ಈ ದಿನ ಸಂಪಾದಕೀಯ | ಮುಖ್ಯಮಂತ್ರಿ ಜನಸ್ಪಂದನ; ಆಡಳಿತ ವೈಫಲ್ಯದ ವಿರಾಟ್ ದರ್ಶನ

0
239

ಸಿದ್ದರಾಮಯ್ಯನವರ ಜನಸ್ಪಂದನ ಒಂದು ಉತ್ತಮ ಪ್ರಯತ್ನ. ಆದರೆ, ಜನರ ಸಮಸ್ಯೆಗಳು ಎಷ್ಟು ವ್ಯಾಪಕವಾಗಿವೆ, ಅಸಂಖ್ಯವಾಗಿವೆ ಎಂದರೆ, ಅವೆಲ್ಲವನ್ನೂ ಮುಖ್ಯಮಂತ್ರಿಯೇ ಖುದ್ದು ನೋಡಿ ಬಗೆಹರಿಸುವುದು ಸಾಧ್ಯವೇ ಇಲ್ಲ. ಜನಸ್ಪಂದನಕ್ಕೆ ದೂರದ ಊರುಗಳಿಂದ ಬಂದಿದ್ದವರ ಮುಖದಲ್ಲಿನ ನೋವು ಮತ್ತು ಅಸಹಾಯಕತೆ ಆಳುವವರನ್ನು, ಅಧಿಕಾರಿಗಳನ್ನು ಕಾಡದಿದ್ದರೆ, ಅವರು ತಮ್ಮ ಸಂವೇದನೆಯನ್ನು ಕಳೆದುಕೊಂಡಿದ್ದಾರೆ ಎಂದು ಅರ್ಥ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಸ್ಪಂದನಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸತತ ಏಳು ಗಂಟೆಗಳ ತಮ್ಮ ಮನೆ ಬಳಿ ಬಂದ ಜನರ ದೂರನ್ನು ಮುಖ್ಯಮಂತ್ರಿಗಳು ಆಲಿಸಿದ್ದಾರೆ. ಕಂದಾಯ ಇಲಾಖೆಗೆ ಅಲೆದು ಸುಸ್ತಾದ ರೈತರು, ಬೀದಿ ಬದಿ ವ್ಯಾಪಾರಿಗಳು, ಬಿಬಿಎಂಪಿಯಿಂದ ಕಷ್ಟಕ್ಕೊಳಗಾದವರು, ಪೊಲೀಸರಿಂದಲೇ ಕಿರುಕುಳಕ್ಕೊಳಗಾದವರು ಹೀಗೆ ನಾನಾ ವಿಧಗಳಲ್ಲಿ ಅಧಿಕಾರಿಗಳಿಂದ ನೊಂದವರು ಮುಖ್ಯಮಂತ್ರಿಗಳ ಬಳಿಗೆ ಧಾವಿಸಿದ್ದರು. ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ನೆರವಾಗುವಂತೆ ಹಲವರು ಬಂದಿದ್ದರು. ಒಟ್ಟು 40 ಇಲಾಖೆಗಳ 3,926 ಅರ್ಜಿಗಳು ಬಂದಿದ್ದು, ಅದರಲ್ಲಿ 1900 ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿದ್ದಾರೆ. ಉಳಿದ ಅರ್ಜಿಗಳ ಇತ್ಯರ್ಥಕ್ಕೆ ಮುಖ್ಯಮಂತ್ರಿಗಳು 15 ದಿನಗಳ ಗಡುವು ನೀಡಿದ್ದಾರೆ. ಮೂರು ತಿಂಗಳ ನಂತರ ಮತ್ತೆ ಜನಸ್ಪಂದನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ವಾಸ್ತವವಾಗಿ, ಜನಸ್ಪಂದನಕ್ಕೆ ಸಾವಿರಾರು ಜನ ಧಾವಿಸಿ ಬಂದಿದ್ದು, ತಮ್ಮ ಮೊರೆ ಆಲಿಸುವಂತೆ ಖುದ್ದಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದು ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಕನ್ನಡಿ ಹಿಡಿದಿದೆ. ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಎಷ್ಟರ ಮಟ್ಟಿಗೆ ಜನರ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನುವುದರ ಸ್ಪಷ್ಟ ಚಿತ್ರಣ ಜನಸ್ಪಂದನದಲ್ಲಿ ಕಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜನಸ್ಪಂದನದಲ್ಲಿ ಹೆಚ್ಚಿನ ಜನ ದೂರು ಹೊತ್ತು ತಂದಿದ್ದದ್ದು ಕಂದಾಯ ಇಲಾಖೆಯ ಬಗ್ಗೆ. ಆ ಇಲಾಖೆಯ ಸಮಸ್ಯೆಗಳು ಬಗೆದಷ್ಟೂ ಆಳಕ್ಕೆ ಹೋಗುತ್ತಿವೆ. ಒಂದು ಸಣ್ಣ ಕೆಲಸಕ್ಕೂ ರೈತರು ಕಂದಾಯ ಕಚೇರಿಗಳಿಗೆ ವರ್ಷಗಟ್ಟಲೇ ಅಲೆಯುವಂತಾಗಿದೆ. ಕಂದಾಯ ಇಲಾಖೆಯ ಕೆಲಸ ಎಂದರೆ, ಅವು ಎಂದೆಂದಿಗೂ ಮುಗಿಯದ ವ್ಯಥೆ ಎಂದೇ ಬಹುತೇಕರು ಭಾವಿಸಿದ್ದಾರೆ. ಕೃಷ್ಣಬೈರೇಗೌಡರು ಕಂದಾಯ ಸಚಿವರಾದ ನಂತರ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಕೆಲಸ ಆಗು ಮಾಡಲು ಯತ್ನಿಸುತ್ತಿದ್ದಾರೆ. ಆದರೂ, ಆಗಬೇಕಾದ ಕೆಲಸಗಳ ಮುಂದೆ ಆಗುತ್ತಿರುವ ಕೆಲಸಗಳ ವೇಗ ಬಹಳ ಕಡಿಮೆಯಿದೆ.

ಇನ್ನು ಬಿಬಿಎಂಪಿ ಅಧಿಕಾರಿಗಳಿಂದ ನೊಂದವರೂ ಅಲ್ಲಿ ಬಹಳಷ್ಟಿದ್ದರು. ಬಿಬಿಎಂಪಿ ಎಂದರೆ, ಉಳ್ಳವರ ಪರವಾದ ಹಾಗೂ ಬಡವರ ವಿರೋಧಿಯಾದ ಒಂದು ಸಂಸ್ಥೆ ಎನ್ನುವಂತಾಗಿದೆ. ತೆರಿಗೆ ವಸೂಲಿ ಇರಲಿ, ಕೆಲಸ ಮಾಡಿಕೊಡುವುದಿರಲಿ, ಎಲ್ಲದರಲ್ಲೂ ಬಡವರಿಗೆ ಬರೆ ಹಾಕುವ ಬಿಬಿಎಂಪಿ, ಶ್ರೀಮಂತರ ಬಗ್ಗೆ ಮಾತ್ರ ಉದಾರ ನೀತಿ ಅನುಸರಿಸುತ್ತಿದೆ. ಉದ್ಯಮಿಗಳನ್ನು ಕಂಡರೆ ಬಿಬಿಎಂಪಿಗೆ ಪ್ರೀತಿ. ಅದೇ ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರು, ಸ್ಲಮ್ ವಾಸಿಗಳ ಬಗ್ಗೆ ತಾತ್ಸಾರ. ಬಿಬಿಎಂಪಿಯ ಲಂಚಾವತಾರಕ್ಕೆ ಕೊನೆ ಹಾಡದಿದ್ದಲ್ಲಿ ಬೆಂಗಳೂರಿನ ಬಡವರು ನೆಮ್ಮದಿಯಿಂದಿರುವುದು ಸಾಧ್ಯವೇ ಇಲ್ಲ.

ಪೊಲೀಸರಿಗೂ ಅಷ್ಟೇ. ಶ್ರೀಮಂತರನ್ನು ಕಂಡರೆ ಆದರ. ಬಡವರ ಬಗ್ಗೆ ತಿರಸ್ಕಾರ. ಬಡವರು ಸಣ್ಣ ತಪ್ಪು ಮಾಡಿದರೂ ಅವರಿಗೆ ಉಗ್ರ ಶಿಕ್ಷೆ. ಶ್ರೀಮಂತರು ಘೋರ ಅಪರಾಧ ಮಾಡಿದರೂ ಅವರಿಗೆ ಶ್ರೀರಕ್ಷೆ. ಯಾರು ದೂರು ಕೊಟ್ಟರೂ ಮೊದಲು ಅದನ್ನು ದಾಖಲಿಸಿಕೊಂಡು ಎಫ್‌ಐಆರ್ ಸಿದ್ಧಪಡಿಸಬೇಕೆನ್ನುವ ಪ್ರಾಥಮಿಕ ನಿಯಮವನ್ನೇ ನಮ್ಮ ಬಹುತೇಕ ಪೊಲೀಸರು ಅನುಸರಿಸುತ್ತಿಲ್ಲ.

ಜ್ವರ, ಕೆಮ್ಮು, ನೆಗಡಿಯಂಥ ಸಣ್ಣಪುಟ್ಟ ಕಾಯಿಲೆ ಬಂದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಇನ್ನು ಕಿಡ್ನಿ, ಹೃದ್ರೋಗಗಳಂಥ ಕಾಯಿಲೆ ಬಂದವರ ಪಾಡು ಹೇಳತೀರದು. ಆಸ್ಪತ್ರೆಗಳ ದುಃಸ್ಥಿತಿ, ವೈದ್ಯರ ಕೊರತೆ, ಔಷಧಿಗಳ ಕೊರತೆ, ವೈದ್ಯರ ನಿರ್ಲಕ್ಷ್ಯ ಇತ್ಯಾದಿಗಳಿಂದ ಸರ್ಕಾರಿ ಆಸ್ಪತ್ರೆಗಳು ಇದ್ದೂ ಪ್ರಯೋಜನವಿಲ್ಲದಂತಾಗಿದೆ. ಜನ ದುಬಾರಿ ಬೆಲೆ ತೆತ್ತು ಖಾಸಗಿ ವೈದ್ಯರ ಮಾಫಿಯಾಗೆ ಬಲಿಯಾಗುತ್ತಿದ್ದಾರೆ.

ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ ಕಥೆಯೂ ಹೆಚ್ಚೂ ಕಡಿಮೆ ಇದೇ ರೀತಿ ಇದೆ. ಯಾವ ಇಲಾಖೆಯಲ್ಲೂ ಜನರ ಕೆಲಸ ಸಲೀಸಾಗಿ ಆಗುತ್ತಿಲ್ಲ. ಲಂಚ ನೀಡದಿದ್ದರೆ ಕೆಲಸವೇ ನಡೆಯುವುದಿಲ್ಲ. ತಮ್ಮ ಜವಾಬ್ದಾರಿಯ ಬಗ್ಗೆ ನಿರ್ಲಕ್ಷ್ಯ, ಕೆಲಸದಲ್ಲಿ ಅದಕ್ಷತೆ, ಭಂಡತನ ಅಧಿಕಾರಿಗಳಲ್ಲಿ ಮನೆ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಂತೂ ಇವೆಲ್ಲ ಮತ್ತಷ್ಟು ಹೆಚ್ಚಾಗಿದ್ದವು. ಕಡು ಭ್ರಷ್ಟರು ಎನಿಸಿಕೊಳ್ಳುತ್ತಿದ್ದ ಗುತ್ತಿಗೆದಾರರು ಕೂಡ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ವಿರೋಧಿಸಿದ್ದರು. ಸರ್ಕಾರಿ ಕಚೇರಿಗಳು ಕಮಿಷನ್ ವಸೂಲಿಯ ಕೇಂದ್ರಗಳಾಗಿದ್ದವು. ಮಂತ್ರಿಗಳು, ಶಾಸಕರು, ಅಧಿಕಾರಿಗಳು ಕಮಿಷನ್ ಏಜೆಂಟರಾಗಿದ್ದರು. ಜನ ಅವರ ಕೈಯಲ್ಲಿ ನಲುಗಿಹೋಗಿದ್ದರು. ಸಾವಿಲ್ಲದ ಮನೆಯ ಸಾಸಿವೆ ಹೇಗೆ ಸಿಗಲು ಸಾಧ್ಯವಿಲ್ಲವೋ, ಸರ್ಕಾರಿ ಅಧಿಕಾರಿಗಳಿಂದ ಬಾಧಿತರಾದ ಜನರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ಸರ್ಕಾರ ಬದಲಾಗಿದ್ದರೂ ಜನರ ಬವಣೆ ತಪ್ಪಿಲ್ಲ. ಕಾಂಗ್ರೆಸ್ ಸರ್ಕಾರ ಬಂದು ಆರು ತಿಂಗಳಾಗಿದ್ದರೂ ಸರ್ಕಾರಿ ಯಂತ್ರ ಇನ್ನೂ ಹಳೆಯ ಸ್ಥಿತಿಯಲ್ಲಿಯೇ ಇದೆ ಎನ್ನುವುದಕ್ಕೆ ಜನಸ್ಪಂದನವೇ ನಿದರ್ಶನ.

ಸಿದ್ದರಾಮಯ್ಯನವರ ಜನಸ್ಪಂದನ ಒಂದು ಉತ್ತಮ ಪ್ರಯತ್ನ. ಆದರೆ, ಜನರ ಸಮಸ್ಯೆಗಳು ಎಷ್ಟು ವ್ಯಾಪಕವಾಗಿವೆ, ಅಸಂಖ್ಯವಾಗಿವೆ ಎಂದರೆ, ಅವೆಲ್ಲವನ್ನೂ ಮುಖ್ಯಮಂತ್ರಿಯೇ ಖುದ್ದು ನೋಡಿ ಬಗೆಹರಿಸುವುದು ಸಾಧ್ಯವೇ ಇಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲಾ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲು ಸಿದ್ದರಾಮಯ್ಯ ಸೂಚಿಸಿದ್ದರೂ ಮಂತ್ರಿಗಳು ಅದನ್ನು ಪಾಲಿಸಿಲ್ಲ. ಮುಖ್ಯಮಂತ್ರಿಗಳ ಮಾತನ್ನೂ ಕೇಳದಿರುವಷ್ಟು ಆಡಳಿತ ಹಳಿ ತಪ್ಪಿದೆಯೇ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಜನಸ್ಪಂದನಕ್ಕೆ ದೂರದ ಊರುಗಳಿಂದ ಬಂದಿದ್ದವರ ಮುಖದಲ್ಲಿನ ನೋವು ಮತ್ತು ಅಸಹಾಯಕತೆ ಆಳುವವರನ್ನು ಕಾಡದಿದ್ದರೆ, ಅವರು ತಮ್ಮ ಸಂವೇದನೆಯನ್ನು ಕಳೆದುಕೊಂಡಿದ್ದಾರೆ ಎಂದು ಅರ್ಥ.

ಸಿದ್ದರಾಮಯ್ಯನವರಿಗೆ ನಿಜಕ್ಕೂ ಉತ್ತಮ ಆಡಳಿತ ನೀಡಬೇಕು ಎನ್ನುವ ಆಶಯವಿದ್ದರೆ, ಜನರಿಗೆ ಕೊಂಚವಾದರೂ ನೆರವಾಗಬೇಕೆನ್ನುವ ಇರಾದೆಯಿದ್ದರೆ, ಆಡಳಿತ ಯಂತ್ರವನ್ನು ದಕ್ಷತೆಯಿಂದ, ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ, ಸಮಯಕ್ಕೆ ಸರಿಯಾಗಿ ಕೆಲಸ ಮಾಡುವಂತೆ ಸಜ್ಜುಗೊಳಿಸಬೇಕಿದೆ. ಮಂತ್ರಿಗಳಿಗೆ, ಅಧಿಕಾರಿಗಳಿಗೆ ಚಾಟಿ ಬೀಸಿ, ಆಡಳಿತಾಂಗಕ್ಕೆ ಚುರುಕು ಮುಟ್ಟಿಸಬೇಕಿದೆ.

LEAVE A REPLY

Please enter your comment!
Please enter your name here