ಈ ದಿನ ಸಂಪಾದಕೀಯ | ಮಹಿಳೆಯರಿಗೆ ಶೇ.33ರ ಪ್ರಾತಿನಿಧ್ಯ ಕನ್ನಡಿ ಗಂಟಾಗಿಯೇ ಉಳಿಯಿತು

Date:

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಪ್ರಾತಿನಿಧ್ಯ ನೀಡುವ ಮಸೂದೆಯನ್ನು ಕಾಂಗ್ರೆಸ್‌ ಬೆಂಬಲಿತ ಸಂಯುಕ್ತರಂಗದ ಪ್ರಧಾನಿಯಾಗಿದ್ದ ಎಚ್‌ ಡಿ ದೇವೇಗೌಡರು ಮಂಡಿಸಿದ್ದರು. ಅದು ಪಾಸಾಗಲೇ ಇಲ್ಲ. ನಾವು ಜಾರಿಗೊಳಿಸುತ್ತೇವೆ ಎಂದಿದ್ದ ಬಿಜೆಪಿ ಅಧಿಕಾರಕ್ಕೆ ಬಂದು 9 ವರ್ಷ ಭರ್ತಿಯಾಗುತ್ತಿದೆ. ಅವರು ಅದರ ದೂಳು ಹೊಡೆಯುವ ಲಕ್ಷಣ ಕೂಡ ಕಾಣುತ್ತಿಲ್ಲ

ಮಹಿಳಾ ಸಮಸ್ಯೆಗಳು ಪರಿಹಾರ ಕಾಣಲು, ಮಹಿಳಾ ಸಬಲೀಕರಣದಂತಹ ಯೋಜನೆಗಳು ನಿಜಾರ್ಥದಲ್ಲಿ ಅನುಷ್ಠಾನಗೊಳ್ಳಬೇಕಿದ್ದರೆ ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಲೇಬೇಕು. ಆದರೆ, ಪ್ರತಿ ಚುನಾವಣೆ ಬಂದಾಗಲೂ ಮಹಿಳೆಯರ ಪಾಲಿಗೆ ನಿರಾಸೆಯಷ್ಟೆ. ಜಾತಿ, ಕುಟುಂಬ ಬಲದಿಂದ ಬೆರಳೆಣಿಕೆಯಷ್ಟು ಮಹಿಳೆಯರು ಅಭ್ಯರ್ಥಿಗಳಾಗುತ್ತಿರುವುದು ಬಿಟ್ಟರೆ ರಾಜಕಾರಣದಲ್ಲಿ ಹೊಸ ಮಹಿಳಾ ಮುಖಗಳು ಕಾಣುತ್ತಿಲ್ಲ.

ಯತ್ರ ನಾರ್ಯಸ್ತು ಪೂಜ್ಯಂತೇ ತತ್ರ ರಮಂತೇ ದೇವತಃ ಎಂದು ಹೇಳುವ ದೇಶದ ಮನಸ್ಥಿತಿಯ ಆಳದಲ್ಲಿ ಮನೆ ಮಾಡಿರುವುದು ಮನುಸ್ಮೖತಿಯ ಪಿತೖಪ್ರಧಾನ ರೋಗ. ಗಂಡು ಮಗು ಹುಟ್ಟಿದಾಗ ಸಂಭ್ರಮಿಸಿ ಹೆಣ್ಣು ಹುಟ್ಟಿದಾಗ ರೋದಿಸುವ ಮನಸ್ಥಿತಿಯನ್ನು ಹೇಗೆ ವ್ಯಾಖ್ಯಾನ ಮಾಡಲು ಬಂದೀತು? ಅರ್ಧ ಆಕಾಶ ಮಹಿಳೆಯದು ಎಂದ ಮಾವೋ ತ್ಸೆ ತುಂಗ್. ಆದರೆ ಭೂಮಿಯ ಕತೆಯೇನು? ಪ್ರಕೖತಿಯಿಲ್ಲದೆ ಪುರುಷನೇ?

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಪ್ರಾತಿನಿಧ್ಯ ನೀಡುವ ಮಸೂದೆಯನ್ನು ಕಾಂಗ್ರೆಸ್‌ ಬೆಂಬಲಿತ ಸಂಯುಕ್ತರಂಗದ ಪ್ರಧಾನಿಯಾಗಿದ್ದ ಎಚ್‌ ಡಿ ದೇವೇಗೌಡರು ಮಂಡಿಸಿದ್ದರು. ಅದು ಪಾಸಾಗಲೇ ಇಲ್ಲ. ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರುತ್ತೇವೆ ಎಂದಿದ್ದ ಬಿಜೆಪಿ ಅಧಿಕಾರಕ್ಕೆ ಬಂದು 9 ವರ್ಷ ಭರ್ತಿಯಾಗುತ್ತಿದೆ. ಅವರು ಅದರ ದೂಳು ಹೊಡೆಯುವ ಲಕ್ಷಣ ಕೂಡ ಕಾಣುತ್ತಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಂದಿನ ತಿಂಗಳು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಸುಮಾರು 166 ಕ್ಷೇತ್ರಗಳ ಉಮೇದುವಾರರ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಕೇವಲ 6 ಮಂದಿ ಮಹಿಳೆಯರಿದ್ದಾರೆ. ಮೋಟಮ್ಮ ಅವರ ಮಗಳು ನಯನ ಒಬ್ಬರೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಹೊಸ ಮುಖ. ಉಳಿದಂತೆ ಹೊಸ ಮುಖ ಯಾವುದೂ ಇಲ್ಲ. ಬಿಡುಗಡೆಯಾಗಲಿರುವ ಪಟ್ಟಿಯಲ್ಲಿ ಇರಬಹುದಾದ ಹೆಸರುಗಳ ಬಗ್ಗೆ ಹೆಚ್ಚು ನಿರೀಕ್ಷೆಗಳಿಲ್ಲ. ಜೆ ಡಿಎಸ್‌ ಮೊದಲ ಪಟ್ಟಿಯ 89 ಹುರಿಯಾಳುಗಳಲ್ಲಿ ಮಹಿಳೆಯರು ಕೇವಲ ನಾಲ್ವರು. ಬಿಜೆಪಿ ಇನ್ನೂ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಅದರ ಹಣೆಬರಹ ಕಾಂಗ್ರೆಸ್ ಜೆ.ಡಿ.(ಎಸ್) ಪಟ್ಟಿಗಳಿಗಿಂತ ಭಿನ್ನವಿರುವುದಿಲ್ಲ.

ರಾಜಕೀಯ ಪಕ್ಷಗಳು ಮಹಿಳೆಯರನ್ನು ಪ್ರಚಾರ, ಪ್ರತಿಭಟನೆ, ಸಮಾವೇಶಗಳಲ್ಲಿ ದುಡಿಸಿಕೊಳ್ಳುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಅಧಿಕಾರವೆಲ್ಲ ಪುರುಷರ ಪಾಲು. ಟಿಕೆಟ್‌ ಹಂಚಿಕೆಯ ತೀರ್ಮಾನಗಳಲ್ಲೂ ಮಹಿಳೆಯರಿಲ್ಲ. ಬದ್ಧತೆ, ಸೇವಾ ಮನೋಭಾವ ಇರುವ ಹೆಣ್ಣುಮಕ್ಕಳಿಗೆ ನಿರಾಸೆಯಷ್ಟೇ. ಕಾಂಗ್ರೆಸ್‌ನ ಯುವ ನಾಯಕಿ ಭವ್ಯಾ ನರಸಿಂಹಮೂರ್ತಿ ವಿದ್ಯಾವಂತೆ, ಬುದ್ಧಿವಂತೆ. ಹೋರಾಟಗಾರ್ತಿ. ಪಕ್ಷದ ಸಕ್ರಿಯ ಕಾರ್ಯಕರ್ತೆ. ಆಕೆಗೆ ಟಿಕೆಟ್‌ ನಿರಾಕರಣೆ ಮಾಡಿರುವುದು ಗಂಡಾಳಿಕೆಯ ಮೆರೆದಾಟಕ್ಕೊಂದು ತಾಜಾ ಉದಾಹರಣೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಕೇವಲ 9 ಶಾಸಕಿಯರಿದ್ದಾರೆ. ಜುಜುಬಿ ಶೇಕಡ ನಾಲ್ಕು ಚಿಲ್ಲರೆ! ಇನ್ನು ಲೋಕಸಭೆಯ 542 ಸದಸ್ಯರಲ್ಲಿ 76 ಮಹಿಳೆಯರಿದ್ದಾರೆ. ಶೇ 14ರಷ್ಟು ಮಾತ್ರ. ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚು ಟಿಕೆಟ್‌ ನೀಡಿರುವ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಅತಿ ಹೆಚ್ಚುಅಂದರೆ 44% ಮಹಿಳೆಯರಿಗೆ ಮೀಸಲಿಟ್ಟಿತ್ತು. 80 ಸೀಟುಗಳಿರುವ ಉತ್ತರಪ್ರದೇಶವನ್ನು 11 ಮಂದಿ ಮಹಿಳೆಯರು ಪ್ರತಿನಿಧಿಸಿದರೆ, ಅದರ ಅರ್ಧದಷ್ಟು ಸೀಟುಗಳಿರುವ (42) ಪಶ್ಚಿಮ ಬಂಗಾಳವೂ 11 ಮಹಿಳೆಯರನ್ನು ಆರಿಸಿ ಕಳಿಸಿರುವುದು ಗಮನಾರ್ಹ. ಟಿಎಂಸಿ 41% ಟಿಕೆಟ್‌ ಗಳನ್ನು ಮಹಿಳೆಯರಿಗೆ ಹಂಚಿತ್ತು. 28 ಸೀಟುಗಳನ್ನು ಹೊಂದಿರುವ ಕರ್ನಾಟಕ ಲೋಕಸಭೆಯಲ್ಲಿ ಹೊಂದಿರುವ ಸಂಸದೆಯರು ಮೂವರು ಮಾತ್ರ!

ಕಳೆದ ವರ್ಷ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ಮಹಿಳೆಯರಿಗೆ 45% ಟಿಕೆಟ್‌ ಹಂಚಲಾಗಿತ್ತು. ನಾರೀಶಕ್ತಿ ಹೆಸರಿನಲ್ಲಿ ಈವರೆಗೆ ಮಹಿಳೆಯರಿಗೆ ನೀಡಿದ ಗರಿಷ್ಠ ಪ್ರಾತಿನಿಧ್ಯ. ಹೆಣ್ಣುಮಕ್ಕಳಿಗೆ ಭರವಸೆ ಮೂಡಿಸಿದ್ದ ಪ್ರಗತಿಪರ ನಡೆಯಿದು. ರಾಜ್ಯ ವಿಧಾನಸಭೆ ಚುನಾವಣೆಗೆ ಎರಡು ವರ್ಷವಿರುವಾಗಲೇ ಕಾಂಗ್ರೆಸ್‌ ಪಕ್ಷ ರಾಜ್ಯದಾದ್ಯಂತ ಇರುವ ತನ್ನ ಮಹಿಳಾ ಸದಸ್ಯರಿಗೆ ನಾಯಕತ್ವ ಗುಣ ಬೆಳೆಸುವ ಉದ್ದೇಶದ ʼನಾ ನಾಯಕಿʼ ಕಾರ್ಯಾಗಾರ ನಡೆಸಿತ್ತು. ಕೆಲ ತಿಂಗಳ ಹಿಂದೆ ಪ್ರಿಯಾಂಕಾ ಗಾಂಧಿ ಬೆಂಗಳೂರಿನಲ್ಲಿ ಭಾರೀ ಪ್ರಚಾರದ ʼನಾ ನಾಯಕಿʼಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಮಹಿಳೆಯರಿಗೆ ಹೆಚ್ಚು ಟಿಕೆಟ್‌ ಗಳು ದೊರೆಯುವ ಭರವಸೆ ಮೂಡಿತ್ತು. ಆದರೆ, ಅಂತಿಮ ಅಭ್ಯರ್ಥಿಗಳ ಪಟ್ಟಿ ಕಾಂಗ್ರೆಸಿಗರಿಗೆ ಮಾತ್ರವಲ್ಲ, ಇಡೀ ಮಹಿಳಾ ಸಮುದಾಯಕ್ಕೆ ಮತ್ತೊಮ್ಮೆ ನಿರಾಸೆ ಮೂಡಿಸಿದೆ.

ಲೋಕಸಭೆಯ ಮಹಿಳಾ ಪ್ರಾತಿನಿಧ್ಯ ಭಾರತದಲ್ಲಿ ಮಾತ್ರ ಕಳಪೆ. 140 ಕೋಟಿಯ ಅರ್ಧದಷ್ಟು ಜನಸಂಖ್ಯೆ ಮಹಿಳೆಯರದು. ಆದರೆ ಅವರಿಗೆ ಸಿಕ್ಕಿರುವ ಪ್ರಾತಿನಿಧ್ಯ ಕೇವಲ 8.1%. ಒಂದು ಕೋಟಿ ಜನಸಂಖ್ಯೆಯಿರುವ ಸ್ವೀಡನ್ ನಲ್ಲಿ 48.8% , ಒಂದೂಕಾಲು ಕೋಟಿಯಷ್ಟು ಜನಸಂಖ್ಯೆಯಿರುವ ಕ್ಯೂಬಾದಲ್ಲಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯ 43%. ಮುಸ್ಲಿಂ ಧರ್ಮಾಧಾರಿತ ರಾಷ್ಟ್ರಗಳಾದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನವೂ ಈ ಬಾಬತ್ತಿನಲ್ಲಿ ನಮಗಿಂತ ದುಪ್ಪಟ್ಟು ಅಥವಾ ಮೂರುಪಟ್ಟು ಮುಂದಿವೆ. (ಅನುಕ್ರಮವಾಗಿ 27.3%, ಮತ್ತು 21.3%).

ಭಾರತವನ್ನು ವಿಶ್ವಗುರು ಆಗಿಸಲು ಹೊರಟಿರುವವರು, ಮಹಿಳೆಯನ್ನು ದೇವತೆಯೆಂದು ಗುಡಿ ಗುಂಡಾರಗಳಲ್ಲಿ, ಚಿತ್ರಪಟಗಳಲ್ಲಿ ಪೂಜಿಸುವವರು ನಿಜಜೀವನದಲ್ಲಿ ಆಕೆಯನ್ನು ತೊತ್ತಿನಂತೆ ನಡೆಸಿಕೊಂಡಿದ್ದಾರೆ. ಸರಿಸಮಾನ ಪ್ರಾತಿನಿಧ್ಯವಿರಲಿ, ಮೂರನೆಯ ಒಂದರಷ್ಟು ಪ್ರಾತಿನಿಧ್ಯದಿಂದಲೂ ಬಹುದೂರ ಇಟ್ಟಿದ್ದಾರೆ.

ಮಹಿಳೆಯರನ್ನು ಕೇವಲ ವೋಟ್ ಬ್ಯಾಂಕುಗಳಾಗಿ ನೋಡುವ ರಾಜಕೀಯ ಪಕ್ಷಗಳು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಲೇಬೇಕಿದೆ. ಲಿಂಗಾಧಾರಿತ ದಮನವನ್ನು ತಾರತಮ್ಯವನ್ನು ನಿವಾರಿಸಿ ಅವರಿಗೆ ಸಮಾನ ಸ್ಥಾನಮಾನ ನೀಡುವುದು ಇಂದಿನ ತುರ್ತು ಅಗತ್ಯ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...

ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ

ಮೇಲ್ನೋಟಕ್ಕಿದು ಕೊಡು-ಕೊಳ್ಳುವ ಮೈತ್ರಿಯಂತೆ ಕಂಡರೂ, ಗೆದ್ದರೆ ಮಾತ್ರ ಇಬ್ಬರಿಗೂ ಲಾಭವಿದೆ. ಸೋತರೆ,...