ಭವಿಷ್ಯದ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ ಅವರು ನನ್ನಂತಹ ಶೋಷಿತ ಸಮುದಾಯಗಳಿಗೆ ದೇವರು ಸಮಾನ ಆಗಿದ್ದಾರೆ ಎಂದು ಔರಾದ್ ಶಾಸಕ ಪ್ರಭು ಚವ್ಹಾಣ ಹೇಳಿದರು.
ಔರಾದ್ ತಾಲೂಕಿನ ಬೋರಳ ಗ್ರಾಮದಲ್ಲಿ ಆಯೋಜಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ʼಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕುʼ ಎಂದು ಕರೆ ನೀಡಿದರು.
ʼಬಡವರ, ದೀನ, ದಲಿತರ ಏಳಿಗೆಗಾಗಿ ತಮ್ಮ ಬದುಕಿನುದ್ದಕ್ಕೂ ಬಾಬಾ ಸಾಹೇಬರು ಹೋರಾಡಿ ದೇಶದ ಸರ್ವ ಜನರಿಗೂ ಸಾಮಾಜಿಕ, ರಾಜಕೀಯ ಸಮಾನತೆ ಸೇರಿದಂತೆ ಎಲ್ಲ ಹಕ್ಕುಗಳನ್ನು ನೀಡಿದ್ದಾರೆ. ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದಲೇ ನಾನು ಶಾಸಕನಾಗಿದ್ದೇನೆʼ ಎಂದು ತಿಳಿಸಿದರು.
ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಸೂರ್ಯಕಾಂತ ಸಿಂಗೆ ಮಾತನಾಡಿ, ʼಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ದಲಿತ ಸಮುದಾಯದ ನಾಯಕರಲ್ಲ, ಅವರು ದೇಶದ ಪ್ರತಿಯೊಂದು ಸಮುದಾಯದ ಮಹಾನಾಯಕರು. ಅದಕ್ಕೆ ಅವರ ಅನೇಕ ಸಾಮಾಜಿಕ ಸಮಾನತೆಯ ಕೊಡುಗೆಗಳೇ ಸಾಕ್ಷಿ. ಇಂದು ದೇಶದ ಪ್ರತಿಯೊಂದು ಸಮುದಾಯ ಅಂಬೇಡ್ಕರ್ ಅವರ ಋಣದಲ್ಲಿ ಬದುಕುತ್ತಿದೆʼ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರಹಂತ ಸಾವಳೆ ಮಾತನಾಡಿ, ʼಶಾಸಕ ಪ್ರಭು ಚವ್ಹಾಣ ಅವರು ಯಾವುದೇ ಜಾತಿ, ಸಮುದಾಯದ ಮೇಲೆ ತಾರತಮ್ಯ ಮಾಡದೆ ಎಲ್ಲಾ ಜಾತಿ, ವರ್ಗಗಳಿಗೂ ಸಮಾನ ಅವಕಾಶ ಕಲ್ಪಿಸುವುದಕ್ಕಾಗಿ ಶ್ರಮಿಸುತ್ತಿದ್ದಾರೆʼ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿರಾವ ಬೋರಳೆ ವಹಿಸಿಕೊಂಡಿದ್ದರು.
ಇದನ್ನೂ ಓದಿ : ಬೀದರ್ | ಎಸ್ಸೆಸ್ಸೆಲ್ಸಿ ಫಲಿತಾಂಶ : ಉರ್ದು ಭಾಷೆಯಲ್ಲಿ ಲಾವಣ್ಯಗೆ 125ಕ್ಕೆ 125 ಅಂಕ
ಪ್ರಮುಖರಾದ ಸಾಗರ ಪಾಟೀಲ ಕೊಳ್ಳೂರು, ಶಿವಾಜಿರಾವ್ ಪಾಟೀಲ್, ಶಿವರಾಜ ಅಲಮಾಜೆ, ರತ್ನದೀಪ ಕಸ್ತೂರೆ, ನಂದಾದೀಪ ಬೋರಾಳೆ, ಮಂಜುಸ್ವಾಮಿ, ಮಹಾದೇವ ಜುಬ್ರೆ, ಸೋಪನರಾವ ಡೊಂಗ್ರೆ, ಲಕ್ಷ್ಮಣ ತುರೆ, ಸಂಜು ಡೊಂಗ್ರೆ, ಪ್ರದೀಪ ಗುಬ್ನೂರೆ, ಭಜರಂಗ ಪಾಂಡ್ರೆ, ಸಂಜು ಬೋರಳೆ, ಗಜಾನಂದ, ಯಶವಂತ, ಮಿಥುನ, ಉತ್ತಮ, ಶಶಿಕಾಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂದಾದೀಪ ಬೋರಳೆ ನಿರೂಪಿಸಿದರು.





