ಐಪಿಎಲ್ನಲ್ಲಿ ಹಣದ ಹರಿವಿದೆ, ಆಟಕ್ಕೆ ಗ್ಲಾಮರ್ ತಂದಿದೆ, ಪ್ರೇಕ್ಷಕರನ್ನು ಆಕರ್ಷಿಸಿದೆ- ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ, ಹುಚ್ಚು ಉನ್ಮಾದದ ಅಮಲಿಗೆ ಬಲಿಯಾದ, ಹಣದ ಥೈಲಿಗೆ ಮಾರುಹೋದ, ಮಾರುಕಟ್ಟೆ ಶಕ್ತಿಗಳ ಸೂತ್ರದ ಬೊಂಬೆಗಳಾದ ಈ ಐಪಿಎಲ್ ಆಟಗಾರರಿಗೆ ಕ್ರೀಡೆಯ ನಿಜವಾದ ಗುರಿ, ದಾರಿ ಮತ್ತು ಅರ್ಥ ಕೂಡ ತಿಳಿಯದಾಗಿದೆ.
ರನ್ ಹೊಳೆ ಹರಿಸುವ, ವಿಕೆಟ್ ಬೇಟೆಯಾಡುವ, ಕ್ಷಣಕ್ಷಣಕ್ಕೂ ರೋಚಕ ಕ್ಷಣವನ್ನು ಕಟ್ಟಿಕೊಡುವ ಚುಟುಕು ಕ್ರಿಕೆಟ್, ಅಭಿಮಾನಿಗಳಿಗೆ ಥ್ರಿಲ್ ಕೊಡುವ ಆಟ. ಚುಟುಕು ಕ್ರಿಕೆಟ್ ಮುಂದೆ ಐದು ದಿನದ ಟೆಸ್ಟ್ ಕ್ರಿಕೆಟ್ ಇರಲಿ, ಏಕದಿನ ಪಂದ್ಯಗಳೇ ಕಳೆಗುಂದತೊಡಗಿವೆ. ಇಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂದರೆ ಕೇವಲ ಬ್ಯಾಟ್ಸ್ಮನ್ಗಳ ಅಬ್ಬರ, ಫೋರ್-ಸಿಕ್ಸರ್ಗಳ ಸುರಿಮಳೆ ಮತ್ತು ಸ್ಕೋರ್ ಬೋರ್ಡ್ನಲ್ಲಿ ರನ್ಗಳ ರಾಶಿ ಹಾಕುವ ಆಟ ಅನ್ನುವಂತಾಗಿದೆ.
ಕ್ರಿಕೆಟ್ ಈಗ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಸಂಯಮದ ಆಟಕ್ಕೆ ವೇಗ ಮತ್ತು ಉತ್ಕರ್ಷ ಒದಗಿ, ಆಟಗಾರರು ರನ್ ಹೊಳೆ ಹರಿಸುವ ಯಂತ್ರಗಳಾಗಿದ್ದಾರೆ. ರನ್ ಹೊಳೆ ಹರಿಸಿದಂತೆಲ್ಲ ಆಟಗಾರರ ಬೆಲೆ ಹೆಚ್ಚಾಗಿ, ಕೋಟಿಗಳ ಲೆಕ್ಕದಲ್ಲಿ ಬಿಕರಿಯಾಗುತ್ತಿದ್ದಾರೆ. ಕೆಲ ಆಟಗಾರರು ರಾಷ್ಟ್ರೀಯ ತಂಡಕ್ಕಿಂತ ಫ್ರಾಂಚೈಸಿ ಲೀಗ್ಗಳಿಗೆ ಆದ್ಯತೆ ಕೊಡುತ್ತಿದ್ದಾರೆ.
ಐಪಿಎಲ್ ಕ್ರಿಕೆಟ್ ಎನ್ನುವುದು ಈಗ ಮನರಂಜನೆ, ವ್ಯಾಪಾರ ಮತ್ತು ಅಂಕಿಅಂಶಗಳನ್ನು ಪೇರಿಸಲು ಬೇಕಾದ ಸಾಧನವಾಗಿ ರೂಪಾಂತರಗೊಂಡಿದೆ. ಆಟಗಾರರಿಗೆ ದಾಖಲೆಗಳನ್ನು ಪುಡಿಗಟ್ಟುವ ಪೊಗರು ಬಂದಿದೆ. ಒಂದು ಕಾಲದಲ್ಲಿ ಕ್ರಿಕೆಟ್ ಎಂದರೆ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನದ ಕಾದಾಟವಾಗಿತ್ತು. ಆದರೆ ಇಂದಿನ ಐಪಿಎಲ್ನಲ್ಲಿ ಬ್ಯಾಟ್ಸ್ಮನ್ಗಳ ಆರ್ಭಟವೇ ಪ್ರಧಾನವಾಗಿದೆ. ಬೌಲರ್ಗಳ ಕಲೆ, ತಂತ್ರ, ಸಹನೆ ಎಲ್ಲವೂ ಮಿಂಚಿನ ಹೊಡೆತಗಳ ನಡುವೆ ಮಂಕಾಗುತ್ತಿದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.
ಇದನ್ನು ಓದಿದ್ದೀರಾ?: ಕೋಟಿ ಕೋಟಿ ಅಲೆಮಾರಿಗಳನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವುದು ದೇಶ ಎನಿಸಿಕೊಳ್ಳಲಾರದು
ಒಂದು ಕಾಲದಲ್ಲಿ 160 ಅಥವಾ 180 ರನ್ಗಳು ‘ಸ್ಪರ್ಧಾತ್ಮಕ ಮೊತ್ತ’ ಎನಿಸಿಕೊಳ್ಳುತ್ತಿದ್ದವು. ಆದರೆ ಇಂದು 250 ದಾಟಿದರೂ ಯಾವ ತಂಡವೂ ಸುರಕ್ಷಿತವಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೈದರಾಬಾದ್ ತಂಡದ 242, ಬೆಂಗಳೂರ್ ತಂಡದ 250, ಡೆಲ್ಲಿ ತಂಡದ 264, ಪಂಜಾಬ್ ತಂಡದ 265 ರನ್ಗಳು- ಕೇವಲ 20 ಓವರ್ಗಳ 120 ಬಾಲ್ಗಳಲ್ಲಿ.
ಕಳೆದ ಏ. 26ರಂದು ಕೆಕೆಆರ್-ಎಲ್ಎಸ್ಜಿ ಪಂದ್ಯದಲ್ಲಿ ಕೊನೆಯ ಬಾಲ್ನಲ್ಲಿ 7 ರನ್ ಬೇಕಾಗಿತ್ತು. ಮೊಹಮ್ಮದ್ ಶಮಿ ಸಿಕ್ಸರ್ ಎತ್ತಿದರು. ಎಲ್ಲರ ಪ್ರಶಂಸೆಗೂ ಪಾತ್ರರಾದರು. ಆದರೆ, ಸೂಪರ್ ಓವರ್ನಲ್ಲಿ ಎಲ್ಎಸ್ಜಿ ತಂಡ ಸೋಲುವ ಮೂಲಕ ಐದೇ ಐದು ನಿಮಿಷಗಳ ಹಿಂದಿನ ಸಿಕ್ಸರ್ ಬೆಲೆ ಕಳೆದುಕೊಂಡಿತ್ತು.
ಬೌಂಡ್ರಿಗಳ ಭರಾಟೆ, ಸಿಕ್ಸರ್ಗಳ ಸುರಿಮಳೆ, ವೇಗದ ರನ್ಗಳು- ಪ್ರೇಕ್ಷಕರನ್ನು ಮೈದಾನದತ್ತ ಸೆಳೆಯುತ್ತಿವೆ. ತಕ್ಷಣದ ಥ್ರಿಲ್ ನೀಡುವ ಮನರಂಜನೆಯಂತೆ ಕಾಣುತ್ತಿವೆ. ಪ್ರೇಕ್ಷಕರನ್ನು ಹಿಡಿದಿಡುವ ಸಾಧನಗಳು ಎನಿಸುತ್ತಿವೆ. ಇದನ್ನೇ ಮಾನದಂಡವಾಗಿಟ್ಟುಕೊಂಡು ತಂಡ ರಚಿಸುವಂತಾದರೆ? ಅಂದರೆ, ಮುಂದೊಂದು ದಿನ ಬೌಲರ್ಗಳ ಬದಲು ಅಷ್ಟೂ ಬ್ಯಾಟರ್ಗಳನ್ನೇ ಹಾಕಿಕೊಂಡು ತಂಡ ಮಾಡುವಂತೆ, ಯಂತ್ರಗಳು ಬೌಲ್ ಮಾಡುವಂತೆ, ಪ್ರತಿ ಬಾಲ್ ಅನ್ನು ಬ್ಯಾಟರ್ಗಳು ಆಗಸಕ್ಕೆ ಅಟ್ಟುವಂತೆ, ಅಪ್ಪಿ-ತಪ್ಪಿ ಬಾಲ್ ಫೀಲ್ಡರ್ಗಳ ಕೈಗೆ ಸಿಕ್ಕರೆ ಅದೃಷ್ಟದಂತೆ… ಬರೀ ರನ್ಗಳ ಹೊಳೆ ಹರಿದರೂ ಆಶ್ಚರ್ಯವಿಲ್ಲ.
ಇದು ಸಂಪೂರ್ಣವಾಗಿ ಬ್ಯಾಟಿಂಗ್ ಪರವಾಗಿ ವಾಲಿದ ‘ಏಕಪಕ್ಷೀಯ ಪ್ರದರ್ಶನ’ವಾಗುತ್ತದೆ. ಬೌಲರ್ಗಳು ಕೇವಲ ‘ರನ್ ಬಿಟ್ಟುಕೊಡುವ ಯಂತ್ರ’ಗಳಂತೆ ಕಾಣತೊಡಗುತ್ತಾರೆ. ಯಾರ್ಕರ್, ದೂಸ್ರಾ, ಸ್ವಿಂಗ್ ಎಲ್ಲವೂ ಮರೆತು, ಮರೆಗೆ ಸರಿಸಲ್ಪಡುತ್ತವೆ. ಬೌಲರ್ಗಳಿಗೆ ಅವಕಾಶವೂ ಇಲ್ಲ, ಬೆವರಿಳಿಸಿ ಮಾಡಿದ ಬೌಲಿಂಗ್ಗೆ ಬೆಲೆಯೂ ಇಲ್ಲದಂತೆ ಕಾಣುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಏ. 27ರ ದೆಹಲಿ ಮತ್ತು ಬೆಂಗಳೂರು ಪಂದ್ಯದಲ್ಲಿ, ದೆಹಲಿ ತಂಡ ಕೇವಲ 75ಕ್ಕೆ ಆಲ್ಔಟ್ ಆದದ್ದು; ಅದೇ ದೆಹಲಿ ತಂಡ ಪಂಜಾಬ್ ವಿರುದ್ಧ 264 ಪೇರಿಸಿದ್ದು- ಎರಡು ಅತಿರೇಕಗಳನ್ನು ಕಣ್ಮುಂದೆ ತಂದಿರಿಸಿದ್ದೂ ಇದೆ. ಇದು ಆಟದ ವೈವಿಧ್ಯಕ್ಕೆ, ಕ್ರೀಡೆಯ ಸಮತೋಲನಕ್ಕೆ ಧಕ್ಕೆ ತರುತ್ತದೆ.
ಐಪಿಎಲ್ ಕ್ರಿಕೆಟ್ ಹೀಗಾಗಲು ಕೆಲವು ಪ್ರಮುಖ ಕಾರಣಗಳೂ ಇವೆ. ಪ್ರೇಕ್ಷಕರಿಗೆ ರಂಜನೆ ನೀಡುವ ಉದ್ದೇಶದಿಂದ ಫ್ಲಾಟ್ ಪಿಚ್ಗಳನ್ನು ಸಿದ್ಧಪಡಿಸುತ್ತಿರುವುದು; ಬೌಂಡರಿ ಗೆರೆಗಳನ್ನು ಹತ್ತಿರಕ್ಕೆ ತರುತ್ತಿರುವುದು; ಮತ್ತು ಇಂಪ್ಯಾಕ್ಟ್ ಪ್ಲೇಯರ್ ನಿಯಮ ಸಡಿಲಿಸಿರುವುದು. ಈ ಕಾರಣಗಳು ಬ್ಯಾಟ್ಸ್ಮನ್ಗಳಿಗೆ ವರದಾನವಾದರೆ, ಬೌಲರ್ಗಳ ಪಾಲಿಗೆ ಸಿಂಹಸ್ವಪ್ನವಾಗಿವೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ತಂಡಗಳಿಗೆ ಹೆಚ್ಚುವರಿ ಬ್ಯಾಟ್ಸ್ಮನ್ ಒದಗಿಸಿದ್ದು, ಆರಂಭಿಕ ಆಟಗಾರರು ಯಾವುದೇ ಭಯವಿಲ್ಲದೆ ಆಕ್ರಮಣಕಾರಿ ಆಟವಾಡಲು ಪ್ರೇರೇಪಿಸುತ್ತದೆ. ಇವೆಲ್ಲವೂ ಸೇರಿ ರನ್ಗಳದೇ ಆಟ ಆಗುತ್ತದೆ.
ಐಪಿಎಲ್ ಎನ್ನುವುದು ಕ್ರಿಕೆಟ್ಗೆ ಅಪಾರ ಜನಪ್ರಿಯತೆ, ಹಣ ಮತ್ತು ಹೊಸ ಪ್ರೇಕ್ಷಕರನ್ನು ಕರೆತಂದಿದೆ, ಅನುಮಾನವೇ ಇಲ್ಲ. ಆದರೆ, ಕೆಲ ಗಂಭೀರ ಆತಂಕಗಳನ್ನೂ ಒಡ್ಡಿದೆ. ಅತಿಯಾದ ರನ್ ಹರಿವು ಆರಂಭದಲ್ಲಿ ಪ್ರೇಕ್ಷಕರಿಗೆ ಖುಷಿ ನೀಡಬಹುದು. ಹಾಗಂತ ಐಪಿಎಲ್ ಕೇವಲ ಬೌಂಡರಿ-ಸಿಕ್ಸರ್ಗಳ ಅಂಕಿಅಂಶದ ಆಟವಾಗಬಾರದು. ಅದು ಕೌಶಲಗಳ ಸಮರವಾಗಬೇಕು. ರನ್ಗಳು ಮಿತಿ ಮೀರಿದರೆ, ಕ್ರಿಕೆಟ್ನ ಮೂಲ ಆತ್ಮವಾದ ‘ಸ್ಪರ್ಧಾತ್ಮಕತೆ’ ಮಾಯವಾಗುತ್ತದೆ. ಕ್ರಿಕೆಟ್ನ ಸಾಂಪ್ರದಾಯಿಕ ಸೌಂದರ್ಯ ಸೈಡಿಗೆ ಸರಿಯುತ್ತದೆ. ಅದು ಆಟದ ಶುದ್ಧತೆಯನ್ನು ಕೆಡಿಸುತ್ತದೆ. ಚಿಯರ್ಲೀಡರ್ಸ್, ಜಾಹೀರಾತು, ಗ್ಲಾಮರ್ಗಳೆಲ್ಲ ಸೇರಿಕೊಂಡು ಕ್ರಿಕೆಟ್ ‘ಶೋ’ನಂತೆ ಕಾಣತೊಡಗುತ್ತದೆ. ಕಾಲಾನಂತರದಲ್ಲಿ ಶೋ ಕಳೆಗುಂದಿ, ಸರ್ಕಸ್ ಆಗುವ, ಆಟಗಾರರು ಸರ್ಕಸ್ನ ಪ್ರಾಣಿಗಳಂತಾಗುವ ಅಪಾಯವೂ ಇದೆ.
ಐಪಿಎಲ್ ನಿರ್ವಾಹಕರು ಮತ್ತು ಕ್ರಿಕೆಟ್ ಸಂಸ್ಥೆಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಪಿಚ್ಗಳ ಸ್ವಭಾವ, ಮೈದಾನಗಳ ಗಾತ್ರ, ನಿಯಮಗಳ ಸಮತೋಲನ- ಇವೆಲ್ಲವನ್ನು ಮರುಪರಿಶೀಲಿಸಿ, ಬ್ಯಾಟ್ಸ್ಮನ್ ಮತ್ತು ಬೌಲರ್ ನಡುವೆ ಸಮನ್ವಯವನ್ನು ಮರಳಿ ತರಬೇಕಾಗಿದೆ. ಇಲ್ಲವಾದರೆ, ಐಪಿಎಲ್ ‘ರನ್ಗಳ ಹಬ್ಬ’ವಾಗಿ ಉಳಿದು, ಕ್ರಿಕೆಟ್ನ ಆತ್ಮವನ್ನು, ಕ್ರೀಡೆಯ ಕಳೆಯನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಇದನ್ನು ಓದಿದ್ದೀರಾ?: ಮೋದಿ ದೋಣಿ ವಿಹಾರ ಮತ್ತು ಹೊತ್ತಿ ಉರಿಯುತ್ತಿರುವ ಮಣಿಪುರ
ಒಂದು ಕಾಲಕ್ಕೆ ಇಂಗ್ಲಿಷರ ಜಂಟಲ್ಮನ್ಸ್ ಪ್ಲೇ ಎನಿಸಿಕೊಂಡಿದ್ದ ಕ್ರಿಕೆಟ್, ಜಯ್ ಶಾ ಎನ್ನುವ ವ್ಯವಹಾರಸ್ಥನ ಕೈಗೆ ಸಿಕ್ಕು ಸಾವಿರಾರು ಕೋಟಿಗಳ ಉದ್ಯಮವಾಗಿದೆ. ಐಪಿಎಲ್ ಮೂಲಕ ಅನೇಕ ದೇಶೀಯ ಮಟ್ಟದ ಪ್ರತಿಭೆಗಳಿಗೆ, ಯುವ ಆಟಗಾರರಿಗೆ ಜಾಗತಿಕ ವೇದಿಕೆ ಸಿಕ್ಕಿದೆ. ಕ್ರಿಕೆಟ್ ಜನಪ್ರಿಯತೆ ಹೆಚ್ಚಾಗಿದೆ. ಆದಾಯ ದ್ವಿಗುಣಗೊಂಡಿದೆ ಎಂಬ ವಾದ ಮಂಡನೆಗೆ ಅನುಕೂಲವಾಗಿದೆ. ಸಮರ್ಥನೆಗೆ ದಾರಿಯಾಗಿದೆ. ಕಾಲದ ಮಹಿಮೆಯೋ ಏನೋ, ಅದು ಸರಿ ಎನಿಸುತ್ತಿದೆ.
ಐಪಿಎಲ್ನಲ್ಲಿ ಹಣದ ಹರಿವಿದೆ, ಆಟಕ್ಕೆ ಗ್ಲಾಮರ್ ತಂದಿದೆ, ಪ್ರೇಕ್ಷಕರನ್ನು ಆಕರ್ಷಿಸಿದೆ- ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ, ಹುಚ್ಚು ಉನ್ಮಾದದ ಅಮಲಿಗೆ ಬಲಿಯಾದ, ಹಣದ ಥೈಲಿಗೆ ಮಾರುಹೋದ, ಮಾರುಕಟ್ಟೆ ಶಕ್ತಿಗಳ ಸೂತ್ರದ ಬೊಂಬೆಗಳಾದ ಈ ಐಪಿಎಲ್ ಆಟಗಾರರಿಗೆ ಕ್ರೀಡೆಯ ನಿಜವಾದ ಗುರಿ, ದಾರಿ ಮತ್ತು ಅರ್ಥ ಕೂಡ ತಿಳಿಯದಾಗಿದೆ. ಮುಂದೊಂದು ದಿನ ಆಟ, ಆಟವಾಗಿ ಉಳಿಯುವುದು ಕೂಡ ಅನುಮಾನವಿದೆ.




