ಪ್ರಜಾಪ್ರಭುತ್ವದ ಹಿರಿಮೆ ಕೇವಲ ಭಾಷಣಗಳಲ್ಲಿಲ್ಲ. ವಿಮರ್ಶೆ ಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡುವುದರಲ್ಲಿದೆ. ವ್ಯಕ್ತವಾಗುವ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡುವ ಬದ್ಧತೆಯಲ್ಲಿದೆ. ಆದರೆ, ಮೋದಿ ಸರ್ಕಾರ ಮತ್ತೆ-ಮತ್ತೆ ಪ್ರಶ್ನೆಗಳು ಮತ್ತು ವಿಮರ್ಶೆಗಳಿಂದ ತಪ್ಪಿಸಿಕೊಳ್ಳುವುದನ್ನೇ ಆಯ್ದುಕೊಳ್ಳುತ್ತಿದೆ.
ಒಬ್ಬ ಪತ್ರಕರ್ತೆ ಪ್ರಧಾನಿಯನ್ನು ಪ್ರಶ್ನಿಸಿದರೆ, ಪ್ರಜಾಪ್ರಭುತ್ವ ರಾಷ್ಟ್ರದ ನಾಯಕನಾಗಿ ಆ ಪ್ರಶ್ನೆಗೆ ಉತ್ತರಿಸುವುದು ಪ್ರಧಾನಿಯ ಕರ್ತವ್ಯ. ಆದರೆ, ಆ ಪತ್ರಕರ್ತೆ ಭಾರತಕ್ಕೆ ಬರಲು ಪಡೆದಿದ್ದ ವೀಸಾವನ್ನೇ ಕೊನೆಯ ಕ್ಷಣದಲ್ಲಿ ರದ್ದುಪಡಿಸಿದರೆ, ಏನರ್ಥ? ಹೈದರಾಬಾದ್ನಲ್ಲಿ ಕಾಂಗ್ರೆಸ್ ಆಯೋಜಿಸಿರುವ ‘ಭಾರತ್ ಶೃಂಗಸಭೆ’ಗೆ ಆಹ್ವಾನಿತರಾಗಿದ್ದ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸೆನ್ ಸೇರಿದಂತೆ 115 ವಿದೇಶಿ ಭಾಷಣಕಾರರು ಭಾರತ ಪ್ರವೇಶಿಸಿದಂತೆ ನಿರ್ಬಂಧಿಸಲಾಗಿದೆ. ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ. ಈ ಬೆಳವಣಿಗೆಯನ್ನು ಗಮನಿಸುತ್ತಿರುವ ದೇಶವಾಸಿಗಳಲ್ಲಿ ‘ಮೋದಿ ಭಯಗೊಂಡಿದ್ದಾರೆಯೇ’ ಎಂಬ ಪ್ರಶ್ನೆ ಸಹಜವಾಗಿ ವ್ಯಕ್ತವಾಗುತ್ತಿದೆ.
ನವೆಂಬರ್ 13 ಮತ್ತು 14ರಂದು ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರ ಆಯೋಜಿಸಿರುವ ‘ಭಾರತ್ ಶೃಂಗಸಭೆ’ಗೆ ಭಾಗಿಯಾಗಲು ಭಾರತಕ್ಕೆ ಬರಲು ವಿದೇಶಾಂಗ ಸಚಿವಾಲಯವು 315 ವಿದೇಶಿ ಭಾಷಣಕಾರರಿಗೆ ಅನುಮೋದನೆ ನೀಡಿತ್ತು. ಆದರೆ, ಅವರಲ್ಲಿ 115 ಮಂದಿಗೆ ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಇದಕ್ಕೆ, ಕೇಂದ್ರ ಗೃಹ ಸಚಿವಾಲಯದ ಧೋರಣೆಯೇ ಕಾರಣವೆಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ‘ವೀಸಾ ನೀಡುವುದು ಅಥವಾ ನಿರಾಕರಿಸುವುದು ಸಾರ್ವಭೌಮ ರಾಷ್ಟ್ರದ ಅಧಿಕಾರಕ್ಕೆ ಸಂಬಂಧಿಸಿದ ವಿಚಾರ’ ಎಂದಿದ್ದಾರೆ. ಜೈಸ್ವಾಲ್ ಅವರ ಸಮರ್ಥನೆಯ ಈ ಹೇಳಿಕೆ ತರೂರ್ ಆರೋಪಕ್ಕೆ ಪುಷ್ಟಿ ನೀಡಿದೆ.
ಅಂಹದಾಗೆ, ಪ್ರಶ್ನೆ ಇರುವುದು ದೇಶದ ಸಾರ್ವಭೌಮ ಅಧಿಕಾರ ಕುರಿತಾದುದ್ದಲ್ಲ. ಬದಲಾಗಿ, ಆ ಅಧಿಕಾರವನ್ನು ಬಳಸಿದ ರೀತಿಯ ಕುರಿತು. ಒಮ್ಮೆ ಅನುಮತಿ ನೀಡಿದ ವ್ಯಕ್ತಿಗಳ ಪ್ರವೇಶವನ್ನು ಕೊನೆಯ ಕ್ಷಣದಲ್ಲಿ ತಡೆದದ್ದು ಯಾಕೆ? ಅವರಿಂದ ಭಾರತದ ಭದ್ರತೆಗೆ ಅಪಾಯವಿತ್ತೇ ಅಥವಾ ಅವರ ಅಭಿಪ್ರಾಯಗಳು ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದವೇ? ಈ ಪ್ರಶ್ನೆಗಳಿಗೆ ಉತ್ತರಿಸಿದೆ, ಅಧಿಕಾರದ ನೆಪವೊಡ್ಡುವುದು ಪಲಾಯನವಾದವಷ್ಟೇ!
ಅದರಲ್ಲೂ, ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ವಿಷಯದಲ್ಲಿ ಕೇಂದ್ರ ಸರ್ಕಾರದ ಧೋರಣೆ ಸ್ಪಷ್ಟವಾಗಿ ಕಾಣುತ್ತದೆ. ಇದೇ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ನಾರ್ವೆಗೆ ಭೇಟಿ ನೀಡಿದ್ದಾಗ, ಹೆಲ್ಲೆ ಲಿಂಗ್ ಅವರು ‘ಸ್ವತಂತ್ರ ಪತ್ರಿಕಾ ವ್ಯವಸ್ಥೆಯಿರುವ ನಾರ್ವೆಯ ಮಾಧ್ಯಮಗಳ ಪ್ರಶ್ನೆಗಳನ್ನು ಮೋದಿ ಸ್ವೀಕರಿಸುತ್ತಾರೆಯೇ’ ಎಂದು ನೇರವಾಗಿ ಪ್ರಶ್ನಿಸಿದ್ದರು. ಇದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ, ಅದೇ ಪತ್ರಕರ್ತೆ ಭಾರತದ ಪತ್ರಿಕಾ ಸ್ವಾತಂತ್ರ್ಯದ ಕುರಿತ ಶೃಂಗಸಭೆಯಲ್ಲಿ ಭಾಗವಹಿಸದಂತೆ ಮೋದಿ ಸರ್ಕಾರ ತಡೆದಿದೆ. ಅಗತ್ಯ ರಾಜಕೀಯ ಅನುಮತಿ ಮತ್ತು ವೀಸಾ ಪಡೆದಿದ್ದರೂ ಕೊನೆಯ ಕ್ಷಣದಲ್ಲಿ ಅವರ ಪ್ರಯಾಣಕ್ಕೆ ತಡೆಯೊಡ್ಡಲಾಗಿದೆ. ಈ ಹಿಂದೆ, ತಾವು ಮೋದಿಯವರಿಗೆ ಪ್ರಶ್ನೆ ಕೇಳಿದ್ದೇ ಇದಕ್ಕೆ ಕಾರಣ ಇರಬಹುದು ಎಂದು ಹೆಲ್ಲೆ ಲಿಂಗ್ ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ನಾರ್ವೆ ಮತ್ತು ಭಾರತದ ಪತ್ರಿಕಾ ಸ್ವಾತಂತ್ರ್ಯದ ನಡುವಿನ ವ್ಯತ್ಯಾಸವೂ ಆಕಾಶ-ಭೂಮಿಯಷ್ಟು ದೂರದ್ದು. ‘ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್’ ಸಂಸ್ಥೆಯ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ, 180 ದೇಶಗಳ ಪೈಕಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ. ನಾರ್ವೆಯಂತಹ ದೇಶದಲ್ಲಿ ಪತ್ರಕರ್ತರು ಪ್ರಧಾನಿಯನ್ನು ನೇರವಾಗಿ ಪ್ರಶ್ನಿಸುತ್ತಾರೆ. ಆದರೆ, ಭಾರತದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳ ಒಂದು ಭಾಗವು ‘ಗೋದಿ ಮೀಡಿಯಾ’ ಹಣೆಪಟ್ಟಿ ಕಟ್ಟಿಕೊಂಡು ಆಳುವವರ ಸಮರ್ಥನೆ ಮತ್ತು ಮೋದಿ ಭಜನೆಯಲ್ಲಿ ನಿರತವಾಗಿದೆ. ಇವು ಪ್ರಧಾನಿ ಮೋದಿಯ ಪ್ರಚಾರಕ್ಕೆ ನೀಡುವಷ್ಟು ಮಹತ್ವವನ್ನು ಜನರ ಸಮಸ್ಯೆಗಳಿಗೆ ನೀಡುವುದಿಲ್ಲ, ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವುದಿಲ್ಲ. ಬದಲಾಗಿ, ಮೋದಿ ಸರ್ಕಾರವನ್ನು ಪ್ರಶ್ನಿಸುವವರನ್ನೇ ದೇಶ ವಿರೋಧಿಗಳೆಂದು ಬಿಂಬಿಸುತ್ತಿವೆ.
ಭಾರತ್ ಶೃಂಗಸಭೆಗೆ ಬಂದಿರುವ ಮತ್ತು ಬರಬೇಕಿದ್ದ ವಿದೇಶಿ ಚಿಂತಕರು ಮತ್ತು ಪತ್ರಕರ್ತರು ವ್ಯಕ್ತಪಡಿಸಲಿದ್ದ ಅಭಿಪ್ರಾಯಗಳು ಮತ್ತು ವಿಮರ್ಶೆಗಳನ್ನು ಮೋದಿ ಸರ್ಕಾರವು ರಾಜಕೀಯವಾಗಿ ಎದುರಿಸಬಹುದಿತ್ತು, ಸಮರ್ಥನೆ ನೀಡಬಹುದಿತ್ತು ಅಥವಾ ಅಲ್ಲಗಳೆಯಬಹುದಿತ್ತು. ಆದರೆ, ಅವರೆಲ್ಲರೂ ಭಾರತಕ್ಕೆ ಬಾರದಂತೆ, ಅವರ ಅಭಿಪ್ರಾಯವನ್ನು ಭಾರತೀಯ ನೆಲದಲ್ಲಿ ವ್ಯಕ್ತಪಡಿಸಲಾಗದಂತೆ ತಡೆಯುವುದು ಹೇಡಿತನ. ಇಂತಹ ಕ್ರಮವು ಜಾಗತಿಕವಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!
ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರಜಾಪ್ರಭುತ್ವದ ಹಿರಿಮೆಯನ್ನು ಪದೇ-ಪದೇ ಪ್ರತಿಪಾದಿಸುತ್ತಾರೆ. ಆದರೆ, ಪ್ರಜಾಪ್ರಭುತ್ವದ ಹಿರಿಮೆ ಕೇವಲ ಭಾಷಣಗಳಲ್ಲಿಲ್ಲ. ವಿಮರ್ಶೆ ಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡುವುದರಲ್ಲಿದೆ. ವ್ಯಕ್ತವಾಗುವ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡುವ ಬದ್ಧತೆಯಲ್ಲಿದೆ. ಆದರೆ, ಮೋದಿ ಸರ್ಕಾರ ಮತ್ತೆ-ಮತ್ತೆ ಪ್ರಶ್ನೆಗಳು ಮತ್ತು ವಿಮರ್ಶೆಗಳಿಂದ ತಪ್ಪಿಸಿಕೊಳ್ಳುವುದನ್ನೇ ಆಯ್ದುಕೊಳ್ಳುತ್ತಿದೆ. ಪಲಾಯನ ಮಾಡುತ್ತಿದೆ.
ನಾರ್ವೆಯ ಪತ್ರಕರ್ತೆ ಭಾರತಕ್ಕೆ ಬಂದಿದ್ದರೆ, ಅವರು ಕಾರ್ಯಕ್ರಮದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ಮಾತನಾಡುತ್ತಿದ್ದರು. ಪತ್ರಿಕಾ ಧರ್ಮದ ಬಗ್ಗೆ ಬೆಳಕು ಚೆಲ್ಲುತ್ತಿದ್ದರು. ಚರ್ಚೆ-ಸಂವಾದ ನಡೆಸಿ, ತಮ್ಮ ನಾಡಿಗೆ ಮರಳುತ್ತಿದ್ದರು. ಆದರೆ, ಮೋದಿ ಸರ್ಕಾರ ಮಾಡಿದ್ದೇನು? ಅವರ ವೀಸಾ ರದ್ದುಗೊಳಿಸಿತು. ಪರಿಣಾಮ, ಜಾಗತಿಕ ರಂಗದಲ್ಲಿ ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ್ಯದ ಕುರಿತ ಚರ್ಚೆ ಹುಟ್ಟಿಕೊಂಡಿದೆ. ಅಕ್ಷರಶಃ, ಮೋದಿ ಸರ್ಕಾರ ತನ್ನ ಘನತೆಯನ್ನು ತಾನೇ ಹರಾಜಿಟ್ಟಿದೆ. ಹರಣ ಮಾಡಿಕೊಂಡಿದೆ.
115 ವಿದೇಶಿ ಭಾಷಣಕಾರರ ಪ್ರವೇಶಕ್ಕೆ ತಡೆಯೊಡ್ಡಿರುವ ಮೋದಿ ಸರ್ಕಾರ, ‘ಸಾರ್ವಭೌಮ ಅಧಿಕಾರ’ದ ಸಮಜಾಯಿಷಿ ನೀಡುತ್ತಿದೆ. ಆದರೆ, ಇಲ್ಲಿ ಬೇಕಿರುವುದು ಈ ಕಡೆ ಕ್ಷಣದ ನಿರ್ಧಾರದ ಹಿಂದಿನ ಸ್ಪಷ್ಟ ಕಾರಣವೇನು ಎಂಬುದು. ಪ್ರವೇಶ ನಿರ್ಬಂಧಿಸುವ ಮೂಲಕ ಮೋದಿ ಸರ್ಕಾರವು ತನ್ನದೇ ಖೆಡ್ಡಾಗೆ ತಾನೇ ಬಿದ್ದಿದೆ. ಈಗ, ಉತ್ತರ ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!


