ಈ ದಿನ ಸಂಪಾದಕೀಯ | ಕುಸ್ತಿಪಟುಗಳ ಕಣ್ಣೀರು ಮತ್ತು ಪ್ರಚಂಡ ಪ್ರಧಾನಿಯ ಮೌನ

Date:

ಮೋದಿಯವರ ನೇತೃತ್ವದಲ್ಲಿ ‘ವಿಶ್ವಗುರುವಿನ ಸ್ಥಾನ’ ಪಡೆದಿರುವ, ‘ಜಗತ್ತಿನ ಜನತಂತ್ರದ ಜನನಿ’ ಎನಿಸಿಕೊಂಡಿರುವ ಬಲಿಷ್ಠ ಭಾರತದ ಕಾನೂನು ಸುವ್ಯವಸ್ಥೆಗೆ ಇದೊಂದು ಭಾರೀ ಸವಾಲೇನೂ ಆಗಬಾರದು

ಅಂತಾರಾಷ್ಟ್ರೀಯ ಖ್ಯಾತಿಯ ನಮ್ಮ ಮೂವರು ಕ್ರೀಡಾಪಟುಗಳು ಕಣ್ಣೀರಿಡುತ್ತ ತಾವು ಗೆದ್ದು ತಂದ ಬಂಗಾರದ ಪದಕಗಳನ್ನು ಗಂಗೆಯ ಪಾಲು ಮಾಡಲು ಹೊರಟಿದ್ದರು. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಗಳಿಸಿದ್ದ ಪದಕಗಳವು. ಅವರ ರಕ್ತ ಬೆವರಿನ ಸಾಧನೆಯ ಸಂಕೇತಗಳು. ದೇಶದ ಹೆಮ್ಮೆಯ ಪ್ರತೀಕಗಳು. ಆಕಾಶದಿಂದ ತಾರೆಗಳ ಕಿತ್ತು ತಂದುಕೊಡಿ ಎಂಬಂತಹ ಅಸಾಧ್ಯ ಬೇಡಿಕೆ ಅವರದಲ್ಲ. ಕ್ರೀಡೆಯಲ್ಲಿ ಭವಿಷ್ಯವನ್ನು ಅರಸಿ ಬಂದ ಹಳ್ಳಿಗಾಡಿನ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಕಾಡಿಸಿ ಪೀಡಿಸಿರುವ ಹೆಣ್ಣುಬಾಕನೊಬ್ಬನ ವಿರುದ್ಧ ಕ್ರಮ ಕೈಗೊಳ್ಳಿ ಎಂಬುದಷ್ಟೇ ಅವರ ಬೇಡಿಕೆ.

ಮೋದಿಯವರ ನೇತೃತ್ವದಲ್ಲಿ ‘ವಿಶ್ವಗುರುವಿನ ಸ್ಥಾನ’ ಪಡೆದಿರುವ, ‘ಜಗತ್ತಿನ ಜನತಂತ್ರದ ಜನನಿ’ ಎನಿಸಿಕೊಂಡಿರುವ ಬಲಿಷ್ಠ ಭಾರತದ ಕಾನೂನು ಸುವ್ಯವಸ್ಥೆಗೆ ಇದೊಂದು ಭಾರೀ ಸವಾಲೇನೂ ಆಗಬಾರದು. ಆದರೆ ನರೇಂದ್ರ ಮೋದಿಯವರಂತಹ ನರೇಂದ್ರ ಮೋದಿಯವರು ಕಳೆದ ಐದು ತಿಂಗಳುಗಳಿಂದ ಈ ಬೇಡಿಕೆಯ ಕುರಿತು ಭದ್ರವಾಗಿ ಬಾಯಿ ಹೊಲಿದುಕೊಂಡುಬಿಟ್ಟಿದ್ದಾರೆ. ಮೇಲ್ನೋಟಕ್ಕೆ ಇದೊಂದು ಚಿದಂಬರ ರಹಸ್ಯದಂತೆ ತೋರುತ್ತದೆ. ಬೇಟಿ ಬಚಾವೋ ಎಂದು ಗಂಟಲು ಹರಿಯುವಂತೆ ಕೂಗುವವರ ನಾಲಗೆಗಳು ತಮ್ಮದೇ ಪಕ್ಷದ ಮಂತ್ರಿಗಳು ಶಾಸಕರು ಸಂಸದರು ಅಪರಾಧಿ ಸ್ಥಾನದಲ್ಲಿ ನಿಂತಾಗ ಸೇದಿ ಹೋಗುವುದು ಯಾಕೆ ಎಂಬ ಪ್ರಶ್ನೆಯನ್ನು ಕೇಳಬಾರದು. ಕೇಳಿದವರಿಗೆ ದೇಶದ್ರೋಹಿ ಇಲ್ಲವೇ ಹಿಂದುತ್ವ ವಿರೋಧಿ ಎಂಬ ಹಣೆಪಟ್ಟಿ ಹಚ್ಚಿ ಐ.ಟಿ.ಸೆಲ್ ಗಳು ಅವರ ಚಾರಿತ್ರ್ಯಹರಣದ ಅಭಿಯಾನ ಆರಂಭಿಸುತ್ತವೆ. ಪ್ರಶ್ನೆ ಕೇಳುವವರು ರಾಜಕಾರಣಿಗಳಾಗಿದ್ದರೆ ಕೇಂದ್ರೀಯ ತನಿಖಾ ಏಜೆನ್ಸಿಗಳು ಅವರ ಬೆನ್ನು ಬಿದ್ದು ಬೇಟೆ ಆಡುತ್ತವೆ.

ಕಣ್ಣೀರು ಒರೆಸಿಕೊಳ್ಳುತ್ತ ಬಂಗಾರದ ಪದಕಗಳನ್ನು ಗಂಗೆಗೆ ಬಿಡಲು ಹೊರಟ ಕ್ರೀಡಾಳು ಹೆಣ್ಣುಮಕ್ಕಳ ಚಿತ್ರ ಭಾರತ ಮಾತ್ರವಲ್ಲ ಯಾವ ದೇಶಕ್ಕೂ ಶೋಭೆ ತರುವುದಿಲ್ಲ. ಹೆಣ್ಣನ್ನು ದೇವತೆಯೆಂದು ಪೂಜೆ ಮಾಡುತ್ತೇವೆಂದು ಬೊಗಳೆ ಬಿಡುವವರು ಆಕೆಯನ್ನು ಕಾಲ ಕೆಳಗೆ ತುಳಿದು ಹೊಸಕಿ ಹಾಕುತ್ತ ಬಂದಿದ್ದಾರೆ. ಕುಲದೀಪ್ ಸೆಂಗರ್, ಚಿನ್ಮಯಾನಂದ, ಬ್ರಿಜ್‌ಭೂಷಣ್ ಸಿಂಗ್ ಅವರಂತಹ ಹೆಣ್ಣುಬಾಕರನ್ನು ಕಡೆಯ ಗಳಿಗೆ ತನಕ ರಕ್ಷಿಸಿಕೊಳ್ಳುತ್ತ ಬಂದಿದ್ದಾರೆ. ಬ್ರಿಜ್‌ಭೂಷಣ ಶರಣ ಸಿಂಗ್ ಕಳೆದ ಹನ್ನೊಂದು ವರ್ಷಗಳಿಂದ ಭಾರತೀಯ ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ. ಉತ್ತರಪ್ರದೇಶದ ಐದಾರು ಜಿಲ್ಲೆಗಳಲ್ಲಿ ದಟ್ಟ ರಾಜಕೀಯ ಪ್ರಭಾವ ಹೊಂದಿರುವ ಕುಖ್ಯಾತ ಬಾಹುಬಲಿ. ಆರು ಬಾರಿ ಲೋಕಸಭಾ ಸಂಸದ. ಈ ಪೈಕಿ ಐದು ಬಾರಿ ಬಿಜೆಪಿಯ ಸಂಸದ.

ಈತನ ಮೇಲೆ ಎಫ್.ಐ.ಆರ್. ದಾಖಲಿಸಿಕೊಳ್ಳಲೂ ತಯಾರಿರಲಿಲ್ಲ ಪೊಲೀಸರು. ಸುಪ್ರೀಮ್ ಕೋರ್ಟ್ ಹೇಳಿದ ನಂತರವೇ ದೆಹಲಿ ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಂಡರು. ಅಂದ ಹಾಗೆ ದೆಹಲಿ ಪೊಲೀಸ್ ನೇರವಾಗಿ ಕೇಂದ್ರ ಸರ್ಕಾರದ ಅರ್ಥಾತ್ ಅಮಿತ್ ಶಾ ಅವರ ನಿಯಂತ್ರಣದಲ್ಲಿದೆ.

ಬ್ರಿಜ್‌ಭೂಷಣ್ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿರುವ ದೂರೂ ಇದೆ.  ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಕಾಯಿದೆ (POCSO) ಪ್ರಕಾರ ಆಪಾದನೆಗೆ ಗುರಿಯಾಗುವ ವ್ಯಕ್ತಿಯ ಬಂಧನ ಕಡ್ಡಾಯ. ಆದರೆ ಬ್ರಿಜ್‌ಭೂಷಣ್ ಈವರೆಗೆ ಮುಕ್ತವಾಗಿ ತಿರುಗಾಡಿಕೊಂಡಿದ್ದಾನೆ. ಪಾರ್ಲಿಮೆಂಟಿನ ಹೊಸ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಈತ ಗಮ್ಮತ್ತಾಗಿ ಮಿಂಚುತ್ತಿದ್ದ. ಅತ್ತ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪದಕಗಳನ್ನು ಗೆದ್ದು ತಂದ ವಿನೇಶ ಫೋಗಟ್ ಮತ್ತು ಸಾಕ್ಷಿ ಮಾಲಿಕ್ ಅವರನ್ನು ಪೊಲೀಸರು ರಸ್ತೆಗಳಲ್ಲಿ ಎಳೆದಾಡಿದರು. ಸಾಕ್ಷಿಯ ಮುಖದ ಮೇಲೆ ಬೂಟುಗಾಲಿಟ್ಟು ನೆಲಕ್ಕೆ ಒತ್ತಿ ಹಿಡಿದ  ಘೋರ ದೃಶ್ಯಗಳು ಆಳುವ ಪಕ್ಷವನ್ನು ಹಿಂದೆ ಬಿದ್ದು ಕಾಡುವುದು ನಿಶ್ಚಿತ.

ಪೋಕ್ಸೋ ಕಾಯಿದೆಯಡಿ ಈತನ ಬಂಧನವನ್ನು ವಿರೋಧಿಸಿ ಅಯೋಧ್ಯೆಯ ಸಂತರು ಸದ್ಯದಲ್ಲೇ ಪ್ರದರ್ಶನ ನಡೆಸುತ್ತಿದ್ದಾರೆ. ಬ್ರಿಜ್‌ಭೂಷಣ್ ಬಂಧನ ತಪ್ಪಿಸಲು ಪೋಕ್ಸೋ ಕಾಯಿದೆ ತುರ್ತು ತಿದ್ದುಪಡಿ ತರುವಂತೆ ಆಗ್ರಹಿಸಿದ್ದಾರೆ. ಸಾಧು ಸಂತರು ಕೂಡ ಬೇಟೀ ಬಚಾವೋ ಎಂಬ ಮಾತನ್ನು ಕಾಲ ಕಸವಾಗಿ ಕಂಡಿದ್ದಾರೆ. ಹೆಣ್ಣುಮಕ್ಕಳ ಮಾನ ಪ್ರಾಣಗಳಿಗಿಂತಲೂ ಬ್ರಿಜ್‌ಭೂಷಣ ಎಂಬ ಹಿಂದುತ್ವದ ಬಾಹುಬಲಿಯ ರಕ್ಷಣೆಯನ್ನೇ ಧರ್ಮ ರಕ್ಷಣೆ ಎಂದು ಇವರು ಬಗೆದಿರುವುದು ದುರಂತ.

ಕೊಲೆ, ಡಕಾಯಿತಿ, ಲೈಂಗಿಕ ಹಲ್ಲೆಗಳು, ದಾವೂದ್ ಇಬ್ರಾಹಿಮನ ಸಹಚರರಿಗೆ ಆಶ್ರಯ ನೀಡಿದ್ದ ಮುಂತಾದ ಹತ್ತಾರು ಆಪಾದನೆಗಳನ್ನು ಹೊತ್ತಿದ್ದ ಸಿಂಗ್ ಅಪರಾಧದ ಇತಿಹಾಸ ಬಲು ದೀರ್ಘ. ರಜಪೂತ ಜಾತಿಗೆ ಸೇರಿದ ಈತ ಸದ್ಯದಲ್ಲೇ ಗೆದ್ದುಕೊಡಬಹುದಾದ ಲೋಕಸಭಾ ಸೀಟುಗಳು ಮೋದಿಯವರಿಗೆ ಮುಖ್ಯವಾಗಿವೆ. ಎಷ್ಟು ಮುಖ್ಯವಾಗಿವೆ ಎಂದರೆ ಅವರೇ ಹೇಳುವ ‘ಬಹೂ ಬೇಟಿ’ಯರ ಮಾನ ಪ್ರಾಣಗಳಿಗಿಂತ ಮುಖ್ಯವಾಗಿವೆ ಎಂಬುದು ನಿಚ್ಚಳ ವೇದ್ಯವಾಗುತ್ತಿದೆ. ಆದರೆ ಕಣ್ಣೀರಿಡುತ್ತಿರುವ ಈ ಹೆಣ್ಣುಮಕ್ಕಳ ನಿಟ್ಟುಸಿರು ಜನಶಕ್ತಿಯ ಜ್ವಾಲೆಯಾಗಿ ಆಳುವವರ ಆಪೋಶನ ತೆಗೆದುಕೊಳ್ಳಲು ಬಹುಕಾಲವೇನೂ ಬೇಕಾಗುವುದಿಲ್ಲ. ಈ ಸುಡುಸತ್ಯವನ್ನು ಮೋದಿ ಮತ್ತು ಅವರ ಸಂಗಾತಿಗಳು ಎಷ್ಟು ತ್ವರಿತವಾಗಿ ಅರಿಯುವರೋ ಅಷ್ಟೇ ಒಳ್ಳೆಯದು ಅವರ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಎಂತಹ ಕಲ್ಲು ಹೃದಯದ ಪ್ರದಾನಿ. ಹೆಣ್ಣುಮಕ್ಕಳ ಕಣ್ಣೀರಿನ ಬಗ್ಗೆ ಎಂತಹ ನಿಕೃಷ್ಡತೆ ದೇಶದ ಪ್ರಪಂಚದ ಹೆಣ್ಣು ಮಕ್ಕಳು ಏನಂದುಕೊಂಡಾರು ಎಂಬ ಕನಿಷ್ಟ ಸಂಕೋಚವೂ ಇಲ್ಲವಲ್ಲ. ಯಾವುದೇ ಹೆಣ್ಣು ಮಕ್ಕಳನ್ನ ಹೇಗೆ ಬೇಕಾದರೂ ನಡೆಸಿಕೊಳ್ಳಬಹುದೆಂದು ಅವರು ಅನುಮತಿಯಿತ್ತಂತಿದೆ, ಇದೇನು ಪ್ರಜಾರಾಜ್ಯವಾ ಪಾಳೇಗಾರಿಕೆ ಆಡಳಿತವಿರುವ ದೇಶವಾ??? ಹೆಣ್ಣು ಜೀವಗಳಿಗೆ ಭದ್ರತೆಯಿಲ್ಲ. ರೈತನಾಯಕರು ಅವರ ಬೆಂಬಲಕ್ಕೆ ನಿಂತಿರುವುದು ಕರ್ನಾಟಕದಲ್ಲಿ ಅವರು ಮಣ್ಣು ಮುಕ್ಕಿರುವುದು ಉಸಿರಾಡಲು ಅನುವಾದಂತಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...