೆ FCRA ಕಾಯಿದೆಯನ್ನು ಜಾರಿಗೆ ತಂದಿತು.
ಕಾಲಕ್ರಮೇಣ ಜಾಗತಿಕ ವಹಿವಾಟು ಮತ್ತು ಎನ್‌ಜಿಒ ವಲಯ ಬೆಳೆದಂತೆ, ಯುಪಿಎ ಸರ್ಕಾರ 2010ರಲ್ಲಿ ಹೊಸ ಸ್ವರೂಪದ ಕಾಯಿದೆಯನ್ನು ಜಾರಿಗೆ ತಂದಿತು. 2010ರಲ್ಲಿ ಜಾರಿಗೆ ಬಂದ ಹೊಸ ಕಾಯಿದೆಯು, ಕೇವಲ ರಾಜಕೀಯ ನಿಯಂತ್ರಣಕ್ಕಷ್ಟೇ ಸೀಮಿತವಾಗದೆ ಎನ್‌ಜಿಒ ಮತ್ತು ಧಾರ್ಮಿಕ ಸಂಘಟನೆಗಳ ಮೇಲಿನ ಉಸ್ತುವಾರಿಯನ್ನು ಹೆಚ್ಚಿಸಿತು. ವಿದೇಶಿ ಹಣ ಪಡೆಯುವ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವುದು, ಪ್ರತಿ 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಿಸುವುದು, ನಿಯಮಿತವಾಗಿ ಲೆಕ್ಕಪತ್ರ ಸಲ್ಲಿಕೆ ಮಾಡುವುದು ಹಾಗೂ ಹಣ ದುರ್ಬಳಕೆಯಾಗದಂತೆ ತಡೆಯುವ ಕಟ್ಟುನಿಟ್ಟಿನ ಆಡಳಿತಾತ್ಮಕ ಚೌಕಟ್ಟನ್ನು ಇದು ಜಾರಿಗೆ ತಂದಿತು.
ಭಾರತದಲ್ಲಿ ಪ್ರಸ್ತುತ ಸುಮಾರು 16,000ಕ್ಕೂ ಹೆಚ್ಚು ಸಂಸ್ಥೆಗಳು ಸಕ್ರಿಯ FCRA ನೋಂದಣಿ ಹೊಂದಿದ್ದು, ವರ್ಷಕ್ಕೆ ಅಂದಾಜು 22,000 ಕೋಟಿ ರೂ.ಗಳಿಗೂ ಹೆಚ್ಚು ವಿದೇಶಿ ದೇಣಿಗೆಯನ್ನು ಪಡೆಯುತ್ತಿವೆ. ಈ ಹಣವು ಮೂಲಭೂತವಾಗಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ವಿಪತ್ತು ಪರಿಹಾರ ಹಾಗೂ ಧಾರ್ಮಿಕ ಸೇವೆಗಳಿಗೆ ಬಳಸಲ್ಪಡುತ್ತದೆ. ಆದಾಗ್ಯೂ, ಇಲ್ಲಿ ಗಮನಿಸಬೇಕಾದ ಮುಖ್ಯಅಂಶವೆಂದರೆ, ಅತಿ ಹೆಚ್ಚು ವಿದೇಶಿ ದೇಣಿಗೆ ಪಡೆಯುತ್ತಿರುವ ಸಂಘ ಆರ್‌ಎಸ್‌ಎಸ್ ಎಂದು ಗುರುತಿಸಲಾಗಿದೆ. ಆದರೆ, ಆರ್‌ಎಸ್‌ಎಸ್ ಈವರೆಗೆ ನೋಂದಣಿಯಾಗಿಲ್ಲ.
ಮೋದಿ ಸರ್ಕಾರದ ಅವಧಿಯಲ್ಲಿನ ಬದಲಾವಣೆಗಳು
2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ FCRA ಜಾರಿಯ ಸ್ವರೂಪದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿತು. ಲೆಕ್ಕಪತ್ರ ಸಲ್ಲಿಕೆಯಲ್ಲಿ ಲೋಪ, ನಿಯಮ ಉಲ್ಲಂಘನೆ ಮುಂತಾದ ಕಾರಣಗಳನ್ನು ನೀಡಿ ಗೃಹ ಸಚಿವಾಲಯವು ಸಾವಿರಾರು ಎನ್‌ಜಿಒಗಳ ಪರವಾನಗಿಯನ್ನು ರದ್ದುಗೊಳಿಸಿತು.
ವಿಶೇಷವಾಗಿ 2020ರಲ್ಲಿ ತಂದ ತಿದ್ದುಪಡಿಯು ಎನ್‌ಜಿಒಗಳ ಕಾರ್ಯಾಚರಣೆಯ ಮೇಲೆ ಭಾರಿ ಪರಿಣಾಮ ಬೀರಿತು: ಆ ತಿದ್ದುಪಡಿಗಳಲ್ಲಿ;
- ಹಣ ವರ್ಗಾವಣೆ ನಿಷೇಧ: ವಿದೇಶಿ ಹಣವನ್ನು ಪಡೆದ ದೊಡ್ಡ ಸಂಸ್ಥೆಯು ಅದನ್ನು ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡುವ ಸಣ್ಣ ಸಂಸ್ಥೆಗಳಿಗೆ ವರ್ಗಾಯಿಸುವಂತಿಲ್ಲ ಎಂದು ನಿಯಮ ತರಲಾಯಿತು. ಇದರಿಂದ, ಸಾವಿರಾರು ಸಣ್ಣ ಎನ್‌ಜಿಒಗಳು ಮುಚ್ಚಿಹೋದವು.
- ಆಡಳಿತ ವೆಚ್ಚದ ಮಿತಿ: ವಿದೇಶಿ ಹಣದಲ್ಲಿ ಆಡಳಿತ ವೆಚ್ಚಕ್ಕಾಗಿ ಬಳಸಬಹುದಾಗಿದ್ದ 50%ರಷ್ಟು ಮಿತಿಯನ್ನು ನೇರವಾಗಿ 20%ಗೆ ಇಳಿಸಲಾಯಿತು.
- ಒಂದೇ ಬ್ಯಾಂಕ್ ಶಾಖೆ: ದೇಶದ ಎಲ್ಲ ಸಂಸ್ಥೆಗಳ ವಿದೇಶಿ ದೇಣಿಗೆಯೂ ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಮುಖ್ಯ ಶಾಖೆಯ ಮೂಲಕವೇ ಬರಬೇಕೆಂಬ ನಿಯಮ ಕಡ್ಡಾಯವಾಯಿತು.
ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಹಲವು ರಾಜಕೀಯ ವಿಶ್ಲೇಷಕರು ಎತ್ತಿ ತೋರಿಸುವಂತೆ, ಈ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಭಾರತಕ್ಕೆ ಬರುತ್ತಿದ್ದ ವಿದೇಶಿ ದೇಣಿಗೆಯ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ. ಸ್ವತಂತ್ರ ಧ್ವನಿಗಳು ಮತ್ತು ಸಮಾಜಮುಖಿ ಕೆಲಸಗಳನ್ನು ಹತ್ತಿಕ್ಕಲು ಇದನ್ನು ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಇವೆ.

2026ರ ತಿದ್ದುಪಡಿ ಮಸೂದೆ: ಹೊಸದಾಗಿ ಬದಲಾಗುತ್ತಿರುವುದೇನು?
ಇಲ್ಲಿಯವರೆಗೆ ಎಫ್‌ಸಿಆರ್‌ಎ ಕಾನೂನು ಮುಖ್ಯವಾಗಿ ‘ಹಣದ ಹರಿವು ಮತ್ತು ಅದರ ಬಳಕೆ’ಗೆ ಮಾತ್ರ ಸೀಮಿತವಾಗಿತ್ತು. ಆದರೆ, 2026ರ ಹೊಸ ತಿದ್ದುಪಡಿ ಮಸೂದೆಯು ಹಣದಿಂದ ನಿರ್ಮಾಣವಾದ ‘ಆಸ್ತಿ ಮತ್ತು ಸ್ವತ್ತುಗಳ’ ಮೇಲೆಯೂ ನಿಯಂತ್ರಣ ಸಾಧಿಸಲು ಹೊರಟಿದೆ.
ಸರ್ಕಾರ ಹೇಳುವಂತೆ; “ಪ್ರಸ್ತುತ ಇರುವ ಕಾಯಿದೆಯಲ್ಲಿ ಒಂದು ದೊಡ್ಡ ಕಾನೂನು ಕೊರತೆಯಿದೆ. ಯಾವುದಾದರೂ ಸಂಸ್ಥೆಯ FCRA ಪರವಾನಗಿ ರದ್ದಾದರೆ ಅಥವಾ ಸಮಯಕ್ಕೆ ಸರಿಯಾಗಿ ನವೀಕರಣಗೊಳ್ಳದಿದ್ದರೆ, ಆ ಸಂಸ್ಥೆಯ ಬಳಿ ಉಳಿದುಕೊಳ್ಳುವ ವಿದೇಶಿ ಹಣ ಮತ್ತು ಆ ಹಣದಿಂದ ಗತಕಾಲದಲ್ಲಿ ನಿರ್ಮಾಣವಾದ ಸ್ಥಿರಾಸ್ತಿಗಳ (ಭೂಮಿ, ಕಟ್ಟಡಗಳು) ನಿರ್ವಹಣೆ ಹೇಗೆ ಎಂಬುದಕ್ಕೆ ಕಾಯಿದೆಯಲ್ಲಿ ಸ್ಪಷ್ಟ ನಿಯಮವಿರಲಿಲ್ಲ. ಇದರಿಂದ ಆಸ್ತಿಗಳ ದುರ್ಬಳಕೆಯಾಗುವ ಸಾಧ್ಯತೆಯಿದೆ. ಆದ್ದರಿಂದ, ಆ ಆಸ್ತಿಗಳ ಮೇಲೂ ನಿಯಂತ್ರಣ ತರುವ ಅಗತ್ಯವಿದೆ” ಎಂದು ಮೋದಿ ಸರ್ಕಾರ ವಾದಿಸುತ್ತಿದೆ.
ಇದಕ್ಕಾಗಿ ಮಸೂದೆಯಲ್ಲಿ; ಸಂಸ್ಥೆಯೊಂದರ ನೋಂದಣಿ ರದ್ದಾದಾಗ, ನವೀಕರಣಗೊಳ್ಳದಿದ್ದಾಗ ಅಥವಾ ಆ ಸಂಸ್ಥೆಯು ಅಸ್ತಿತ್ವದಲ್ಲೇ ಇಲ್ಲದಂತಾದಾಗ, ವಿದೇಶಿ ದೇಣಿಗೆಗಳು ಮತ್ತು ಅಂತಹ ಹಣದಿಂದ ಸೃಷ್ಟಿಯಾದ ಆಸ್ತಿಗಳ ಉಸ್ತುವಾರಿ ವಹಿಸಿಕೊಳ್ಳಲು ‘Designated Authority’ (ನಿರ್ದಿಷ್ಟ ಪ್ರಾಧಿಕಾರ) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ಪ್ರಸ್ತಾವಿತ ಮಸೂದೆಯ ಕನಿಷ್ಠ ಮೂರು ನಿಬಂಧನೆಗಳು ಸಂಘ-ಸಂಸ್ಥೆಗಳಿಗೆ ಕಳವಳವನ್ನು ಹೆಚ್ಚಿಸಿವೆ.
- Section 14B: ಎಫ್‌ಸಿಆರ್‌ಎ ಪ್ರಮಾಣಪತ್ರದ ‘ರದ್ದತಿ/ಮುಕ್ತಾಯ’ಕಲ್ಪನೆಯನ್ನು ಪರಿಚಯಿಸುತ್ತದೆ. ಸಂಸ್ಥೆಯು ನವೀಕರಣಕ್ಕಾಗಿ ಅರ್ಜಿ ಸಲ್ಲಿಸದಿದ್ದರೆ, ಅದರ ನವೀಕರಣವನ್ನು ನಿರಾಕರಿಸಿದರೆ ಅಥವಾ ನವೀಕರಣಗೊಳ್ಳದೆ ಅವಧಿ ಮುಗಿದರೆ ಆ ಪ್ರಮಾಣಪತ್ರವು ಮುಕ್ತಾಯಗೊಂಡಿದೆ ಎಂದು ಭಾವಿಸಲಾಗುತ್ತದೆ.
- Section 16A: ಪ್ರಮಾಣಪತ್ರವು ಮುಕ್ತಾಯಗೊಂಡ ತಕ್ಷಣ ಸಂಸ್ಥೆಯು ಸ್ವೀಕರಿಸಿದ ವಿದೇಶಿ ದೇಣಿಗೆಗಳು ಮತ್ತು ಅವುಗಳಿಂದ ಸೃಷ್ಟಿಯಾದ ಆಸ್ತಿಗಳು ‘ನಿರ್ದಿಷ್ಟ ಪ್ರಾಧಿಕಾರ’ದ ವಶಕ್ಕೆ ಹೋಗುತ್ತವೆ ಎಂದು ಪ್ರಸ್ತಾಪಿಸುತ್ತದೆ. ಪ್ರಾಧಿಕಾರವು ಈ ಆಸ್ತಿಗಳನ್ನು ನಿರ್ವಹಿಸಬಹುದು ಮತ್ತು ಸಂಸ್ಥೆಯು ನಿಗದಿತ ಅವಧಿಯಲ್ಲಿ ಹೊಸ ಅಥವಾ ನವೀಕೃತ ನೋಂದಣಿಯನ್ನು ಪಡೆದುಕೊಂಡರೆ ಅವುಗಳನ್ನು ಹಿಂತಿರುಗಿಸಬಹುದು. ಅದು ಸಾಧ್ಯವಾಗದಿದ್ದರೆ, ಆಸ್ತಿಗಳು ಶಾಶ್ವತವಾಗಿ ಪ್ರಾಧಿಕಾರದ ವಶಕ್ಕೆ ಸೇರುತ್ತವೆ, ಇದನ್ನು ಪ್ರಾಧಿಕಾರವು ಸರ್ಕಾರಿ ಇಲಾಖೆಗಳು ಅಥವಾ ಸಂಸ್ಥೆಗಳಿಗೆ ವರ್ಗಾಯಿಸಬಹುದು ಅಥವಾ ಕಾನೂನಿನ ಪ್ರಕಾರ ವಿಲೇವಾರಿ ಮಾಡಬಹುದು.
- Section 16B: ಈ ತಿದ್ದುಪಡಿ ಜಾರಿಗೆ ಬರುವ ಮುಂಚೆಯೇ ಹಳೆಯ ಕಾನೂನಿನ ಅಡಿಯಲ್ಲಿ ಸೇರಿದ್ದ ಆಸ್ತಿಗಳಿಗೂ ಈ ಹೊಸ ವ್ಯವಸ್ಥೆಯನ್ನು ಅನ್ವಯಿಸುತ್ತದೆ. ತಿದ್ದುಪಡಿಯನ್ನು ವಿರೋಧಿಸುವವರು, ವರ್ಷಗಳ ಹಿಂದೆ ಎಫ್‌ಸಿಆರ್‌ಎ ನೋಂದಣಿ ರದ್ದಾದ ಸಂಸ್ಥೆಗಳ ಮೇಲೆಯೂ ಇದು ಪರಿಣಾಮ ಬೀರಬಹುದು ಎಂದು ಮಸೂದೆ ಹೇಳಿದೆ.
ಪರಿಣಾಮವಾಗಿ, ವಿದೇಶಿ ದೇಣಿಗೆ ಮಾತ್ರವಲ್ಲದೆ, ಸಂಪೂರ್ಣವಾಗಿ ದೇಶೀಯ ನಿಧಿಯಿಂದ ನಡೆಯುತ್ತಿರುವ ಸಂಸ್ಥೆಗಳ ಪ್ರಮಾಣಪತ್ರಗಳು ‘ಮುಕ್ತಾಯ’ಗೊಂಡರೂ, ಅವುಗಳ ಆಸ್ತಿಗಳೂ ಈ ಹೊಸ ವ್ಯವಸ್ಥೆಯ ವ್ಯಾಪ್ತಿಗೆ ಬರಬಹುದು. ಹೀಗಾಗಿ ವಿದೇಶಿ ದೇಣಿಗೆಯಿಂದ ನಿರ್ಮಿಸಲಾದ ಶಾಲೆಗಳು, ಆಸ್ಪತ್ರೆಗಳು ಹಾಗೂ ಕಮ್ಯುನಿಟಿ ಸೆಂಟರ್‌ಗಳು ‘ನಿರ್ದಿಷ್ಟ ಪ್ರಾಧಿಕಾರ’ದ ನಿಯಂತ್ರಣಕ್ಕೆ ಬರುವ ಸಾಧ್ಯತೆಯಿದೆ.
ಅಂದರೆ, ದಶಕಗಳ ಹಿಂದೆ ವಿದೇಶಿ ನೆರವಿನಿಂದ ನಿರ್ಮಾಣಗೊಂಡಿರುವ ಚರ್ಚ್, ಮಸೀದಿ, ಮಿಷನರಿ ಆಸ್ಪತ್ರೆ ಅಥವಾ ಶಿಕ್ಷಣ ಸಂಸ್ಥೆಗಳ ಪರವಾನಗಿಯು ನವೀಕರಣಗೊಳ್ಳದೆ ಆಡಳಿತಾತ್ಮಕ ಕಾರಣಕ್ಕೆ ರದ್ದಾದರೆ, ಸರ್ಕಾರ ಆ ಇಡೀ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದು ಎಂಬುದು ಸ್ಪಷ್ಟವಾಗಿದೆ.
ಉದಾಹರಣೆಗೆ, 30-40 ವರ್ಷಗಳ ಹಿಂದೆ ನಿರ್ಮಿಸಲಾದ ಆಸ್ಪತ್ರೆಯೊಂದರ 10%ರಷ್ಟು ವೆಚ್ಚ ವಿದೇಶಿ ದೇಣಿಗೆಯಿಂದ ನಿರ್ಮಾಣವಾಗಿದ್ದು, ನಂತರ ಅದು ಸಂಪೂರ್ಣವಾಗಿ ದೇಶೀಯ ಆದಾಯದಿಂದಲೇ ನಡೆಯುತ್ತಿದ್ದರೂ ಸಹ, ನವೀಕರಣ ರದ್ದಾದರೆ ಆ ಇಡೀ ಕಟ್ಟಡ ‘Designated Authority’ ವಶಕ್ಕೆ ಹೋಗುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಲಾಗುತ್ತಿದೆ.
‘ಎನ್‌ಜಿಒಗಳು ಮತ್ತು ಸಮುದಾಯ ಸಂಸ್ಥೆಗಳಿಗೆ ಹಾನಿಕಾರಕ’
ಪ್ರಸ್ತಾವಿತ ಕಾನೂನನ್ನು ‘ಸಂಪೂರ್ಣವಾಗಿ ಸಂವಿಧಾನಬಾಹಿರ’ ಎಂದು ಬಣ್ಣಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ (ಎಫ್‌ಸಿಆರ್‌ಎ) ಮಸೂದೆಯು ಎನ್‌ಜಿಒಗಳು ಮತ್ತು ಸಮುದಾಯ ಸಂಸ್ಥೆಗಳಿಗೆ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳು ನಡೆಸುತ್ತಿರುವ ಸಂಸ್ಥೆಗಳಿಗೆ ಹಾನಿ ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಯಾವುದೇ ಕಾರಣಕ್ಕೂ ಈ ಮಸೂದೆ ಅಂಗೀಕಾರಗೊಳ್ಳಲು ಕಾಂಗ್ರೇಸ್ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ಪ್ರಯತ್ನಗಳಿಗೆ ಈ ಮಸೂದೆಯು ಇತ್ತೀಚಿನ ಉದಾಹರಣೆಯಾಗಿದೆ ಎಂದಿದ್ದಾರೆ.
ವೇಣುಗೋಪಾಲ್ ಅವರು ಈ ಮಸೂದೆಯನ್ನು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ತೂಗಾಡುತ್ತಿರುವ ‘ಬೆದರಿಕೆ’ಯ ತೂಗುಗತ್ತಿ ಎಂದು ಕರೆದಿದ್ದು, ಕೇರಳದ ಕ್ರಿಶ್ಚಿಯನ್ ಸಂಸ್ಥೆಗಳು ಸೇರಿದಂತೆ ಇತರ ಸಂಸ್ಥೆಗಳನ್ನು ಹೆದರಿಸುವ ಮತ್ತು ನಿಯಂತ್ರಿಸುವ ಉದ್ದೇಶಪೂರ್ವಕ ಯತ್ನ ಇದಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸ್ವಯಂಸೇವಾ ಸಂಸ್ಥೆಗಳು ಮತ್ತು ಸಮಾಜಸೇವಾ ಸಂಸ್ಥೆಗಳ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸುವ ನಿಬಂಧನೆಗಳು ಈ ಮಸೂದೆಯಲ್ಲಿವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸಂಸದ ಶಶಿತರೂರ್ ಅವರು; “ಮಸೂದೆಯು ಪಾರದರ್ಶಕತೆ ಮತ್ತು ನಿಯಂತ್ರಣದ ಹೆಸರಿನಲ್ಲಿ ನಾಗರಿಕ ಸಮಾಜ ಮತ್ತು ಸ್ವತಂತ್ರ ಸಂಸ್ಥೆಗಳ ಮೇಲಿನ ಕಾರ್ಯಾಂಗದ ಅಧಿಕಾರ ಕೇಂದ್ರೀಕರಣವನ್ನು ಅಪಾಯಕಾರಿ ಮಟ್ಟಕ್ಕೆ ಹೆಚ್ಚಿಸಿದೆ. ಎನ್‌ಜಿಒಗಳು, ಚಿಂತಕರ ಚಾವಡಿಗಳು ಹಾಗೂ ಮಾನವ ಹಕ್ಕುಗಳ ಸಂಘಟನೆಗಳನ್ನು ಅಭಿವೃದ್ಧಿಯ ಪಾಲುದಾರರೆಂದು ಪರಿಗಣಿಸುವ ಬದಲು, ಅವುಗಳನ್ನು ಅನುಮಾನದಿಂದ ನೋಡುತ್ತಿರುವ ಸರ್ಕಾರವು ಅಂತಾರಾಷ್ಟ್ರೀಯ ಧನಸಹಾಯದ ಮೇಲಿರುವ ಅವುಗಳ ಅವಲಂಬನೆಯನ್ನೇ ಗುರಿಯಾಗಿಸಿಕೊಂಡಿದೆ. ಈಗಾಗಲೇ ನಿಯಮಗಳ ಕಠಿಣ ಜಾರಿಯಿಂದಾಗಿ ವಿದೇಶಿ ಹಣದ ಹರಿವಿನಲ್ಲಿ 87%ರಷ್ಟು ಕುಸಿತ ಕಂಡುಬಂದಿದ್ದು, ಸಾವಿರಾರು ಸಮಾಜಸೇವಾ ಸಂಸ್ಥೆಗಳು ಮುಚ್ಚಿಹೋಗಿವೆ. ಈ ಹೊಸ ತಿದ್ದುಪಡಿಯು ಪರವಾನಗಿ ರದ್ದಾಗ ಸಂಘ-ಸಂಸ್ಥೆಗಳ ಆಸ್ತಿ-ಪಾಸ್ತಿಗಳನ್ನು ಸರ್ಕಾರವು ವಶಪಡಿಸಿಕೊಳ್ಳುವ, ನಿರ್ವಹಿಸುವ ಮತ್ತು ಮಾರಾಟ ಮಾಡಿ ಹಣವನ್ನು ಭಾರತದ ಸಂಚಿತ ನಿಧಿಗೆ ಜಮಾ ಮಾಡುವ ಅಧಿಕಾರವನ್ನು ನೀಡುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, “ಮಸೂದೆಯು ದೇಶಾದ್ಯಂತ, ವಿಶೇಷವಾಗಿ ಕೇರಳದಂತಹ ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚು ವರ್ಷಗಳಿಂದ ಜಾತಿ-ಧರ್ಮದ ಭೇದವಿಲ್ಲದೆ ಸಮಾಜಸೇವೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ಚರ್ಚ್‌ಗಳು ಮತ್ತು ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗಳ ಅಸ್ತಿತ್ವಕ್ಕೆ ತೀವ್ರ ಭಂಗ ತರಲಿದೆ. ಸಣ್ಣ ಆಡಳಿತಾತ್ಮಕ ವಿಳಂಬ ಅಥವಾ ತಪ್ಪು ನಿರ್ಧಾರದಿಂದಾಗಿ 500 ಹಾಸಿಗೆಗಳ ಬೃಹತ್ ಆಸ್ಪತ್ರೆಯು ಸರ್ಕಾರದ ವಶಕ್ಕೆ ಹೋಗುವ ಅಪಾಯವಿದ್ದು, ಇದರಿಂದ ಮೂಲಭೂತ ಸೇವೆಗಳನ್ನು ಪಡೆಯುತ್ತಿರುವ ಸಾಮಾನ್ಯ ಜನರೇ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕಾಯಿದೆಯಲ್ಲಿ ನ್ಯಾಯಾಂಗ ಪರಿಹಾರವನ್ನು ಸೀಮಿತಗೊಳಿಸಿರುವುದರಿಂದ ಸಂಸ್ಥೆಗಳು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ. ಯಾವುದೇ ಸೂಕ್ತ ಪರಿಹಾರವಿಲ್ಲದೆ ಹಳೆಯ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಆಸ್ತಿಯ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸಂಸ್ಥೆಗಳ ಆಸ್ತಿ ನಿರ್ವಹಣೆಯ ಹಕ್ಕನ್ನು ಕಸಿದುಕೊಳ್ಳಲಿದೆ” ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇಲ್ಲಿ ಹೆಣ್ಣು ಮಕ್ಕಳನ್ನ ದಷ್ಟಪುಷ್ಟವಾಗಿ ಬೆಳೆಸುವುದು ಭದ್ರ ಭವಿಷ್ಯಕ್ಕಾಗಿ ಅಲ್ಲ, ʼಸಂಪಾದನೆʼಗಾಗಿ!
ಅಂತೆಯೇ, ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅವರು ಈ ಮಸೂದೆಯನ್ನು ‘ದಬ್ಬಾಳಿಕೆ’ಯ ಸಾಧನ ಎಂದು ಕರೆದಿದ್ದಾರೆ. ಇದರ ಕುರಿತು ಚರ್ಚಿಸಲು ಸರ್ವಪಕ್ಷ ಸಭೆಗೆ ಆಗ್ರಹಿಸಿದ್ದಾರೆ. “ಪ್ರಸ್ತಾವಿತ ಮಸೂದೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳ ಮೇಲೆ ‘ಅತಿಯಾದ ಕಾರ್ಯಾಂಗೀಯ ನಿಯಂತ್ರಣ’ಕ್ಕೆ ಕಾರಣವಾಗಬಹುದು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
“ದಶಕಗಳಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭಾರತದ ಅತ್ಯಂತ ಬಡ ಹಾಗೂ ಶೋಷಿತ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನು ದುರ್ಬಲಗೊಳಿಸುವ ಮತ್ತು ಧ್ವಂಸಗೊಳಿಸುವ ಅಪಾಯವನ್ನು ಮಸೂದೆ ಹೊಂದಿದೆ” ಎಂದು ಅವರು ಹೇಳಿದ್ದಾರೆ.
ಅಮೆರಿಕದಿಂದಲೂ ಟೀಕೆ
ವೆಸ್ಟ್ ವರ್ಜೀನಿಯಾದ ರಿಪಬ್ಲಿಕನ್ ಸಂಸದ ರೈಲಿ ಮೂರ್, ಪ್ರಸ್ತಾವಿತ FCRA ತಿದ್ದುಪಡಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ‘ಕ್ರಿಶ್ಚಿಯನ್ನರ ಮೇಲಿನ ನೇರ ದಾಳಿ’ ಎಂದು ಕರೆದಿದ್ದಾರೆ. ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮೂರ್, “ನಮ್ಮ ಕರ್ತನಾದ ಯೇಸು ಕ್ರಿಸ್ತನ ಪುನರುತ್ಥಾನದ ಕೆಲವೇ ದಶಕಗಳ ನಂತರ ಅಪೊಸ್ತಲ ಸಂತ ಥಾಮಸ್ ಮಲಬಾರ್ ಕರಾವಳಿಗೆ ಪ್ರಯಾಣಿಸಿದಂದಿನಿಂದ ಭಾರತದಲ್ಲಿ ಕ್ರಿಶ್ಚಿಯನ್ನರಿದ್ದಾರೆ. ಇಷ್ಟೊಂದು ಸುದೀರ್ಘ ಕ್ರಿಶ್ಚಿಯನ್ ಇತಿಹಾಸವಿದ್ದರೂ, ಭಾರತದ ಸಂಸತ್ತು ಚರ್ಚ್‌ಗಳು ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳನ್ನು ಸರ್ಕಾರ ವಶಪಡಿಸಿಕೊಳ್ಳಲು ಅವಕಾಶ ನೀಡುವಂತೆ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ (FCRA) ನಿಯಮಗಳನ್ನು ತಿದ್ದುಪಡಿ ಮಾಡಲು ಪರಿಶೀಲಿಸುತ್ತಿದೆ. ಇದು ಕ್ರಿಶ್ಚಿಯನ್ನರ ಮೇಲಿನ ದಾಳಿಯಾಗಿದೆ. ಇದು, ಭಾರತದೊಂದಿಗಿನ ಅಮೆರಿಕದ ದ್ವಿಪಕ್ಷೀಯ ಬಾಂಧವ್ಯದ ವಿಷಯದಲ್ಲಿ ದೊಡ್ಡ ಕಳವಳಕಾರಿ ಅಂಶವಾಗಬಹುದು” ಎಂದು ಹೇಳಿದ್ದಾರೆ.
ಸರ್ಕಾರದ ವಿವರಣೆ ಮತ್ತು ಗೃಹ ಸಚಿವ ಅಮಿತ್ ಶಾ ಭರವಸೆ
ಕೇಂದ್ರ ಸರ್ಕಾರವು ಈ ಎಲ್ಲ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ. “ತಿದ್ದುಪಡಿ ಮಸೂದೆಯು ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯ ಅಥವಾ ಎನ್‌ಜಿಒಗಳನ್ನು ಗುರಿಯಾಗಿಸಿಕೊಂಡಿಲ್ಲ. ಬಲವಂತದ ಮತಾಂತರ, ದೇಶವಿರೋಧಿ ಚಟುವಟಿಕೆಗಳು ಹಾಗೂ ವಿದೇಶಿ ಹಣದ ದುರ್ಬಳಕೆಯನ್ನು ತಡೆಯುವುದಷ್ಟೇ ಸರ್ಕಾರದ ಉದ್ದೇಶ. ವಿರೋಧ ಪಕ್ಷಗಳು ಹಾಗೂ ಎಡಪಂಥೀಯರು ಈ ಮಸೂದೆಯ ಬಗ್ಗೆ ಸುಳ್ಳು ಮಾಹಿತಿ ಹರಡಿ ಆತಂಕ ಸೃಷ್ಟಿಸುತ್ತಿದ್ದಾರೆ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ರಿಜಿಜು ಹೇಳಿದ್ದಾರೆ.
ಮಿಜೋರಾಂ ಮುಖ್ಯಮಂತ್ರಿ ನೇತೃತ್ವದ ನಿಯೋಗದೊಂದಿಗೆ ಸಭೆ ನಡೆಸಿರುವ ಅಮಿತ್ ಶಾ, “ಮಸೂದೆಯಲ್ಲಿ ಯಾವುದೇ ಶಿಕ್ಷಾತ್ಮಕ ಪೂರ್ವಾನ್ವಯ (penal retrospective effect) ಇರುವುದಿಲ್ಲ. ಹಳೆಯ ಉಲ್ಲಂಘನೆಗಳಿಗೆ ಹೊಸ ಕಾನೂನಿನಡಿ ಶಿಕ್ಷೆ ವಿಧಿಸುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.
ಭರವಸೆಗೂ – ವಾಸ್ತವಕ್ಕೂ ಭಾರೀ ವ್ಯತ್ಯಾಸ
ಅಮಿತ್ ಶಾ ಅವರು ‘ಶಿಕ್ಷಾತ್ಮಕ ಪೂರ್ವಾನ್ವಯ ಇಲ್ಲ’ ಎಂದು ಭರವಸೆ ನೀಡಿದ್ದರೂ, ಮಿಜೋರಾಂ ನಿಯೋಗ ಮತ್ತು ಧಾರ್ಮಿಕ ನಾಯಕರ ಆತಂಕ ಶಮನಗೊಂಡಿಲ್ಲ. ಏಕೆಂದರೆ, ಕಾನೂನಿನ ಭಾಷೆ ಮತ್ತು ಸರ್ಕಾರದ ಭರವಸೆಯ ನಡುವೆ ಭಾರೀ ವ್ಯತ್ಯಾಸವಿದೆ.
ಕಾನೂನು ತಜ್ಞರ ಪ್ರಕಾರ, “ಸರ್ಕಾರ ‘ಹಳೆಯ ತಪ್ಪಿಗೆ ಹೊಸ ಶಿಕ್ಷೆ ನೀಡುವುದಿಲ್ಲ’ ಎಂದು ಹೇಳುತ್ತಿರಬಹುದು. ಆದರೆ, ಮಸೂದೆಯ ಸೆಕ್ಷನ್ 16B ಪ್ರಕಾರ ಹಳೆಯ ಕಾಲದಲ್ಲಿ ವಿದೇಶಿ ಹಣದಿಂದ ನಿರ್ಮಾಣವಾಗಿರುವ ‘ಆಸ್ತಿ’ಗಳು ಹೊಸ ನಿಯಂತ್ರಣ ವ್ಯವಸ್ಥೆಯೊಳಗೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಅಂದರೆ ಶಿಕ್ಷೆ ಇಲ್ಲದಿರಬಹುದು, ಆದರೆ ಆಸ್ತಿಯ ಮೇಲಿನ ನಿಯಂತ್ರಣವನ್ನು ಸರ್ಕಾರ ಪಡೆದುಕೊಳ್ಳಲಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಹೇಳಿದ್ದಾರೆ.



